Raja Nivasa.Film Shooting Visit and Press Meet

Saturday, November 14, 2020

116

 

*ಶೂಟಿಂಗ್​ ಸೆಟ್​ನಲ್ಲಿಯೇ ಶೀರ್ಷಿಕೆ ಅನಾವರಣ ಮಾಡಿಕೊಂಡ ರಾಜ ನಿವಾಸ*

 

ಡಿಎಎಂ 36 ಸ್ಟುಡಿಯೋಸ್​ ಲಾಂಛನದಲ್ಲಿ ಸಿದ್ಧವಾಗುತ್ತಿರುವ ರಾಜನಿವಾಸ ಚಿತ್ರದ ಶೀರ್ಷಿಕೆ ಪೋಸ್ಟರ್ ಅನಾವರಣ ಕಾರ್ಯಕ್ರಮ ಶನಿವಾರ ಕೊಡಿಗೇಹಳ್ಳಿ ಗೇಟ್​ ಬಳಿಯ ಕ್ರಿಕೆಟ್​ ಮೈದಾನದಲ್ಲಿ ನಡೆಯಿತು. ಚಿತ್ರೀಕರಣ ಸೆಟ್​ಗೆ ಮಾಧ್ಯಮವನ್ನು ಆಹ್ವಾನಿಸಿದ್ದ ನಿರ್ಮಾಪಕ ಮತ್ತು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಉಪಾಧ್ಯಕ್ಷ ಡಿ.ಪಿ. ಆಂಜನಪ್ಪ, ಸಿನಿಮಾ ಸೇರಿ ಹಲವು ಮಾಹಿತಿಯನ್ನು ಹಂಚಿಕೊಂಡರು.

ಚಿತ್ರದ ಬಹುಪಾಲು ತಂಡ ವೇದಿಕೆ ಅಲಂಕರಿಸಿತ್ತು. ವೀರಶೈವ ಲಿಂಗಾಯತ ವೇದಿಕೆಯ ಅಧ್ಯಕ್ಷರಾದ ಪ್ರಶಾಂತ್ ಕಲ್ಲೂರ, ನಿರ್ಮಾಪಕ ಆಂಜನಪ್ಪ ಅವರ ಪುತ್ರ ಅದ್ವಿಕ್ ಮೌರ್ಯ ಸೇರಿ ಇಡೀ ತಂಡ, ರಾಜನಿವಾಸ ಚಿತ್ರದ ಶೀರ್ಷಿಕೆ ಪೋಸ್ಟರ್ ಅನಾವರಣಗೊಳಿಸಿತು. ಬಳಿಕ ನಿರ್ಮಾಪಕ ಆಂಜನಪ್ಪ ಮಾತನಾಡಿ, ‘ಕಳೆದ ಒಂದೂವರೆ ವರ್ಷದ ಹಿಂದೆಯೇ ಸಿನಿಮಾ ಮಾಡಬೇಕು, ಈ ಕ್ಷೇತ್ರದಲ್ಲಿಯೇ ತೊಡಗಿಸಿಕೊಳ್ಳಬೇಕು ಎಂಬ ಸಣ್ಣ ಆಸೆ ಇತ್ತು. ಇದೀಗ ಆ ಆಸೆ, ರಾಜ ನಿವಾಸ ಚಿತ್ರದ ಮೂಲಕ ಈಡೇರುತ್ತಿದೆ. ಫೆಬ್ರವರಿಯಲ್ಲಿ ಚಿತ್ರಮಂದಿರಕ್ಕೆ ಬರಲಿದ್ದೇವೆ’ ಎನ್ನುತ್ತ ಚಿತ್ರದ ಪೂರ್ತಿ ತಂಡವನ್ನು ಪರಿಚಯ ಮಾಡಿಕೊಟ್ಟರು.

ಅಂದಹಾಗೆ, ನಿರ್ಮಾಪಕ ಆಂಜನಪ್ಪ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಉಪಾಧ್ಯಕ್ಷರಾಗಿದ್ದು, ಕನ್ನಡಪರ ಹೋರಾಟಗಳಲ್ಲಿ ಭಾಗವಹಿಸಿದ್ದಾರೆ. ಈಗಲೂ ಅದರ ಸಕ್ರಿಯ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ.  ಸಮಾಜ ಸೇವೆಯಲ್ಲಿಯೂ ಗುರುತಿಸಿಕೊಂಡಿದ್ದು, ಇದೀಗ ಸಿನಿಮಾ ಕ್ಷೇತ್ರಕ್ಕೆ ಆಗಮಿಸಿದ್ದಾರೆ. 

ಬಳಿಕ ಸಿನಿಮಾದಲ್ಲಿ ಏನೆಲ್ಲ ಇರಲಿದೆ ಎಂಬುದನ್ನು ಚುಟುಕಾಗಿ ವಿವರಿಸಿದ ನಿರ್ದೇಶಕ ಮಿಥುನ್ ಸುವರ್ಣ, ಇದೊಂದು ಸಸ್ಪೆನ್ಸ್ ಥ್ರಿಲ್ಲರ್​ ಶೈಲಿಯಲ್ಲಿ ಸಿದ್ಧವಾಗುತ್ತಿರುವ ಚಿತ್ರ. ಈಗಾಗಲೇ ಶೇ. 80 ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ. ಇದೀಗ ಇಲ್ಲಿ ಸಾಹಸ ದೃಶ್ಯವೊಂದರ ಚಿತ್ರೀಕರಣಕ್ಕೆ ಅದ್ದೂರಿ ವೆಚ್ಚದಲ್ಲಿ ಸೆಟ್​ ನಿರ್ಮಿಸಿದ್ದೇವೆ. ಚಿತ್ರದಲ್ಲಿ ಒಟ್ಟು ಮೂರು ಸಾಹಸ ದೃಶ್ಯಗಳಿವೆ. ಕಮರ್ಷಿಯಲ್​ ರೀತಿಯ ಅಂಶಗಳೂ ಸಿನಿಮಾದಲ್ಲಿ ಸ್ಥಾನ ಪಡೆದಿವೆ’ ಎಂದು ಚಿತ್ರದ ಎಳೆಯನ್ನು ಬಿಚ್ಚಿಡದೇ ತೆರೆಮೇಲೆಯೇ ನೋಡಿ ಎಂದರು.

ಇನ್ನು ಈ ಚಿತ್ರದಲ್ಲಿ ನಾಯಕನಾಗಿ ರಾಘವ್ ನಾಯಕ್​ ನಟಿಸುತ್ತಿದ್ದಾರೆ. ಸಿನಿಮಾ ಕ್ಷೇತ್ರದಲ್ಲಿ ನಿರ್ದೇಶಕನಾಗಿ ಗುರುತಿಸಿಕೊಳ್ಳಬೇಕೆಂಬ ಆಸೆ ಹೊತ್ತು ಬಂದಿದ್ದ ರಾಘವ್, ಈ ಚಿತ್ರದ ಮೂಲಕ ನಾಯಕನಾಗಿದ್ದಾರೆ. ‘ಕಥೆಯ ಒಂದೆಳೆ ಕೇಳಿಯೇ ಇಷ್ಟ ಆಯ್ತು. ಬೇರೆನೂ ಯೋಚಿಸದೇ ಈ ಸಿನಿಮಾ ಒಪ್ಪಿಕೊಂಡು ಮುಗಿಸುತ್ತಿದ್ದೇನೆ. ಇಲ್ಲಿ ಪ್ರಾಚ್ಯವಸ್ತು ವಿಭಾಗದಲ್ಲಿ ಕೆಲಸಮಾಡುವವನಾಗಿ ಕಾಣಿಸಿಕೊಂಡಿದ್ದೇನೆ. ಮಿಸ್ಟ್ರಿ ಸುತ್ತ ಇಡೀ ಸಿನಿಮಾ ಸುತ್ತಲಿದೆ ಎಂಬುದು ರಾಘವ್ ಮಾತು.

ಇನ್ನು ನಾಯಕಿಯಾಗಿ ನಟಿಸುವ ಮೂಲಕ ಬಹುದಿನಗಳ ಬಳಿಕ ಮತ್ತೆ ಮರಳಿದ್ದಾರೆ ನಟಿ ಕೃತಿಕಾ ರವೀಂದ್ರ. ನಾಯಕನಿಗೆ ಪತ್ನಿಯಾಗಿ ಕೃತಿಕಾ ಪಾತ್ರ ಸಾಗಲಿದ್ದು, ನಿರ್ದೇಶಕರು ನೀಡಿದ ಪಾತ್ರಕ್ಕೆ ಜೀವ ತುಂಬಿದ್ದೇನೆ. ಈ ವರೆಗೂ ಮಾಡಿದ ಪಾತ್ರಕ್ಕಿಂತ ತುಂಬ ವಿಭಿನ್ನವಾದ ಪಾತ್ರ ಸಿಕ್ಕಿದೆ ಎನ್ನುತ್ತಾರವರು. ಚಿತ್ರದ ವಿಶೇಷ ಪಾತ್ರದಲ್ಲಿ ಶ್ರೀನಗರ ಕಿಟ್ಟಿ ನಟಿಸಲಿದ್ದು, ಬಲರಾಜ್ವಾಡಿ ಎರಡು ಶೇಡ್​ನಲ್ಲಿರಲಿದ್ದಾರೆ. ಅರ್ಜುನ್​ ಸೇರಿ ಇನ್ನು ಹಲವು ಕಲಾವಿದರು ತಾರಾಬಳಗದಲ್ಲಿದ್ದಾರೆ. ಲೋಕೇಶ್​ ಎನ್ ಗೌಡ ಸಹ ನಿರ್ಮಾಪಕರಾಗಿದ್ದಾರೆ. ರಮೇಶ್​ ರಾಜ್ ಛಾಯಾಗ್ರಹಣ, ವಿಜಯ್ ಯಾರ್ಡ್ಲಿ, ಕೌರವ ವೆಂಕಟೇಶ್​ ಸಾಹಸ ನಿರ್ದೇಶನ ಮಾಡಿದ್ದಾರೆ.

Copyright@2018 Chitralahari | All Rights Reserved. Photo Journalist K.S. Mokshendra,