Sound Of Music Guru.70th Birthday Celebration.

Saturday, February 20, 2021

46

*ಗುರು 70 ರ ಸಂಭ್ರಮಕ್ಕೆ ಗಾನ ನಮನ*

 

*-ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿ ನೆರವೇರಿತು ವಿಶೇಷ ಕಾರ್ಯಕ್ರಮ*

*- ಕೆ. ಗುರುರಾಜ್ ಜನ್ಮದಿನದ ಪ್ರಯುಕ್ತ ’ಸಂಗೀತ ಸಂಪತ್ತು’ ಸಮಾರಂಭ*

 

ಸೌಂಡ್ ಆಫ್​ ಮ್ಯೂಸಿಕ್​ ವಾದ್ಯಗೋಷ್ಠಿಯ ರೂವಾರಿ ಶ್ರೀ ಕೆ. ಗುರುರಾಜ್​ ಅವರ 70ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ‘ಗುರು 70, ಸಂಗೀತ ಸಂಪತ್ತು’ ಕಾರ್ಯಕ್ರಮ ಚಾಮರಾಜಪೇಟೆಯ ಸಿನಿಮಾ ಕಲಾವಿದರ ಸಂಘದ ಡಾ. ರಾಜಕುಮಾರ್ ಕಲಾಭವನದಲ್ಲಿ ಇತ್ತೀಚೆಗೆಷ್ಟೇ ನೆರವೇರಿತು.

'ಸ್ನೇಹ’ ರೆಟ್ರೋ ಸಂಗೀತ ತಂಡದ ಮುಖ್ಯ ಕಾರ್ಯನಿರ್ವಾಹಕರು, ಗಾಯಕರು, ನಿವೃತ್ತ ಅಬಕಾರಿ ಅಧಿಕಾರಿಗಳು ಮತ್ತು ಸಮಾರಂಭದ ಪ್ರಧಾನ ಸಂಚಾಲಕರಾಗಿರುವ ವೆಂಕಟೇಶ ಮೂರ್ತಿ ಶಿರೂರ ಅವರು ಅದ್ದೂರಿ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದರು. ಗುರುರಾಜ್ ಅವರ ಕುಟುಂಬದ ಸದಸ್ಯರು, ಸ್ನೇಹಿತರು, ಶಿಷ್ಯರು ಹಾಗೂ ಅಭಿಮಾನಿಗಳು ಕಾರ್ಯಕ್ರಮ ಸಂಘಟಿಸಿ ಯಶಸ್ವಿಗೊಳಿಸಿದ್ದಾರೆ.

ಸಂಗೀತದ ಜತೆಗೆ ಮಾತುಕತೆಯೂ ಈ ಕಾರ್ಯಕ್ರಮದ ಆಕರ್ಷಣೆಯಾಗಿತ್ತು. ಹಾಡುಗಳು ಮುಗಿಯುತ್ತಿದ್ದಂತೆ, ಮಾತು, ಮಾತು ಮುಗಿಯುತ್ತಿದ್ದಂತೆ ಹಾಡು ಮೊಳಗುತ್ತಿತ್ತು. ಮಂಜುನಾಥ್ ನಾಗಪ್ಪ ಅವರ ಹೃದಯ ಸಮುದ್ರ ಕಲಕಿ.. ವೆಂಕಟೇಶ್​ ಮೂರ್ತಿ ಶಿರೂರ ಅವರ ತರವಲ್ಲ ತಗಿ ನಿನ್ನ ತಂಬೂರಿ, ಪವಡಿಸುವ ಪರಮಾತ್ಮ ಹಾಡು ನೆರೆದವರ ಗಮನ ಸೆಳೆದವು. ಅಂಜಲಿ ಹಳಿಯಾಳ, ಸುಬ್ಬಲಕ್ಷ್ಮಿ ಸೇರಿ ಗುರುರಾಜ್ ಅವರ ಹಲವು ಶಿಷ್ಯರು 20ಕ್ಕೂ ಅಧಿಕ ಹಾಡುಗಳನ್ನು ಹಾಡುವ ಮೂಲಕ ಗುರುಗಳಿಗೆ ನಮನ ಸಲ್ಲಿಸಿದರು.

ವಿಶೇಷ ಎಂಬಂತೆ ಗುರುರಾಜ್ ಅವರ ಮಗಳು ಸಂಗೀತಾ ಅಪ್ಪನ ಜತೆ ನೃತ್ಯ ಮಾಡಿದ್ದು, ಕಾರ್ಯಕ್ರಮದ ಅವಿಸ್ಮರಣೀಯ ನೆನಪಾಗಿ ಉಳಿಯಿತು. ಈ ವೇಳೆ ವೇದಿಕೆ ಮೇಲೆಯೇ ಗುರು ಕೊಂಚ ಭಾವುಕರಾದರು. ಪತ್ನಿ ಮಂಜುಳಾ ಗುರುರಾಜ್, ಪುತ್ರ ಸಾಗರ್ ಗುರುರಾಜ್​ ಸಹ ವೇದಿಕೆ ಮೇಲಿದ್ದರು.

ಈ ವಿಶೇಷ ಕಾರ್ಯಕ್ರಮದಲ್ಲಿ ಶಾಸಕ ಎಂ. ಕೃಷ್ಣಪ್ಪ, ಕರ್ನಾಟಕ ಗಡಿ ನಾಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಸಿ. ಸೋಮಶೇಖರ್, ಗಾಯಕ ಹಾಗೂ ಚಲನಚಿತ್ರ ಸಂಗೀತ ನಿರ್ದೇಶಕ  ಗುರುಕಿರಣ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಗುರುರಾಜ್ ಅವರ 70ರ ಸಂಭ್ರಮ ನೂರಾಗಲಿ ಎಂದು ಎಲ್ಲರೂ ಹರಿಸಿ ಹಾರೈಸಿದರು. ಲಹರಿ ವೇಲು, ಡಾ, ವೆಂಕಟರಮಣ, ಚಿತ್ರ ನಿರ್ದೇಶಕ ಮುರಳಿಕೃಷ್ಣ, ನಿವೃತ್ತ ದೂರದರ್ಶನ ಕಾರ್ಯಕ್ರಮ ನಿರ್ವಾಹಕ ಐ.ಡಿ ಹಳ್ಳಿ ರಘು ಅವರುಗಳು ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದರು.

 

 

 

Copyright@2018 Chitralahari | All Rights Reserved. Photo Journalist K.S. Mokshendra,