Snehitaru.Film Audio Launch

Thursday, October 07, 2021

 

*ನವರಾತ್ರಿ ಆರಂಭದ ದಿನ "ಸ್ನೇಹಿತ" ನ ಹಾಡುಗಳ ಲೋಕಾರ್ಪಣೆ* .

 

ಈ ಹಿಂದೆ "ಪ್ಯಾರ್ ಕಾ ಗೋಲ್ ಗುಂಬಜ್" ಚಿತ್ರದಲ್ಲಿ ನಟಿಸಿ ಮನೆಮಾತಾಗಿರುವ ಧನುಷ್ ನಾಯಕನಾಗಿ ನಟಿಸಿರುವ "ಸ್ನೇಹಿತ" ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ನವರಾತ್ರಿ ಆರಂಭದ ಮೊದಲದಿನ ನಡೆಯಿತು.

 

ಚಿತ್ರದ ನಿರ್ದೇಶಕರು ಆಗಿರುವ ಸಂಗೀತ್ ಸಾಗರ್ ಈ ಚಿತ್ರದ ಆರು ಹಾಡುಗಳನ್ನು ಬರೆದು, ಸಂಗೀತ ನೀಡಿದ್ದಾರೆ.

 

"ಸ್ನೇಹಿತ" ಸ್ನೇಹದ ಮಹತ್ವ ಸಾರುವ ಚಿತ್ರ. ಮನೆಮಂದಿಯಲ್ಲಾ ಒಟ್ಟಾಗಿ ಕುಳಿತು ನೋಡುವಂತ ಪರಿಶುದ್ಧ ಮನೋರಂಜನಾತ್ಮಕ ಚಿತ್ರವನ್ನು ನಿರ್ದೇಶಿಸಿರುವ ತೃಪ್ತಿ ಇದೆ. ಇಂದು ಹಾಡುಗಳು ಬಿಡುಗಡೆಯಾಗಿದೆ. ಸದ್ಯದಲ್ಲೇ ಚಿತ್ರ ಕೂಡ ತೆರೆಗೆ ಬರಲಿದೆ. ನನ್ನ ಈ ಕನಸಿಗೆ ಬೆಂಬಲ ನೀಡಿದ ನಿರ್ಮಪಕರಿಗೆ, ಕಲಾವಿದರಿಗೆ ಹಾಗೂ ನನ್ನ ಇಡೀ ತಂಡಕ್ಕೆ ಧನ್ಯವಾದ ಎಂದರು ಚಿತ್ರದ ಸಂಗೀತ ನಿರ್ದೇಶಕ ಮತ್ತು ನಿರ್ದೇಶಕ ಸಂಗೀತ್ ಸಾಗರ್.

 

ನನ್ನ "ಪ್ಯಾರ ಕಾ ಗೋಲ್ ಗುಂಬಜ್" ಚಿತ್ರಕ್ಕೆ ಎಲ್ಲರು ತೋರಿದ ಪ್ರೀತಿಗೆ ನಾನು ಚಿರ ಋಣಿ. ಈ ಚಿತ್ರಕ್ಕೂ ಅದೇ ರೀತಿಯ ಪ್ರೋತ್ಸಾಹ ಬಯಸುತ್ತೇನೆ. ನನ್ನದು ಈ ಚಿತ್ರದಲ್ಲಿ ಒಳ್ಳೆಯ ಪಾತ್ರ. "ಸ್ನೇಹಿತ" ಎಂದರೆ ಏನು ಎಂದು ನಾನು ಹೇಳುವುದಕ್ಕಿಂತ, ಸ್ವಲ್ಪ ದಿನದಲ್ಲೇ ನಮ್ಮ ಚಿತ್ರ ತೆರೆಗೆ ಬರಲಿದ್ದು, ಅದರಲ್ಲಿ ಎಲ್ಲವೂ ತಿಳಿಯಲಿದೆ. ನಮ್ಮ ಚಿತ್ರ ಯಾವುದೇ ಒಂದು ರೀತಿಯ ಸಿನಿಮಾ ಅಲ್ಲ. ಇದರಲ್ಲಿ ಸ್ನೇಹ, ಪ್ರೀತಿ, ಆಕ್ಷನ್ , ಉತ್ತಮ ಕಥೆ ಹಾಗೂ ಹಾಡುಗಳು ಎಲ್ಲಾ ಇದೆ. ನೋಡುಗರಿಗೆ ಉತ್ತಮ ಮನೋರಂಜನೆ ನೀಡುವ ಚಿತ್ರ ಅಂತ ಹೇಳಬಹುದು. ಉಮೇಶಣ್ಣ ಅವರಂತಹ ಹಿರಿಯ ನಟರೊಂದಿಗೆ ನಟಿಸಿದ್ದು, ಸಂತೋಷ ತಂದಿದೆ. ನಾಯಕಿ ಸುಲಕ್ಷ ಕೈರಾ ಸೇರಿದಂತೆ ಎಲ್ಲ ಕಲಾವಿದರ ಅಭಿನಯ ಚೆನ್ನಾಗಿದೆ ಎಂದರು ನಾಯಕ ಧನುಷ್.

ನಾನು ಈ ಚಿತ್ರದಲ್ಲಿ ಪ್ರಿಯ ಎಂಬ ಪಾತ್ರದಲ್ಲಿ ಕಾಣಿಸಿಕೊಂದ್ದೇನೆ. ಈ ಚಿತ್ರದಲ್ಲಿ ಮುಗ್ಧ ಹಳ್ಳಿ ಹುಡುಗಿ ನಾನು. ಉತ್ತಮ ಪಾತ್ರಕೊಟ್ಟ ನಿರ್ಮಾಪಕ ಹಾಗೂ ನಿರ್ದೇಶಕರಿಗೆ ಧನ್ಯವಾದ ಎಂದರು ನಾಯಕಿ ಸುಲಕ್ಷ ಕೈರಾ.

 

ಕೊರೋನದಿಂದ ಎರಡುವರ್ಷಗಳ ಕಾಲ ಮನೆಯಲ್ಲೇ ಇದೆ . ಇಂದು ಎಲ್ಲರನ್ನೂ ನೋಡಿ ಸಂತೋಷವಾಗಿದೆ. ಉತ್ತಮ ಪಾತ್ರ ನೀಡಿದ ನಿರ್ದೇಶಕರಿಗೆ ಧನ್ಯವಾದ ಎಂದರು ಹಿರಿಯ ನಟ ಎಂ.ಎಸ್.ಉಮೇಶ್.

 

ನಿರ್ಮಾಪಕ ಅಶೋಕ್ ಆರ್ ಈ ಚಿತ್ರದ ಗೆಲುವಿಗೆ ಎಲ್ಲರು ಪ್ರೋತ್ಸಾಹಿಸಬೇಕೆಂದರು.

 

ಧ್ವನಿಸಾಂದ್ರಕೆ ಬಿಡುಗಡೆ ಸಮಾರಂಭಕ್ಕೆ ನಿರ್ಮಾಪಕರಾದ ಭಾ ಮ ಹರೀಶ್, ಭಾ ಮ ಗಿರೀಶ್, ವಿತರಕ ನರ್ಗಿಸ್ ಬಾಬು, ನಿರ್ದೇಶಕ  ಬಿ‌.ಆರ್.ಕೇಶವ್ , ನಟ ಪ್ರಣಯ ಮೂರ್ತಿ, ಆಕಾಶ್ ಆಡಿಯೋದ ಕುಬೇರ್ ಹಾಗೂ ನಿತ್ಯಾನಂದ ಪ್ರಭು ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಶುಭ ಕೋರಿದರು.

 

ಬಾಬು ಭಾಗವತರ್ ಈ ಚಿತ್ರದ ಕೋ ಡೈರೆಕ್ಟರ್.  ಕಮಲ್ ಸಿಂಗ್ ಛಾಯಾಗ್ರಹಣ, ಹರೀಶ್ ಕೃಷ್ಣ ಹಾಗೂ ರಾಜಶೇಖರ ರೆಡ್ಡಿ ಸಂಕಲನ, ವಿನಯ್, ಹರೀಶ್ ಟೋನಿ ನೃತ್ಯ ನಿರ್ದೇಶನ ಹಾಗೂ ಅಲ್ಟಿಮೆಟ್ ಶಿವು ಸಾಹಸ ನಿರ್ದೇಶನ "ಸ್ನೇಹಿತ" ಚಿತ್ರಕ್ಕಿದೆ.

 

ಧನುಶ್, ಸುಲಕ್ಷ ಕೈರಾ, ಶಿವರಾಮಣ್ಣ, ಎಂ.ಎಸ್‌.ಉಮೇಶ್, ಮನದೀಪ್ ರಾಯ್, ಆರ್ ಟಿ ರಮ, ಕಿಲ್ಲರ್ ವೆಂಕಟೇಶ್, ಪ್ರಣಯ ಮೂರ್ತಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Copyright@2018 Chitralahari | All Rights Reserved. Photo Journalist K.S. Mokshendra,