Bandhana 2.Film Pooja News

Friday, December 10, 2021

271

 

ಬಂಧನ-೨ ಚಿತ್ರಕ್ಕೆ ಅಶೋಕ ಹೋಟೆಲ್ ನಲ್ಲೇ ಚಾಲನೆ

 

      ಬಂಧನ ಕನ್ನಡದ ಎವರ್ ಗ್ರೀನ್ ಸಿನಿಮಾಗಳಲ್ಲೊಂದು. ವಿಷ್ಣುವರ್ಧನ್, ಸುಹಾಸಿನಿ, ರಾಜೇಂದ್ರಸಿಂಗ್ ಬಾಬು ಕಾಂಬಿನೇಶನ್ ನಲ್ಲಿ ಮೂಡಿಬಂದ ಅಪರೂಪದ ಕೃತಿ ಯಾಗಿತ್ತು. ಈಗ ಅದರ ಮುಂದುವರಿದ ಭಾಗವಾಗಿ ಬಂಧನ-೨ ನಿರ್ಮಾಣವಾಗುತ್ತಿದೆ. ೩೭ ವರ್ಷಗಳ ಹಿಂದೆ ಎಲ್ಲಿ  ಮುಹೂರ್ತ ನಡೆದಿತ್ತೋ ಅದೇ  ಅಶೋಕ ಹೋಟೆಲಿನ ಸ್ವಿಮ್ಮಿಂಗ್ ಫೂಲ್ ಆವರಣದಲ್ಲೇ  ಶುಕ್ರವಾರ  ಈ ಚಿತ್ರದ ಮಹೂರ್ತ ನಡೆಯಿತು. ನಿರ್ದೇಶಕ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಅವರ ನಿರ್ದೇಶನ ಸಾರಥ್ಯದಲ್ಲಿ  ೧೯೮೪ರಲ್ಲಿ   ಬಿಡುಗಡೆಯಾಗಿದ್ದ  ಈ  ಸಿನಿಮಾದಲ್ಲಿದ್ದ ಉಷಾ ನವತ್ನರಾಮ್ ಅವರ ಅತ್ಯುತ್ತಮ ಕಥೆ, ವಿಷ್ಣು, ಸುಹಾಸಿನಿ ಅವರ  ಮನೋಜ್ಞ ಅಭಿನಯ ಚಿತ್ರಕ್ಕೆ ರಾಷ್ಟ್ತಮಟ್ಟದಲ್ಲಿ ಮನ್ನಣೆ ಸಿಗುವಂತಾಗಿತ್ತು. ಈಗ ಬಂಧನ ೨  ಚಿತ್ರವನ್ನೂ ರಾಜೇಂದ್ರಸಿಂಗ್ ಬಾಬು ಅವರೇ  ನಿರ್ದೇಶನ ಮಾಡುತ್ತಿದ್ದು ನಾಯಕಿ  ನಂದಿನಿಯ ಮಗನಾಗಿ  ನಟ ಆದಿತ್ಯ ಕಾಣಿಸಿಕೊಳ್ಳಲಿದ್ದಾರೆ.  ಸುಹಾಸಿನಿ, ಜೈಜಗದೀಶ್ ಪಾತ್ರಗಳು ಹಾಗೇ ಮುಂದುವರಿಯಲಿವೆ. ಬಹಳ ದಿನಗಳ ನಂತರ  ಅಣಜಿ ನಾಗರಾಜ್ ಈ ಸಿನಿಮಾ  ಮೂಲಕ ನಿರ್ಮಾಪಕನಾಗಿ ಚಿತ್ರರಂಗಕ್ಕೆ ಮರಳಿದ್ದಾರೆ. ಜೊತೆಗೆ ಚಿತ್ರಕ್ಕೆ ಕ್ಯಾಮೆರಾವರ್ಕ್ ಸಹ ಮಾಡುತ್ತಿದ್ದಾರೆ. ಸದ್ಯ ಸಿಂಗ್ ಬಾಬು ಕಂಬಳ ಚಿತ್ರದ ಶೂಟಿಂಗ್ ನಡೆಸುತ್ತಿದ್ದು, ಅದು ಮುಗಿದ ನಂತರ ಈ ಚಿತ್ರವನ್ನು ಪ್ರಾರಂಭಿಸಲಿದ್ದಾರೆ. ಭಾರತಿ ವಿಷ್ಣುವರ್ಧನ್ ಹಾಗೂ ವಿಜಯಲಕ್ಷ್ಮಿ ಸಿಂಗ್ ಕೂಡ ಸಮಾರಂಭದಲ್ಲಿ  ಭಾಗಿಯಾಗಿದ್ದರು.

     ಸರಳ  ಪೂಜೆಯ  ನಂತರ  ಮಾತನಾಡಿದ   ನಿರ್ದೇಶಕ ಸಿಂಗ್‌ಬಾಬು, ಆಗ ಕೇವಲ ೨೨ ಲಕ್ಷ ರೂ.ಗಳ ಬಜೆಟ್‌ನಲ್ಲಿ  ಬಂಧನ  ಚಿತ್ರದ ಫಸ್ಟ್ ಕಾಪಿ ಬಂದಿತ್ತು. ಇದು ಆ ಚಿತ್ರದ ಮುಂದುವರಿದ ಭಾಗ, ನಂದಿನಿಯ ಮಗ ದೊಡ್ಡವನಾಗಿರುತ್ತಾನೆ, ಇಡೀ ಚಿತ್ರದಲ್ಲಿ  ವಿಷ್ಣು ಅವರ ಛಾಯೆ ಇರುತ್ತದೆ, ಅವರನ್ನು ಅಲ್ಲಲ್ಲಿ ನೆನಪಿಸಿಕೊಳ್ಳುತ್ತೇವೆ.  ವಿಷ್ಣು  ಎಮೋಷನಲಿ ನಮ್ಮ ಜೊತೆ ಯಾವಾಗಲೂ ಇರುತ್ತಾರೆ.  ಈ ಕಥೆಯಲ್ಲಿ  ಲವ್ ಜೊತೆಗೆ  ಆ್ಯಕ್ಷನ್ ಕೂಡ  ಇರುತ್ತದೆ.  ಎಲ್ಲಾ ಥರದ ಪ್ರೀತಿಯೂ  ಚಿತ್ರದಲ್ಲಿದೆ, ಎಲ್ಲೆಲ್ಲಿ  ಶೂಟಿಂಗ್  ಮಾಡಬೇಕೆಂದು ಪ್ಲಾನ್  ನಡೀತಿದೆ, ವಿಷ್ಣು ಅಭಿಮಾನಿಗಳು  ತಮ್ಮ ಸಲಹೆ, ಅಭಿಪ್ರಾಯ ನೀಡಬಹುದು, ಸೂಕ್ತವಾದ್ದನ್ನು ಪರಿಗಣಿಸುತ್ತೇವೆ ಎಂದು ಹೇಳಿದರು, ಚಿತ್ರದ  ನಾಯಕಿ  ಸುಹಾಸಿನಿ ಮಾತನಾಡುತ್ತ ಕನ್ನಡದಲ್ಲಿ ಆಕ್ಟ್ ಮಾಡಿ ಬಹಳ ವರ್ಷಗಳಾಯ್ತು. ಇನ್ನು  ಬಂಧನ ಚಿತ್ರದ ಕುರಿತಂತೆ  ಬಹಳಷ್ಟು ನೆನಪುಗಳಿವೆ, ಅದೊಂದು ಡ್ರೀಮ್ ಪ್ರಾಜೆಕ್ಟ್ , ವಿಷ್ಣು ಬಗ್ಗೆ ಹೇಳೋಕೆ ಮಾತೇ ಇಲ್ಲ,   ಅವರೊಬ್ಬ ಲೆಜೆಂಡ್, ಈಗಿನ ಜನರೇಶನ್ ಮಕ್ಕಳು ಏನು ಮಾಡ್ತಾರೆ ಅನ್ನೋದೂ ಚಿತ್ರದಲ್ಲಿರುತ್ತೆ  ಎಂದು  ಮೂರೂವರೆ ದಶಕಗಳ ಹಿಂದಿನ ನೆನಪುಗಳನ್ನು ಮೆಲುಕು ಹಾಕಿದರು. 

  ನಾಯಕ ಆದಿತ್ಯ ಮಾತನಾಡುತ್ತ 84ರಲ್ಲಿ  ನಾನಿನ್ನೂ 6 ವರ್ಷದ ಹುಡುಗ, ಇದೇ ಜಾಗದಲ್ಲಿ ನಿಂತು ಮುಹೂರ್ತ ನೋಡುತ್ತಿದ್ದೆ, ಮೈಸೂರಿನಲ್ಲಿ  ಚಿತ್ರದ ಶೂಟಿಂಗ್ ನಡೆಯುವಾಗ ಪ್ರತಿದಿನ ನಾನು ಹೋಗುತ್ತಿದ್ದೆ,  ಈ ಚಿತ್ರದಲ್ಲಿ ನಾನು ಆ್ಯಕ್ಟ್ ಮಾಡುತ್ತೇನೆ ಎಂದು ಕನಸಲ್ಲೂ ಅಂದುಕೊಂಡಿರಲಿಲ್ಲ. ಅಣಜಿ ನಾಗರಾಜ್ ಅವರು ಬಹಳ ದಿನಗಳ ನಂತರ ಇಂಡಸ್ಟ್ರಿಗೆ ಬಂದಿದ್ದಾರೆ. ಬಂಧನ ಚಿತ್ರದಂತೆಯೇ ಈ ಚಿತ್ರವೂ ಸೂಪರ್ ಹಿಟ್ ಆಗುತ್ತೆ ಎನ್ನುವ ನಂಬಿಕೆಯಿದೆ   ಎಂದು ಹೇಳಿದರು,   ಚಿತ್ರದ ನಿರ್ಮಾಪಕ ಅಣಜಿ ನಾಗರಾಜ್ ಮಾತನಾಡಿ ಬಂಧನ ಚಿತ್ರ ಬಿಡುಗಡೆಯಾದಾಗ ನಾನು ದಾವಣಗೆರೆಯಲ್ಲಿ ನೋಡಿದ್ದೆ, ಸಿಂಗ್ ಬಾಬು ಅವರು ಯುವಕರ ರೀತಿ ಉತ್ಸಾಹದಿಂದ ಕೆಲಸ ಮಾಡುತ್ತಾರೆ. ಈ ಚಿತ್ರಕ್ಕೆ  ನಾನೇ ಕ್ಯಾಮೆರಾ ವರ್ಕ್ ಮಾಡುತ್ತಿದ್ದು, ಒಂದೊಳ್ಳೇ ಸಿನಿಮಾ ಕೊಡುವೆ  ಎಂದು ಭರವಸೆ ನೀಡುತ್ತೇನೆ ಎಂದು ಹೇಳಿದರು. ಮತ್ತೊಬ್ಬ ನಟ ಜೈಜಗದೀಶ್ ಮಾತನಾಡುತ್ತ ಇವತ್ತಿಗೂ ನಾನು ಎಲ್ಲೇ ಹೋದರೂ ಬಂಧನದಲ್ಲಿ ಮಾಡಿದ ಬಾಲು ಪಾತ್ರವನ್ನೇ ನೆನಪಿಸುತ್ತಾರೆ. ನಿರ್ದೇಶಕರಾದ ಬಾಬು ಅವರ ಮೇಲೆ ಅಷ್ಟೇ  ನಂಬಿಕೆಯಿದೆ. ಬಂಧನ ಚಿತ್ರ ಮಾಡುವಾಗ ವಿಷ್ಣು  ಎಲ್ಲರನ್ನೂ ನಗಿಸುತ್ತ ಬಹಳ ತುಂಟಾಟ ಮಾಡುತ್ತಿದ್ದರು, ಆ ಸಿನಿಮಾ ಬಹಳಷ್ಟು ಸೆಂಟರ್‌ಗಳಲ್ಲಿ ೨೫ ವಾರ  ಪ್ರದರ್ಶನವಾಗಿತ್ತು.  ಇದು ಲವ್ ಬೇಸ್ಡ್ ಆ್ಯಕ್ಷನ್ ಸಿನಿಮಾ, ಆದಿತ್ಯ ಚೆನ್ನಾಗಿ ಆ್ಯಕ್ಟ್  ಮಾಡುತ್ತಾನೆ ಎಂದರು.  ಚಿತ್ರಕ್ಕೆ ಸಂಭಾಷಣೆಗಳನ್ನು ರಚಿಸಿರುವ ವಿ. ಚಿಂತನ್ ಮಾತನಾಡಿ ನಂದಿನಿ, ಹರೀಶ್, ಬಾಲು, ಬಾಬು  ಈ ಚಿತ್ರದ ೪ ಪಿಲ್ಲರ್‌ಗಳು, ಜನ ನಂದಿನಿ, ಹರೀಶ್ ಪಾತ್ರಗಳ್ನು ಇಂದಿಗೂ ಮರೆತಿಲ್ಲ. ವಿಷ್ಣು ಸರ್ ಫ್ಯಾನ್ಸ್  ಈ  ಚಿತ್ರ ನೋಡಿ ತೃಪ್ತಿಯಾಗಿ ಹೊರ ಹೋಗುತ್ತಾರೆ  ಎಂದು ಹೇಳಿದರು. ಧರ್ಮವಿಶ್ ಅವರ  ಸಂಗೀತ ಸಂಯೋಜನೆಯಲ್ಲಿ ಆರು ಹಾಡುಗಳು ಈ ಚಿತ್ರದಲ್ಲಿವೆ.

Copyright@2018 Chitralahari | All Rights Reserved. Photo Journalist K.S. Mokshendra,