Kaneyagiddale.Film Pooja Press Meet

Monday, December 06, 2021

 

*ಆರ್.ಕೆ ನಿರ್ದೇಶನದಲ್ಲಿ "ಕಾಣಿಯಾಗಿದ್ದಾಳೆ"* *ಹುಡುಕಿ ಕೊಟ್ಟವರಿಗೆ ಬಹುಮಾನ..*

 

 *ಹಳ್ಳಿ ಸೊಗಡಿನ ಈ ಚಿತ್ರಕ್ಕೆ ಧರ್ಮಗಿರಿ ಶ್ರೀ ಮಂಜುನಾಥ ದೇಗುಲದಲ್ಲಿ ಮುಹೂರ್ತ.*

 

ಶ್ರೀ ಮೈಲಾರಲಿಂಗೇಶ್ವರ ಸಿನಿಮಾಸ್ ಲಾಂಛನದಲ್ಲಿ ನಿರ್ಮಾಣವಾಗತ್ತಿರುವ, ಆರ್ ಕೆ ನಿರ್ದೇಶನದ "ಕಾಣಿಯಾಗಿದ್ದಾಳೆ" ಹುಡುಕಿ ಕೊಟ್ಟವರಿಗೆ ಬಹುಮಾನ ಚಿತ್ರದ ಮುಹೂರ್ತ ಸಮಾರಂಭ ಧರ್ಮಗಿರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ನೆರವೇರಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ಹಿರಿಯ ನಿರ್ದೇಶಕ ಸಾಯಿಪ್ರಕಾಶ್ ಆರಂಭ ಫಲಕ ತೋರಿದರು. ಅನೇಕ ಗಣ್ಯರು ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು.

 

ಚಿತ್ರದ ಶೀರ್ಷಿಕೆ ಇಷ್ಟವಾಯಿತು. ಮೊದಲ ದೃಶ್ಯದಲ್ಲಿ ನಾಯಕ ಉದ್ದನೆಯ ಸಂಭಾಷಣೆ ಹೇಳಿದ್ದು, ಆತನಲ್ಲಿರುವ ಉತ್ಸಾಹ ಕಾಣಿಸಿತು. ನಿರ್ದೇಶಕ, ನಿರ್ಮಾಪಕ ಹಾಗೂ ಇಡೀ ತಂಡ ಸೇರಿ  ಚಿತ್ರ ನಿರ್ಮಾಣ ಮಾಡುತ್ತಾರೆ. ಕೊನೆಯದಾಗಿ ಪ್ರೇಕ್ಷಕ ಆ ಚಿತ್ರ ಮೆಚ್ಚಬೇಕು. ಅಂತಹ ಉತ್ತಮ ಚಿತ್ರಗಳ ನಿರ್ಮಾಣ ಹೆಚ್ಚಾಗಲಿ ಎಂದ, ಹಿರಿಯ ನಿರ್ದೇಶಕ ಸಾಯಿಪ್ರಕಾಶ್ ಅವರು ಚಿತ್ರತಂಡಕ್ಕೆ ಶುಭ ಹಾರೈಸಿದರು.

 

ಇದೊಂದು ಹಳ್ಳಿ ಸೊಗಡಿನ ಸಿನಿಮಾ. ಮಂಡ್ಯ ಹಾಗೂ ಬೆಂಗಳೂರು ಎರಡು ಪ್ರಾಂತ್ಯಗಳ ಭಾಷೆಗಳಲ್ಲಿ ಈ ಚಿತ್ರದ ಸಂಭಾಷಣೆ ಇರುತ್ತದೆ. ಅರ್ಧ ಕಾಲ್ಪನಿಕ ಹಾಗೂ ಅರ್ಧ ನೈಜಘಟನೆ ಆಧರಿಸಿದ ಕಥೆ ಇರುತ್ತದೆ. ಹಳ್ಳಿ ಹುಡುಗಿಯೊಬ್ಬಳು ಐ ಎ ಎಸ್ ಓದುವ ಸಲುವಾಗಿ ಪಟ್ಟಣಕ್ಕೆ ಬರುತ್ತಾಳೆ. ಸಿಟಿಗೆ ಬಂದ ಹುಡುಗಿ ಎರಡು, ಮೂರು ವರ್ಷಗಳ ಕಾಲ ಹಳ್ಳಿಗೆ ಬಂದಿರುವುದಿಲ್ಲ. ಆ ಹುಡುಗಿಯನ್ನು ಹುಡುಕಿಕೊಂಡು ನಾಯಕ ಹಾಗೂ ಆತನ ಸ್ನೇಹಿತರು ಸಿಟಿಗೆ ಬರುತ್ತಾರೆ. ನಂತರ ಏನಾಗುತ್ತದೆ ಎಂಬುದು ಚಿತ್ರದಲ್ಲಿ ನೋಡಬೇಕು. ಕುಟುಂಬ ಸಮೇತ ನೋಡಬಹುದಾದ ಸಿನಿಮಾ ನಮ್ಮದು. ಬೆಂಗಳೂರು, ಮಂಡ್ಯ, ಸಾಗರ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ. ನಾನು ಈ ಹಿಂದೆ "ಮದರ್ ಸವಿತಾ" ಹಾಗೂ "ನನ್ನ ಕನಸುಗಳು" ಎಂಬ ಚಿತ್ರಗಳನ್ನು ನಿರ್ದೇಶಿಸಿದ್ದೆ. ಇದು ನನ್ನ ಮೂರನೇ ಚಿತ್ರ ಎಂದರು ನಿರ್ದೇಶಕ ಆರ್.ಕೆ. ನಮ್ಮ ಚಿತ್ರದಲ್ಲಿ ಎರಡು ಹಾಡುಗಳಿವೆ ‌  ಒಂದು ಹಾಡನ್ನು ಪುನೀತ್ ರಾಜಕುಮಾರ್  ಅವರಿಂದ ಹಾಡಿಸುವ ಆಸಯಿತ್ತು ಎಂದು,  ಅಪ್ಪು ಅವರನ್ನು ನೆನೆದು ನಿರ್ದೇಶಕರು ಭಾವುಕರಾದರು.

ನಾನು ನಾಯಕನಾಗಿ ನಟಿಸುತ್ತಿರುವ ಮೊದಲ ಸಿನಿಮಾ ಇದು. ಇದರಲ್ಲಿ ನನ್ನದು ಕಾಲೇಜು ಹುಡುಗನ ಪಾತ್ರ. ಹಳ್ಳಿಯಲ್ಲಿ  ಓದುತ್ತಿರುವಾಗಲೇ ಆತ ಪ್ರೀತಿಯ ಬಲೆಯಲ್ಲಿ ಬೀಳುತ್ತಾನೆ. ಸಿಟಿಗೆ ಓದಲು ಹೋದ ಪ್ರೇಯಸಿ‌ ಕಾಣೆಯಾದಾಗ‌ ಅವಳ ಹುಡುಕಿ‌‌ ನಗರಕ್ಕೆ ತನ್ನ ಗೆಳೆಯರೊಂದಿಗೆ ಬರುತ್ತಾನೆ ಎಂದು ತಮ್ಮ ಪಾತ್ರ ಪರಿಚಯ ಮಾಡಿಕೊಂಡರು ವಿನಯ್ ಕಾರ್ತಿಕ್.

 

ನಾನು ಕನ್ನಡ ಹಾಗೂ ತೆಲುಗು ಧಾರಾವಾಹಿಗಳಲ್ಲಿ ಹಾಗೂ ಕೆಲವು ಚಿತ್ರಗಳಲ್ಲಿ ನಟಿಸಿದ್ದೇನೆ. ಹಳ್ಳಿ ಹುಡುಗಿಯೊಬ್ಬಳು ಐ ಎ ಎಸ್ ಓದುವ ಹಂಬಲದಿಂದ ನಗರಕ್ಕೆ ಬರುತ್ತಾಳೆ. ಓದಲು ಬಂದ ಹುಡುಗಿ,‌ ಕೆಲವು ದಿನಗಳ ಕಾಲ ತನ್ನ ಪ್ರಿಯಕರ ಸೇರಿದಂತೆ ಯಾರ ಸಂಪರ್ಕಕ್ಕು ಸಿಕ್ಕಿರುದಿಲ್ಲ. ಆಕೆಯನ್ನು ಹುಡುಕಿಕೊಂಡು ನಾಯಕ ನಗರಕ್ಕೆ ಆಗಮಿಸುತ್ತಾನೆ. ನಂತರ ನಾಯಕ - ನಾಯಕಿಯ ಜೀವನದಲ್ಲಿ ಏನಾಗುತ್ತದೆ ಎಂಬುದೆ ಈ ಚಿತ್ರದ ಕಥಾಹಂದರ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಬೆಂಬಲವಿರಲಿ ಎಂದರು ನಾಯಕಿ‌ ಕೀರ್ತಿ ಭಟ್.

 

ನಾನು ನಾಯಕನ ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಯಾರು ಏನೇ ಹೇಳಿದರು ನನ್ನ ಮಗನೇ ಸರಿ‌ ಎನ್ನುವ ತಾಯಿಯ ಪಾತ್ರ ನನ್ನ‌ದು ಎನ್ನುತ್ತಾರೆ ಹಿರಿಯ ‌ನಟಿ‌ ಗಿರಿಜಾ‌ ಲೋಕೇಶ್.

 

ಕಾರ್ಯಕಾರಿ ನಿರ್ಮಾಪಕರಾದ ಸಂಜಯ್ ಮಾಗನೂರು, ನಟಿ ಅಂಜನಾ ಹಾಗೂ‌ ಸಂಗೀತ ನಿರ್ದೇಶಕ ಕೌಶಿಕ್ ಮಾಧ್ಯಮದ ಮುಂದೆ ಕೆಲವು ಮಾತುಗಳನ್ನು ಹಂಚಿಕೊಂಡರು.

 

ಆರ್ ಕೆ ಅವರೆ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಕೌಶಿಕ್ ಸಂಗೀತ ನಿರ್ದೇಶನ, ನಾಗರಾಜ್ ಛಾಯಾಗ್ರಹಣ ಹಾಗೂ ಶಿವರಾಜ್ ಮೇಹು ಅವರ ಸಂಕಲನವಿದೆ.

 

ವಿನಯ್ ಕಾರ್ತಿಕ್, ಕೀರ್ತಿ ಭಟ್, ಗಿರಿಜಾ ಲೋಕೇಶ್, ವಿನಯಾಪ್ರಸಾದ್, ಬಿರಾದಾರ್, ಜಯರಾಂ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Copyright@2018 Chitralahari | All Rights Reserved. Photo Journalist K.S. Mokshendra,