Appu Katha Gaanam.Video Song

Thursday, March 16, 2023

174

 

*ಅಭಿಮಾನಿ ನಿರ್ಮಾಪಕರಿಂದ ಪುನೀತ್ ಹುಟ್ಟುಹಬ್ಬಕ್ಕೆ  ಅಪ್ಪುಕಥಾಗಾನಂ*

 

    ಅಭಿಮಾನ ಎನ್ನುವುದು ತುಂಬಾ ದೊಡ್ಡದು. ಅದಕ್ಕೆ ಬೆಲೆ ಕಟ್ಟಲಾಗದು. ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನಗಲಿ  ವರ್ಷಗಳೇ ಕಳೆದರೂ ಅವರನ್ನು ಆರಾಧಿಸುವ ಅಭಿಮಾನಿಗಳು ಅವರ ಹೆಸರನ್ನು ಆಕಾಶದೆತ್ತರಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ. ಅಂಥ ಮತ್ತೊಬ್ಬ ಅಪ್ಪಟ ಅಭಿಮಾನಿಯೇ ಮಹಿ ಶಿವಶಂಕರ್. ಇವರು ಮೂಲತಃ ಆಂಧ್ರದವರಾದರೂ ಬೆಂಗಳೂರಿನಲ್ಲೇ ತಮ್ಮ  ಜೀವನ ಕಟ್ಟಿಕೊಂಡಿದ್ದಾರೆ. ಮೊದಲಿಂದಲೂ ರಾಜ್ ಕುಟುಂಬದ ಮೇಲೆ ಅಪಾರ ಗೌರವ ಅಭಿಮಾನ ಇಟ್ಟುಕೊಂಡಿದ್ದ ಮಹಿ ಶಿವಶಂಕರ್ ಅಪ್ಪು ಅಗಲಿಕೆಯ ನೋವನ್ನು ಸುಂದರವಾದ ಹಾಡೊಂದರ ಮೂಲಕ ವ್ಯಕ್ತಪಡಿಸಿದ್ದಾರೆ. ಮೂಲತಃ ಇವರೊಬ್ಬ ನಿರ್ಮಾಪಕರೂ ಹೌದು,  ಈಗಾಗಲೇ ಬಿವಿಎಂ ಪ್ರೊಡಕ್ಷನ್ಸ್ ಎಂಬ ಸಂಸ್ಥೆಯನ್ನು ಆರಂಭಿಸಿ ಅದರ ಮೂಲಕ ಎರಡು ತೆಲುಗು ಚಿತ್ರಗಳನ್ನೂ ನಿರ್ಮಿಸಿದ್ದಾರೆ. ಈಗ ಕನ್ನಡದಲ್ಲಿ ತಮ್ಮ ಮೂರನೇ ಚಿತ್ರವನ್ನು ನಿರ್ಮಿಸಲು ಹೊರಟಿದ್ದಾರೆ. ಅದರ ಪ್ರಥಮ ಹೆಜ್ಜೆಯಾಗಿ ಅಪ್ಪು ಅಭಿಮಾನದ ಹಾಡೊಂದನ್ನು ಮಾಡಿಕೊಂಡಿದ್ದಾರೆ. ಮಾರ್ಚ್ ೧೭ ಅಪ್ಪು ಹುಟ್ಟುಹಬ್ಬ. ಅದಕ್ಕಾಗಿಯೇ ಅವರು ಅಪ್ಪು ಕಥಾಗಾನಂ ಎಂಬ ಈ ಹಾಡನ್ನು ನಿರ್ಮಿಸಿ ಅಭಿಮಾನಿಗಳಿಗೆ ಅರ್ಪಿಸಿದ್ದಾರೆ. ಈ ಹಾಡಲ್ಲಿ ಅಪ್ಪು ಕಾಣದೆ ಕಂಗಾಲಾಗಿ ಬೀದಿ ಬೀದಿಗಳಲ್ಲಿ ತನ್ನ ದೇವರನ್ನು ಹುಡುಕುತ್ತ "ಎಲ್ಲಿ ಹೋದೆಯೋ ನೀನೆಲ್ಲಿ ಇರುವೆಯೋ" ಎಂದು ಹಾಡುವ ಅಭಿಮಾನಿಯಾಗಿ ಮಹಿ  ಶಿವಶಂಕರ್ ಅವರೇ ಅಭಿನಯಿಸಿದ್ದಾರೆ. ಕನ್ನಡ ಹಾಗೂ ತೆಲುಗು ಸೇರಿ ಎರಡು ಭಾಷೆಗಳಲ್ಲಿ ತಯಾರಾಗಿರುವ ಈ ಹಾಡಿನ ಬಿಡುಗಡೆ ಕಾರ್ಯಕ್ರಮ ಚಲನಚಿತ್ರ ಕಲಾವಿದರ ಸಂಘದ ಆವರಣದಲ್ಲಿ ನೆರವೇರಿತು. 

ಚರಣ್ ಅರ್ಜುನ್ ಅವರ ಸಂಗೀತದಲ್ಲಿ ಮೂಡಿಬಂದಿರುವ ಈ ಹಾಡಿಗೆ ಗಾಯಕ ರಾಜೇಶ್ ಕೃಷ್ಣನ್ ಹಾಗೂ ಜಯಶ್ರೀ ದನಿಯಾಗಿದ್ದಾರೆ. ಸೋಹನ್ ಅಭಿರಾಮ್ ಈ ಹಾಡಿಗೆ ನಿರ್ದೇಶನ ಮಾಡಿದ್ದಾರೆ. ಧನಪಾಲ್ ಕೆ.ಎಂ. ಅವರ ಛಾಯಾಗ್ರಹಣದಲ್ಲಿ ಈ ಹಾಡು ಚಿತ್ರೀಕರಣವಾಗಿದೆ. ಗೋಪಿ ಶೀಗೇಹಳ್ಳಿ ಅವರ ಸಾಹಿತ್ಯ ಈ ಹಾಡಿಗಿದೆ. ಈ ಕುರಿತಂತೆ ಮಾತನಾಡಿದ ಮಹಿ ಶಿವಶಂಕರ್, ರಾಜ್ ಕುಮಾರ್ ಅವರ ಚಿತ್ರಗಳನ್ನು ನೋಡುತ್ತ ಅವರ ಆದರ್ಶಗಳನ್ನು ಮೊದಲಿಂದಲೂ ಪಾಲಿಸಿಕೊಂಡು ಬಂದವನು ನಾನು. ತಂದೆಯ ಹಾದಿಯಲ್ಲೇ ಸಾಗಿದ  ಅಪ್ಪು ಅವರ ಅಪ್ಪಟ ಅಭಿಮಾನಿ. ನನ್ನ ಮನದ ಭಾವನೆಯನ್ನು ಈ ಹಾಡಿನ ಮೂಲಕ ವ್ಯಕ್ತಪಡಿಸಿದ್ದೇನೆ. ಅಲ್ಲದೆ ಈ ಹಾಡು ನಮ್ಮಚಿತ್ರದಲ್ಲಿಯೂ ಇರುತ್ತದೆ. ಈ ಹಾಡನ್ನು ನೋಡಿ ರಾಘಣ್ಣ, ಪೂರ್ಣಿಮಾ ರಾಮ್ ಕುಮಾರ್ ಅವರು ನಮ್ಮ ಅಪ್ಪುವನ್ನು ಈ ಹಾಡಿನ ಮೂಲಕ ನೋಡುತ್ತಿದ್ದೇವೆ,  ತುಂಬಾ ಚಿನ್ನಾಗಿ ಮಾಡಿದ್ದೀರಿ ಎಂದು ಹೇಳಿದರು. ಮೇನಲ್ಲಿ ನಮ್ಮ ಹೊಸ ಚಿತ್ರವನ್ನು ಪ್ರಾರಂಭಿಸುತ್ತಿದ್ದೇವೆ. ಸಾಧನೆ ಮಾಡಲು ಹೊರಟಾಗ ಹತ್ತಾರು ಅಡ್ಡದಾರಿಗಳಿರುತ್ತವೆ. ಒಳ್ಳೆ ದಾರಿ ತೋರಿಸುವ  ಒಬ್ಬ ಗಾಡ್ ಫಾದರ್ ಇದ್ದರೆ  ಆ ಹಾದಿ ಸುಗಮವಾಗಿರುತ್ತೆ ಎಂದು ಈ ಚಿತ್ರದ ಮೂಲಕ ಹೇಳಹೊರಟಿದ್ದೇವೆ. ಈಗ ಬಿಡುಗಡೆಯಾಗಿರುವ ’ಎಲ್ಲಿ ಹೋದೆಯೋ’ ಹಾಡು ಚಿತ್ರದ ಪ್ರಮುಖ ಘಟ್ಟವಾಗಿ ಮೂಡಿಬರಲಿದೆ.

Copyright@2018 Chitralahari | All Rights Reserved. Photo Journalist K.S. Mokshendra,