Nanna Prakara.Film Success Meet.

Tuesday, September 03, 2019

53

ತೆಲುಗು, ತಮಿಳು, ಹಿಂದಿ  ಭಾಷೆಗೆ  ನನ್ನ  ಪ್ರಕಾರ

         ಬಾಲಿವುಡ್, ಕಾಲಿವುಡ್, ಟಾಲಿವುಡ್ ಮತ್ತು ಮಾಲಿವುಡ್  ಉದ್ಯಮವು  ಸ್ಯಾಂಡಲ್‌ವುಡ್ ಕಡೆ ಗಮನ ಹರಿಸುತ್ತಿರುವುದು ಇಲ್ಲಿನ ಚಿತ್ರಗಳು ಅಲ್ಲಿಗೆ ಹೋಗುತ್ತಿರುವುದು ಹೆಮ್ಮೆಯ  ಬೆಳವಣಿಗೆಯಾಗಿದೆ. ಆ ಸಾಲಿಗೆ  ಎರಡು ವಾರದ ಹಿಂದೆ  ಬಿಡುಗಡೆಯಾದ ‘’ನನ್ನ ಪ್ರಕಾರ’ ಸಿನಿಮಾವು ಸೇರ್ಪಡೆಯಾಗಿದೆ. ಸೆಸ್ಪನ್ಸ್, ಥ್ರಿಲ್ಲರ್ ಕತೆಯಾಗಿದ್ದು, ನೋಡಿದವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ರಚನೆ, ನಿರ್ದೇಶನ ಮಾಡಿರುವ ವಿನಯ್‌ಬಾಲಾಜಿ ಹೇಳುವಂತೆ ತಮಿಳು, ತೆಲುಗು ಡಬ್ಬಿಂಗ್ ಹಕ್ಕುಗಳು ಮಾರಾಟವಾಗಿದೆ. ಹಿಂದಿಯಲ್ಲಿ ರಿಮೇಕ್ ಮಾಡಲು ಹೆಸರಾಂತ ಸಂಸ್ಥೆಯೊಂದು ಮುಂದೆ ಬಂದಿದೆ. ಹೆಚ್ಚಿನ ವಿವರಗಳು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು. ಮಾದ್ಯಮದ ಕಡೆಯಿಂದ ಒಳ್ಳೆ ವಿಮರ್ಶೆ, ಪ್ರೇಕ್ಷಕರು ಚಿತ್ರವನ್ನು ನಗಣ್ಯ ಮಾಡದೆ ಇರುವುದರಿಂದ ಎಲ್ಲಾ ಕಡೆಗಳಲ್ಲೂ ಬಹುಶ: ತುಂಬಿದ ಪ್ರದರ್ಶನ ಕಾಣುತ್ತಿದೆ ಎನ್ನುತ್ತಾರೆ.

        ದರ್ಶನ್ ಅವರು ಟ್ರೈಲರ್ ಬಿಡುಗಡೆ ಮಾಡಿದ್ದು ಪ್ರಚಾರಕ್ಕೆ ಅನುಕೂಲವಾಗಿದೆ. ಮೊದಲ ಯಶಸ್ಸು ಕಂಡ ಚಿತ್ರವಾಗಿದ್ದರಿಂದ ಇದನ್ನು ಮರೆಯಲಿಕ್ಕೆ ಸಾದ್ಯವಿಲ್ಲ ಎಂಬುದು ಅರ್ಜುನ್‌ಯೋಗಿ ನುಡಿ.

       ಏನೋ ಇದೆ ಅಂತ ನೋಡಲು ಹೋದವರಿಗೆ ನಿರಾಸೆ ಉಂಟು ಮಾಡಿಲ್ಲ. ೮ನೇ ಬಾರಿ ನೋಡಿದ್ದರೂ, ಬೋರ್ ಆಗಿಲ್ಲ. ಇದಕ್ಕೆ ಇನ್ನಷ್ಟು ಸದ್ದು ಮಾಡಲು ಮಾದ್ಯಮದವರ ಪ್ರೋತ್ಸಾಹ ಬೇಕಾಗಿದೆ ಎಂದು ಮಯೂರಿ ಕೋರಿದರು.

       ಗಣೇಶ ಚಿಕ್ಕ ಕೆರೇಲಿ ಬಿದ್ದ, ದೊಡ್ಡ ಕೆರೇಲಿ ಎದ್ದ ಎನ್ನುವ ಹಾಗೆ ನಮ್ಮ ಸಿನಿಮಾವು ಚಿಕ್ಕದರಲ್ಲಿ ಬಿದ್ದು, ದೊಡ್ಡದರಲ್ಲಿ ಎದ್ದು ಪ್ರೇಕ್ಷಕರ ಮನಸೂರೆಗೊಳ್ಳುತ್ತಿದೆ. ಕನ್ನಡಿಗರು ಒಳ್ಳೆ ಚಿತ್ರಕ್ಕೆ ಕೈ ಬಿಡೋಲ್ಲ ಎನ್ನುವುದಕ್ಕೆ ಸಾಕ್ಷಿ  ಇದಾಗಿದೆ. ಹಿಂದಿಯಲ್ಲಿ ಮಾಡುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಅಲ್ಲಿಯೂ ಕರೆ ಬರುವ ಸಾದ್ಯತೆ ಇದೆ ಅಂತ ನಿರಂಜನ್‌ದೇಶಪಾಂಡೆ ಮೈಕ್‌ನ್ನು ಕೆಳಗಿಟ್ಟರು. 

       ಟೈಟಲ್ ಕೇಳಿದ ತಕ್ಷಣ ಎಲ್ಲರೂ ಮಾತನಾಡುವ ಪದ ಎಂದು ತಿಳಿದು ಹಣ ಹೂಡಲಾಯಿತು. ನಮ್ಮ ಜನರು ಕಾಪಾಡಿದ್ದಾರೆ. ರಿಮೇಕ್ ಹಕ್ಕುಗಳು ಮಾರಾಟವಾಗಿದ್ದರಿಂದ ಸೇಫ್ ಆಗಿದ್ದೇನೆ. ಮಲೆಯಾಳಂ ಕುರಿತಂತೆ ಚರ್ಚೆ ನಡೆಸಿದ ನಂತರ ಮತ್ತೋಬ್ಬರು ನಮಗೆ ನೀಡಿ ಅಂತ ಬೇಡಿಕೆ ಇಟ್ಟಿದ್ದಾರೆ.  ಮರಾಠಿ. ಭೋಜ್‌ಪುರಿ ಕಡೆಗಳಿಂದಲೂ ಕರೆ ಬರುತ್ತಿದೆ. ವಿತರಕ ದೀಪಕ್‌ಗಂಗಾಧರ್ ಮುಖಾಂತರ ಹೆಚ್ಚಿನ ೪೦ ಕೇಂದ್ರಗಳಲ್ಲಿ ಶುಕ್ರವಾರದಿಂದ ತೆರೆಕಾಣಲಿದ್ದು, ಮುಂದಿನವಾರದಿಂದ ಆಸ್ಟ್ರೇಲಿಯಾ, ಜರ್ಮನಿ ಮುಂತಾದ ಕಡೆಗಳಲ್ಲಿ ಬಿಡುಗಡೆ ಮಾಡಲಾಗುವುದು ಅಂತ ವಿವರವನ್ನು ಗುರುರಾಜ್ ತೆರೆದಿಟ್ಟರು.

        ಸಂಗೀತ ನಿರ್ದೇಶಕ ಅರ್ಜುನ್‌ರಾಮು, ಸಂಕಲನಕಾರ ಸತೀಶ್‌ಚಂದ್ರಯ್ಯ, ಛಾಯಾಗ್ರಾಹಕ ಮನೋಹರ್‌ಜೋಷಿ  ಸಂತಸ  ಹಂಚಿಕೊಂಡರು. ಚಿತ್ರೀಕರಣದಿಂದ ನೇರವಾಗಿ ಗೋಷ್ಟಿಗೆ ಆಗಮಿಸಿದ ಕಿಶೋರ್ ಫೋಟೋಗೆ ಫೋಸ್ ಕೊಟ್ಟರು.  ಬಲ್ಲ ಮೂಲಗಳ ಪ್ರಕಾರ ಕಿಶೋರ್ ನಿರ್ವಹಿಸಿದ್ದ ಪಾತ್ರವನ್ನು ಹಿಂದಿಯಲ್ಲಿ ಅಜಯ್‌ದೇವಗನ್ ಮಾಡಲಿದ್ದಾರೆಂಬ ಸುದ್ದಿ ಹೊರಬಂದಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,