Munduvareda Adhyaya.Film Review

Friday, March 19, 2021

 

ರಹಸ್ಯ ತುಂಬಿದ ಅಧ್ಯಾಯ

 

ಚಿತ್ರ: ಮುಂದುವರೆದ ಅಧ್ಯಾಯ

ತಾರಾಗಣ: ಆದಿತ್ಯ, ಅಜಯ್ ರಾಜ್, ಜೈ ಜಗದೀಶ್

ನಿರ್ದೇಶನ: ಬಾಲು ಚಂದ್ರಶೇಖರ್

ನಿರ್ಮಾಣ: ಕಣಜ ಎಂಟರ್ಪ್ರೈಸಸ್

 

 

ಡೆಡ್ಲಿ ಆದಿತ್ಯ ನಟನೆಯ ಕ್ರೈಮ್ ಥ್ರಿಲ್ಲರ್ ಸಿನಿಮಾ ಇದು. ಚಿತ್ರದಲ್ಲಿ ಆದಿತ್ಯ ಅವರು ಬಾಲ ಎನ್ನುವ ಪೊಲೀಸ್ ಅಧಿಕಾರಿಯ ಪಾತ್ರ ಮಾಡಿದ್ದಾರೆ. ಒಂದು ಕೊಲೆ ಮತ್ತು ಅದಕ್ಕೆ ಸಂಬಂಧಿಸಿದ ಡ್ರಗ್ ಪ್ರಕರಣವನ್ನು ಈ ಪೊಲೀಸ್‌ ಅಧಿಕಾರಿ ಹೇಗೆ ಭೇದಿಸುತ್ತಾರೆ ಎನ್ನುವುದೇ ಚಿತ್ರದ ಕತೆ.

 

ಚಿತ್ರದಲ್ಲಿ ಒಂದಷ್ಟು ಯುವ ಪಾತ್ರಗಳಿವೆ. ಮತ್ತೊಂದಷ್ಟು ರಾಜಕಾರಣಿಗಳು ಇದ್ದಾರೆ. ಇವರ ನಡುವೆ ಡ್ರಗ್ಸ್ ದಂಧೆ ನಡೆಸುವವರೂ ಇದ್ದಾರೆ. ತನಿಖಾಧಿಕಾರಿ ಬಾಲ ಅಲ್ಲದೆ ಬಾಲ ಅಲ್ಲಾಡಿಸುವ ಪೊಲೀಸರು ಕೂಡ ಇದ್ದಾರೆ. ಇವರೆಲ್ಲರ ನಡುವಿನ ಸಂಬಂಧವೇನು ಎನ್ನುವುದನ್ನು ಚಿತ್ರದ ನಾಯಕ ಬಿಚ್ಚಿಡುತ್ತಾ ಹೋಗುತ್ತಾರೆ. ಚಿಂತನ್ ಎನ್ನುವ ಗಾಯಕ ಮತ್ತು ಸಾಕ್ಷಿ ಎನ್ನುವ ಪತ್ರಕರ್ತೆಯ ನಡುವಿನ ಪ್ರೀತಿಯನ್ನು ತೋರಿಸುತ್ತಾರೆ. ಆದರೆ ಪ್ರೀತಿಗಿಂತ ಪತ್ರಕರ್ತೆ ತನ್ನ ವೃತ್ತಿಯಲ್ಲಿ ಅನುಸರಿಸಿರುವ ನೀತಿಯನ್ನು ಎತ್ತಿ ಹಿಡಿಯುವಂತೆ ಸಂದರ್ಭಗಳು ಸೃಷ್ಟಿಯಾಗುತ್ತವೆ. ಅದೇ ಸಂದರ್ಭದಲ್ಲಿ ಆಕೆಯ ಸ್ನೇಹಿತೆ ಅಚ್ಚರಿ ಎನ್ನುವ ಹೆಸರಿನ ವೈದ್ಯೆ ಮತ್ತು ಆಕೆ ಸಾಕ್ಷಿಯೊಂದಿಗೆ ಸೇರಿ ಸಮಾಜಕ್ಕೆ ಔಷಧಿ ನೀಡಲು ಪಡುವ ಪ್ರಯತ್ನ ಚಿತ್ರದ ಮತ್ತೊಂದು ಹೈಲೈಟ್.

ನಾಯಕನಾಗಿ ಆದಿತ್ಯ ತಡವಾಗಿ ಆಗಮಿಸುತ್ತಾರೆ. ಆದರೆ ಅವರ ಆಗಮನ ಚಿತ್ರಕ್ಕೆ ಹೊಸ ಕಳೆ ನೀಡುತ್ತದೆ. ಪೊಲೀಸ್ ಅಧಿಕಾರಿ ಪಾತ್ರ ಅವರಿಗೆ ಚೆನ್ನಾಗಿ ಒಪ್ಪುತ್ತದೆ. ತನಿಖಾಧಿಕಾರಿಯಾಗಿ ಅವರ ನಟನೆಯ ಪ್ರತಿ ಸನ್ನಿವೇಶ ಕುತೂಹಲಕರವಾಗಿ ಮೂಡಿ ಬಂದಿದೆ. ಸಾಹಸದ ಸನ್ನಿವೇಶಗಳಲ್ಲಿಯೂ ಗಮನ ಸೆಳೆಯುತ್ತಾರೆ. ಕತೆಯಲ್ಲಿನ ಅಪರಾಧಕ್ಕೆ ಸಾಕ್ಷಿಯಾಗುವ ವೈದ್ಯೆ ಅಚ್ಚರಿಯಾಗಿ ಚಂದನಾ ಗೌಡ ಭರವಸೆಯ ನಟಿಯಾಗಿ ಗುರುತಿಸಲ್ಪಡುತ್ತಾರೆ. ಪತ್ರಕರ್ತೆ ಸಾಕ್ಷಿಯ ಪಾತ್ರಧಾರಿ ಆಶಿಕಾ ಸೋಮಶೇಖರ್  ಕೂಡ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಸಾಕ್ಷಿಯ ಪ್ರಿಯಕರ ಗಾಯಕ ಚಿಂತನ್ ಪಾತ್ರದಲ್ಲಿ ಅಜಯ್ ರಾಜ್ ನೈಜ ನಟನೆ ನೀಡಿದ್ದಾರೆ. ಡ್ರಗ್ಸ್ ಎನ್ನುವುದು ಇಂದಿಗೂ ಸಮಾಜದಲ್ಲಿ ಜೀವಂತವಾಗಿರುವ ಪಿಡುಗು. ಅದರ ವಿರುದ್ಧ ರಾಜಕಾರಣಿಗಳು ಸಮರ ಸಾರಿದಾಗ ಮಾತ್ರವೇ ಪ್ರಕರಣ ಭೇದಿಸಲು ಸಾಧ್ಯ ಎನ್ನುವುದನ್ನು ಸೂಚ್ಯವಾಗಿ ಹೇಳಿರುವ ಕೀರ್ತಿ ನಿರ್ದೇಶಕರಿಗೆ ಸಲ್ಲುತ್ತದೆ. ನವ ನಿರ್ದೇಶಕ ಬಾಲು ಚಂದ್ರಶೇಖರ್ ಅವರು ಸಿನಿಮಾಗೆ ಕತೆ, ಚಿತ್ರಕತೆ ಬರೆದವರು ಕೂಡ ಹೌದು. ಅವರು ತಮ್ಮ ಪುಸ್ತಕಕ್ಕೆ ಸಿನಿಮಾ ರೂಪ ನೀಡಿರುವುದನ್ನು ಟೈಟಲ್ ಕಾರ್ಡ್ ಮೂಲಕವೇ ತೋರಿಸಿರುವ ರೀತಿ ಆಕರ್ಷಕವಾಗಿದೆ.

 

ಉಳಿದಂತೆ ಗೃಹಮಂತ್ರಿಯಾಗಿ ಮುಖ್ಯಮಂತ್ರಿ ಚಂದ್ರು, ಪೊಲೀಸ್ ಅಧಿಕಾರಿಯಾಗಿ ಜೈಜಗದೀಶ್ ಚಿತ್ರಕ್ಕೆ ಕಳೆ ನೀಡಿದ್ದಾರೆ. ಚಿತ್ರದ ಛಾಯಾಗ್ರಹಣ, ಸಂಕಲನ ಮತ್ತು ಹಿನ್ನೆಲೆ ಸಂಗೀತ ಚಿತ್ರವನ್ನು ಆಸಕ್ತಿಕರವಾಗಿ ನೋಡುವಂತೆ ಮಾಡುತ್ತದೆ. ಒಟ್ಟಿನಲ್ಲಿ ಕ್ರೈಮ್ ಥ್ರಿಲ್ಲರ್ ಇಷ್ಟಪಡುವ ಮಂದಿ ನೋಡಬೇಕಾದ ಸಿನಿಮಾ ಇದು.

 

Copyright@2018 Chitralahari | All Rights Reserved. Photo Journalist K.S. Mokshendra,