Kaliveera.Film Review

Friday, August 06, 2021

 

ಕಲಿವೀರ ಈಗ ದಾಖಲೆ ವೀರ

 

ಚಿತ್ರ: ಕಲಿವೀರ

ತಾರಾಗಣ: ಏಕಲವ್ಯ, ಪಾವನಾ ಗೌಡ, ಚಿರಶ್ರೀ ಅಂಚನ್

ನಿರ್ದೇಶನ: ಅವಿ

ನಿರ್ಮಾಣ: ಶ್ರೀನಿವಾಸ್

 

ಬಾಹುಬಲಿಯಂಥ ಕಾಲ್ಪನಿಕ ಕತೆಯನ್ನು ಕನ್ನಡದಲ್ಲಿ ಯಾಕೆ ತೆಗೆಯಲು ಸಾಧ್ಯವಿಲ್ಲ ಎನ್ನುವ ಪ್ರಶ್ನೆಗೆ ಉತ್ತರವಾಗಿ ಬಂದ ಚಿತ್ರವೇ ಕಲಿವೀರ. ಹಾಗಾಗಿ ಕನ್ನಡಿಗರು ನೋಡಲೇಬೇಕಾದ ಸಿನಿಮಾ ಇದು ಎಂದು ಹೇಳಬಹುದು.

 

 

ಆತನೋರ್ವ ನಗರದಲ್ಲಿ ಓಡಾಡುವ ಆಗಂತುಕ ವ್ಯಕ್ತಿ. ಆತ ಯಾರೊಂದಿಗೂ ಮಾತನಾಡುವುದಿಲ್ಲ. ಮೊದಲ ನೋಟಕ್ಕೆ ಕೊಳೆಗೇರಿಯಿಂದ ಬಂದ ಅಪರಾಧಿಯಂತೆ ಕಾಣಿಸುತ್ತಾನೆ. ತೀರ ಖುಷಿಯಾದರೆ ವಿಕಾರವಾಗಿ ನಗುತ್ತಾನೆ. ಶಿವ ಎನ್ನುವುದನ್ನು ಬಿಟ್ಟರೆ ಆತನಿಗೆ ಬೇರೇನೂ ಗೊತ್ತಿಲ್ಲ. ಆತ ಯಾರು? ಆತನ ಗುರಿಯೇನು ಎನ್ನುವುದನ್ನು ಕುತೂಹಲಕರವಾಗಿ ತೋರಿಸಿರುವ ಚಿತ್ರವೇ ಕಲಿವೀರ.

ಇತಿಹಾಸಕ್ಕೆ ಹೊಂದಿಕೊಂಡಂತೆ ಸಾಗುವ ಜನಾಂಗದ ಬಗ್ಗೆ ಒಂದು ಕಾಲ್ಪನಿಕ ಕತೆ ಇದು. ಅಪ್ರತಿಮ ಸಾಹಸ ಮಾಡಬಲ್ಲ ನಟ ಏಕಲವ್ಯನನ್ನು ಆ ನಿಟ್ಟಿನಲ್ಲಿ ಚೆನ್ನಾಗಿ ಬಳಸಿಕೊಳ್ಳಲಾಗಿದೆ. ಅಂಥದೊಂದು ಪಾತ್ರ ನೀಡಿರುವ  ನಿರ್ದೇಶಕ ಅವಿಯವರ ಪ್ರಯತ್ನಯವನ್ನು ಮೆಚ್ಚಲೇಬೇಕು. ಒಟ್ಟಿನಲ್ಲಿ ಬುಡಕಟ್ಟು ಜನಾಂಗದ ಯುವಕ ಕಲಿ ಲಿಂಗೋದ  ಎನ್ನುವ ಊರಿನಿಂದ ತನ್ನ ಸೇಡು ತೀರಿಸಿಕೊಳ್ಳಲು ನಗರ ಸೇರುತ್ತಾನೆ. ಆತನಿಗಿರುವ ಸೇಡು ಏನು? ಯಾರ ಮೇಲೆ? ಸೇಡು ತೀರಿಸಿಕೊಳ್ಳುವಲ್ಲಿ ಯಶಸ್ವಿಯಾದನೇ ಎನ್ನುವುದನ್ನು ಚಿತ್ರದಲ್ಲಿ ನೋಡಬಹುದು.

 

 

ಕಲಿವೀರನಾಗಿ ಏಕಲವ್ಯನ ನಟನೆ ಪಾತ್ರಕ್ಕೆ ಹೊಂದಿಕೊಂಡಂತಿದೆ. ಮುಖಭಾವ, ಮಾತಿಗಿಂತ ಹೆಚ್ಚಾಗಿ ನಾಯಕನ ದೇಹಭಾಷೆಗೆ ಒತ್ತು ನೀಡಲಾಗಿದೆ. ಚಿತ್ರದಲ್ಲಿ ಇಬ್ಬರು ನಾಯಕಿಯರು. ಕಲಿಯ ಪ್ರೇಯಸಿ ಬುಡಕಟ್ಟಿನ ಯುವತಿಯಾಗಿ ಚಿರಶ್ರೀ ಅಂಚನ್ ನಟಿಸಿದ್ದಾರೆ. ನಗರದಲ್ಲಿ ಕಲಿಯ ಹಿಂದೆ ಮುಂದೆ ಕಾಣಿಸಿಕೊಳ್ಳುವ ಕುತೂಹಲಭರಿತ ಯುವತಿಯ ಪಾತ್ರವನ್ನು ಪಾವನಾ ಗೌಡ ನಿರ್ವಹಿಸಿದ್ದಾರೆ. ಅವರ ಪಾತ್ರದಲ್ಲಿನ ಟ್ವಿಸ್ಟ್ ಕತೆಯ ಹೈಲೈಟ್ ಕೂಡ ಹೌದು.

 

ಚಿತ್ರದ ಪ್ರಮುಖ ಪಾತ್ರಗಳಲ್ಲಿ ಟಿ.ಎಸ್ ನಾಗಾಭರಣ, ಅನಿತಾ‌ಭಟ್, ನೀನಾಸಂ ಅಶ್ವಥ್ ಮೊದಲಾದವರು ಕಾಣಿಸಿಕೊಂಡಿದ್ದಾರೆ. ಕಳ್ಳನಾಗಿ ತಬಲಾ‌ನಾಣಿ ನಗಿಸುತ್ತಾರೆ. ಅವರ ಸಂಭಾಷಣೆಗಳೇ ಮೊದಲಾರ್ಧದಲ್ಲಿ ನಾಯಕನಿಗೆ ಸಾಥ್ ನೀಡಿವೆ.

ಅನಿತಾ ಭಟ್ ಗ್ಲಾಮರಸ್, ಬೋಲ್ಡ್ ಪಾತ್ರದ ಮೂಲಕ ಪ್ರೇಕ್ಷಕರನ್ನು ಬೆಚ್ಚಿ ಬೀಳಿಸುತ್ತಾರೆ. ವಿ ಮನೋಹರ್ ಸಂಗೀತದಲ್ಲಿ ಹಾಡುಗಳು ಆಕರ್ಷಕವಾಗಿವೆ. ಡಿಫರೆಂಟ್ ಡ್ಯಾನಿ ಸಾಹಸ ಸಂಯೋಜನೆಯಲ್ಲಿ  ದೊಡ್ಡ ಹೊಡೆದಾಟದ ದೃಶ್ಯಗಳಿವೆ. ಒಟ್ಟಿನಲ್ಲಿ ಒಂದು ಕಮರ್ಷಿಯಲ್ ಚಿತ್ರಕ್ಕೆ ಬೇಕಾದ ಎಲ್ಲ ಪ್ರಮುಖ ಅಂಶಗಳನ್ನು ಹೊಂದಿರುವ ಸಿನಿಮಾ ಕಲಿವೀರ ಎನ್ನಬಹುದು.

Copyright@2018 Chitralahari | All Rights Reserved. Photo Journalist K.S. Mokshendra,