Shakeela.Film Review.

Friday, December 25, 2020

 

ಶಕೀಲಾ: ಒಮ್ಮೆ ನೋಡುವುದರಲ್ಲಿ ತಪ್ಪಿಲ್ಲ..!

 

ಚಿತ್ರ: ಶಕೀಲಾ

ತಾರಾಗಣ: ರಿಚಾ ಚಡ್ಡ, ಪಂಕಜ್ ತ್ರಿಪಾಠಿ, ಎಸ್ತರ್‌ ನೊರೊನ್ಹಾ

ನಿರ್ದೇಶನ: ಇಂದ್ರಜಿತ್ ಲಂಕೇಶ್

ನಿರ್ಮಾಣ: ಸ್ಯಾಮಿ ನನ್ವಾನಿ, ಸಾಹಿಲ್ ನನ್ವಾನಿ

 

ಬಯೋಪಿಕ್ ಚಿತ್ರಗಳ ಕಾಲದಲ್ಲಿ ಬಂದಿರುವ `ಶಕೀಲಾ’ ಸಿನಿಮಾ ಮಾದಕ ನಟಿ ಶಕೀಲಾ ಕುರಿತಾದ ಚಿತ್ರ. ಚಿತ್ರವನ್ನು ಶಕೀಲಾ ಅವರ ಬದುಕನ್ನು ಆಧಾರಿಸಿ ಮಾಡಲಾಗಿದ್ದು, ಕಮರ್ಷಿಯಲ್ ಸಿನಿಮಾ ಭಾಷೆಗೆ ತಕ್ಕಂತೆ ಕಾಲ್ಪನಿಕ ದೃಶ್ಯಗಳನ್ನು ಕೂಡ ಜೋಡಿಸಲಾಗಿದೆ.

 

ಕೇರಳದ ಬಡ ಮುಸ್ಲಿಂ ಕುಟುಂಬವೊಂದರಲ್ಲಿ ಜನಿಸಿದ ಹುಡುಗಿ ಶಕೀಲಾ. ಆಕೆಗೆ ಆರು ಜನ ತಂಗಿಯರು. ಶಾಲಾ ವಿದ್ಯಾರ್ಥಿನಿಯಾಗಿದ್ದಾಗಲೇ ತಂದೆಯನ್ನು ಕಳೆದುಕೊಳ್ಳುತ್ತಾಳೆ. ಹಾಗಾಗಿ ಕುಟುಂಬದ ಸಂಪೂರ್ಣ ಜವಾಬ್ದಾರಿ ಈ ಹಿರಿಯಕ್ಕನ ಮೇಲೆ ಬೀಳುತ್ತದೆ. ಶಕೀಲಾಳ ತಾಯಿ ಮಕ್ಕಳೊಂದಿಗೆ ನಗರ ಸೇರುತ್ತಾಳೆ. ಮಗಳನ್ನು ವಯಸ್ಕರ ಚಿತ್ರಗಳ ನಾಯಕಿಯನ್ನಾಗಿ ಮಾಡಿ, ಹಣ ಸಂಪಾದಿಸುತ್ತಾಳೆ. ಇಷ್ಟವಿಲ್ಲದ ಪಾತ್ರಗಳಲ್ಲಿ ಬಾಲಕಿ ಶಕೀಲಾ ನಟಿಸುತ್ತಾಳೆ. ಚಿತ್ರೀಕರಣದ ವೇಳೆ ಆಕೆ ಬಟ್ಟೆ ಬಿಚ್ಚದೇ ಇದ್ದರೂ, ಆಕೆಯಂತೆ ದೇಹಪ್ರಕೃತಿ ಹೊಂದಿರುವ ಮತ್ತೋರ್ವನಟಿಯನ್ನು ಬಳಸಿಕೊಂಡು ಬೆತ್ತಲೆ ಮೈ ತೋರಿಸಲಾಗುತ್ತದೆ. ಜನತೆ ಆಕೆಯ ಚಿತ್ರವನ್ನು ಶತದಿನೋತ್ಸವ ಪ್ರದರ್ಶನಗೊಳ್ಳುವಂತೆ ಮಾಡುತ್ತಾರೆ. ಸ್ಟಾರ್ ನಟನೋರ್ವನಿಗೆ ಸ್ಪರ್ಧಿಯಾಗುತ್ತಾಳೆ. ಇವೆಲ್ಲವನ್ನು ನಾವು ಶಕೀಲಾ ವಿಚಾರದಲ್ಲಿ ಬಹುಳಷ್ಟು ಬಾರಿ ಕೇಳಿದ್ದೇವೆ. ಆದರೆ ಇವುಗಳನ್ನು ಇಂದ್ರಜಿತ್ ತಮ್ಮದೇ ಶೈಲಿಯಲ್ಲಿ ಪರದೆಯ ಮೇಲೆ ತೋರಿಸಿರುವ ರೀತಿ ಅದ್ಭುತ.

ಶಕೀಲಾ ಪಾತ್ರ ನಿರ್ವಹಿಸಿರುವ ರಿಚಾ ಚಡ್ಡಾ ಬಾಲಿವುಡ್ ನಟಿಯಾದರೂ ಆಕೆ ಪಾತ್ರವಾಗಿರುವ ರೀತಿಯನ್ನು ಗಮನಿಸಿದರೆ, ದಕ್ಷಿಣ ಭಾರತೀಯಳೆನ್ನುವಂತೆ ಆತ್ಮೀಯವಾಗುತ್ತಾ ಹೋಗುತ್ತಾರೆ. ಚಿತ್ರದಲ್ಲಿ ಸ್ಟಾರ್ ನಟ ಸಲೀಮ್ ಎನ್ನುವುದು ಮತ್ತೊಂದು ಪ್ರಧಾನ ಪಾತ್ರ. ಆ ಪಾತ್ರವನ್ನು ನಿರ್ವಹಿಸಿರುವ ಪಂಕಜ್ ತ್ರಿಪಾಠಿ ತಾನು ಎಂಥ ಅದ್ಭುತ ನಟ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಶಕೀಲಳ ಬಾಲ್ಯದ ಪಾತ್ರ ನಿರ್ವಹಿಸಿರುವ ಕಾಜೋಲ್ ಕೂಡ ಆಕರ್ಷಕವಾಗಿ ಅಭಿನಯ ನೀಡಿದ್ದಾರೆ. ಸಿನಿಮಾದಲ್ಲಿನ ಕತೆ ಶಕೀಲಾ ಆತ್ಮಕತೆಯ ಪುಸ್ತಕ ಓದಿದ್ದರೆ ಸಿನಿಮಾ ಅದಕ್ಕಿಂತ ವಿಭಿನ್ನವಾದ ಒಂದಷ್ಟು ವಿಚಾರಗಳನ್ನು ಹೇಳುತ್ತದೆ. ಮಾತ್ರವಲ್ಲ, ಮೇಕಿಂಗ್ ಕೂಡ ಚಿತ್ರವನ್ನು ಆಸ್ವಾದನೆ ಮಾಡಿಕೊಂಡು ನೋಡುವಂತೆ ಮಾಡುತ್ತದೆ. ಸಂತೋಷ್ ಪಾತಾಜೆಯವರ ಛಾಯಾಗ್ರಹಣಕ್ಕೆ ಅದರಲ್ಲಿ ಪ್ರಾಮುಖ್ಯತೆ ಇದೆ. ವೀರ್ ಸಮರ್ಥ್ ಸಂಗೀತವೂ ದೃಶ್ಯಗಳನ್ನು ಆತ್ಮೀಯವಾಗಿಸುತ್ತದೆ. ಒಟ್ಟು ಶಕೀಲಾ ಚಿತ್ರಕ್ಕೆ ಎ ಸರ್ಟಿಫಿಕೆಟ್ ದೊರಕಿದ್ದರೂ, ಈ ಸಿನಿಮಾದ ಉದ್ದೇಶ ಶಕೀಲಾ ಹೆಸರಲ್ಲಿ ಗ್ಲಾಮರ್ ಮೂಲಕ ಸೆಳೆಯುವುದು ಅಲ್ಲವೆಂದು ಸಾಬೀತು ಮಾಡಿದೆ. ಅಲ್ಲಿಗೆ ನಿರ್ದೇಶಕರು ಮತ್ತು ಕತೆಗೆ ಪ್ರೇರಣೆಯಾಗಿರುವ ಶಕೀಲಾ ಗೆದ್ದಂತೆ ಎನ್ನಬಹುದು. ಹಾಗಾಗಿ ಒಮ್ಮೆ ಈ ಚಿತ್ರವನ್ನು ನೋಡುವುದರಲ್ಲಿ ಖಂಡಿತಾ ತಪ್ಪೇನಿಲ್ಲ ಎನ್ನಬಹುದು.

 

Copyright@2018 Chitralahari | All Rights Reserved. Photo Journalist K.S. Mokshendra,