Lanke.Film Reviews

Friday, September 10, 2021

 

ಮೇಕಿಂಗ್ ನಲ್ಲಿದೆ ’ಲಂಕೆ’ಯ ಹೊಸತನ

 

ಚಿತ್ರ: ಲಂಕೆ

ತಾರಾಗಣ: ಯೋಗಿ, ಸಂಚಾರಿ ವಿಜಯ್, ಕಾವ್ಯಾ ಶೆಟ್ಟಿ, ಕೃಷಿ ತಾಪಂಡ ಮೊದಲಾದವರು.

ನಿರ್ದೇಶನ: ರಾಮ್ ಪ್ರಸಾದ್ ಎಂ ಡಿ

ನಿರ್ಮಾಣ: ಪಟೇಲ್ ಶ್ರೀನಿವಾಸ್

 

ಟ್ರೇಲರ್ ಮತ್ತು ಹಾಡುಗಳ ಮೂಲಕ ಗಮನ ಸೆಳೆದಿದ್ದ ಲಂಕೆ ಚಿತ್ರ ಥಿಯೇಟರ್ ನಲ್ಲಿಯೂ ಜನಮನ್ನಣೆಗಳಿಸಿದೆ.

 

ಸ್ಟಾರ್ ಸಿನಿಮಾಗಳಿಗಾಗಿ ಕಾಯುತ್ತಿದ್ದ ಪ್ರೇಕ್ಷಕರಿಗೆ ಬೇಕಾದ ಎಲ್ಲ ಮನರಂಜನೆಯೊಂದಿಗೆ ಲಂಕೆ ಬಂದಿದೆ.

ಜನ ಮೆಚ್ಚುವ ಚಿತ್ರದಲ್ಲಿರಬೇಕಾದ ಎಲ್ಲ ಅಗತ್ಯ ಅಂಶಗಳನ್ನು ಸೇರಿಸಿಕೊಂಡಂತಿರುವ ಚಿತ್ರ ಲಂಕೆ.

 

ನಾಯಕ ರಾಮ್ ಜೈಲಿನಿಂದ ಹೊರಗೆ ಬರುವ ಸನ್ನಿವೇಶದೊಂದಿಗೆ ಚಿತ್ರ ಆರಂಭವಾಗುತ್ತದೆ. ಅಂಥದೊಂದು ದೃಶ್ಯವೇ ನಾಯಕನ ಕತೆಯೇನಿರಬಹುದು ಎಂದು ತಿಳಿಯುವ ಆಸಕ್ತಿಗೆ ಕಾರಣವಾಗುತ್ತದೆ. ಸಮಾಜದಲ್ಲಿನ ಅನಾಥ ಹೆಣ್ಣು ಮಕ್ಕಳಿಗೆ ಸಾಮೂಹಿಕ ವಿವಾಹ ನಡೆಸುವ ಸಮಾಜ ಸೇವಕಿಯಾಗಿ ಕಾವ್ಯಾ ಶೆಟ್ಟಿ ಕಾಣಿಸಿಕೊಳ್ಳುತ್ತಾರೆ. ಅವರಂತೆ ಅನಾಥಾಶ್ರಮ ನಡೆಸುವ ಸೇವಾ ಮನೋಭಾವದ ಹುಡುಗಿಯಾಗಿ ಕೃಷಿ ತಾಪಂಡ ಅವರನ್ನೂ ತೋರಿಸುತ್ತಾರೆ. ಆದರೆ ಮುಂದಿನ ಕೆಲವೇ ದೃಶ್ಯಗಳೊಳಗೆ ಕಾವ್ಯಾಶೆಟ್ಟಿಯ ಪಾತ್ರದ ತಿರುವನ್ನು, ತಿರುಳನ್ನು ತೋರಿಸಲಾಗುತ್ತದೆ.

ನಾಯಕಿ ಕೃಷಿ ತಾಪಂಡ ಮತ್ತು ನಾಯಕ ಯೋಗಿಯ ಮೊದಲ ಭೇಟಿ ಸ್ನೇಹಕ್ಕೆ  ಕಾರಣವಾಗುತ್ತದೆ. ಆದರೆ ಸನ್ನಿವೇಶವೊಂದು ಕೃಷಿ ತಾಪಂಡ ವೇಶ್ಯಾವಾಟಿಕೆಯ ಕೇಂದ್ರವೊಂದರಲ್ಲಿ ಬಂಧಿತಳಾಗುವಂತೆ ಮಾಡುತ್ತದೆ. ಅದರ ಮಾಲೀಕ ಯಾರು? ನಾಯಕಿ ಕೃಷಿ ತಾಪಂಡ  ಅಲ್ಲಿರುವ ಬಗ್ಗೆ ಅರಿತ ನಾಯಕ ಆಕೆಯನ್ನು ಪಾರು ಮಾಡಲು ಹೂಡುವ ಸಂಚೇನು? ಎನ್ನುವ ರೋಚಕ ದೃಶ್ಯಗಳನ್ನು ಪರದೆಯ ಮೇಲೆ ನೋಡುವುದೇ ಸೊಗಸು.

 

ಸಿನಿಮಾದಲ್ಲಿ ಮೊದಲ ಆಕರ್ಷಕ ಅಂಶ  ಹಿನ್ನೆಲೆ ಸಂಗೀತ ಎಂದು ಹೇಳಲೇಬೇಕು. ನಾಯಕನ ಎಂಟ್ರಿ, ಸೆಂಟಿಮೆಂಟ್ ದೃಶ್ಯ, ಹಾಡುಗಳಲ್ಲಿ ಮಾತ್ರವಲ್ಲ ಹೊಡೆದಾಟದ ಹಿನ್ನೆಲೆಯಲ್ಲಿಯೂ ಸಂಗೀತ ಪ್ರಧಾನ ಪಾತ್ರವಹಿಸಿದೆ. ನಾಯಕನ ಸ್ನೇಹಿತನಾಗಿ ಪ್ರಶಾಂತ್ ಸಿದ್ದಿ ಹಾಸ್ಯಾಭಿನಯ ನೀಡಿದ್ದಾರೆ. ಮೊದಲ ಚಿತ್ರದಲ್ಲೇ ನಿರ್ದೇಶಕ ರಾಮ್ ಪ್ರಸಾದ್ ಅವರು ಉತ್ತಮ ಪ್ರಯತ್ನದ ಮೂಲಕ ಯಶಸ್ಸು ಗಳಿಸಿದ್ದಾರೆ ಎಂದು ಹೇಳಬಹುದು.

 

ಲೂಸ್ ಮಾದ ಯೋಗಿ ಹೊಸದಾಗಿ ಕಾಣಿಸುತ್ತಾರೆ. ಕೃಷಿ ತಾಪಂಡ ಯೋಗಿಗೆ ಉತ್ತಮ ಜೋಡಿಯಾಗಿ ಕಾಣಿಸಿದ್ದಾರೆ. ಕಾವ್ಯಾ ಶೆಟ್ಟಿಯವರ ಪಾತ್ರದಲ್ಲಿರುವ ಹೊಸತನ ಕತೆಗೆ ಹೊಸ ತಿರುವನ್ನೇ ನೀಡುತ್ತದೆ. ಮಂಗಳಮುಖಿಯ ಪಾತ್ರದಲ್ಲಿ ಶರತ್ ಲೋಹಿತಾಶ್ವ ಅವರು ಕಾಣಸಿಕೊಂಡಿರುವುದು ವಿಶೇಷ ಗಮನ ಸೆಳೆಯುತ್ತದೆ. ನಾಯ್ಡು ಎನ್ನುವ ವಿಲನ್ ಕಂಟ್ರಾಕ್ಟರ್ ಪಾತ್ರದಲ್ಲಿ ಡ್ಯಾನಿಯಲ್ ಕುಟ್ಟಪ್ಪ, ಭ್ರಷ್ಟ ಪೊಲೀಸ್ ಅಧಿಕಾರಿಯಾಗಿ ಶೋಭರಾಜ್ ಮೊದಲಾದವರ ಅಭಿನಯ ಚಿತ್ರಕ್ಕೆ ತೂಕ ತಂದುಕೊಟ್ಟಿದೆ.

 

ಅಂದಹಾಗೆ ಸಂಚಾರಿ ವಿಜಯ್ ಅವರ ಪಾತ್ರದ ಬಗ್ಗೆ ಉಲ್ಲೇಖಿಸಲೇಬೇಕು. ಚಿತ್ರದ ಮಧ್ಯಂತರದ ಬಳಿಕ ವಿಜಯ್ ಬರುತ್ತಾರಾದರೂ ಆ ದೃಶ್ಯಗಳು ಮೂಡಿಸುವ ಸಂಚಲನ ಕೊನೆಯವರೆಗೂ ಇರುತ್ತದೆ. ಆರಂಭದಲ್ಲೇ ಹೇಳಿದಂತೆ ಪ್ರೇಕ್ಷಕರಲ್ಲಿ ನವರಸಗಳನ್ನು  ತುಂಬಬಲ್ಲ ಪರಿಪೂರ್ಣ ಮನರಂಜನಾತ್ಮಕ ಚಿತ್ರ ಇದು.

 

Copyright@2018 Chitralahari | All Rights Reserved. Photo Journalist K.S. Mokshendra,