Ninna Sanihake.Film Reviews

Thursday, October 07, 2021

 

ಕೌಟುಂಬಿಕ ಪ್ರೇಕ್ಷಕರ ಸನಿಹಕೆ

 

ಚಿತ್ರ: ನಿನ್ನ ಸನಿಹಕೆ

ನಿರ್ದೇಶನ: ಸೂರಜ್ ಗೌಡ

ನಿರ್ಮಾಣ: ಅಕ್ಷಯ್ ರಾಜಶೇಖರ್, ರಂಗನಾಥ್ ಕೂಡ್ಲಿ

ತಾರಾಗಣ: ಸೂರಜ್ ಗೌಡ, ಧನ್ಯಾ ರಾಮ್ ಕುಮಾರ್ ಮೊದಲಾದವರು

 

ಹೊಸದೊಂದು ಲವ್ ಸ್ಟೋರಿ ತೆರೆಯ ಮೇಲೆ ಬರುತ್ತಿದೆ ಎಂದೊಡನೆ ಅದು ಪ್ರೇಮಿಗಳಿಗಷ್ಟೇ ಮೀಸಲು ಎನ್ನುವಂತಾಗಿದೆ. ಅದಕ್ಕೆ ಜೋಡಿಗಳ ನಡುವಿನ ದೃಶ್ಯಗಳು, ಸಂಭಾಷಣೆಗಳೇ ಕಾರಣ. ಆದರೆ ಡಾ.ರಾಜ್ ಕುಟುಂಬದ ಕುಡಿ ನಾಯಕಿಯಾಗಿರುವ ಚಿತ್ರ ಎಂದಾಗ ಅವರು ಹಾಕಿಕೊಟ್ಟ ಮಾದರಿಯಲ್ಲೇ ಚಿತ್ರ ಇರುವುದೆನ್ನುವ ನಿರೀಕ್ಷೆ ಇರುತ್ತದೆ. ಆದರೆ ಚಿತ್ರದ ಟ್ರೇಲರ್ ನೋಡಿದವರು ನಾಯಕಿ ಬರಿಯ ಗ್ಲಾಮರ್ ದೃಶ್ಯಗಳಿಗೆ ಸೀಮಿತವೇನೋ ಎಂದು ಆತಂಕ ವ್ಯಕ್ತಪಡಿಸಿದ್ದೂ ಇದೆ. ಆದರೆ ಅವೆಲ್ಲಕ್ಕೂ ಉತ್ತರವೆನ್ನುವ ಹಾಗೆ ’ನಿನ್ನ ಸನಿಹಕೆ’ ಚಿತ್ರ ತೆರೆಗೆ ಬಂದಿದೆ. ಚಿತ್ರ ಕುಟುಂಬ ಸಮೇತವಾಗಿ ನೋಡುವಂತಿದ್ದು ವೀಕ್ಷಕರ ಹೃದಯದ ಸನಿಹದಲ್ಲೇ ಜಾಗ ಪಡೆದುಕೊಂಡಿದೆ.

ಭಗ್ನ ಪ್ರೇಮಿ ನಾಯಕನ ಫ್ಲ್ಯಾಶ್‌‌‌ ಬ್ಯಾಕ್ ಕತೆಯ ಮೂಲಕ ಚಿತ್ರ ಆರಂಭವಾಗುತ್ತದೆ. ಆತನ ಹೆಸರು ಆದಿತ್ಯ ಶ್ರೀರಂಗಪಟ್ಟಣದ ಹುಡುಗ. ಇಂಜಿನಿಯರ್ ವೃತ್ತಿಯಲ್ಲಿ ಬೆಂಗಳೂರಿನಲ್ಲಿರುವವನು. ಆತನಿಗೆ ಅಚಾನಕ್ಕಾಗಿ ಪರಿಚಯವಾಗುವವಳು ಅಮೃತಾ. ಆಕೆ ಚಿಕ್ಕಮಗಳೂರಿನ ಹುಡುಗಿ. ಬೆಂಗಳೂರಿನಲ್ಲಿ ಡೆಂಟಿಸ್ಟ್ ಆಗಿರುತ್ತಾಳೆ. ಇಬ್ಬರ ಪರಿಚಯ ಸ್ನೇಹಕ್ಕೆ ತಿರುಗಿ ಅದು ಪ್ರೇಮವಾಗಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಅಮೃತಾ ಜೊತೆಯಲ್ಲಿ ಒಂದೇ ಮನೆಯಲ್ಲಿ ಉಳಿಯುವ ಸಂದರ್ಭ ಬರುತ್ತದೆ. ತುಂಬ ಹತ್ತಿರವಿದ್ದಾಗ ವಿರಸಕ್ಕೆ ಕಾರಣ ಬೇಕಿಲ್ಲವಲ್ಲ? ಹಾಗೆ ಯಾವುದೋ ಒಂದು ಕ್ಷಣದಲ್ಲಿ ಅಮೃತಾಗೆ ಮೂಡುವ ಸಂದೇಹ ಅವರಿಬ್ಬರನ್ನು ದೂರವಾಗುವಂತೆ ಮಾಡುತ್ತದೆ. ಆದರೆ ಆ ಸಂದೇಹ ಎಷ್ಟು ನಿಜ? ಅದರ ಪರಿಹಾರಕ್ಕಾಗಿ ನಾಯಕ ನಡೆಸುವ ಪ್ರಯತ್ನ ಹೇಗೆ ಅದನ್ನು ಇನ್ನಷ್ಟು ಗೋಜಲುಗೊಳಿಸುತ್ತದೆ ಎನ್ನುವುದನ್ನು ಹೆಚ್ಚು ಎಳೆದಾಡದೆ ಸೊಗಸಾಗಿ ತೋರಿಸಿದ್ದಾರೆ ನಿರ್ದೇಶಕ ಸೂರಜ್ ಗೌಡ.

 

ನಾಯಕಿಯಾಗಿ ಧನ್ಯಾ ರಾಮ್ ಕುಮಾರ್ ಅವರಿಗೆ ಇದು ಪ್ರಥಮ ಚಿತ್ರ ಎಂದು ನಂಬುವುದು ಕಷ್ಟ. ಪ್ರೇಯಸಿಯ ಪಾತ್ರದ ಎಲ್ಲ ಬಗೆಯ ತುಮುಲಗಳನ್ನು ಅಷ್ಟೊಂದು ಲೀಲಾಜಾಲವಾಗಿ ಅಭಿನಯಿಸಿದ್ದಾರೆ. ಶಬ್ದದಲ್ಲಿನ ಏರಿಳಿತಗಳೂ ಸನ್ನಿವೇಶಕ್ಕೆ ಪೂರಕವಾಗಿದೆ. ನಾಯಕನಾಗಿ ಸೂರಜ್ ಗೌಡ ಅವರದ್ದು ಎರಡೆರಡು ಜವಾಬ್ದಾರಿ. ಮೊದಲ ಚಿತ್ರದಲ್ಲೇ ಎರಡು ಪಾತ್ರಗಳಿಗೂ ಕೊರತೆಯಾಗದ ಹಾಗೆ ಬ್ಯಾಲೆನ್ಸ್ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅವರ ಧ್ವನಿ ಕೂಡ ಸೊಗಸಾಗಿದೆ.

 

ನಾಯಕನ ತಾಯಿಯ ಪಾತ್ರದಲ್ಲಿ ಅರುಣಾ ಬಾಲರಾಜ್ ನಟಿಸಿದ್ದಾರೆ. ನಾಯಕಿಯ ತಂದೆ ತಾಯಿಯ ಚಿತ್ಕಳಾ ಬಿರಾದಾರ ಮತ್ತು ತಂದೆಯ ಪಾತ್ರವನ್ನು ಮಂಜುನಾಥ ಹೆಗ್ಡೆ ನಿರ್ವಹಿಸಿದ್ದಾರೆ. ಹಾಲು ಮಾರಾಟಗಾರನಿಂದ ಹಿಡಿದು ನಾಯಕ, ನಾಯಕಿ ಸೇರಿದಂತೆ ಎಲ್ಲ ಪಾತ್ರಗಳಿಗೂ ಆಕರ್ಷಕ ಸಂಭಾಷಣೆ ನೀಡಲಾಗಿದೆ. ಹಾಗಾಗಿಯೇ ಒಂದೆರಡು ದೃಶ್ಯಗಳಲ್ಲಿ ಮಾತ್ರ ಕಾಣಿಸಿಕೊಳ್ಳುವ ಕರಿಸುಬ್ಬು ಮೊದಲಾದವರು ಪ್ರೇಕ್ಷಕರ  ಮನದೊಳಗೆ ಸ್ಥಾನ ಪಡೆಯುತ್ತಾರೆ.

 

ರಘು ದೀಕ್ಷಿತ್ ಸಂಗೀತ, ಹಿನ್ನೆಲೆ ಸಂಗೀತ  ಹಿತವಾಗಿದೆ. ಛಾಯಾಗ್ರಹಣ ಹೊಡೆದಾಟದ ದೃಶ್ಯಗಳಲ್ಲಂತೂ ಮನಮೋಹಕ. ಒಟ್ಟಿನಲ್ಲಿ ಸದ್ಯದ ಮಟ್ಟಿಗೆ ಕುಟುಂಬ ಸಮೇತ ನೋಡಬಹುದಾದ ಒಂದು ಒಳ್ಳೆಯ ಚಿತ್ರ ಇದ್ದರೆ ಅದು ನಿನ್ನ ಸನಿಹಕೆ ಎಂದು ಖಂಡಿತವಾಗಿ ಹೇಳಬಹುದು.

Copyright@2018 Chitralahari | All Rights Reserved. Photo Journalist K.S. Mokshendra,