Salaga.Film Reviews

Thursday, October 14, 2021

 

ಸಲಗ : ನೋಡಲೇಬೇಕು ವಿಜಯ್ ಅಭಿಮಾನಿ ಬಳಗ.!

 

ಚಿತ್ರ: ಸಲಗ

ನಿರ್ದೇಶನ: ದುನಿಯಾ ವಿಜಯ್

ನಿರ್ಮಾಣ: ವೀನಸ್ ಎಂಟರ್ಟೇನರ್

ತಾರಾಗಣ: ದುನಿಯಾ ವಿಜಯ್, ಸಂಜನಾ ಆನಂದ್, ಧನಂಜಯ

 

ಆತನ‌ ನಿಜವಾದ ಹೆಸರು ವಿಜಯ್. ಆದರೆ ಎಲ್ಲರಿಗೂ ಸಲಗ ಎಂದೇ ಪರಿಚಯ. ಈಗ ಜೈಲಿನಲ್ಲಿದ್ದಾನೆ.‌ ಆದರೆ ಆತ ಜೈಲಿನೊಳಗಿದ್ದುಕೊಂಡೇ ಕೊಲೆ ಮಾಡಿಸಬಲ್ಲ. ಹೀಗೊಂದು ಭಯಾನಕ ಇಂಟ್ರೋ ನೀಡಿದ ಬಳಿಕ ಸಲಗನ ಎಂಟ್ರಿಯಾಗುತ್ತದೆ. ಹಾಗಂತ ಹೊರಗೆ ಬಂದಾಕ್ಷಣ ಅಬ್ಬರವೇನೂ ಇಲ್ಲ.‌ ಆದರೆ ತನಗೆ ವಿರೋಧ ಇರುವ ಒಬ್ಬೊಬ್ಬರನ್ನೇ  ಮುಗಿಸುತ್ತಾ ಹೋಗುತ್ತಾನೆ. ನಿಜಕ್ಕೂ ಸಲಗ ಜೈಲು ಸೇರಿದ್ದೇಕೆ? ಹೊರ ಬಂದ ಮೇಲೆ ಆತ ಹಗೆ ಸಾಧಿಸುತ್ತಿರುವುದು ಯಾಕಾಗಿ ಎನ್ನುವ ಸಂದೇಹಗಳನ್ನು ಮಧ್ಯಂತರದ ಬಳಿಕದ ಫ್ಲ್ಯಾಶ್‌‌‌ ಬ್ಯಾಕ್ ಸ್ಟೋರಿಯಲ್ಲಿ ತಿಳಿಯಬಹುದಾಗಿದೆ.

 

ಬಹು ನಿರೀಕ್ಷಿತ ಚಿತ್ರ ’ಸಲಗ’ದ ಬಗ್ಗೆ ಮೊದಲು ಹೇಳಬೇಕಾಗಿರುವುದು ಏನು ಎಂದರೆ ಚಿತ್ರ ನಿರ್ದೇಶಕರಾಗಿ ವಿಜಯ್ ಗೆದ್ದಿದ್ದಾರೆ. ಯಾಕೆಂದರೆ ಇದು ಪ್ರಥಮ ಬಾರಿ ನಿರ್ದೇಶನಕ್ಕೆ ಕೈ ಹಾಕಿದವರು ಮಾಡಿದ ಪ್ರಾಜೆಕ್ಟ್ ಹಾಗೆ ಕಾಣಿಸುವುದಿಲ್ಲ ಎನ್ನುವುದು ಸತ್ಯ. ಅದೇ ಸಂದರ್ಭದಲ್ಲಿ ನಟರಾಗಿ ಕೂಡ ದುನಿಯಾ ವಿಜಯ್ ಅಬ್ಬರಿಸುವ ನಟನೆ ನೀಡಿಲ್ಲ. ಆಡುವ ಸಂಭಾಷಣೆ ಕಡಿಮೆ ಇದ್ದರೂ ಪ್ರತಿಯೊಂದು ಕೂಡ ಅಳೆದು ಸುರಿದು ಆಡಿರುವ ತೂಕದ ಮಾತಾಗಿದೆ.

ವಿಜಯ್ ಅವರ ಈ ಹೊಸ ಇಮೇಜ್ ನಲ್ಲಿ ಇಬ್ಬರ ಪಾಲು ಪ್ರಮುಖವಾಗಿ ಗೋಚರಿಸುತ್ತದೆ. ಆರಂಭದ ಒಂದಷ್ಟು ದೃಶ್ಯಗಳನ್ನು ಗಮನಿಸಿದಾಗ ದುನಿಯಾ ಸೂರಿಯ ನಿರ್ದೇಶನದ ಶೈಲಿ‌ ನೆನಪಾಗುತ್ತದೆ. ಅದಕ್ಕೆ ಸೂರಿಗೆ ಸಹಾಯಕರಾಗಿದ್ದ ಅಭಿ ಸಲಗ ಚಿತ್ರಕ್ಕೂ ಸಹ‌ ನಿರ್ದೇಶಕರಾಗಿರುವುದು ಕಾರಣ ಎನ್ನಬಹುದು. ಅದರಂತೆ ಸಂಭಾಷಣೆಯ ಮೂಲಕ ಮಾಂತ್ರಿಕ ಸ್ಪರ್ಶ ನೀಡುವ ಮಾಸ್ತಿಯ ಬೆಂಬಲ‌ ಇಲ್ಲಿ ಜಾಸ್ತಿಯೇ ಇದೆ. ಇವೆರಡರ ಆಚೆಗೆ ವಿಜಯ್ ಕೂಡ ತಮ್ಮ ಒಣನಗು, ಕಣ್ಣೋಟದಿಂದಲೇ ಕಾಡುತ್ತಾರೆ.

 

ನಾಯಕಿಯಾಗಿ ಸಂಜನಾ ಆನಂದ್ ಅವರಿಗೆ‌ ಒಂದು ರಫ್ ಆ್ಯಂಡ್ ಟಫ್ ಪಾತ್ರ ದೊರಕಿದೆ. ಅದನ್ನು ಅವರು ಚೆನ್ನಾಗಿಯೇ ನಿಭಾಯಿಸಿದ್ದಾರೆ. ಸಂಜನಾ ತಂದೆಯಾಗಿ ರಾಕ್ಲೈನ್ ಸುಧಾಕರ್ ಕಾಣಿಸಿಕೊಂಡಿದ್ದಾರೆ. ಸಾಧಾರಣ ಎಂಟ್ರಿ ನೀಡಿದರೂ‌ ಅಸಾಧಾರಣ ಪೊಲೀಸ್ ತಾನು ಎಂದು ದೊರೆತ ದೃಶ್ಯಗಳಿಂದ ಸಾಬೀತು ಮಾಡಿದ್ದಾರೆ ಧನಂಜಯ್. ಪೊಲೀಸ್ ಅಧಿಕಾರಿಯಾಗಿ ಅಚ್ಯುತ್ ಕುಮಾರ್, ಮತ್ತೋರ್ವ ಅಧಿಕಾರಿಯಾಗಿ ಬಿ.ವಿ ಭಾಸ್ಕರ್ ಮೊದಲಾದವರು ಅಭಿನಯಿಸಿದ್ದಾರೆ. ಖಳನಟ ’ಸಾವಿತ್ರಿ’ಯಾಗಿ ಸುಧಿಯ ನಟನೆ ಟಗರುವಿನ ’ಕಾಕ್ರೋಚ್’ ಪಾತ್ರದ ಮುಂದುವರಿದ ಭಾಗದಂತಿದೆ. ಸಣ್ಣಪುಟ್ಟ ಪಾತ್ರಗಳು ಕೂಡ ತಮ್ಮ ಮ್ಯಾನರಿಸಮ್ ಮತ್ತು ಸಂಭಾಷಣೆಗಳ‌ ಮೂಲಕ ನೆನಪಲ್ಲಿ ಉಳಿಯುತ್ತವೆ. ಹಾಡುಗಳನ್ನು ರುಚಿಗೆ ತಕ್ಕಷ್ಟೇ ಬಳಸಿಕೊಳ್ಳಲಾಗಿದೆ.

 

ಅತಿಯಾದ ಹಿಂಸೆಯ ದೃಶ್ಯಗಳಿಂದಾಗಿ ಚಿತ್ರಕ್ಕೆ ’ಎ’ ಸರ್ಟಿಫಿಕೇಟ್ ದೊರಕಿದೆ. ಮಾತ್ರವಲ್ಲ ಇದೊಂದು ಕುಟುಂಬ ಸಮೇತ ನೋಡಬೇಕಾದ ಚಿತ್ರವೇನಲ್ಲ. ಹಾಗಿದ್ದರೂ ದ್ವಿತೀಯಾರ್ಧದಲ್ಲಿ ಕೌಟುಂಬಿಕ ಮೌಲ್ಯಗಳ ಬಗ್ಗೆ ಅರಿವು ಮೂಡಿಸುವಂತೆ, ನೋವು ನೀಡುವಂಥ ದೃಶ್ಯಗಳಿವೆ. ಹಾಗಾಗಿ ದುನಿಯಾ ವಿಜಯ್ ಅಭಿಮಾನಿಗಳಿಗೆ ಫುಲ್ ಮೀಲ್ಸ್ ಒದಗಿಸುವಂಥ ಚಿತ್ರ ಇದು ಎಂದು ಧೈರ್ಯದಿಂದ ಹೇಳಬಹುದು.

Copyright@2018 Chitralahari | All Rights Reserved. Photo Journalist K.S. Mokshendra,