Premam Poojyam.Film Reviews

Friday, November 12, 2021

 

ಪ್ರೇಮಂ ಪೂಜ್ಯಂ ಚಿತ್ರಂ ಸುಂದರಂ

 

ಚಿತ್ರ: ಪ್ರೇಮಂ ಪೂಜ್ಯಂ

ತಾರಾಗಣ: ಲವ್ಲಿ ಸ್ಟಾರ್ ಪ್ರೇಮ್, ಬೃಂದಾ ಆಚಾರ್ಯ, ಐಂದ್ರಿತಾ ರೇ, ಮಾಸ್ಟರ್ ಆನಂದ್, ಸಾಧುಕೋಕಿಲ ಮೊದಲಾದವರು.

 

ಪ್ರೇಮ ಪೂಜ್ಯ ಆಗುವುದು ಯಾವಾಗ? ಅದರಲ್ಲಿ ಕಾಮ ಇರದೇ ಹೋದಾಗ ಎಂದರೆ ತಪ್ಪಾದೀತು. ಆದರೆ ಕಾಮನೆ ಇರದೆ ಕೂಡ ಪ್ರೇಮ ಅಮರವಾಗಬಲ್ಲದು ಎಂದು ತೋರಿಸಿಕೊಡುವ ಆಧುನಿಕ ದೇವದಾಸನ ಕತೆಯೇ ’ಪ್ರೇಮಂ ಪೂಜ್ಯಂ’.

 

ದೇವದಾಸನ ಕತೆ ಎಂದೊಡನೆ ಇಲ್ಲಿ ನಾಯಕನೊಬ್ಬ ಕುಡಿತಕ್ಕೆ ದಾಸನಾದ ಭಗ್ನ ಪ್ರೇಮಿ ಎಂದುಕೊಳ್ಳಬೇಡಿ. ನಾಯಕ ಪ್ರೇಮಿ ಮಾತ್ರ. ಆತ ವೈದ್ಯಕೀಯ ವೃತ್ತಿಗೆ ಸೇರಿಕೊಂಡಾಗ ಅಲ್ಲಿ ಒಬ್ಬಳು ಸಹಪಾಠಿಯನ್ನು ಇಷ್ಟಪಡುತ್ತಾನೆ. ಆಕೆ ಕೂಡ ಈತನನ್ನು ಪ್ರೀತಿಸುತ್ತಾಳೆ. ಆತ ಕಾಲೇಜ್ ಗೆ ಟಾಪರ್. ನಡತೆಯಿಂದಲೂ ಸೂಪರ್. ಅಂಥ ಹುಡುಗನನ್ನು ಪಡೆಯುವುದೇ ಅದೃಷ್ಟ ಎಂದುಕೊಳ್ಳುವವಳು ನಾಯಕಿ. ಮತ್ತೊಂದೆಡೆ ಅವಳೇ ಭುವಿಗಿಳಿದ ಏಂಜೆಲ್. ಅವಳ ಸ್ಪರ್ಶಿಸುವುದಾದರೂ ಮದುವೆಯ ಬಳಿಕ ಎಂದು ಕಾದಿರುವ ನಾಯಕ. ಹಾಗಾದರೆ ಒಂದಾಗಲು ಇರುವ ತಡೆಯಾದರೂ ಏನು? ಕಾರಣ ಸಿಂಪಲ್, ಹುಡುಗ ಮಂಡ್ಯದ ಗೌಡನಾದರೆ ಹುಡುಗಿ ಕ್ರಿಶ್ಚಿಯನ್ ಧರ್ಮದ ಚೆಲುವೆ. ಆಕೆಯ ಮನೆಯಲ್ಲಿ ತಂದೆಯಾದರೂ ಒಪ್ಪಬಹುದು ಆದರೆ ತಾಯಿ‌ ಒಪ್ಪಲಾರಳು ಎನ್ನುವಂಥ ಸನ್ನಿವೇಶ. ಹಾಗಾದರೆ ಈ ಪ್ರೇಮಿಗಳು‌ ಒಂದಾಗುತ್ತಾರೆಯೇ? ಇಲ್ಲವೇ? ಹೀಗೆ ಸರಳವಾಗಿ ಸಾಗುವ ಕತೆಯಲ್ಲಿ ಬರುವ ಟ್ವಿಸ್ಟ್ ಏನು? ಎನ್ನುವುದನ್ನು ತಿಳಿಯಬೇಕಾದರೆ ನೀವು ಸಿನಿಮಾ ನೋಡಬೇಕು.

ಆರಂಭದಲ್ಲಿ ಕಾಲೇಜು ಜೀವನದ ರಸಮಯ ಘಟನೆಗಳೊಂದಿಗೆ ಸಾಗುವ ಸಿನಿಮಾ ದ್ವಿತೀಯಾರ್ಧದಲ್ಲಿ ಪ್ರೇಮಭಾವದ ಉತ್ತುಂಗ ತಲುಪುತ್ತದೆ. ನಾಯಕನಾಗಿ ಪ್ರೇಮ್ ತಾವು ಯುವ ಪ್ರೇಮಿಗಳ ರಾಯಭಾರಿ ಎಂದು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಅದು ಕಾಲೇಜ್ ಹುಡುಗನಾಗಿರಲಿ, ಜವಾಬ್ದಾರಿಯುತ ಡಾಕ್ಟರ್ ಆಗಿರಲಿ ಅವರ ಲುಕ್ ಬಗ್ಗೆ ಎರಡು ಮಾತಿಲ್ಲ. ನಾಯಕಿ ನವ ಪ್ರತಿಭೆಯಾದರೂ ಭಾವನಾತ್ಮಕ ಸನ್ನಿವೇಶಗಳಲ್ಲಿ ಮನಮುಟ್ಟುವ ಅಭಿನಯ ನೀಡಿದ್ದಾರೆ.

ಇಂಥ ಪ್ರಯತ್ನಕ್ಕಾಗಿ ನಿರ್ದೇಶಕ ರಾಘವೇಂದ್ರ ಬಿ ಎಸ್ ಅವರನ್ನು ಮೆಚ್ಚಲೇಬೇಕು. ಮಾಸ್ಟರ್ ಆನಂದ್ ಅವರು ಚಿತ್ರದ ಮತ್ತೊಂದು ಹೈಲೈಟ್. ಚಿತ್ರದಲ್ಲಿ ಐಂದ್ರಿತಾ ರೇ ಇರುವುದು ಪ್ರೇಕ್ಷಕರ ಪಾಲಿಗೆ ಪ್ಲೆಸೆಂಟ್ ಸರ್ಪ್ರೈಸ್. ಸೀನಿಯರ್ ಸ್ಟುಡೆಂಟ್ ಆಗಿ ಸಾಧುಕೋಕಿಲ ಎಂದಿನಂತೆ ನಗಿಸುತ್ತಾರೆ.

 

 

ತಾಂತ್ರಿಕವಾಗಿ ನೋಡುವುದಾದರೆ ಚಿತ್ರದ ಎರಡು ಪ್ರಮುಖ ಅಂಶಗಳ ಬಗ್ಗೆ ಮಾತನಾಡಲೇಬೇಕು. ಅದು ಛಾಯಾಗ್ರಹಣ ಮತ್ತು ಸಂಗೀತ. ಸ್ವತಃ ಸಂಗೀತ ನಿರ್ದೇಶಕರಾದ ನಿರ್ದೇಶಕ ರಾಘವೇಂದ್ರ ಅವರು ಸನ್ನಿವೇಶದ ಭಾವಕ್ಕೆ ಹೊಂದುವಂಥ ಸಂಗೀತ ನೀಡುವ ಮೂಲಕ‌ ಮನಸೂರೆಗೊಳ್ಳುತ್ತಾರೆ. ಚಿತ್ರದಲ್ಲಿ ಹನ್ನೆರಡು ಹಾಡುಗಳಿದ್ದರೂ ಹಾಡಿನ ಜೊತೆಗೆ ಕತೆಯಾಗಿ ಸಾಗುವ ಅದ್ಭುತ ದೃಶ್ಯಗಳು ಸಮಯದ ಅರಿವೇ ಇರದಂತೆ ಚಿತ್ರದಲ್ಲಿ ತಲ್ಲೀನಗೊಳಿಸುತ್ತದೆ. ಪ್ರಥಮ ಪ್ರಯತ್ನದಲ್ಲೇ ಇಂಥದೊಂದು ಚಿತ್ರ ನೀಡಿದ ಸದಭಿರುಚಿಯ ಚಿತ್ರತಂಡವನ್ನು ಖಂಡಿತವಾಗಿ ಪ್ರೋತ್ಸಾಹಿಸಲೇಬೇಕು.

Copyright@2018 Chitralahari | All Rights Reserved. Photo Journalist K.S. Mokshendra,