Tom and Jerry.Film Reviews

Friday, November 12, 2021

 

ಬದುಕಿನ ರೀತಿಗೊಂದು ಮನದ ಮಾತು

 

ಚಿತ್ರ: ಟಾಮ್ ಆಂಡ್ ಜೆರ್ರಿ

ನಿರ್ದೇಶನ: ರಾಘವ್ ವಿನಯ್ ಶಿವಗಂಗೆ

ನಿರ್ಮಾಣ: ವಿನಯ್ ಚಂದ್ರ

ತಾರಾಗಣ: ನಿಶ್ಚಿತ್ ಕೊರೊಡಿ, ಚೈತ್ರಾ ರಾವ್, ತಾರಾ ಅನುರಾಧ, ಜೈಜಗದೀಶ್ ಮೊದಲಾದವರು.

 

ನಮಗೆ ಎಷ್ಟೋ‌ ವಿಷಯಗಳು ಗೊತ್ತಿರುತ್ತವೆ. ಅದನ್ನು ಹೇಳಿಕೊಳ್ಳುವ ಸಂದರ್ಭಗಳೇ ಬಂದಿರುವುದಿಲ್ಲ. ಆದರೆ ಹೇಳಿಕೊಂಡಾಗ ಮಾತ್ರ ನಮ್ಮ ಅನಿಸಿಕೆ ಎಷ್ಟೊಂದು ಮಂದಿಯದು ಕೂಡ ಆಗಿತ್ತು ಎನ್ನುವ ಸತ್ಯ ಅರಿವಾಗುತ್ತದೆ. ಅಂಥದೊಂದು ಅವಕಾಶವನ್ನು ನೀಡಿರುವ ಚಿತ್ರ ಟಾಮ್ ಆಂಡ್ ಜೆರ್ರಿ.

 

ಚಿತ್ರದ ನಾಯಕ ಧರ್ಮ ಅನಾಥಾಶ್ರಮದಲ್ಲಿ ಬೆಳೆದವನು.‌ ಆದರೆ ಆತನನ್ನು ಬಾಲ್ಯದಲ್ಲೇ ಮಕ್ಕಳಿರದ ದಂಪತಿ ಬಂದು ದತ್ತು ಪಡೆದುಕೊಳ್ಳುತ್ತಾರೆ. ಆದರೆ ಅವರನ್ನು ತಂದೆ ತಾಯಿಯಂತೆ ಪ್ರೀತಿಸದೆ ಬೆಳೆದಿರುತ್ತಾನೆ ನಾಯಕ. ಅದೇ ಸಂದರ್ಭದಲ್ಲಿ ಅದೇ ಅನಾಥಾಲಯದಲ್ಲಿ ಆತನ ಸ್ನೇಹಿತೆಯಾಗಿದ್ದವಳು ಸತ್ಯ. ಆಕೆಯನ್ನು ಕೂಡ ಯಾವುದೋ‌ ಶ್ರೀಮಂತ ದಂಪತಿ ದತ್ತು ತೆಗೆದುಕೊಂಡಿರುತ್ತಾರೆ. ಮುಂದೆ ಸುಮಾರು ಎರಡು ದಶಕದ ಬಳಿಕ ಇವರಿಬ್ಬರ ಭೇಟಿಯಾಗುತ್ತದೆ. ಆಗ ಅವರ ನಡುವಿನ ಸ್ನೇಹ ಹೇಗಿರುತ್ತದೆ? ಬದುಕಿನ ಕನಸುಗಳೇನು? ವಿಭಿನ್ನ ಮನಸ್ಥಿತಿಯ ಇಬ್ಬರು ಪರಸ್ಪರ ಅರ್ಥಮಾಡಿಕೊಳ್ಳುವುದು ಹೇಗೆ? ಬದುಕಿನ ಕೆಲವೊಂದು ಸಂದರ್ಭಗಳು ಹೇಗೆ ಅವರಿಗೆ ಪಾಠ ಕಲಿಸುತ್ತವೆ ಎನ್ನುವುದನ್ನು ನಿರ್ದೇಶಕ ರಾಘವ್ ವಿನಯ್ ಶಿವಗಂಗೆ ಮನೋಜ್ಞವಾಗಿ ತೆರೆಗೆ ತಂದಿದ್ದಾರೆ.

ಧರ್ಮನ ಪಾತ್ರದಲ್ಲಿ ನಿಶ್ಚಿತ್ ಕೊರೊಡಿ ನಟಿಸಿದ್ದಾರೆ. ಆಕರ್ಷಕ ಮೈಕಟ್ಟು, ಭಾವಪೂರ್ಣ ಮುಖದೊಂದಿಗೆ ಅವರು  ಭರವಸೆಯ ಯುವನಾಯಕನಾಗಿ ಕಾಣಿಸಿಕೊಂಡಿದ್ದಾರೆ. ನಾಯಕಿ ಸತ್ಯಾ ಪಾತ್ರದಲ್ಲಿ ಕಿರುತೆರೆಯ ಜನಪ್ರಿಯ ನಟಿ ಚೈತ್ರಾ ರಾವ್ ಇದ್ದಾರೆ. ಅವರು ಕೂಡ‌ ಒಂದು ವಿಭಿನ್ನ ಪಾತ್ರಕ್ಕೆ ಸಮ್ಮೋಹಕ ಕಣ್ಣೋಟ, ನಲಿವು ತುಂಬಿದ ನಗುವಿನಿಂದಲೇ ಗೆಲುವು ತಂದುಕೊಟ್ಟಿದ್ದಾರೆ. ಮಿಕ್ಕಹಾಗೆ ಒಂದಷ್ಟು ಜನಪ್ರಿಯ ಕಲಾವಿದರು ಪೋಷಕ ಪಾತ್ರಗಳಲ್ಲಿ ಮನಸೆಳೆದಿದ್ದಾರೆ. ಅವರಲ್ಲಿ ಪ್ರಮುಖವಾಗಿ ಬಸ್ ಕಂಡೆಕ್ಟರ್ ಪಾತ್ರದಲ್ಲಿ ನಟಿಸಿರುವ ಕಡ್ಡಿಪುಡಿ ಚಂದ್ರು, ಹುಚ್ಚನಾಗಿ ಕಾಣಿಸಿಕೊಂಡಿರುವ ಸಂಪತ್, ರಾಕ್ಲೈನ್  ಸುಧಾಕರ್ ಮೊದಲಾದವರನ್ನು ಮರೆಯಲಾಗದು. ಎಲ್ಲಕ್ಕಿಂತ ಮುಖ್ಯವಾಗಿ ನಾಯಕನ ತಾಯಿ ತಂದೆಯಾಗಿ ತಾರಾ ಅನುರಾಧ ಮತ್ತು ಜೈಜಗದೀಶ್ ಅಪರೂಪದ ಜೋಡಿಯ ಬಗ್ಗೆ ಉಲ್ಲೇಖಿಸಲೇಬೇಕು.

 

ಸಿನಿಮಾ ನೋಡಲು‌ ಬಂದವರಿಗೆ ಆಕ್ಷನ್, ಮನರಂಜನೆ, ಹಾಡು ಯಾವುದಕ್ಕೂ‌ ಕೊರತೆ ಇರದಂತೆ ಚಿತ್ರ ನೀಡುವ ಜೊತೆಗೆ ಸಂದೇಶಾತ್ಮಕ ಸನ್ನಿವೇಶಗಳನ್ನು ಸೃಷ್ಟಿಸುರುವ ನಿರ್ದೇಶಕರನ್ನು ಪ್ರಶಂಸಿಸಲೇಬೇಕು. ಹಾಗಾಗಿ ಈ ಚಿತ್ರಕ್ಕೆ ನೀವು ನೀಡುವ ಎರಡು ಗಂಟೆ ಕಾಲಾವಧಿ ಸಮಯ ಖಂಡಿತವಾಗಿ ಸದ್ಬಳಕೆಯಾಗುತ್ತದೆ ಎಂದು ಹೇಳಬಹುದು.

Copyright@2018 Chitralahari | All Rights Reserved. Photo Journalist K.S. Mokshendra,