Film 100.Film Reviews

Friday, November 19, 2021

 

ಸೈಬರ್ ಅಪರಾಧಿಗಳಿಗೆ ’ನೂರು’ ದಾರಿ!

 

 

 

ಚಿತ್ರ: 100

ನಿರ್ದೇಶನ: ರಮೇಶ್ ಅರವಿಂದ್

ನಿರ್ಮಾಣ: ಎಂ ರಮೇಶ್ ರೆಡ್ಡಿ

ತಾರಾಗಣ: ರಮೇಶ್ ಅರವಿಂದ್, ರಚಿತಾ ರಾಮ್, ಪೂರ್ಣ ಮೊದಲಾದವರು.

 

ಸಮಾಜದಲ್ಲಿ ಸೈಬರ್ ಕ್ರೈಮ್ ಯಾವ ಮಟ್ಟಕ್ಕೆ ಹೆಚ್ಚಿದೆ, ಅದರಿಂದ ಆಗುತ್ತಿರುವ ದುಷ್ಪರಿಣಾಮಗಳೇನು? ನಾವು ಅವುಗಳನ್ನು ಯಾವ ರೀತಿ ಎದುರಿಸಬಹುದು ಎನ್ನುವುದನ್ನು ಮನರಂಜನೆಯ ಜೊತೆಯಲ್ಲೇ ತೋರಿಸಿರುವ ಚಿತ್ರ 100.

 

ಡಿಪಾರ್ಟ್ಮೆಂಟ್ ನಲ್ಲಿ ಒಳ್ಳೆಯ ಹೆಸರಿರುವ ಪೊಲೀಸ್ ಅಧಿಕಾರಿ ವಿಷ್ಣು. ಆತ ಸಾಂಸಾರಿಕವಾಗಿಯೂ ಸ್ವರ್ಗಕ್ಕೆ ಕಿಚ್ಚು ಹಚ್ಚೆನ್ನುವವನು. ಪ್ರೀತಿಯ ಮಡದಿ ಅನಘಾ, ಮುದ್ದಿನ ತಂಗಿ ಹಿಮಾ, ಮಗಳು ಸಾನ್ವಿ ಮತ್ತು ತಾಯಿಯೊಡನೆ ನೆಲೆಸಿರುವವನು. ಆದರೆ ಇಲಾಖೆಯಲ್ಲಿ ಹೊರಿಸಲಾದ ಹೊಸ ಜವಾಬ್ದಾರಿಯೊಂದು ಆತನಿಗೆ ಹೇಗೆ ಹೊಸ ಹೊಸ ವಿಚಾರಗಳನ್ನು ತಿಳಿಸುತ್ತಾ ಹೋಗುತ್ತದೆ ಎಂದು ಚಿತ್ರ ತಿಳಿಸುತ್ತದೆ.

ಫೋನ್ ಕದ್ದಾಲಿಕೆ ಮೂಲಕ‌ ಅಪರಾಧಿಗಳ ಬಗ್ಗೆ ಗಮನವಿರಿಸುವುದು ವಿಷ್ಣುವಿಗೆ ನೀಡಲಾದ ರಹಸ್ಯ ಕಾರ್ಯಾಚರಣೆ

ಯಾಗಿರುತ್ತದೆ. ಆದರೆ ಆ ಸಂದರ್ಭದಲ್ಲಿ ಆತನ ವ್ಯಾಪ್ತಿಗೆ ಮೀರಿದ ಒಂದಷ್ಟು ಮಾಹಿತಿಗಳು ಲಭ್ಯವಾದಾಗ ಅವೆಲ್ಲವನ್ನು ಕೂಡ ಸಮಾಜದ ಒಳಿತಿಗಾಗಿ ಬಳಸುವ ಪ್ರಯತ್ನ ಮಾಡುತ್ತಾನೆ. ಸಮಾಜದ ಉದ್ಧಾರಕ್ಕೆ ಪ್ರಯತ್ನಿಸುವ ಸಂದರ್ಭದಲ್ಲೇ ತನ್ನ ಮನೆಯೊಳಗೆ ಒಂದು ದುರಂತ ಸಂಭವಿಸಿರುವ ಸುದ್ದಿ ಆತನಿಗೆ ಲಭಿಸುತ್ತದೆ. ಹರ್ಷ ಎನ್ನುವ  ವಂಚಕನೋರ್ವ ಪೊಲೀಸ್ ಕುಟುಂಬದವರು ಎನ್ನುವ ಮಾಹಿತಿ ಅರಿತುಕೊಂಡೇ ವಿಷ್ಣುವಿನ ಪತ್ನಿ ಮತ್ತು ತಂಗಿಯನ್ನು ಕೆಡವಲು ಒಂದು ಬಲೆ ಹೆಣೆಯುತ್ತಾನೆ. ಆತ ಹೆಣೆದ ಬಲೆಯೊಳಗಿನಿಂದ ವಿಷ್ಣು ತನ್ನ ಕುಟುಂಬವನ್ನು ಹೇಗೆ ಪಾರು ಮಾಡುತ್ತಾನೆ ಎನ್ನುವುದೇ ಚಿತ್ರದ ಕತೆ.

 

ವಿಷ್ಣುವಾಗಿ ರಮೇಶ್ ಪೊಲೀಸ್ ಅಧಿಕಾರಿ ಮತ್ತು ಕುಟುಂಬದ ಸದಸ್ಯನಾಗಿ ಎರಡೂ ಕಡೆ ಮನಗೆಲ್ಲುತ್ತಾರೆ. ಫ್ಲ್ಯಾಶ್‌‌‌ ಬ್ಯಾಕ್ ಕತೆಗೂ ಹೊಂದುವಂತೆ ಇಂದಿಗೂ ತಮ್ಮ ಮೈಕಟ್ಟು ಕಾಯ್ದುಕೊಂಡಿರುವ ರಮೇಶ್ ಅವರನ್ನು ಪ್ರಶಂಸಿಸಲೇಬೇಕು. ಅದೇ ಸಂದರ್ಭದಲ್ಲಿ ಹರ್ಷನೆಂಬ ವಂಚಕನಾಗಿ ಮೊದಲ ಚಿತ್ರದಲ್ಲೇ ಗಮನ ಸೆಳೆಯುವ ಅಭಿನಯ ನೀಡಿರುವ ವಿಶ್ವಕರ್ಣ ಕೂಡ ಅಭಿನಂದನಾರ್ಹ. ರಮೇಶ್ ಅವರಿಗೆ ಜೋಡಿಯಾಗಿ ಪೂರ್ಣ ಅಭಿನಯಿಸಿದ್ದು  ಗೃಹಣಿಯ ಪಾತ್ರಕ್ಕೆ ಜೀವತುಂಬಿದ್ದಾರೆ. ಅಮಾಯಕಿ ಸಹೋದರಿ ಹೀಗೆಯೇ ಇರುತ್ತಾಳೆ ಎನ್ನುವುದು ರಚಿತಾ ರಾಮ್ ನಟನೆ ಕಂಡಾಗ ವೇದ್ಯವಾಗುತ್ತದೆ. ಉಳಿದಂತೆ ಪೊಲೀಸ್ ಕಮಿಷನರ್ ಪಾತ್ರದಲ್ಲಿ ಪ್ರಕಾಶ್ ಬೆಳವಾಡಿ, ಮತ್ತೋರ್ವ ಪೊಲೀಸ್ ಅಧಿಕಾರಿಯಾಗಿ ಶೋಭರಾಜ್ ಕೂಡ ಸಿನಿಮಾದಲ್ಲಿ ‌ನೆನಪಲ್ಲಿ ಉಳಿಯುತ್ತಾರೆ. ರವಿ ಬಸ್ರೂರು ಅವರ ಹಾಡುಗಳು ಮತ್ತು ಹಿನ್ನೆಲೆ ಸಂಗೀತ ಚಿತ್ರದ ಮತ್ತೊಂದು ಹೈಲೈಟ್. ಇದು ಕ್ರೈಮ್ ಕುರಿತಾದ ಸಿನಿಮಾ ಆಗಿದ್ದರೂ ಕುಟುಂಬ ಸಮೇತ ಕುಳಿತು ನೋಡುವಂತೆ ಚಿತ್ರ ಮಾಡಿರುವ ಕೀರ್ತಿ ಕೂಡ ನಿರ್ದೇಶಕ ರಮೇಶ್ ಅರವಿಂದ್ ಅವರಿಗೆ ಸಲ್ಲುತ್ತದೆ.

Copyright@2018 Chitralahari | All Rights Reserved. Photo Journalist K.S. Mokshendra,