Head Bush.Film Reviews

Friday, October 21, 2022

285

ಭೂಗತ ಲೋಕದ ನಿರೂಪಣೆ ಸುಂದರ

         ೭೦-೮೦ರ ದಶಕದಲ್ಲಿ ದೇವರಾಜಅರಸು ಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ ಪ್ರಧಾನಿ ಇಂದಿರಾಗಾಂಧಿ ರಾಜಕೀಯೇತರ ಶಕ್ತಿಗಳನ್ನು ಹುಟ್ಟುಹಾಕಲು ಸಿಎಂಗೆ ನೇರ ಆದೇಶ ಕೊಡುತ್ತಾರೆ. ಸಿಎಂ ನೇರ ಬೆಂಗಳೂರಿಗೆ ಬಂದು ಅಳಿಯ ಎಡಿಎನ್‌ರನ್ನು  ಇಂದಿರಾ ಬ್ರಿಗ್ರೇಡ್ ರಾಜ್ಯ ಅಧ್ಯಕ್ಷರನ್ನಾಗಿ ನೇಮಿಸುತ್ತಾರೆ. ಇದಕ್ಕಾಗಿ ಒಂದಷ್ಟು ಶಕ್ತಿಯನ್ನು ಹುಟ್ಟುಹಾಕಲು ತಿಳಿಸುತ್ತಾರೆ. ಆಗ ಹುಟ್ಟಿಕೊಂಡಿದ್ದೇ ವಸೂಲಿ ದಂಧೆ ಚಟುವಟಿಕೆಗಳು. ಬೆಂಗಳೂರಿನ ಪುಡಿ ರೌಡಿಗಳೆಲ್ಲಾ ಒಂದಾಗುತ್ತಾರೆ. ಇನ್ನು ಪೋಲೀಸರು ಏನು ಮಾಡಲಿಕ್ಕೆ ಆಗದೆ ಸುಮ್ಮನೆ ಕೂರುತ್ತಾರೆ. ತನ್ನ ಆದೇಶಗಳಿಗೆ ಅಡ್ಡಿಪಡಿಸುವ ಐಎಎಸ್ ಅಧಿಕಾರಿ ಮೇಲೆ ಹಲ್ಲೆ ನಡೆಯುತ್ತದೆ. ಇದೆಲ್ಲವೂ ಜಯರಾಜ್ ಸಾರಥ್ಯದಲ್ಲಿ ನಡೆಯುತ್ತಾ ಹೋಗುತ್ತದೆ. ಈ ಪಾತ್ರವನ್ನು ನಿಭಾಯಿಸಿರುವುದು ಡಾಲಿ ಧನಂಜಯ್. ಈತ ಭೂಗತ ಲೋಕದ ದೊರೆಯಾಗಿ ಒಂದು ಹಂತಕ್ಕೆ ಬೆಳಯುತ್ತಾನೆ. ಅದು ಯಾವ ರೀತಿ ಎಂಬುದನ್ನು ‘ಹೆಡ್ ಬುಷ್’ ಚಿತ್ರದಲ್ಲಿ ಸವಿಸ್ತಾರವಾಗಿ ತೋರಿಸಲಾಗಿದೆ.

       ನಿರ್ದೇಶಕ ಶೂನ್ಯ ಅವರಿಗೆ ಮೊದಲ ಚಿತ್ರವಾದರೂ ಸನ್ನಿವೇಶಗಳನ್ನು ಚೆನ್ನಾಗಿ ತೆಗೆದುಕೊಂಡು ಹೋಗಿದ್ದಾರೆ. ಇಡೀ ಕಥೆಗೆ ಅದ್ಬುತ ಚಿತ್ರಕಥೆ ರಚಿಸಿರುವುದು ಅಗ್ನಿಶ್ರೀಧರ್. ರೌಡಿಗಳ ಭಾಷೆಯನ್ನು ಅನುಭವ ಎನ್ನುವಂತೆ ರೂಪಿಸಿಕೊಂಡು ಹೋಗಿದ್ದಾರೆ. ಡಾಲಿ ಧನಂಜಯ್ ಪೂರ್ಣ ಸಿನಿಮಾವನ್ನು ಆವರಿಸಿಕೊಂಡಿರುವುದರಿಂದ ನೋಡುಗರಿಗೆ ಬೋರ್ ಅನಿಸದಂತೆ ನಟಿಸಿದ್ದಾರೆ. ಒಂದು ಪಾತ್ರದಲ್ಲಿ ರವಿಚಂದ್ರನ್ ಎಂಟ್ರಿ ಹಾಕಿ ಸಂದೇಶ ಕೊಟ್ಟು ಹೋಗುತ್ತಾರೆ. ಸಹಚರನಾಗಿ ಯೋಗಿ, ಉಳಿದಂತೆ ವಸಿಷ್ಟಸಿಂಹ, ದೇವರಾಜ್, ರಘಮುಖರ್ಜಿ ತಮಗೆ ನೀಡಿದ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಪಾಯಲ್‌ರಜಪೂತ್, ಶ್ರುತಿಹರಿಹರನ್ ಇಬ್ಬರಿಗೂ ಹೆಚ್ಚು ಅವಕಾಶವಿಲ್ಲ. ಇದರಲ್ಲಿ ಹೆಚ್ಚು ಜಯರಾಜ್ ಇರುವುದರಿಂದ, ಮುಂದೆ ಕೊತ್ವಾಲ್‌ರಾಮಚಂದ್ರ ಘಟನೆಗಳು ಬರುವುದರಿಂದ ಪಾರ್ಟ್-೨ದಲ್ಲಿ ಮತ್ತಷ್ಟು ರೋಚಕ ವಿಷಯಗಳನ್ನು ಹೇಳಲಿದೆ. ದೃಶ್ಯಕ್ಕೆ ತಕ್ಕಂತೆ ಸಂಭಾಷಣೆಗಳು ಹೊಂದಿ ಕೊಂಡಿದೆ. ರೌಡಿಸಂ ಚಿತ್ರಗಳನ್ನು ಇಷ್ಟಪಡುವವರಿಗೆ ಇದು ಖಂಡಿತ ಮೋಸ ಮಾಡುವುದಿಲ್ಲ.

****

 

Copyright@2018 Chitralahari | All Rights Reserved. Photo Journalist K.S. Mokshendra,