Gaalipata 2.Film Reviews

Friday, August 12, 2022

335

ಗಾಳಿಪಟ-*****       ಪ್ಯಾನ್ ಇಂಡಿಯಾ ಸಿನಿಮಾಗಳ ಮಧ್ಯೆ ನಮ್ಮದು ವಿಶ್ವಕನ್ನಡಿಗರ ಚಿತ್ರವೆಂದು ತೆರೆ ಕಂಡಿರುವ ‘ಗಾಳಿಪಟ-೨’ ಚಿತ್ರವು ವಿಶಿಷ್ಟ ಪಾತ್ರಗಳ ಮೂಲಕ ಸಾಗುತ್ತದೆ. ಕಾಲ್ಪನಿಕ ಊರು ನೀರುಕೋಟೆ ಕಾಲೇಜಿನಲ್ಲಿ ಶುರುವಾದ ಕಥೆಯು ಜರ್ಮನಿ, ಯುರೋಪ್, ಕಜಕಿಸ್ತಾನ, ಹೀಗೆ ನಾನಾ ಕಡೆ ಸಾಗುತ್ತದೆ. ಕನ್ನಡ ಕಲಿಯುವ ಉದ್ದೇಶದಿಂದ ಗಣಿ ಜೊತೆಗೆ ದಿಗಂತ್ ಹಾಗೂ ಭೂಷಣ್ ಸೇರಿಕೊಳ್ಳುತ್ತಾರೆ. ಮೂವರಿಗೆ ಕನ್ನಡ ಶಿಕ್ಷಕ ತಮ್ಮ ಮನೆಯಲ್ಲಿ ಜಾಗ ಕೊಟ್ಟಿರುತ್ತಾರೆ. ಮೊದಲೇ ಯುವಕರಾಗಿದ್ದರಿಂದ ಇವರುಗಳ ತುಂಟಾಟ, ಮೋಜು-ಮಸ್ತಿ ನೋಡೋದೇ ಥ್ರಿಲ್ ಕೊಡುತ್ತದೆ. ಹಾಸ್ಯದ ಸಂಭಾಷಣೆಗಳು ಇದಕ್ಕೆ ಪ್ಲಸ್ ಪಾಯಿಂಟ್ ಆಗಿದೆ. ಸಹಪಾಠಿ ಶ್ವೇತಾಳ ಮೇಲೆ ಗಣಿಗೆ ಪ್ರೀತಿ ಹುಟ್ಟುತ್ತದೆ. ದಿಗಂತ್‌ಗೆ ಬ್ರೇಕ್‌ಅಪ್ ಮಾಡಿಕೊಂಡ ಮಾಜಿ ಗೆಳತಿ ಸಿಕ್ಕಿದ್ದಾಳೆ. ಇನ್ನು ಭೂಷಣ್ ಕಾಲೇಜು ಟೀಚರ್‌ನ್ನೆ ಪ್ರೀತಿಸಲು ಶುರು ಮಾಡುತ್ತಾನೆ. ಮೂವರ ಬದುಕಲ್ಲಿ ಕನ್ನಡ ಮೇಷ್ಟ್ರು ಪಾತ್ರವೇ ಮಹತ್ತರವಾದ ತಿರುವು ಕೊಡುತ್ತದೆ. ಅದಕ್ಕೆ ಕಾರಣವೇನು? ಮೇಷ್ಟ್ರಿಗೂ ಹುಡುಗರಿಗೂ ಏನು ಸಂಬಂದ ಅನ್ನೋದನ್ನು ಚೆಂದವಾಗಿ ಎರಡೂವರೆ ಗಂಟೆಗಳ ಕಾಲ ತೋರಿಸಲಾಗಿದೆ.

      ನಿರ್ದೇಶಕ ಯೋಗರಾಜಭಟ್ಟರು ಈ ಬಾರಿ ಇಂದಿನ ತಲೆಮಾರು ಏನು ಇಷ್ಟಪಡುತ್ತಾರೋ ಅದೆಲ್ಲಾವನ್ನು ಸನ್ನಿವೇಶಗಳ ಮೂಲಕ ಹೇಳಿದ್ದಾರೆ. ಮನಸುಗಳಲ್ಲಿ ಭಾವನೆಗಳನ್ನು ತುಂಬು ತುಳುಕಿಸುವ ಚಿತ್ರವು ನೋಡುಗರ ಕಣ್ಣುಗಳಲ್ಲಿ ಮರೆಯಲಾಗದ ದೃಶ್ಯಕಾವ್ಯವನ್ನು ಕಟ್ಟಿಕೊಡುತ್ತದೆ ಎಂದು ಹೇಳಬಹುದು. ಮೊದಲರ್ಧ ತುಂಟಾಟ, ತಮಾಷೆಯಲ್ಲೆ ಸಾಗುವ ಕಥೆಯು, ದ್ವಿತಿಯಾರ್ಧ ಮತ್ತೋಂದು ಪಯಣಕ್ಕೆ ಕರೆದುಕೊಂಡು ಹೋಗುತ್ತದೆ. ಅಲ್ಲಲ್ಲಿ ಬರುವ ತೂಕದ ಸಂಭಾಷಣೆಗಳು ಕಣ್ಣನ್ನು ಒದ್ದೆ ಮಾಡಿಸುತ್ತದೆ. ಸ್ನೇಹ, ತಂದೆ ತಾಯಿ ವಾತ್ಸಲ್ಯ ಹೀಗೆ ಎಲ್ಲಡೆ ಸುತ್ತ ತಲುಪುತ್ತಾ ಪ್ರೇಕ್ಷಕನಿಗೆ ಹಿತವಾದ ಮುದವನ್ನು ನೀಡುತ್ತದೆ.

        ಕೊನೆ ಬೆಂಚ್ ವಿದ್ಯಾರ್ಥಿಯಾಗಿ ಗಣೇಶ್ ನಗಿಸುತ್ತಾರೆ. ದಿಗಂತ್ ವಿಶೇಷವಾಗಿ ಗಮನ ಸೆಳೆಯುತ್ತಾರೆ. ಪಾಪದ ಹುಡುಗನಾಗಿ ಪವನ್‌ಕುಮಾರ್ ಇಷ್ಟವಾಗುತ್ತಾರೆ. ಮೂವರಿಗೆ ಜೋಡಿಯಾಗಿರುವ ವೈಭವಿಶಾಂಡಿಲ್ಯ, ಸಂಯುಕ್ತಮೆನನ್, ಟೀಚರ್ ಆಗಿ ಶರ್ಮಿಳಾಮಾಂಡ್ರೆ ಮುದ್ದಾಗಿ ಕಾಣಿಸುತ್ತಾರೆ. ಇಡೀ ಚಿತ್ರಕ್ಕೆ ಅನಂತ್‌ನಾಗ್ ಕೇಂದ್ರಬಿಂದುವಾಗಿ ಕಂಡುಬರುತ್ತಾರೆ. ಪೋಷಕರಾಗಿ ರಂಗಾಯಣರಘು-ಸಂಯುಕ್ತಬೆಳವಾಡಿ, ಶ್ರೀನಾಥ್, ದಿ.ಬುಲೆಟ್‌ಪ್ರಕಾಶ್, ಪದ್ಮಜರಾವ್ ಎಲ್ಲರೂ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಭಟ್ಟರು ಹಾಗೂ ಜಯಂತ್‌ಕಾಯ್ಕಣಿ ಪದಗಳಿಗೆ ಅದ್ಬುತ ರಾಗಗಳನ್ನು ಸಂಯೋಜಿಸಿರುವ ಅರ್ಜುನ್‌ಜನ್ಯಾ ಹಾಡುಗಳು ಮೆಲುಕು ಹಾಕುತ್ತವೆ. ಸಂತೋಷ್‌ರೈ ಪಾತಾಜೆ ಛಾಯಾಗ್ರಹಣ ಕಣ್ಣನ್ನು ತಂಪು ಮಾಡುತ್ತದೆ. ಇವರೆಲ್ಲರ ಶ್ರಮಕ್ಕೆ ಉಮಾ.ಎಂ.ರಮೇಶ್‌ರೆಡ್ಡಿ ನೀರಿನಂತೆ ಹಣ ಖರ್ಚು ಮಾಡಿರುವುದು ತೆರೆ ಮೇಲೆ ಕಾಣಿಸುತ್ತದೆ.

*****

 

 

Copyright@2018 Chitralahari | All Rights Reserved. Photo Journalist K.S. Mokshendra,