Kantara.Film Reviews

Friday, September 30, 2022

251

 

ಕಣ್ಮನ ಸೆಳೆಯುವ ’ಕಾಂತಾರ’

 

ಚಿತ್ರ: ಕಾಂತಾರ

ಪ್ರಮುಖ ಪಾತ್ರ: ರಿಷಬ್ ಶೆಟ್ಟಿ, ಸಪ್ತಮಿ ಗೌಡ, ಅಚ್ಯುತ್ ಕುಮಾರ್ ಮೊದಲಾದವರು.

ನಿರ್ದೇಶನ: ರಿಷಬ್ ಶೆಟ್ಟಿ

ನಿರ್ಮಾಣ: ಹೊಂಬಾಳೆ ಫಿಲ್ಮ್ಸ್

 

ಯಾವ ದೇಶಕ್ಕೆ ಹೋದರೂ ಮನುಷ್ಯ ಭಾವನಾತ್ಮಕ ಜೀವಿ. ಅದರಲ್ಲೂ ಭಕ್ತಿ, ಪ್ರೇಮ ಮೊದಲಾದ ಭಾವಗಳಂತೂ ಕನ್ನಡಿಗರ ಹೃದಯದಲ್ಲಿ ಸೇರಿಕೊಂಡಿದೆ. ಇವೆರಡೂ ಭಾವಗಳಿಗೆ ಭಾಷ್ಯ ಬರೆದಿರುವಂಥ ಚಿತ್ರ ಕಾಂತಾರ. ಹಾಗಾಗಿಯೇ ಒಂದು ಪ್ರದೇಶದ ಕತೆಯಾದರೂ, ಪ್ರತಿಯೊಂದು ಭಾಗದವರನ್ನೂ ತಲುಪುವಲ್ಲಿ ಯಶಸ್ವಿಯಾಗಿದೆ.

 

ಇತ್ತೀಚೆಗೆ ಕರ್ನಾಟಕ ಕರಾವಳಿಯ   ಸೊಗಡನ್ನು ‌ಸಿನಿಮಾಗಳ ಮೂಲಕ ಎಲ್ಲೆಡೆ ತಲುಪಿಸುವ ಪ್ರಯತ್ನ ನಡೆಯುತ್ತಿದೆ. ಆ ನಿಟ್ಟಿನಲ್ಲಿ ನೋಡಿದರೆ ಇಲ್ಲಿ ಕಂಬಳ ಇದೆ. ಹಾಗೆಯೇ ಭೂತಕೋಲ ಕೂಡ ಇದೆ. ಬಾಲ್ಯದಿಂದಲೂ ಭೂತ, ಕೋಲ, ದೈವಗಳು, ಅವುಗಳ ಕಾರಣಿಕ, ಗಗ್ಗರದ ಸದ್ದು, ದೈವದ ನುಡಿ ಇತ್ಯಾದಿಗಳನ್ನು ನೋಡಿಕೊಂಡೇ, ಅದರೆಡೆಗೆ ಅದಮ್ಯ ಭಯ ಮತ್ತು ನಂಬಿಕೆಗಳನ್ನು ಇಟ್ಟುಕೊಂಡೇ ಬೆಳೆದ ಮಂಗಳೂರು ಕರಾವಳಿಯ ಮಂದಿಗೆ ಕಾಂತಾರ ಒಂದು ವಿಶುವಲ್ ಟ್ರೀಟ್ ಆಗಲಿದೆ. ಕರಾವಳಿಯ ಭಾಗವನ್ನು, ಅವರ  ಅಂತರಾಳವನ್ನು  ಕನ್ನಡಿಯಂತೆ ಇಟ್ಟ ಚಿತ್ರ. ಈ ಸಂಸ್ಕೃತಿಯ ಅರಿವಿಲ್ಲದವರಿಗೆ, ಇದೊಂದು ಹೊಸ ಜಗತ್ತನ್ನು ತೋರಿಸಿಕೊಡುವ ಚಿತ್ರ. ತಮಿಳು ಚಿತ್ರಗಳಲ್ಲಿ ಕಾಣಿಸುತ್ತಿದ್ದ  ಅಪ್ಪಟ ದೇಸಿತನದ ಛಾಯೆ, ಮಾಯೆ  ಎಲ್ಲವೂ ಈ ರಿಷಬ್ ಸಿನಿಮಾದಲ್ಲಿದೆ.

ದೈವಗಳ ಕತೆಯನ್ನು ಕಲಾತ್ಮಕವಾಗಿ ಮಾಡಿದ ಚಿತ್ರಗಳು ಈ ಹಿಂದೆಯೂ ಕನ್ನಡದಲ್ಲಿ ಬಂದಿವೆ. ಆದರೆ ಜನಕ್ಕೆ ತಲುಪಿದ್ದು ಅಷ್ಟರಲ್ಲೇ ಇದೆ. ಆದ್ರೆ ಕಾಂತಾರ ಇಂಥ ಕಥೆಯನ್ನು ಕಮರ್ಷಿಯಲ್ ಆಗಿ ಹೇಳಿಯೂ ಜನರಿಗೆ ದಾಟಿಸಬಹುದು ಎಂದು ತೋರಿಸುವಂಥ ಚಿತ್ರ.

 

ರಿಷಬ್ ಅಂತೂ ಚಿತ್ರದಿಂದ ಚಿತ್ರಕ್ಕೆ ಬರವಣಿಗೆಯಲ್ಲಿ, ನಿರ್ದೇಶನದಲ್ಲಿ, ನಟನೆಯಲ್ಲಿ ಒಂದೊಂದೇ ಮೈಲುಗಲ್ಲುಗಳನ್ನು ಸಾಧಿಸುತ್ತಿರುವುದಕ್ಕೆ ಕಾಂತಾರ ಮತ್ತೊಂದು ನಿದರ್ಶನ. ಇಲ್ಲಿ ಎಲ್ಲವೂ ಇದೆ. ಕಾಡು, ನಾಡು ಜನರ ಪಾಡು, ದೈವದ ಬೀಡು.. ಎಲ್ಲವೂ. ಪ್ರಕೃತಿ ಮತ್ತು ಮನುಷ್ಯನ ಸಂಘರ್ಷ, ದೈವಗಳ ಕಾಯುವಿಕೆ ರೋಮಾಂಚನ ಉಂಟು ಮಾಡುವಂತಿದೆ. ಚಿತ್ರ ನೋಡಿದ ಪ್ರತಿಯೊಬ್ಬರೂ, ಕೊನೆಯ 10  ನಿಮಿಷಗಳಲ್ಲಿನ ರಿಷಬ್ ನಟನೆಗೆ ನಿಬ್ಬೆರಗಾಗಿದ್ದಾರೆ.

 

 ದೈವಗಳು ಮತ್ತು ಅವರ ಕ್ಯಾರೆಕ್ಟರೈಷೇನನ್ನು ಕೂಡಾ ಸೂಕ್ತವಾಗಿ ಸಿನೆಮಾದಲ್ಲಿ ಬಳಸಿಕೊಂಡಿದ್ದಾರೆ. ಉದಾಹರಣೆಗೆ ಗುಳಿಗ ದೈವ, ಹಾರಿ ನೆಗೆದು ಹೊಟ್ಟೆ ಬಾಕತನದಿಂದ ತಿನ್ನುವುದನ್ನು ರಿಷಬ್ ತೋರಿಸಿರುವ ರೀತಿ, ವೀಕ್ಷಕರಿಗೆ  ಸ್ವತಃ ದೈವ ಮುಂದೆ ನಿಂತ ಫೀಲ್ ಕೊಡುವ ಹಾಗಿದೆ. ಕ್ಲೈಮಾಕ್ಸ್‌ ನೋಡಲೆಂದೇ ವೀಕ್ಷಕರು  ಮತ್ತೆ ಮತ್ತೆ ಥಿಯೇಟರ್‌ಗೆ ಹೋದರೆ ಆಶ್ಚರ್ಯವಿಲ್ಲ.  ಚಿತ್ರಕ್ಕಾಗಿ ರಿಷಬ್ ಮಾಡಿರಬಹುದಾದ ರಿಸರ್ಚ್, ತಯಾರಿ, ಪಾತ್ರಕ್ಕಾಗಿ ತಯಾರಾದ ರೀತಿ ಎಲ್ಲವೂ ಎದ್ದು ಕಾಣುತ್ತದೆ. ಅಷ್ಟು ಮಾಡದೇ ಇಂಥಹ ಚಿತ್ರ ತಯಾರಿಸಲು ಸಾದ್ಯವೇ ಇಲ್ಲ.

 

 

ಪರದೆ ಮೇಲೆ ರಿಷಬ್ ಗೆ ಜೋಡಿಯಾಗಿ ಸಪ್ತಮಿ ಗೌಡ ಕೂಡ    ನೈಜ ಅಭಿನಯ ನೀಡಿದ್ದಾರೆ. ಅಚ್ಯುತ್ ಕುಮಾರ್ ಮತ್ತು ಕಿಶೋರ್ ನಟನೆ ಮರೆಯಲಾಗದು.

ಪ್ರತಿಯೊಂದು ಪಾತ್ರಕ್ಕೆ ತಕ್ಕಂತೆ ಪಾತ್ರಧಾರಿಗಳನ್ನು ಆಯ್ಕೆ ಮಾಡುವಲ್ಲಿ ರಿಷಬ್ ನಿಸ್ಸೀಮ ಎಂದು ಸಾಬೀತು ಮಾಡಿದ್ದಾರೆ.

 

 ಕತೆಯ ಸನ್ನಿವೇಶಗಳನ್ನು ದೃಶ್ಯಾನುಭವವಾಗಿ ಮಾಡಿರುವಲ್ಲಿ ಛಾಯಾಗ್ರಾಹಕ ಅರವಿಂದ್ ಕಶ್ಯಪ್ ಮತ್ತು ಸ್ಥಳೀಯ ಸಂಗೀತಕ್ಕೆ  ಒತ್ತು ನೀಡಿರುವ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಕಾಡುವ ಟ್ಯೂನ್ ಮೂಲಕ ಮೈಮರೆಸುತ್ತಾರೆ‌. ಒಟ್ಟಿನಲ್ಲಿ ಹೊಂಬಾಳೆ ನಿರ್ಮಾಣ ಸಂಸ್ಥೆ ನೀಡುವ ಸಿನಿಮಾಗಳ ಬಗ್ಗೆ ಇರುವ ನಿರೀಕ್ಷೆ ಇನ್ನಷ್ಟು ಹೆಚ್ಚುವಂತೆ ಮಾಡಿದೆ.

Copyright@2018 Chitralahari | All Rights Reserved. Photo Journalist K.S. Mokshendra,