Vijayanand.Reviews

Friday, December 09, 2022

262

ವಿಜಯಾನಂದ ಇತರರಿಗೆ ಸ್ಪೂರ್ತಿ

       ಆತ್ಮವಿಶ್ವಾಸ, ನಂಬಿಕೆ, ಧೈರ್ಯ ಇದ್ದರೆ ಏನೇ ಸವಾಲುಗಳು ಬಂದರೂ ಎದುರಿಸಬಹುದೆಂದು ‘ವಿಜಯಾನಂದ’ ಚಿತ್ರದಲ್ಲಿ ತೋರಿಸಲಾಗಿದೆ. ಹಿರಿಯ ಉದ್ಯಮಿ, ರಾಜಕಾರಿಣಿ ವಿಜಯಸಂಕೇಶ್ವರ ಬಯೋಪಿಕ್‌ನ್ನು ಅದ್ಬುತವಾಗಿ ತೆರೆಮೇಲೆ ತೋರಿಸಿದ್ದಾರೆ. ಇದು ಕನ್ನಡ ಮೊದಲ ಬಯೋಪಿಕ್ ಅಂತಲೂ ಕರೆಯಬಹುದು. ಸಾಧಕನೊಬ್ಬ ನಡೆದು ಬಂದ ಹಾದಿಯನ್ನು ನಿರ್ದೇಶಕಿ ರಿಷಿಕಶರ್ಮಾ ಚೆನ್ನಾಗಿ ಸನ್ನಿವೇಶಗಳ ಮೂಲಕ ತೆರೆದಿಡುವಲ್ಲಿ ಅವರ ಪ್ರಯತ್ನ ಸಪಲವಾಗಿದೆ. ತಂದೆ (ಅನಂತ್‌ನಾಗ್) ಬಿ.ಜಿ.ಸಂಕೇಶ್ವರ್ ಗದಗದಲ್ಲಿ ನಡೆಸುತ್ತಿದ್ದ ಹಳೇ ಮಾದರಿಯ ಪ್ರಿಂಟಿಂಗ್ ಪ್ರೆಸ್‌ಗೆ ಆಧುನಿಕತೆಯ ಸ್ಪರ್ಷ ನೀಡಲೆಂದು ಪುತ್ರ ವಿಜಯ್‌ಸಂಕೇಶ್ವರ್ (ನಿಹಾಲ್‌ರಜಪೂತ್) ಹೊಸ ಪ್ರಿಂಟಿಂಗ್ ಯಂತ್ರವನ್ನು ತಂದು, ಹಳೇ ಯಂತ್ರವು ಹತ್ತು ದಿನದಲ್ಲಿ ಮಾಡಬೇಕಾದ ಕೆಲಸವನ್ನು ಹೊಸದು ಒಂದೇ ದಿನದಲ್ಲಿ ಮುಗಿಸುತ್ತದೆ. ಇದು ಜೀವನಕ್ಕೆ ಸಾಲದು ಅಂತ ಲಾರಿಯೊಂದನ್ನು ಖರೀದಿಸಿ ತಾನೇ ಚಾಲಕನಾಗುತ್ತಾನೆ. ಮುಂದೆ ಅದು ಒಂದರಿಂದ ಎರಡು, ನಾಲ್ಕು ಹೀಗೆ ವರ್ಷಗಳು ಉರುಳಿದಂತೆ ಸಂಖ್ಯೆ ದುಪ್ಪಟ್ಟು ಆಗುತ್ತದೆ.

      ಜೀವನದ ಹಾದಿಯಲ್ಲಿ ಅರ್ಧಾಂಗಿ ಸಿಗುತ್ತಾಳೆ. ಗೂಡ್ಸ್ ಟ್ರಾನ್ಸ್‌ಪೋರ್ಟ್ ತಿಳಿಯದೆ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ, ಎಲ್ಲವನ್ನು ಮೆಟ್ಟಿ ನಿಂತಾಗ ಅದು ಸಹ ಲಾರಿಗಳು ಹೆಚ್ಚಿಗೆ ಆಗ ತೊಡಗುತ್ತದೆ. ಇದರ ಬೆಳವಣಿಗೆಯನ್ನು ಸಹಿಸದ ದೊಡ್ಡ ಪತ್ರಿಕೆಯೊಂದರ ಸಂಪಾದಕರು ಆಗಾಗ ಕಿರುಕುಳ ಕೊಡುತ್ತಿರುತ್ತಾರೆ. ಎಲ್ಲವನ್ನು ಛಾಲೆಂಜ್ ಆಗಿ ತೆಗೆದುಕೊಂಡಿದ್ದರಿಂದ ಯಶಸ್ಸು ಕಾಣುತ್ತಾರೆ. ಪುತ್ರ ಆನಂದ್‌ಸಂಕೇಶ್ವರ್ (ಭರತ್‌ಭೂಪಣ್ಣ) ತಂದೆಯ ಕೆಲಸದಲ್ಲಿ ತೊಡಗಿಕೊಳ್ಳುತ್ತಾನೆ. ರಾಜಕೀಯದಲ್ಲಿ ಎಂಟ್ರಿಕೊಟ್ಟು ರಾಜ್ಯಸಭಾ ಸದಸ್ಯರು ಆಗುತ್ತಾರೆ. ಲಾಜಿಸ್ಟಿಕ್, ಪ್ಯಾಸೆಂಜರ್ ಟ್ರಾನ್ಸ್‌ಪೋರ್ಟ್ ತರುವಾಯ ಪತ್ರಿಕಾ ಸಂಸ್ಥೆಯನ್ನು ಹುಟ್ಟುಹಾಕಿ ಅದರಲ್ಲೂ ಗೆಲುವನ್ನು ಸಾಧಿಸುತ್ತಾರೆ. ಎಲ್ಲವು ಅಚ್ಚುಕಟ್ಟಾಗಿ ಮೂಡಿಬಂದು ನೋಡುಗರಿಗೆ ತಾನು ಈ ರೀತಿ ಆಗಬೇಕೆಂದು ಸ್ಪೂರ್ತಿ ಬರುವಂತೆ ಚಿತ್ರವು ಮಾಡುತ್ತದೆ.

     ನಾಯಕ ನಿಹಾಲ್‌ರಜಪೂತ್ ಚೆನ್ನಾಗಿ ಅಭಿನಯಿಸಿರುವುದು ಪ್ಲಸ್ ಪಾಯಿಂಟ್ ಆಗಿದೆ. ಅನಂತ್‌ನಾಗ್, ರವಿಚಂದ್ರನ್ ಪಾತ್ರಗಳು ಇದಕ್ಕೆ ಪೂರಕವಾಗಿದೆ. ಉಳಿದಂತೆ ಸಿರಿಪ್ರಹ್ಲಾದ್, ಅರ್ಚನಾಕೊಟ್ಟಿಗೆ, ಶೈನ್‌ಶೆಟ್ಟಿ, ದಯಾಳ್‌ಪದ್ಮನಾಭನ್, ಪ್ರಕಾಶ್‌ಬೆಳವಾಡಿ ಮುಂತಾದವು ಸಿನಿಮಾಕ್ಕೆ ಅರ್ಥಪೂರ್ಣ ಅನಿಸುತ್ತದೆ. ಗೋಪಿಸುಂದರ್ ಸಂಗೀತ ಇಂಪು ತಂದರೆ, ಕೀರ್ತನ್‌ಪೂಜಾರಿ ಛಾಯಾಗ್ರಹಣ ಕಣ್ಣಿಗೆ ತಂಪು ಕೊಡುತ್ತದೆ. ಇಂದಿನ ಜಮಾನದಲ್ಲಿ ಕನಸು ಕಾಣುವವರಿಗೆ ನನಸು ಮಾಡಿಕೊಳ್ಳಲು ಇಂತಹ ಚಿತ್ರವನ್ನು ನೋಡಲೇ ಬೇಕು.

****

 

Copyright@2018 Chitralahari | All Rights Reserved. Photo Journalist K.S. Mokshendra,