Jamaligudda.Reviews

Friday, December 30, 2022

108

ಜಮಾಲಿಗುಡ್ಡದಲ್ಲೊಂದು ಕ್ರೈಂ, ಭಾವನೆಗಳ ಪಯಣ

        ‘ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ’ ಚಿತ್ರವು ೯೫-೯೬ರ ಕಾಲಘಟ್ಟದಲ್ಲಿ ನಡೆಯುವ ಕಥೆಯಾಗಿದೆ. ಭಾವನೆಗೊಂದಿಗೆ ಥ್ರಿಲ್ಲಿಂಗ್ ಅಂಶಗಳನ್ನು ಇಟ್ಟುಕೊಂಡು ಚಿತ್ರ ಮಾಡುವುದು ತ್ರಾಸ ಕೆಲಸ. ಆದರೂ ನಿರ್ದೇಶಕ ಕುಶಾಲ್‌ಗೌಡ ಮೊದಲ ಪ್ರಯತ್ನವನ್ನು ಚನ್ನಾಗಿ ನಿರ್ವಹಿಸಿರುವುದು ತೆರೆ ಮೇಲೆ ಕಾಣಿಸುತ್ತದೆ. ಪೂರ್ಣ ಸಿನಿಮಾವು ಚುಕ್ಕಿಯ ನಿರೂಪಣೆಯಲ್ಲಿ ಸಾಗುತ್ತದೆ. ಕಥಾನಾಯಕ ಹಿರೋಶಿಮ ಸಣ್ಣ ಹುಡುಗಿ ಚುಕ್ಕಿಯ ಜತೆ ಪ್ರಯಾಣ ಮಾಡುತ್ತಿರುತ್ತಾನೆ. ಈ ಪಯಣದಲ್ಲಿ ಕೊಲೆಯಾಗಿರುತ್ತದೆ. ಇಬ್ಬರು ಯಾವ ಕಾರಣಕ್ಕೆ ಒಟ್ಟಿಗೆ ಪ್ರಯಾಣ ಮಾಡುತ್ತಿರುತ್ತಾರೆ ಎಂಬುದು ತಿರುವುಗಳಲ್ಲಿ ಒಂದಾಗಿದೆ. ಮತ್ತೋಂದು ಕಡೆ ಫ್ಲಾಶ್‌ಬ್ಯಾಕ್‌ದಲ್ಲಿ ಸನ್ನಿವೇಶಗಳು ತೆರೆದುಕೊಳ್ಳುತ್ತದೆ. ಜೈಲಿನಲ್ಲಿ ಕೃಷ್ಣನಿಗೆ ಅದೇ ಸೆಲ್‌ನ ಮತ್ತೋಬ್ಬ ಅಪರಾಧಿ ನಾಗಸಾಕಿ ಸಿಗುತ್ತಾನೆ. ಇಬ್ಬರು ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಕಾರನ್ನು ಕದಿಯುತ್ತಾರೆ. ದಾರಿಯಲ್ಲಿ ಇವರಿಗೆ ಹಿಂಬದಿ ಸೀಟಿನಲ್ಲಿ ಹೆಣ್ಣು ಮಗುವೊಂದು ಕಾಣಿಸುತ್ತದೆ. ಆ ಮಗು  ಅಂಗವಿಕಲೆಯಾಗಿದ್ದು ಶ್ರೀಮಂತ ಮನೆಯವರೆಂದು ತಿಳಿಯುತ್ತದೆ. 

ಇಬ್ಬರ ನಡುವಿನ ಗಲಾಟೆಯಲ್ಲಿ ನಾಗಸಾಕಿ ಸಾಯುತ್ತಾನೆ. ಮುಂದೆ ದಟ್ಟ ಕಾಡಿನಲ್ಲಿ ಇಬ್ಬರು ಆಶ್ರಯ ಪಡೆಯುತ್ತಾರೆ. ಮರುದಿನ ಬೆಳಿಗ್ಗೆ ಪೋಲೀಸರ ಎಂಟ್ರಿಯಾಗುತ್ತದೆ. ಹೀಗೆ ಬರುವ ಒಂದೊಂದು ಘಟನೆಗಳು ಕಥೆಗೆ ತಿರುವುಗಳು ನೀಡುತ್ತಾ ಹೋಗುತ್ತದೆ. ಇವೆಲ್ಲಾ ಅರ್ಥವಾಗಬೇಕಾದರೆ ಸಿನಿಮಾ ನೋಡಬೇಕು.

       ಹಿರೋಶಿಮ ಮತ್ತು ಕೃಷ್ಣನಾಗಿ ಡಾಲಿ ಧನಂಜಯ್ ನಾಯಕನಾಗಿ ಸಿನಿಮಾ ಪೂರ್ತಿ ಆವರಿಸಿಕೊಂಡಿದ್ದಾರೆ. ತೊದಲುತ್ತಾ  ಮುಗ್ದತೆಯಿಂದ ನಟಿಸಿ ಪ್ರೇಕ್ಷಕರ ಮನ ಗೆಲ್ಲುತ್ತಾರೆ. ನಾಯಕಿ ಅದಿತಿಪ್ರಭುದೇವ ಪರವಾಗಿಲ್ಲ ಎನ್ನಬಹುದು. ನಾಗಸಾಕಿಯಾಗಿ ಯಶ್‌ಶೆಟ್ಟಿ ಲುಕ್ ನೋಡಿದವರಿಗೆ ಹೆದರಿಕೆ ಬರುತ್ತದೆ. ಬೇಬಿ ಪ್ರಾಣ್ಯಳಿಗೆ ಪ್ರಥಮ ಚಿತ್ರವಾದರೂ ಬಿಂದಾಸ್ ಆಗಿ ಕ್ಯಾಮಾರ ಮುಂದೆ ನಿಂತಿದ್ದಾಳೆ. ಉಳಿದಂತೆ ಪ್ರಕಾಶ್‌ಬೆಳವಾಡಿ, ಭಾವನಾರಾಮಣ್ಣ, ನಂದಗೋಪಾಲ್ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಅರ್ಜುನ್‌ಜನ್ಯಾ ಹಾಡುಗಳು ಮೆಲುಕು ಹಾಕುವಂತಿದ್ದರೆ, ಅನೂಪ್‌ಸೀಳನ್ ಹಿನ್ನಲೆ ಶಬ್ದ ಗಮನ ಸೆಳೆಯುತ್ತದೆ. ಕ್ಯಾಮಾರ ಕೆಲಸ ನಿರ್ವಹಿಸಿರುವ ಕಾರ್ತಿಕ್‌ಗೆ ಭವಿಷ್ಯವಿದೆ. ಇಂತಹ ಉತ್ತಮ ಚಿತ್ರವನ್ನು ನಿರ್ಮಿಸಿರುವ ಶ್ರೀಹರಿಗೆ ನಮ್ಮ ಕಡೆಯಿಂದ ಥ್ಯಾಂಕ್ಸ್ ಹೇಳಬೇಕು.

****

 

 

 

Copyright@2018 Chitralahari | All Rights Reserved. Photo Journalist K.S. Mokshendra,