Traya.Film Review.

Friday, May 10, 2019

ತ್ರಯ: ಹೆಣ, ಹಣ ಮತ್ತು ಒಂದಷ್ಟು ಭಯ

 

ಚಿತ್ರ: ತ್ರಯ

ತಾರಾಗಣ: ಹೆಬ್ಬಾಳೆ ಕೃಷ್ಣ, ವಿಜಯ್ ಚೆಂಡೂರ್, ಸಂಯುಕ್ತಾ ಹೊರನಾಡು

ನಿರ್ದೇಶನ: ಕೃಷ್ಣ ಸಾಯಿ

ನಿರ್ಮಾಣ: ಕುಶಾಲ್ ಮಹಾಜನ್, ರಾಜ್ ಆನಂದ್

 

ಮೂರು ಮಂದಿ ಯುವಕರ ಬಾಳಿನಲ್ಲಿ ನಡೆಯುವ ಘಟನೆಯೊಂದನ್ನು ಕೇಂದ್ರೀಕರಿಸಿ ಸಾಗುವ ಚಿತ್ರವೇ ತ್ರಯ. ಸಸ್ಪೆನ್ಸ್ ಥ್ರಿಲ್ಲರ್ ಆಗಿ ಸಾಗುವ ಕತೆಯಲ್ಲಿ ಕ್ಲೈಮ್ಯಾಕ್ಸ್ ನಲ್ಲಿ ಯಾರೂ ನಿರೀಕ್ಷಿಸಿರದ ತಿರುವು ಇರುವುದು ವಿಶೇಷ.

 

 

ಚಿತ್ರದಲ್ಲಿ ಮೂವರು ಹುಡುಗರಿಗೆ ಜೋಡಿಗಳಿದ್ದರೂ ಕತೆ ಪ್ರಮುಖವಾಗಿ ಸಾಗುವುದು ಇಬ್ಬರ ಮೇಲೆ. ಪಾತ್ರಗಳೇ ಸಂತು ಮತ್ತು ಸ್ವಾತಿ. ಅವರಿಬ್ಬರಿಗೂ ಪದೇ ಪದೇ ಬ್ರೇಕಪ್ ಆಗುತ್ತಿರುತ್ತದೆ. ಅದಕ್ಕೆ ಆತ ತನ್ನ ಇಬ್ಬರು ಸ್ನೇಹಿತರ ಜೊತೆಗೆ ಸೇರಿಕೊಂಡು ಪದೇ ಪದೇ ಪಾರ್ಟಿ ಮಾಡುತ್ತಾ ಪ್ರೇಯಸಿಯ ಆದ್ಯತೆಗಳನ್ನು ಮರೆತು ಬಿಡುವುದೇ ಕಾರಣವಾಗಿರುತ್ತದೆ. ಹೀಗೆ ಪಾರ್ಟಿ ಮಾಡುವುದಕ್ಕೆ ಅವರಿರುವ ಫ್ಲಾಟ್ ಮಂದಿ ಕೂಡ ವಿರೋಧ ವ್ಯಕ್ತಪಡಿಸಿದಾಗ ಅನಿವಾರ್ಯವಾಗಿ ಅಲ್ಲಿಂದ ತೊರೆದು ಹೋಗಬೇಕಾಗುತ್ತದೆ. ಹಾಗೆ ನಗರದಿಂದ ತುಸು ದೂರದಲ್ಲಿರುವ ಒಂಟಿ ಮನೆಯಲ್ಲಿ ವಾಸ ಶುರು ಮಾಡುತ್ತಾರೆ. ಪಾರ್ಟಿಗಳು ಹಿಂದಿನಂತೆ ಭರ್ಜರಿಯಾಗಿ ನಡೆಯತೊಡಗುತ್ತವೆ. ಆದರೆ ಅದೊಂದು ರಾತ್ರಿಯಲ್ಲಿ  ಸಂತು ಬ್ರೇಕಪ್ ನೋವಿನೊಂದಿಗೆ ಕುಡಿದೇ ಮನೆಗೆ ಬರುತ್ತಿರುತ್ತಾನೆ. ಆತನ ಕಾರಿನ ಮುಂದೆ ಹೆಣ್ಣೊಬ್ಬಳು ಬಂದು ಲಿಫ್ಟ್ ಕೊಡುವಂತೆ ಬೇಡಿಕೊಳ್ಳುತ್ತಾಳೆ. ಹಾಗೆ ಬಂದಾಕೆ ರಾತ್ರಿ ಅವರ ಮನೆಯಲ್ಲೇ ತಂಗುತ್ತಾಳೆ. ಆದರೆ ಮರುದಿನ ಮುಂಜಾನೆ ಆಕೆಯ ಹೆಣ ಕೋಣೆಯಲ್ಲಿರುವುದು ಪತ್ತೆಯಾಗುತ್ತದೆ. ಹಾಗಾದರೆ ಆಕೆಯ ಸಾವು ಹೇಗಾಯಿತು? ಮೂರು ಮಂದಿಯಲ್ಲಿ ಯಾರು ಕೊಂದಿರಬಹುದು? ಆಕೆ ಯಾವ ಕಾರಣಕ್ಕಾಗಿ ಲಿಫ್ಟ್ ಕೇಳಿದ್ದಳು? ಮೊದಲಾದ ಪ್ರಶ್ನೆಗಳಿಗೆ  ಉತ್ತರಗಳನ್ನು ಮಧ್ಯಂತರದ ಬಳಿಕ ನೀಡಲಾಗುತ್ತದೆ.

 

ನವ ನಿರ್ದೇಶಕ ಕೃಷ್ಣ ಸಾಯಿ ಬುದ್ಧಿವಂತಿಕೆಯಿಂದ ಚಿತ್ರವನ್ನು ನಿರ್ದೇಶಿಸಿದ್ದಾರೆ. ಕತೆಯ ಎಳೆಯನ್ನು ಗಮನಿಸಿದಾಗ ಒಂದು ದೆವ್ವದ ಚಿತ್ರವನ್ನಾಗಿ ಮಾಡುವ ಸಾದ್ಯತೆ ಇದ್ದರೂ, ಕೊನೆಯಲ್ಲಿ ಒಂದು ತರ್ಕ ಬದ್ಧವಾದ ಅಂತ್ಯವನ್ನು ನೀಡಿದ್ದಾರೆ. ಹೆಣ ಪತ್ತೆಯಾಗುವ ಮೂಲಕ ಭಯದ ವಾತಾವರಣದಿಂದ ಆರಂಭವಾಗುವ ಚಿತ್ರ,  "ಬಾ ಮಗ ಎಣ್ಣೆ ಹೊಡೀ..” ಎನ್ನುವ ಐಟಂ ಹಾಡಿನೊಂದಿಗೆ ಎಲ್ಲ ಕಮರ್ಷಿಯಲ್ ಅಂಶಗಳು ಚಿತ್ರದಲ್ಲಿವೆ ಎಂದು ಸಾಬೀತು ಪಡಿಸಿವೆ. ಚಿತ್ರದ ಪ್ರಧಾನ ಪಾತ್ರಗಳನ್ನು ನಿರ್ವಹಿಸಿರುವ ಮೂವರು ಕೂಡ ಗಮನ ಸೆಳೆಯುವ ನಟನೆ ನೀಡಿದ್ದಾರೆ. ಸಂಯುಕ್ತಾ ಹೊರನಾಡು ಅವರನ್ನು ಹಿಂದಿನ ಚಿತ್ರಗಳಿಗಿಂತ ವಿಭಿನ್ನವಾದ ಪಾತ್ರದಲ್ಲಿ ನಟಿಸಿರುವುದನ್ನು ಕಾಣಬಹುದು. ಮನೆ ಕೊಡಿಸುವ ಬ್ರೋಕರ್ ಪಾತ್ರದಲ್ಲಿ ವಿಜಯ್ ಚೆಂಡೂರ್ ತಮ್ಮ ಎಂದಿನ ಲವಲವಿಕೆಯ ನಟನೆ ನೀಡಿದ್ದಾರೆ. ಮನದೀಪ್ ರಾಯ್, ಟೆನ್ನಿಸ್ ಕೃಷ್ಣ ಮೊದಲಾದ ಹಿರಿಯ ನಟರು ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿರುವುದು ವಿಶೇಷ. ಯೂ ಟರ್ನ್ ಖ್ಯಾತಿಯ ಹೆಬ್ಬಾಳೆ ಕೃಷ್ಣ ಇಲ್ಲಿಯೂ ಪೊಲೀಸ್ ಅಧಿಕಾರಿಯ ಪಾತ್ರ ಮಾಡಿದ್ದಾರೆ. ಒಟ್ಟಿನಲ್ಲಿ ಟೈಮ್ ಪಾಸ್ ಮಾಡಲು ಚಿತ್ರ ಮಂದಿರಕ್ಕೆ ಬರುವವರಿಗೆ ತ್ರಯ ಉತ್ತಮ ಆಯ್ಕೆ ಎನ್ನಬಹುದು.

Copyright@2018 Chitralahari | All Rights Reserved. Photo Journalist K.S. Mokshendra,