Khanana.Film Review.

Friday, May 10, 2019

 

ಖನನ: ಪ್ರೇಮ,ಕಾಮ, ಕೊಲೆಯ ಸಮ್ಮಿಲನ

 

 

ಚಿತ್ರ: ಖನನ

ತಾರಾಗಣ: ಆರ್ಯವರ್ಧನ್, ಕರೀಷ್ಮಾ

ನಿರ್ದೇಶನ: ರಾಧಾ

ನಿರ್ಮಾಣ: ನಲಿಗೆ ಪ್ರೊಡಕ್ಷನ್ಸ್

 

ಸುಂದರವಾದ ದಾಂಪತ್ಯದೊಳಗೆ ವಂಚನೆ ಎನ್ನುವುದು ಇತ್ತೀಚೆಗೆ ಸಾಮಾನ್ಯ ಎನ್ನುವಂತೆ ಸುದ್ದಿಗಳು ಹೆಚ್ಚುತ್ತಿವೆ. ಆದರೆ ಅದರಲ್ಲಿಯೂ ಅನೈತಿಕ ಸಂಬಂಧಕ್ಕಾಗಿ ಕೊಲೆಗಳೇ ನಡೆಯುತ್ತಿರುತ್ತವೆ. ಅಂಥದೊಂದು ಘಟನೆ ಮತ್ತು ಅದರ ಹಿನ್ನೆಲೆಯೊಂದಿಗೆ ಸಾಗುವ ಚಿತ್ರವೇ ಖನನ.

 

ಅಜಯ್ ಮತ್ತು ನಯನಾ ಹಾಗೂ ನಯನಾಳ ಬಾಯ್ ಫ್ರೆಂಡ್ ಚಿತ್ರದ ಪ್ರಧಾನ ಪಾತ್ರಗಳು. ಬಾಯ್ ಫ್ರೆಂಡ್ ಗಾಗಿ ತನ್ನ ಪತಿಯನ್ನೇ ಹತ್ಯೆ ಮಾಡುವ ಯೋಜನೆ ಹಾಕುತ್ತಾಳೆ ನಯನಾ. ಕೃತ್ಯದಲ್ಲಿ ಆಕೆ ಯಶಸ್ವಿಯಾಗುತ್ತಾಳೆ. ಆದರೆ ಆಕೆ ಯಾಕೆ ಹೀನ ಕೆಲಸ ಮಾಡುತ್ತಾಳೆ ಎನ್ನುವುದರ ಕುರಿತಾದ ಒಂದು ಫ್ಲ್ಯಾಷ್ ಬ್ಯಾಕ್ ಕೂಡ ಚಿತ್ರದಲ್ಲಿದೆ.

 

ಚಿತ್ರದಲ್ಲಿ ಅಜಯ್ ಪಾತ್ರವನ್ನು ಆರ್ಯವರ್ಧನ್ ನಿರ್ವಹಿಸಿದ್ದು ನಾಯಕನಾಗಿ ಪಾತ್ರಕ್ಕೆ ತಕ್ಕಂತೆ ಆಕರ್ಷಕ ಅಭಿನಯ ನೀಡಿದ್ದಾರೆ. ‘ಮಾರ್ಚ್ 22' ಚಿತ್ರದ ಬಳಿಕ ಸಿಕ್ಕ ಪಾತ್ರವನ್ನು ತಮ್ಮ ನಟನೆಯಿಂದ ಅಂದಗಾಣಿಸುವ ಪ್ರಯತ್ನದಲ್ಲಿ ಅವರು ಯಶಸ್ವಿಯಾಗಿದ್ದಾರೆರೊಮ್ಯಾಂಟಿಕ್ ಸನ್ನಿವೇಶಗಳೊಂದಿಗೆ ಆರಂಭವಾಗುವ ಚಿತ್ರದಲ್ಲಿ ಥ್ರಿಲ್ಲಿಂಗ್ ಮೂಮೆಂಟ್ ಗಳಿಗೆ ಕೊರತೆಯಿಲ್ಲ. ತನಿಖೆ ನಡೆಯುವ ದೃಶ್ಯಗಳು ಪ್ರೇಕ್ಷಕರನ್ನು ಕುತೂಹಲಕ್ಕೆ ತಳ್ಳುವಂತೆ ಮಾಡುತ್ತವೆ. ನಯನಾ ಪಾತ್ರದಲ್ಲಿ ನಾಯಕಿಯಾಗಿ ನವ ನಟಿ ಕರೀಷ್ಮಾ ನಟಿಸಿದ್ದಾರೆ. ಬಾಯ್ ಫ್ರೆಂಡ್ ಡಾಕ್ಟರ್ ಪಾತ್ರದಲ್ಲಿ ಯುವ ಕಿಶೋರ್ ಅಭಿನಯಿಸಿದ್ದಾರೆ. ಕರೀಷ್ಮಾ ಗ್ಲಾಮರಸ್ಸಾಗಿದ್ದಾರೆ. ಆದರೆ ಮೂರು ಪ್ರಮುಖ ಪಾತ್ರಗಳ ಜೊತೆಗೆ ಚಿತ್ರದಲ್ಲಿ ಗಮನ ಸೆಳೆಯುವಂಥ ಒಂದು ಪ್ರಮುಖ ಅಂಶವಿದೆ. ಅದುವೇ ನಾಯಿ! ಹೌದು, ನಾಯಿಯನ್ನು ಪಾತ್ರವಾಗಿಸಿ ತೋರಿಸಿರುವ ದೃಶ್ಯಗಳು ಗಮನ ಸೆಳೆಯುವಂತಿದ್ದು ನಿರ್ದೇಶಕರ ಪ್ರಯತ್ನ ಸಫಲವಾಗಿದೆ ಎಂದೇ ಹೇಳಬಹುದು.

ದಾಂಪತ್ಯದ ನಡುವಿನ ಅನೈತಿಕ ಸಂಬಂಧ ಸುದ್ದಿಯಾಗಿ ಮಾತ್ರವಲ್ಲ, ಚಿತ್ರವಾಗಿಯೂ ಹಲವಾರು ಭಾಷೆಗಳಲ್ಲಿ ತೆರೆಕಂಡಿದೆ. ಆದರೆ ಚಿತ್ರ ಖಂಡಿತವಾಗಿ ಅವುಗಳಿಂದ ಬೇರೆ ರೀತಿಯಲ್ಲಿ ನಿಲ್ಲುತ್ತದೆ. ಚಿತ್ರದ ಮೊದಲಾರ್ಧ ಒಂದಷ್ಟು ನಿಧಾನಗತಿಯಲ್ಲಿದೆ ಎಂದು ಅನಿಸುತ್ತದೆ. ಆದರೆ ದ್ವಿತೀಯಾರ್ಧ ಮಾತ್ರ ಹೊಸ ವಿಚಾರ, ತಿರುವುಗಳೊಂದಿಗೆ ಪ್ರೇಕ್ಷಕರಿಗೆ ಚುರುಕು ನೀಡುವಲ್ಲಿ ಯಶಸ್ವಿಯಾಗುತ್ತದೆ. ಖನನ ಎಂದರೆ ಅಗೆಯುವಿಕೆ ಎನ್ನುವುದು ನಿರ್ದೇಶಕರ ಮಾತು. ಚಿತ್ರದಲ್ಲಿ ಸಂಬಂಧಗಳ ಅಗೆಯುವಿಕೆಯನ್ನು ತೋರಿಸಲಾಗಿದೆ. ಚಿತ್ರದಲ್ಲಿ ಡಾಕ್ಟರ್ ಪಾತ್ರದಲ್ಲಿ ಹಿರಿಯ ನಟ ಬ್ಯಾಂಕ್ ಜನಾರ್ಧನ್ ನಟಿಸಿದ್ದರೆ, ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಅವಿನಾಶ್ ಆಗಮಿಸುತ್ತಾರೆ.

 

ಒಟ್ಟಿನಲ್ಲಿ ಹೊಸಬರ ಚಿತ್ರಗಳನ್ನು ಪ್ರೋತ್ಸಾಹಿಸುವ ಮನಸ್ಥಿತಿ ಇರುವವರು ನೋಡಲೇಬೇಕಾದ ಚಿತ್ರ ಇದು. ಯಾಕೆಂದರೆ ನಿಟ್ಟಿನಲ್ಲಿ ಒಳ್ಳೆಯ ಪ್ರಯತ್ನವಾಗಿ ಮೂಡಿ ಬಂದಿರುವ ಸಿನಿಮಾ ಖನನ ಎನ್ನಬಹುದು.

Copyright@2018 Chitralahari | All Rights Reserved. Photo Journalist K.S. Mokshendra,