Sujidhara.Film Review.

Friday, May 10, 2019

 

ಸಾಕ್ಷಿ ಹುಡುಕುವ ಸತ್ಯದ ಪಯಣ

 

ಚಿತ್ರ: ಸೂಜಿದಾರ

ತಾರಾಗಣ: ಯಶ್ ಶೆಟ್ಟಿ, ಹರಿಪ್ರಿಯಾ

ನಿರ್ದೇಶನ: ಮೌನೇಶ್ ಬಡಿಗೇರ್

ನಿರ್ಮಾಣ: ಅಭಿಜಿತ್ ಮತ್ತು ಸಚೀಂದ್ರನಾಥ್

 

 

 

ಹರಿಪ್ರಿಯಾ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ ಎಂಬ ಕಾರಣದಿಂದಲೇ ಹೆಚ್ಚು ಗಮನ ಸೆಳೆದಂಥ ಚಿತ್ರ ಸೂಜಿದಾರ. ಅದನ್ನು ಸಂಪೂರ್ಣ ಹುಸಿಯಾಗಿಸದೇ, ಸಿನಿಮಾದಲ್ಲಿ ಕೂಡ ರಂಗಭೂಮಿ ಶೈಲಿಯ ಜೊತೆಗೆ ಪ್ರಯೋಗಾತ್ಮಕ ಎನ್ನಬಹುದಾದ ಚಿತ್ರ ಮಾಡಿದ್ದಾರೆ ನಿರ್ದೇಶಕ ಮೌನೇಶ್ ಬಡಿಗೇರ್.

 

 

 

ಚಿತ್ರದಲ್ಲಿ ನಾಯಕನದು ನಿರಂತರ ಓಟ! ಅದು ಭಯದ ಓಟ. ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸಬೇಕಾದೀತೇನೋ ಎನ್ನುವ ಓಟ. ಆದರೆ ಆತನ ಓಟಕ್ಕೆ ಕಾರಣವಿದೆ. ಅದರ ಅನಾವರಣ ಆಗುವ ಹೊತ್ತಿಗೆ ಮಧ್ಯಂತರ ತಲುಪುತ್ತದೆ. ಮಂಗಳೂರು ಕರಾವಳಿಯಲ್ಲಿ ನಡೆದಂಥ ಘಟನೆಯೊಂದಿಗೆ ಚಿತ್ರದ ಫ್ಲ್ಯಾಶ್ ಬ್ಯಾಕ್ ತೆರೆದುಕೊಳ್ಳುತ್ತದೆ. ಅದುವರೆಗೆ ಶಂಕರನಾಗಿ ಗುರುತಿಸಿಕೊಂಡ ನಾಯಕನ ನಿಜವಾದ ಹೆಸರು ಶಬೀರ್. ಆತ ಹಿಂದೂ ಹುಡುಗಿಯೊಬ್ಬಳನ್ನು ಪ್ರೀತಿಸಿರುತ್ತಾನೆ. ಆಕೆಯೂ ಆತನನ್ನು ಪ್ರೇಮಿಸಿರುತ್ತಾಳೆ. ಆದರೆ ಇದರ ನಡುವೆ ಬೇರೊಂದು ಹುಡುಗಿಗೆ ಮಾನ ಹಾನಿ ಮಾಡಿದ ಘಟನೆಯಲ್ಲಿ ಶಬೀರ್ ಸಿಕ್ಕಿಕೊಳ್ಳುತ್ತಾನೆ. ಆದರೆ ತಾನು ನಿರಪರಾಧಿ ಎಂದು ಸಾಬೀತು ಪಡಿಸಲಾಗದ ಶಬೀರ್ ಅಲ್ಲಿಂದ ತಪ್ಪಿಸಿಕೊಳ್ಳುತ್ತಾನೆ. ಹಾಗೆ ಶುರುವಾದ ಓಟ ತನ್ನ ಪರವಾದ ಸಾಕ್ಷಿಯೆಡೆಗಿನ ಓಟವಾಗಿತ್ತು ಎನ್ನುವುದನ್ನು ಕ್ಲೈಮ್ಯಾಕ್ಸ್ ಹೇಳುತ್ತದೆ.

ಮಂಗಳೂರು ಕರಾವಳಿಗೆ ಸಂಬಂಧಿಸಿದಂತೆ ನೈಜವೆನಿಸುವ ಘಟನೆಗಳ ಹಿನ್ನೆಲೆಯಲ್ಲಿ ಮೂಡಿ ಬಂದಿರುವ ಚಿತ್ರ ಇದು. ಶಂಕರ್ ಮತ್ತು ಶಬೀರ್ ಎಂಬ ಎರಡು ಹೆಸರುಗಳಲ್ಲಿ ಚಿತ್ರದ ಕೇಂದ್ರ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿರುವವರು ಯಶ್ ಶೆಟ್ಟಿ. ಇದುವರೆಗೆ ಸೈಕೋ ಮಾದರಿಯ ಖಳನಾಗಿ ಗಮನ ಸೆಳೆದಿದ್ದ ಅವರು, ಚಿತ್ರದ ಮೂಲಕ ಒಬ್ಬ ಅಮಾಯಕ ಯುವಕನ ಪಾತ್ರಕ್ಕೆ ಜೀವ ತುಂಬಿದ್ದಾರೆ. ಆದರೆ ನಾಯಕನ ಒಟ್ಟು ಸಮಸ್ಯೆಗಳ ಪರಿಹಾರವನ್ನು ಪದ್ಮಾ ಎನ್ನುವ ಪಾತ್ರದಿಂದ ಹರಿಪ್ರಿಯಾ ಮೂಲಕ ತೋರಿಸಿರುವುದು ಅವರ ಅಭಿಮಾನಿಗಳನ್ನು ತೃಪ್ತಿ ಪಡಿಸಬಲ್ಲದು.

ಹಿಂದಿನ ನೆನಪಿರದ ಪದ್ಮಾ ಮುಂದಿನ ಕನಸುಗಳ ಮೂಲಕ ಹೇಗೆ ಇಂದಿನವರ ಕಣ್ಣಲ್ಲಿ ಕೆಟ್ಟವಳಾಗುತ್ತಾಳೆ ಎನ್ನುವುದನ್ನು ನಿರ್ದೇಶಕರು ಸೊಗಸಾಗಿ ತೋರಿಸಿದ್ದಾರೆ. ಪದ್ಮಾಳ ಪತಿಯಾಗಿ ಸುಚೇಂದ್ರ ಪ್ರಸಾದ್ ನಟಿಸಿದ್ದಾರೆ. ಅವರು ಮತ್ತು ಚೈತ್ರಾ ಕೋಟೂರ್ ರಂಗಭೂಮಿ ಕಲಾವಿದರಾಗಿ ಪರದೆಯ ಮೇಲೆ ಹೆಚ್ಚು ಹೊತ್ತು ಕಾಣಿಸಿಕೊಳ್ಳಲು ಬಹುಶಃ ಬಡಿಗೇರ್ ಅವರ ರಂಗಪ್ರೀತಿಯೇ ಕಾರಣವಿರಬಹುದು. ಚೈತ್ರಾ ಅವರ ನಿರ್ವಹಣೆಯ ರಾಜಿ ಮತ್ತು ಆಕೆಯ ಜೋಡಿಯ ಪಾತ್ರಗಳು ಚಿತ್ರಕ್ಕೆ ರಸಮಯ ಸನ್ನಿವೇಶಗಳನ್ನು ನೀಡುವಲ್ಲಿ ಯಶಸ್ವಿಯಾಗಿದೆ. ಪ್ರೊಫೆಸರ್ ಪಾತ್ರದಲ್ಲಿ ಅಚ್ಯುತ್ ಕುಮಾರ್ ಎಂದಿನಂತೆ ಅಮೋಘ ಅಭಿನಯ ನೀಡಿದ್ದಾರೆ. ಒಂದಲ್ಲ ಎರಡಲ್ಲ ಖ್ಯಾತಿಯ ಆನಂದ್ ಸೇರಿದಂತೆ ಒಂದೆರಡು ದೃಶ್ಯಗಳಲ್ಲಿ ಕಾಣಿಸಿಕೊಂಡ ರಂಗಭೂಮಿ ಕಲಾವಿದರು ಕೂಡ ನೆನಪಲ್ಲಿ ಉಳಿಯುವಂತೆ ನಟಿಸಿದ್ದಾರೆ. ಸಂದರ್ಭದಲ್ಲಿ ನಿರ್ಮಾಪಕ ಅಭಿಜಿತ್ ಕೋಟೆಗಾರ್ ಅವರ ನಟನೆಯನ್ನು ಕೂಡ ನೆನಪಿಸಿಕೊಳ್ಳಬಹುದು. ವಸ್ತ್ರ ವಿನ್ಯಾಸ ಕೂಡ ಪಾತ್ರಗಳನ್ನು ಮನಸೆಳೆಯುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ.

 

 

ಶಂಕರನ ಭಯದ ಓಟಕ್ಕೆ ಪೂರ್ಣ ವಿರಾಮ ನೀಡಲು ಪದ್ಮಾಳ ಸಾಕ್ಷಿ ಹೇಗೆ ಸಹಾಯವಾಗುತ್ತದೆ ಎನ್ನುವುದನ್ನು ತಿಳಿಯಲು ಸೂಜಿದಾರ ನೋಡಲು ಮರೆಯದಿರಿ.

Copyright@2018 Chitralahari | All Rights Reserved. Photo Journalist K.S. Mokshendra,