Rathamanjari.Film Review.

Friday, May 17, 2019

15

 

ರತ್ನಮಂಜರಿ: ಕೊಡಗಿನಲ್ಲೊಂದು ರೋಚಕ ಸವಾರಿ

 

ಚಿತ್ರ: ರತ್ನಮಂಜರಿ

 

ತಾರಾಗಣ: ರಾಜ್ ಚರಣ್, ಅಖಿಲಾ ಪ್ರಕಾಶ್, ಶ್ರದ್ಧಾ ಸಾಲ್ಯಾನ್, ಪಲ್ಲವಿ ರಾಜು

 

ನಿರ್ದೇಶನ: ಪ್ರಸಿದ್ಧ್

 

ನಿರ್ಮಾಣ: ಎಸ್ ಎನ್ ಎಸ್ ಸಿನಿಮಾಸ್ ಯುಎಸ್

 

 

 

ಸದ್ಯದ ಮಟ್ಟಿಗೆ ನಿರೀಕ್ಷೆ ಮೂಡಿಸಿರುವ ಕನ್ನಡ ಚಿತ್ರಗಳಲ್ಲೊಂದಾದ ರತ್ನಮಂಜರಿ ತೆರೆಗೆ ಬಂದಿದೆ. ನಿರೀಕ್ಷೆ ಇರಿಸಿ ಚಿತ್ರ ನೋಡಲು ಹೋದವರಿಗೆ ನಿರಾಶೆಯಾಗದಂತೆ ಮೂಡಿ ಬಂದಿರುವ ಚಿತ್ರ ಇದು.

 

ಕತೆ ಆರಂಭವಾಗುವುದು ವಿದೇಶದಿಂದ. ನವ ವಿವಾಹಿತರಾದ ಸಿದ್ದಾರ್ಥ ಮತ್ತು ಗೌರಿ ಹೊಸದೊಂದು ಬಂಗಲೆ ಖರೀದಿಸಿ ಅದರಲ್ಲಿ ವಾಸವಿರುತ್ತಾರೆ. ಅದು ಭೂತ ಬಂಗಲೆ ಎಂಬ ಮಾತಿದ್ದರೂ ಅಲ್ಲಿ ಅಂಥ ವಿಶೇಷ ಸಂಗತಿಗಳೇನೂ ನಡೆಯುವುದಿಲ್ಲ. ಆದರೆ ಸಿದ್ಧಾಂತ್ ಗೆ ಪದೇ ಪದೇ ತನ್ನ ತವರಾದ ಕೊಡಗಿನ ಮನೆದೇವರು ಕನಸಲ್ಲಿ ಬರುತ್ತಿರುತ್ತಾರೆ. ದೇವರ ದರ್ಶನಕ್ಕೆಂದು ತವರು ಸೇರುತ್ತಾನೆ. ಆದರೆ ಮರಳಿ ವಿದೇಶ ತಲುಪುವ ಹೊತ್ತಿನಲ್ಲಿ ತನ್ನ ಮನೆಯ ಪಕ್ಕದಲ್ಲೇ ವಾಸವಾಗಿದ್ದ ಕೊಡಗಿನ ಹಿರಿಯ ದಂಪತಿಗಳ ಕೊಲೆಯಾಗಿರುವುದು ತಿಳಿದು ಬರುತ್ತದೆ. ಕೊಲೆಗೂ ಕೊಡಗಿಗೂ ಸಂಬಂಧ ಇರುವಂತೆ ಸಿದ್ದಾರ್ಥನಿಗೆ ಅನಿಸತೊಡಗುತ್ತದೆ. ಅದರ ಅನ್ವೇಷಣೆಗೆಂದೇ ಕೊಡಗು ಸೇರುತ್ತಾನೆ ಅಲ್ಲಿ ನಡೆಯುವ ಘಟನೆಗಳೇನು ಎನ್ನುವುದನ್ನು ಪರದೆಯ ಮೇಲೆ ನೋಡಿ ಆನಂದಿಸಿ.

ಚಿತ್ರದಲ್ಲಿ ಪ್ರಥಮ ಆಕರ್ಷಣೆಯಾಗಿ ಮೂಡಿ ಬಂದಿರುವುದೇ ಪ್ರೀತಂ ತೆಗ್ಗಿನಮನೆ ನಿರ್ವಹಿಸಿರುವ ಛಾಯಾಗ್ರಹಣ. ಅದಕ್ಕೆ ತಕ್ಕಂತೆ ನೀಡಲಾಗಿರುವ ಹಿನ್ನೆಲೆ ಸಂಗೀತ, ಮೊದಲ ಹಾಡು, ಅದರ ನೃತ್ಯ ನಿರ್ದೇಶನ ಎಲ್ಲವೂ ಒಂದನ್ನೊಂದು ಮೀರುವ ಹಾಗೆ ಇಷ್ಟವಾಗುತ್ತಾ ಹೋಗುತ್ತದೆ. ಸಿದ್ದಾಂತ್ ಪಾತ್ರದ ಮೂಲಕ ಚಿತ್ರದ ನಾಯಕನಾಗಿ ಕಾಣಿಸಿಕೊಂಡಿರುವ ರಾಜ್ ಚರಣ್ ಸ್ಪುರದ್ರೂಪಿ ಎನ್ನಲು ಅಡ್ಡಿಯಿಲ್ಲ. ಸಿದ್ದಾರ್ಥನ ಪಾತ್ರಕ್ಕೆ ಬೇಕಾದಂಥ ಅಭಿನಯವನ್ನು ಕೂಡ ಅವರು ನೀಡಿದ್ದಾರೆ. ಕೊಡಗಿನಲ್ಲಿ ಕೂಡ ಒಂದಷ್ಟು ಆಕರ್ಷಕ ಪಾತ್ರಗಳು ದೊರಕುತ್ತವೆ. ಮುಖ್ಯವಾಗಿ ಅಖಿಲಾ ಪ್ರಕಾಶ್ ಸ್ಮೈಲಿಂಗ್ ಕ್ವೀನ್ ಬಿರುದಿಗೆ ತಕ್ಕಂತೆ ಗೌರಿಯಾಗಿ ನಕ್ಕಿದ್ದಾರೆ. ಭಯಗೊಳ್ಳುವ ಪಾತ್ರದಲ್ಲಿಯೂ ಆಕೆಯ ನಟನೆ ಚೆನ್ನಾಗಿದೆ. ಉಳಿದ ಇಬ್ಬರು ನಾಯಕಿಯರಲ್ಲಿ ಶ್ರದ್ಧಾ ಸಾಲ್ಯಾನ್ ಮತ್ತು ಪಲ್ಲವಿ ರಾಜು ಗಮನ ಸೆಳೆದಿದ್ದಾರೆ. ಗೌಡರ ಮನೆಕೆಲಸದ ಹುಡುಗಿಯಾಗಿ ಪಲ್ಲವಿ ರಾಜು ಗಂಧದ ಗುಡಿಯ ಕಲ್ಪನಾರ ಪಾತ್ರವನ್ನು ನೆನಪಿಸುವಂತೆ ಬಂದು ಹೋಗುತ್ತಾರೆ. ಶ್ರದ್ದಾ ಸಾಲ್ಯಾನ್ ಅವರು ಕನ್ನಿಕಾ ಪಾತ್ರವನ್ನು ಅದಕ್ಕೆ ಬೇಕಾದ ಎಲ್ಲ ಗತ್ತು, ಒಯ್ಯಾರಗಳೊಂದಿಗೆ ನಿಜವಾಗಿಸಿದ್ದಾರೆ. ಚಿತ್ರದಲ್ಲಿರುವ ತೊಂಬತ್ತೊಂಬತ್ತು ಭಾಗ ಕಲಾವಿದರು ಕೂಡ ಹೊಸಮುಖಗಳಾಗಿ ಕಂಡರೂ ವೃತ್ತಿಪರವಾದ ಅಭಿನಯ ನೀಡಿರುವುದು  ಸಿನಿಮಾಗೆ ಫ್ರೆಶ್ ನೆಸ್ ತುಂಬುವಲ್ಲಿ ಯಶಸ್ವಿಯಾಗಿದೆ. ಚಿತ್ರದಲ್ಲಿ ಕೊಡಗಿನ ಚೆಲುವು, ಒಂದಷ್ಟು ಸಂಪ್ರದಾಯ ಬದ್ಧ ಆಚರಣೆಗಳು, ನೃತ್ಯ ಮೊದಲಾದವನ್ನು ನೋಡುವುದು ಸೊಗಸು.

 

ಮೇಲ್ನೋಟಕ್ಕೆ ಹಾರರ್ ಚಿತ್ರದಂತೆ ಕಂಡು ಬಂದರೂ ಮನುಷ್ಯ ಸಂಬಂಧಗಳನ್ನು ಬಿಚ್ಚಿಡುವ ಚಿತ್ರ ಪ್ರೇಕ್ಷಕರ ಕಣ್ಣಿಗೆ ಮಾತ್ರವಲ್ಲ ಮನಸಿಗೂ ತಂಪೆರೆಯುವ ಹಾಗೆ ಮೂಡಿ ಬಂದಿದೆ. ಹೊಸಬರ ಉತ್ತಮ ಪ್ರಯತ್ನವನ್ನು ಪ್ರೋತ್ಸಾಹಿಸುವ ಅವಕಾಶ ಚಿತ್ರದ ಮೂಲಕ ಕನ್ನಡಿಗರಿಗೆ ಲಭಿಸಿದೆ. ಹಾಗಾಗಿ ಖಂಡಿತವಾಗಿ ಒಂದು ಬಾರಿ ನೋಡಬಹುದಾದ ಚಿತ್ರ ಇದು.

Copyright@2018 Chitralahari | All Rights Reserved. Photo Journalist K.S. Mokshendra,