Weekend.Film Review.

Friday, May 24, 2019

 

ವೀಕ್ ಎಂಡ್: ವಾರಾಂತ್ಯದ ಬದುಕಿನ ಅಪರಾಧ ಕೃತ್ಯ

ಚಿತ್ರ: ವೀಕ್ ಎಂಡ್

ತಾರಾಗಣ: ಅನಂತನಾಗ್, ಗೋಪಿನಾಥ್ ಭಟ್, ಮಿಲಿಂದ್, ಸಂಜನಾ ಬುರ್ಲಿ

ನಿರ್ದೇಶನ: ಶೃಂಗೇರಿ ಸುರೇಶ್

ನಿರ್ಮಾಣ: ಮಂಜುನಾಥ್ ಡಿ

 

ವೀಕ್ ಎಂಡ್ ಎನ್ನುವುದು ಐಟಿ ಸಂಸ್ಥೆಗಳ ಉದ್ಯೋಗಿಗಳ ವಾರದ ಹಬ್ಬ. ಆದರೆ ಇದೇ ಹಬ್ಬ ಜೀವನ ಪೂರ್ತಿ ನೆಮ್ಮದಿ ತಾರದ ಹಬ್ಬವಾಗಿ ಹೇಗೆ ಬದಲಾಗುತ್ತದೆ ಎನ್ನುವುದನ್ನು ಹೇಳುವ ಚಿತ್ರವೇ ವೀಕ್ ಎಂಡ್. ಅನಂತನಾಗ್ ಪ್ರಧಾನ ಭೂಮಿಕೆಯಲ್ಲಿರುವ ಚಿತ್ರದಲ್ಲಿ ನವ ನಾಯಕ ನಾಯಕಿಯರ ಜೊತೆಗೆ ಹೊಸಬರ ತಂಡವೇ ಇದೆ.

ಒಂದೇ ಸಂಸ್ಥೆಯಲ್ಲಿ ಟೆಕ್ಕಿಗಳಾಗಿ ವೃತ್ತಿ ನಡೆಸುವವರು ಅಜಯ್, ಅನುಪಮಾ, ರಕ್ಷಾ, ರಾಮಕೃಷ್ಣ, ಸೀನ ಮೊದಲಾದವರುಅವರಲ್ಲಿ ಅಜಯ್ ಮತ್ತು ಅನುಪಮಾ ಪ್ರೇಮಿಗಳಾಗಿರುತ್ತಾರೆ. ಆದರೆ ವಿಚಾರ ತಿಳಿದಿರದ ರಕ್ಷಾ ಅಜಯ್ ನನ್ನು ಪ್ರೇಮಿಸುತ್ತಿರುತ್ತಾಳೆ. ಅಜಯ್ ಮತ್ತು ಅನುಪಮಾ ಜೋಡಿಯಾಗಿರುವುದನ್ನು ಕಂಡರೆ ಅನುಪಮಾ ತಂದೆ ಗೋಪಿನಾಥ್ ಗೆ ಸಹಿಸಲಾಗದ ಕೋಪ. ಆದರೆ ಅವರಿಬ್ಬರ ಭೇಟಿ ನಡೆಯುತ್ತಲೇ ಇರುತ್ತದೆ. ಅಜಯ್ ತಾತ ಅನಂತರಾಮ್ ಮಾತ್ರ ಯುವ ಪ್ರೇಮಿಗಳಿಗೆ ಒತ್ತಾಸೆಯಾಗಿರುತ್ತಾರೆ. ಹೀಗಿರುವಾಗ ಒಂದು ವೀಕೆಂಡ್ ಪಾರ್ಟಿಯ ದಿನ ಅಜಯ್ ಜೊತೆಗಿದ್ದ ಅನುಪಮಾ ದಿಢೀರನೆ ನಾಪತ್ತೆಯಾಗಿ ಬಿಡುತ್ತಾಳೆ. ಆಕೆ ಎಲ್ಲಿಗೆ ಹೋದಳು? ಅಪಹರಿಸಲ್ಪಟ್ಟಳೇ? ಹಾಗಿದ್ದರೆ ಅದರ ಹಿಂದಿನ ಕೈವಾಡ ಯಾರದು ಎನ್ನುವುದನ್ನು ಚಿತ್ರ ಹೇಳುತ್ತದೆ ಮಾತ್ರವಲ್ಲ, ವೀಕೆಂಡ್ ಪಾರ್ಟಿಗಳ ಅಪಾಯದ ಬಗ್ಗೆ ಹಾಗೂ ದಿನಗಳನ್ನು ಹೇಗೆ ಸದುಪಯೋಗ ಪಡಿಸಬಹುದು ಎನ್ನುವ ಬಗ್ಗೆ ಚಿತ್ರದಲ್ಲಿ ಹೇಳಲಾಗಿದೆ.

ಚಿತ್ರದಲ್ಲಿ ಅಜಯ್ ಪಾತ್ರದಲ್ಲಿ ಎತ್ತರದ ನಾಯಕನಾಗಿ ಮಿಂಚಿದ್ದಾರೆ ಮಿಲಿಂದ್. ಹೊಡೆದಾಟದ ದೃಶ್ಯಗಳನ್ನು ತುಂಬ ಚೆನ್ನಾಗಿ ನಿಭಾಯಿಸಿದ್ದಾರೆ. ಆತನ ಮುಗ್ದ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ ಸಂಜನಾ ಬುರ್ಲಿ. ಅಜಯ್ ತಾತ ಅನಂತರಾಮ್ ಪಾತ್ರದಲ್ಲಿ ತಮ್ಮ ಎಂದಿನ ಸಹಜ ಶೈಲಿಯ ನಟನೆಯಿಂದ ಗಮನ ಸೆಳೆದಿದ್ದಾರೆ ಅನಂತನಾಗ್. ಚಿತ್ರದ  ಕತೆಯಲ್ಲಿ ಒಂದೆರಡು ಆಸಕ್ತಿಕರ ತಿರುವುಗಳಿವೆ. ಸಂಭಾಷಣೆಯಲ್ಲಿ ದೃಶ್ಯವನ್ನು ಅರ್ಥಪೂರ್ಣಗೊಳಿಸುವ ಪ್ರಯತ್ನ ನಡೆದಿದೆ. ಮೊದಲ ನೋಟಕ್ಕೆ ರಮೇಶ್ ಅರವಿಂದ್ ಅವರನ್ನು ನೆನಪಿಸುವ ನಿರ್ಮಾಪಕ ಮಂಜುನಾಥ್ ಡಿ, ಬಿಸಿ ಪಾಟೀಲ್ ಅವರಂತೆ ಪೊಲೀಸ್ ಪಾತ್ರದಲ್ಲಿ ಮಿಂಚಿದ್ದಾರೆ. ನಟನೆಗೆ ಹೊಸಬರಾದರೂ ತಮ್ಮ ಸಹಜ ಡೈಲಾಗ್ ಡೆಲಿವರಿ ಮೂಲಕ ಗಮನ ಸೆಳೆಯುತ್ತಾರೆ. ಖಳನಾಯಕ ಗೋಪಿನಾಥ್ ಪಾತ್ರದಲ್ಲಿ ನಟಿಸಿರುವ ತುಳು ಸಿನಿಮಾಗಳ ಜನಪ್ರಿಯ ತಾರೆ ಗೋಪಿನಾಥ್ ಭಟ್ ಚಿತ್ರದಲ್ಲಿ ಕೂಡ ತಮ್ಮ ಮ್ಯಾನರಿಸಮ್ ಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಸೀನನಾಗಿ ನಾಗಭೂಷಣ್ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಮಾಮೂಲಿ ಮಸಾಲೆ ಚಿತ್ರವಾದರೂ ಕೂಡ ಆಯ್ಕೆ ಮಾಡಿಕೊಂಡಿರುವ ಟೆಕ್ಕಿಗಳ ಬದುಕು ಮತ್ತು ದ್ವಿತೀಯಾರ್ಧದದ ಅನಿರೀಕ್ಷಿತ ತಿರುವು ಚಿತ್ರವನ್ನು ವಿಭಿನ್ನವಾಗಿಸುವಲ್ಲಿ ಯಶಸ್ವಿಯಾಗಿದೆ. ಹಾಗಾಗಿ ವೀಕೆಂಡ್ ಸಿನಿಮಾ ಈ ವೀಕೆಂಡ್ ಗೆ ಎಲ್ಲರ ಆಯ್ಕೆಯಾದರೆ ಅದರಲ್ಲಿ ಅಚ್ಚರಿ ಇಲ್ಲ

Copyright@2018 Chitralahari | All Rights Reserved. Photo Journalist K.S. Mokshendra,