Singa.Film Review.

Friday, July 19, 2019

418

 

ಮಸಾಲೆ ರಂಗಿನ ಆಕರ್ಷಕ ಸಿಂಗ

 

ಚಿತ್ರ: ಸಿಂಗ

ತಾರಾಗಣ: ಚಿರಂಜೀವಿ ಸರ್ಜ, ಅದಿತಿ ಪ್ರಭುದೇವ

ನಿರ್ದೇಶಕ: ವಿಜಯ್ ಕಿರಣ್

ನಿರ್ಮಾಪಕ: ಉದಯ್ ಕೆ ಮೆಹ್ತ

 

 

ಸಿಂಗ ಎನ್ನುವ ಹೆಸರಿನ ಮೂಲಕ ಆ ಊರಲ್ಲಿ ಗುರುತಿಸಿಕೊಂಡಿರುವ ರೌಡಿಯೇ ಚಿತ್ರದ ನಾಯಕ. ಒಬ್ಬ ರೌಡಿ ಶೀಟರ್ ಹೇಗೆ ಕಥಾನಾಯಕ ಆಗಬಲ್ಲ ಎನ್ನುವ ಕುತೂಹಲಕ್ಕೆ ತಕ್ಕ ಮಟ್ಟಿಗೆ ಸಿನಿಮೀಯವಾಗಿಯೇ ಉತ್ತರ ನೀಡುವಂಥ ಚಿತ್ರ ಸಿಂಗ.

 

ಸಿಂಗನಿಗೆ ತಾಯಿ ಎಂದರೆ ಪ್ರೀತಿ. ಊರವರು ಎಂದರೆ ಅಕ್ಕರೆ. ಆದರೆ ಅನ್ಯಾಯ ಕಂಡರೆ ಪೊಲೀಸರನ್ನು ಕರೆಯುವಷ್ಟು ತಾಳ್ಮೆ ಆತನಲ್ಲಿಲ್ಲ. ನೇರವಾಗಿ ಹೊಡೆದಾಟ. ಈ ಹೊಡೆದಾಟಗಳಿಂದಾಗಿಯೇ ಹಲವಾರು ಪ್ರಕರಣ ದಾಖಲಾಗಿರುತ್ತವೆ. ಆದರೆ ಆತನ ಎದುರಾಳಿಗಳು ಕೂಡ ಸಿಂಗನನ್ನು ಕಾನೂನೇ ಶಿಕ್ಷಿಸಲಿ ಎಂದು ಕಾಯುವವರಲ್ಲ. ಸಿಂಗನನ್ನು  ಮುಗಿಸಲೆಂದೇ ಸ್ಕೆಚ್ ಹಾಕಿ ಕಾದವರು. ಹಾಗಾಗಿ ಮದುವೆ ಕುರಿತಾದ ಕಲ್ಪನೆಯನ್ನೇ ಇಟ್ಟುಕೊಳ್ಳದಿರುವ ಯುವಕ ಆತ. ಆದರೆ ಆತನ ತಾಯಿ ಜಾನಕಮ್ಮ ಯಾವಾಗ ಸುಂದರಿ ಗೀತಾಳನ್ನು ನೋಡುತ್ತಾಳೋ, ಅಂದಿನಿಂದಲೇ ಆಕೆಯನ್ನೇ ತಮ್ಮ ಮನೆಗೆ ಸೊಸೆಯಾಗಿ ತರಲು ಬಯಸುತ್ತಿರುತ್ತಾಳೆ. ಗೀತಾ ಕೂಡ ಆರಂಭದಲ್ಲಿ ಸಿಂಗನೆಂದರೆ ಎಲ್ಲ ಪೋಲಿ, ಪೊರ್ಕಿಗಳಂತೆ ಎಂದುಕೊಂಡಿರುತ್ತಾಳೆ. ಆದರೆ ಆತನ ಬಗ್ಗೆ ತಿಳಿದಂತೆ ಪ್ರೇಮಾಭಿಮಾನ ಮೂಡಿಸಿಕೊಳ್ಳುತ್ತಾಳೆ. ಆದರೆ ಆತನ ಮೇಲೆ ಮಾರಣಾಂತಿಕ ಹಲ್ಲೆಯಾಗಿ ಆಸ್ಪತ್ರೆ ಸೇರಿದಾಗ ಸಂದರ್ಭದಲ್ಲಿ ಅವಳೇ ತನ್ನ ಚಿನ್ನ ಅಡವಿಗಿಟ್ಟು ಸಹಾಯಕ್ಕೆ ಮುಂದಾಗುತ್ತಾಳೆ. ಇನ್ನೇನು ಜೋಡಿ ಒಂದಾಯಿತು ಎಂದು ನಿರಾಳಗೊಳ್ಳುವಂತಿಲ್ಲ. ಒಂದೆಡೆ ಗೀತಾ ತಂದೆಗೆ ಈ ಸಂಬಂಧ ಇಷ್ಟವಿರುವುದಿಲ್ಲ. ಮತ್ತೊಂದೆಡೆ, ಸಿಂಗ ಆ ಊರಿನ ಮಹಾನ್ ರೌಡಿ ಸಹೋದರರ ವಿರೋಧ ಕಟ್ಟಿಕೊಂಡಿರುತ್ತಾನೆ. ಅವರಲ್ಲಿ ಕ್ಷಮೆ ಕೇಳಲು ಜಾನಕಮ್ಮ ಆ ರೌಡಿಗಳ ಮನೆಗೆ ಹೋಗುತ್ತಾಳೆ. ಬಳಿಕ ಏನು ನಡೆಯುತ್ತದೆ ಎನ್ನುವುದು ಪರದೆಯ ಮೇಕೆ ನೋಡುವುದೇ ಸೊಗಸು.

ಸಿಂಗನಾಗಿ ಚಿರಂಜೀವಿ ಸರ್ಜ ಪಾತ್ರಕ್ಕೆ ಹೊಂದಿಕೊಳ್ಳುವಂತೆ ಕಾಣಿಸಿದ್ದಾರೆ. ಹಳ್ಳಿಯ ರಗಡ್ ಲುಕ್ ನಲ್ಲಿ ಮೆರೆದಿದ್ದಾರೆ. ಸಿಂಗನಿಗೆ ಜೋಡಿಯಾಗಿ ಗೀತಾ ಪಾತ್ರದಲ್ಲಿ ಅದಿತಿ ಪ್ರಭುದೇವ ತಮ್ಮ ಚೆಲುವು, ಮೈಮಾಟ, ಹುಸಿ ನೋಟ, ಒಯ್ಯಾರಗಳಿಂದ ಗಮನ ಸೆಳೆಯುತ್ತಾರೆ. ಇವರಿಬ್ಬರ ಭೇಟಿಗೆ, ಪ್ರೇಮಕ್ಕೆ ಕಾರಣವಾಗುವ ಸನ್ನಿವೇಶಗಳು ಆಕರ್ಷಕವಾಗಿವೆ. ಸ್ನೇಹಿತರಾಗಿ ಕಾಡುವ ಪೊರ್ಕಿ ಗ್ಯಾಂಗ್ ಕೂಡ ನೆನಪಲ್ಲಿ ಉಳಿಯುತ್ತವೆ. ಜಾನಕಮ್ಮನಾಗಿ ತಾರಾ ಅವರು ಹಳ್ಳಿಯ ಮುಗ್ದತಾಯಿಯಾಗಿ ನೀಡಿರುವ ಅಭಿನಯ ಅಮೋಘ. ಅವರ ಸಹೋದರಿಯಾಗಿ ಅರುಣಾ ಬಾಲರಾಜ್ ಕೂಡ ಸಹಜತೆಯ ಸಾಥ್ ನೀಡಿದ್ದಾರೆ. ಮುಖ್ಯವಾಗಿ ರೌಡಿಯಾಗಿ ರವಿಶಂಕರ್ ಮತ್ತು ಅವರ ಸಹೋದರ ಪಾತ್ರಧಾರಿಗಳು ಕ್ರೌರ್ಯಕ್ಕೆ ಕಳೆ ನೀಡಿದ್ದಾರೆ.

 

ಇದೊಂದು ಮಾಸ್ ಮಸಾಲೆ ತುಂಬಿದ ಪಕ್ಕಾ ಕಮರ್ಷಿಯಲ್ ಚಿತ್ರ. ಚಿತ್ರದ ಪ್ರಮುಖ ಆಕರ್ಷಣೆ ಸಂಭಾಷಣೆ ಎಂದೇ ಹೇಳಬಹುದು. ಸಾಮಾನ್ಯವಾಗಿ ಮಾಸ್ ಚಿತ್ರಗಳಲ್ಲಿ ಪಂಚ್ ಸಂಭಾಷಣೆಗಳು ಅತಿರೇಕ ಅನಿಸುತ್ತವೆ. ಆದರೆ ಸಿಂಗದಲ್ಲಿ ಪ್ರತಿ ಸಂಭಾಷಣೆಗಳು ಕೂಡ ದೃಶ್ಯಗಳಿಗೆ ಜೀವಂತಿಕೆ, ಹುರುಪು, ಲವಲವಿಕೆ ತುಂಬಿವೆ. ಚಿತ್ರದ ಪ್ರತಿಯೊಂದು ಪಾತ್ರಗಳು ಕೂಡ ನೆನಪಲ್ಲಿ ಉಳಿಯಲು ಸಂಭಾಷಣೆಗಳೇ ಪ್ರಮುಖ‌ ಕಾರಣ ಎನ್ನಬಹುದು. ಶಾನೇ ಟಾಪಾಗವ್ಳೇ ಹಾಡಂತೂ ಚಿತ್ರರಸಿಕರನ್ನು ಥಿಯೇಟರಲ್ಲೇ ಕುಣಿಸುತ್ತವೆ. ಒಟ್ಟಿನಲ್ಲಿ ಕೊಟ್ಟ ಕಾಸಿಗೆ ಸಕತ್ ಮನರಂಜನೆ ನೀಡುವಂಥ ಚಿತ್ರ ಸಿಂಗ ಎನ್ನುವುದರಲ್ಲಿ ಸಂದೇಹವಿಲ್ಲ.

Copyright@2018 Chitralahari | All Rights Reserved. Photo Journalist K.S. Mokshendra,