Mahira.Film Review.

Friday, July 26, 2019

 

ಮಹಿಳಾ ಏಜೆಂಟ್ ಮಹಿಮೆ ಸಾರುವ ’ಮಹಿರ’

 

ಚಿತ್ರ: ಮಹಿರ

ತಾರಾಗಣ: ವರ್ಜೀನಿಯ ರಾಡ್ರಿಗಸ್, ರಾಜ್ ಬಿ ಶೆಟ್ಟಿ

ನಿರ್ದೇಶನ: ಮಹೇಶ್ ಗೌಡ

ನಿರ್ಮಾಣ: ವಿವೇಕ್ ಕೊಡಪ್ಪ

 

 

ಸಮುದ್ರ ತೀರದಲ್ಲೊಂದು ಸುಂದರ ಕೆಫೆ. ಅದನ್ನು ನಡೆಸುವ ತಾಯಿ ಮತ್ತು ಮಗಳು. ತಾಯಿಯನ್ನು ಮಾಯಾ ಎಂದು ಹೆಸರು ಕರೆದೇ ಕೂಗುವ ಮಗಳು ಆಧ್ಯಾ. ಮೋಟಾರು ಬೈಕಲ್ಲಿ‌ ಸುತ್ತಾಡಿಕೊಂಡು ಗಂಡು ಬೀರಿಯಂತೆ ತಿರುಗಾಡುವ ಹೈಸ್ಕೂಲ್ ಹುಡುಗಿ, ಕ್ಲಾಸ್ಮೇಟ್ ಹುಡುಗನ ಮೇಲೆ ಕೈ ಮಾಡುವ ಮೂಲಕ ಸುದ್ದಿಯಾಗುತ್ತಾಳೆ. ಆಕೆ ಹುಡುಗನಿಗೆ ಹೊಡೆಯುವ ವೀಡಿಯೋ ವಾಟ್ಸ್ಯಾಪ್ ಮೂಲಕ ಎಲ್ಲೆಡೆ ವೈರಲ್ ಆಗುತ್ತದೆ. ಆ ಮೂಲಕ ಆಕೆಯ ಸಂದರ್ಶನಕ್ಕೆ ಪತ್ರಿಕಾ ವರದಿಗಾರ್ತಿಯೊಬ್ಬರ ಆಗಮನವಾಗುತ್ತದೆ. ಅದರಲ್ಲಿ ಪ್ರಕಟವಾಗುವ ಅವಳ ಸಂದರ್ಶನ ಮತ್ತು ಆಕೆಯ ತಾಯಿ ಮಾಯಾಳ ಹಳೆಯ ಫೊಟೋ ಇಡೀ ಘಟನೆಗೆ ಹೊಸ ತಿರುವು ನೀಡುತ್ತದೆ. ಅಲ್ಲಿಂದ ಮಾಯಾ ಒಬ್ಬಳು ಅಂಡರ್ ಕವರ್ ಏಜೆಂಟ್, ಆಕೆಯ ನಿಜವಾದ ಹೆಸರು ದೇವಕಿ ಮತ್ತು ಈಗ ಆಕೆಯ ವಿರುದ್ಧ ಇಡೀ ಡಿಪಾರ್ಟ್ಮೆಂಟೇ ವಿರುದ್ಧವಾಗಿ ನಿಂತಿದೆ ಎನ್ನುವ ಸತ್ಯಗಳು ಹೊರಗೆ ಬೀಳುತ್ತವೆ. ದೇವಕಿಯಂಥ ಉತ್ತಮ ಅಧಿಕಾರಿಯ ವಿರುದ್ಧ ಆಕೆಯದೇ ಡಿಪಾರ್ಟ್ಮೆಂಟ್ ಯಾಕೆ ತಿರುಗಿ ನಿಂತಿದೆ ಎನ್ನುವ ವಿಚಾರವನ್ನು ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಹೇಳಲಾಗಿದೆ.

ಮಹಿರಾ ಒಂದು ಸಸ್ಪೆನ್ಸ್ ಥ್ರಿಲ್ಲರ್ ಆಕ್ಷನ್  ತುಂಬಿರುವ ಚಿತ್ರ. ಇಲ್ಲಿನ ಹೊಡೆದಾಟಗಳು ನೈಜವೆನಿಸುವಂತಿವೆ. ಆ ನೈಜತೆಗೆ ಪೂರಕವಾದ ಬಾಡಿ ಲ್ಯಾಂಗ್ವೇಜ್ ಮೂಲಕ ಮಾಯಾ ಯಾನೇ ದೇವಕಿ ಪಾತ್ರಧಾರಿ ವರ್ಜೀನಿಯ ರಾಡ್ರಿಗಸ್ ಗಮನ ಸೆಳೆಯುತ್ತಾರೆ. ಮಗಳು ಆಧ್ಯಾ ಪಾತ್ರವನ್ನು ಚೈತ್ರಾ ಆಚಾರ್ ನಿರ್ವಹಿಸಿದ್ದಾರೆ. ತಾಯಿ ಮಗಳ ಕತೆ ಎನ್ನುವಂತೆ ಆರಂಭಗೊಳ್ಳುವ ಸಿನಿಮಾ ಅನೂಹ್ಯವಾದ ಬದಲಾವಣೆಯೊಂದಿಗೆ, ಆ ಎರಡೂ ಪಾತ್ರಗಳಿಗೆ ಅಷ್ಟೇ ಒತ್ತು‌ ನೀಡುವಂಥ ಎಂಡಿಂಗ್ ಪಡೆದುಕೊಂಡಿದೆ. ಚಿತ್ರದಲ್ಲಿ ತನಿಖಾಧಿಕಾರಿಯ ಪ್ರತಾಪ್ ಪಾತ್ರ ನಿರ್ವಹಿಸಿರುವ ರಾಜ್ ಬಿ ಶೆಟ್ಟಿ ತಮ್ಮ ವಿಭಿನ್ನ ಶೈಲಿಯಿಂದ ಗಮನ ಸೆಳೆಯುತ್ತಾರೆ. ದೈತ್ಯ ಗಾತ್ರದ ಇಂಟರ್ ಪೋಲ್ ಚೀಫ್ ಪಾಟೀಲ್ ಆಗಿ ಬಾಲಾಜಿ‌ ಮನೋಹರ್ ನಟಿಸಿದ್ದಾರೆ. ದೇವಕಿಯ ಜೋಡಿಯಾಗಿ ನಟಿಸಿರುವ ದಿಲೀಪ್ ರಾಜ್ ಎರಡು ದೃಶ್ಯಗಳಲ್ಲಿ‌ ಬಂದು ಹೋಗುತ್ತಾರೆ. ನವಾಝ್ ಪಾತ್ರದಲ್ಲಿ ಎಂ ಕೆ ಮಠ ತಣ್ಣನೆಯ ಕ್ರೌರ್ಯ ತೋರಿಸುವ ಖಳನಾಗಿ ಭಾಸವಾಗುತ್ತಾರೆ. ಭಯೋತ್ಪಾದನೆಯ ಮಾಸ್ಟರ್ ಮೈಂಡ್ ತೌಸೀಫ್ ಆಗಿ ಖುದ್ದು ನಿರ್ದೇಶಕ  ಮಹೇಶ್ ಗೌಡ ನಟಿಸಿದ್ದಾರೆ. ಪೀಟರ್ ಆಗಿ ಗೋಪಾಲಕೃಷ್ಣ ದೇಶಪಾಂಡೆ, ಪ್ರಾಂಶುಪಾಲರ ಪಾತ್ರದಲ್ಲಿ ಬಾಬು ಹಿರಣ್ಣಯ್ಯ ಕಾಣಿಸಿಕೊಂಡಿದ್ದಾರೆ.

 

ನಿಮಾ ರಾವ್ ಮತ್ತು ಮಿಥುನ್ ಮುಕುಂದನ್ ಹಿನ್ನೆಲೆ ಸಂಗೀತ ಚಿತ್ರದ ಸನ್ನಿವೇಶಗಳಿಗೆ ಪೂರಕವೆನಿಸುತ್ತದೆ.

ಕೀರ್ತನ್ ಪೂಜಾರಿ ಛಾಯಾಗ್ರಹಣದಲ್ಲಿ ದೃಶ್ಯಗಳು ಕುತೂಹಲ ವಾತಾವರಣ ಸೃಷ್ಟಿಸುವಲ್ಲಿ ಯಶಸ್ವಿಯಾಗಿವೆ. ಒಟ್ಟಿನಲ್ಲಿ ಸಸ್ಪೆನ್ಸ್ ಥ್ರಿಲ್ಲರ್ ಮತ್ತು ಆ್ಯಕ್ಷನ್ ಪ್ರಿಯ ಪ್ರೇಕ್ಷಕರಿಗೆ ಇಷ್ಟವಾಗುವಂಥ ಚಿತ್ರ ಮಹಿರ ಎಂದು ಧೈರ್ಯದಿಂದ ಹೇಳಬಹುದು.

Copyright@2018 Chitralahari | All Rights Reserved. Photo Journalist K.S. Mokshendra,