Vijayaratha.Film Review.

Friday, August 23, 2019

202

ದುಷ್ಟ ಶಿಕ್ಷೆಯತ್ತ ವಿಜಯ ಪಥ

 

ಚಿತ್ರ: ವಿಜಯ ರಥ

ತಾರಾಗಣ: ವಸಂತ ಕಲ್ಯಾಣ್, ಅರ್ಪಿತಾ ಗೌಡ

ನಿರ್ದೇಶನ: ಅಜಯ್ ಸೂರ್ಯ

ನಿರ್ಮಾಣ: ರಮೇಶ್ ಮಧುಗಿರಿ, ಸುಬ್ರಹ್ಮಣ್ಯ

 

ರಥ ಮತ್ತು ಆತನ ಒಂದಷ್ಟು ಸ್ನೇಹಿತರು ರಕ್ತದಾನದ ಮೂಲಕ ಸಮಾಜ ಸೇವೆಯಲ್ಲಿ ಗುರುತಿಸಿಕೊಂಡವರು. ಆದರೆ ಆ ರಕ್ತದಾನಿ ಸ್ನೇಹಿತರ ಗುಂಪಲ್ಲಿ ಒಬ್ಬೊಬ್ಬರೇ ನಾಪತ್ತೆಯಾಗುತ್ತಾರೆ. ಆದರೆ ನಿಜಕ್ಕೂ ಈ ನಾಪತ್ತೆಯಾದವರ ಹಿಂದಿನ‌ ಕತೆ ಏನು ಎನ್ನುವುದನ್ನು ಹೊಸತೊಂದು ತಿರುವಿನ ಮೂಲಕ ಹೇಳಿರುವುದೇ ವಿಜಯರಥ ಚಿತ್ರದ ಕತೆ.

 

ಚಿತ್ರದ ಆರಂಭ ಹತ್ತು ಲಕ್ಷ ಹೇಗೆ ಯಾರದೆಲ್ಲ ಕೈ ಸೇರುತ್ತದೆ ಎನ್ನುವ ಕುರಿತಾದ ಕಾನ್ಸೆಪ್ಟ್ ಜತೆಗೆ ಶುರುವಾಗುತ್ತದೆ. ಹಲವಾರು ತಿರುವುಗಳ ಬಳಿಕ ಚಿತ್ರ ಕೊನೆಗೊಳ್ಳುವಾಗ ಮತ್ತೆ ಅದೇ ಹಳೆಯ ಕತೆಗೆ ಸಂಬಂಧಿಸಿದಂತೆ ಚಿತ್ರಕೊನೆಗೊಳ್ಳುವುದು ವಿಶೇಷ. ಈ ಸಿನಿಮಾದಲ್ಲಿ ಪ್ರೇಮವಿದೆ, ಸ್ನೇಹವಿದೆ, ತಾಯಿ ಸೆಂಟಿಮೆಂಟ್ ಇದೆ, ಹೊಡೆದಾಟವಿದೆ ಜನಮನ ಸೆಳೆಯವ ಹಾಡುಗಳಿವೆ. ಹಾಗಾಗಿ ಇದು ಒಂದು ರೀತಿಯಲ್ಲಿ ಫುಲ್ ಪ್ಯಾಕ್ ಎಂಟರ್ಟೈನ್ಮೆಂಟ್ ಎಂದು ಹೇಳಬಹುದು. ರಥನ ಪ್ರೇಯಸಿ ವಿಜಯ. ಆಕೆ ಕೂಡ ನವನಟಿಯಾಗಿದ್ದು ಚಿತ್ರದ ಹೆಸರಲ್ಲೇ ಈ ಜೋಡಿಗಳ ಹೆಸರನ್ನು ಬಳಸಿಕೊಂಡಿರುವುದನ್ನು ಕಾಣಬಹುದು. ತಾಯಿ ಮತ್ತು ಮಗನ ಬಾಂಧವ್ಯವನ್ನು ಸೂಚಿಸುವ ದೃಶ್ಯಗಳು ಚಿತ್ರದ ಹೈಲೈಟ್ ಎನ್ನಬಹುದು. ಚಿತ್ರದಲ್ಲಿ ನಾಯಕನ ತಾಯಿಯ ಸಾವು ಮತ್ತು ಅದರ ಹಿಂದಿನ‌ ರಹಸ್ಯಗಳು ತೆರೆದುಕೊಳ್ಳುತ್ತಿರುವ ಹಾಗೆ ಪ್ರೇಕ್ಷಕ ಸೀಟಿನ ಅಂಚಿಗೆ ಬಂದು ಕುಳಿತು ನೋಡುವಷ್ಟು ಕುತೂಹಲ ಮೂಡಿಸುತ್ತದೆ ಚಿತ್ರ. ಒಂದು ಹಂತದಲ್ಲಿ ಇಷ್ಟೊಂದು ಟ್ವಿಸ್ಟ್ ಗಳು ಚಿತ್ರಕ್ಕೆ ಅಗತ್ಯ ಇರಲಿಲ್ಲ ಎಂದು ಅನಿಸಿದರೂ, ಅಂತ್ಯದಲ್ಲಿ ಎಲ್ಲವನ್ನೂ ಅರ್ಥಗರ್ಭಿತಗೊಳಿಸುವ ದೃಶ್ಯಗಳನ್ನು ಜೋಡಿಸಿರುವುದಕ್ಕೆ ಖುಷಿ ಪಡಬೇಕು.

ನಾಯಕ ರಥನ ಪಾತ್ರದಲ್ಲಿ ವಸಂತ ಕಲ್ಯಾಣ್ ಅಭಿನಯಿಸಿದ್ದಾರೆ. ಪ್ರಥಮ ಚಿತ್ರದಲ್ಲೇ ಪ್ರಭಾವ ಬೀರುವಂಥ ಅಭಿನಯ ನೀಡಿರುವ ಕಾರಣಕ್ಕೆ ವಸಂತ ಕಲ್ಯಾಣ್ ಅವರನ್ನು ಪ್ರಶಂಸಿಸಲೇಬೇಕು. ಅವರ ಜೋಡಿಯಾಗಿ ನಟಿಸಿರುವ ಅರ್ಪಿತಾ ಗೌಡ ಕೂಡ ವಿಜಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ನಾಯಕನ ತಾಯಿ ಪಾತ್ರವನ್ನು ನಿರ್ವಹಿಸಿರುವ ನಿಹಾರಿಕಾ ಕನ್ನಡ ಚಿತ್ರರಂಗಕ್ಕೆ ಮತ್ತೊಬ್ಬರು ಆಕರ್ಷಕ ಮಾತೆಯಾಗಿ ಎಂಟ್ರಿ ನೀಡಿದ್ದಾರೆ. ಅವರ ಲವಲವಿಕೆಯ ಅಭಿನಯ ಚಿತ್ರಕ್ಕೆ ಮತ್ತೊಂದು ಪ್ಲಸ್ ಪಾಯಿಂಟ್. ಚಿತ್ರದ ಮತ್ತೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡವರು ನಟರಂಗ ರಾಜೇಶ್. ಇತ್ತೀಚೆಗೆ ಪೊಲೀಸ್ ಪಾತ್ರಗಳಿಗೆ ಸೀಮಿತವಾಗುತ್ತಿರುವ ರಾಜೇಶ್  ಈ ಚಿತ್ರದಲ್ಲಿ ಕೂಡ ತಮಗೆ ದೊರಕಿರುವ ಪಾತ್ರಕ್ಕೆ ನ್ಯಾಯ ಒದಗಿಸುವಲ್ಲಿ ಗೆದ್ದಿದ್ದಾರೆ.

 

ಸಸ್ಪೆನ್ಸ್ ಥ್ರಿಲ್ಲರ್ ಜತೆಗೆ ಪ್ರೇಮ ಕತೆಗಳನ್ನು ಕೂಡ ನೋಡುವ ಆಸಕ್ತಿ ಇರುವವರು ಖಂಡಿತವಾಗಿ ವೀಕ್ಷಿಸಬೇಕಾದ ಚಿತ್ರ ವಿಜಯರಥ ಎನ್ನಬಹುದು.

Copyright@2018 Chitralahari | All Rights Reserved. Photo Journalist K.S. Mokshendra,