Vishnu Circle.Film Review.

Friday, September 06, 2019

 

 

 

 

 

 

 

 

 

ವಿಷ್ಣು ಸರ್ಕಲ್ ನಲ್ಲಿ ಪ್ರೇಮ, ವಿರಹದ ನಿಲ್ದಾಣ

 

ಚಿತ್ರ: ವಿಷ್ಣು ಸರ್ಕಲ್

ತಾರಾಗಣ:         ಗುರುರಾಜ್‌ ಜಗ್ಗೇಶ್‌,ಜಾಹ್ನವಿ, ಸಂಹಿತಾ ವಿನ್ಯ, ದಿವ್ಯಾಗೌಡ,ಸುಚಿತ್ರಾ

ನಿರ್ದೇಶನ: ಲಕ್ಷ್ಮಿ ದಿನೇಶ್‌

ನಿರ್ಮಾಣ: ಆರ್ ಬಿ

 

ಆ ರಸ್ತೆಗಳು ಸೇರುವ ವೃತ್ತದಲ್ಲಿ  ಡಾ. ವಿಷ್ಣುವರ್ಧನ್ ಅವರ ಒಂದು ಸುಂದರವಾದ ಪುತ್ಥಳಿ ಇದೆ. ಅಲ್ಲೇ ಪಕ್ಕದಲ್ಲಿ ಒಂದು ಟೀ ಅಂಗಡಿ ಮತ್ತು ವಿಷ್ಣು ಸರ್ಕಲ್ ಬಸ್ ನಿಲ್ದಾಣವೂ ಇರುತ್ತದೆ. ಅದುವೇ ಚಿತ್ರದ ನಾಯಕ ವಿಷ್ಣು ಹೆಚ್ಚಾಗಿ ಕಾಣಿಸಿಕೊಳ್ಳುವ ಜಾಗ. ಆತ ಒಬ್ಬ ವಿಷ್ಣುವರ್ಧನ್ ಅಭಿಮಾನಿ ಕೂಡ ಹೌದು.

 

ತನ್ನ ಗೆಳತಿಗೆ ತನ್ನ ಮೆಚ್ಚಿನ ವಿಷ್ಣುವರ್ಧನ್  ಅವರ ಸಿನಿಮಾ ತೋರಿಸಿ ಮನಸು ಗೆಲ್ಲುತ್ತಾನೆ. ಆದರೆ ವೃತ್ತಿಗೆಂದು ವಿದೇಶಕ್ಕೆ ಹೊರಟು ನಿಂತು ತನ್ನನ್ನು ಕೂಡ ಜತೆಯಲ್ಲಿ ಆಹ್ವಾನಿಸಿದಾಗ ಜತೆಯಾಗಲು ಹಿಂಜರಿಯುತ್ತಾನೆ. ಯಾಕೆಂದರೆ ತಂದೆ, ತಾಯಿ, ತಾಯಿನಾಡು ಎಲ್ಲರೊಂದಿಗೆ ಆತನ ಸಂಬಂಧ ಅಷ್ಟು ಗಾಢವಾಗಿರುತ್ತದೆ. ಆದರೆ ಪ್ರೇಯಸಿ ವಿದೇಶಕ್ಕೆ ಹೋದ ಬಳಿಕ ಈತ ಅದೇ ಚಿಂತೆಯಲ್ಲಿ ಕುಡಿತಕ್ಕೆ ದಾಸನಾಗುತ್ತಾನೆ. ಇದರ ನಡುವೆ ಇಬ್ಬರು ಹೊಸ ಗೆಳತಿಯರ ಪ್ರವೇಶವೂ ಆತನ ಬದುಕಲ್ಲಿ ನಡೆಯುತ್ತದೆ. ಆದರೆ ನಾಯಕನಿಗೆ ಅಂತಿಮದಲ್ಲಿ ಜೋಡಿಯಾಗುವುದು ಯಾರು? ಇಬ್ಬರು ಗೆಳತಿಯರಲ್ಲಿ ಒಬ್ಬಳು ಆಯ್ಕೆಯಾಗುತ್ತಾಳ? ಅಥವಾ ವಿದೇಶದಿಂದ ಮೊದಲ ಪ್ರೇಯಸಿಯೇ ಮರಳಿ ಬರುತ್ತಾಳ ಎನ್ನುವುದನ್ನು ಚಿತ್ರಮಂದಿರದಲ್ಲೇ ನೋಡಿ ಅರ್ಥ ಮಾಡಿಕೊಳ್ಳುವುದು ಉತ್ತಮ.

ಚಿತ್ರದ ನಾಯಕನಾಗಿ ಗುರುರಾಜ್ ಜಗ್ಗೇಶ್ ಸಹಜ ಅಭಿನಯ ನೀಡಿದ್ದಾರೆ. ಪ್ರಥಮ ಪ್ರೇಯಸಿಯಾಗಿ ನಟಿಸಿರುವ ಜಾಹ್ನವಿ ತನ್ನ ಲವ್ ಬಗ್ಗೆ ಹೇಳಿಕೊಂಡಾಗ ಅವರು ನೀಡುವ ಪ್ರತಿಕ್ರಿಯೆ ಆಕರ್ಷಕವಾಗಿದೆ. ಚಿತ್ರ ಪೂರ್ತಿ ಕುಡುಕನಾಗಿ ಕಂಡರೂ ಕನಿಕರ ಮೂಡುವ ಹಾಗಿದೆಯೇ ಹೊರತು, ಎಲ್ಲಿಯೂ ಅವರ ಹಾವಭಾವಗಳು ಅಸಹ್ಯ ಎನಿಸುವುದಿಲ್ಲ. ಎರಡನೇ ಬಾರಿ ನಾಯಕನಿಗೆ ಇಷ್ಟವಾಗುವ ಹುಡುಗಿಯ ಪಾತ್ರವನ್ನು ಸಂಹಿತಾ ವಿನ್ಯ ಅಭಿನಯಿಸಿದ್ದಾರೆ. ಅವರ ಪಾತ್ರಕ್ಕೆ ಹೆಚ್ಚು ಪ್ರಾಧಾನ್ಯತೆ ಇಲ್ಲವಾದರೂ ಸಿಕ್ಕ ಅವಕಾಶದಲ್ಲಿ ಅವರು ನೀಡಿರುವ ನಟನೆ ಮತ್ತು ಹಾಡಿನಿಂದಾಗಿ ನೆನಪಲ್ಲಿ ಉಳಿಯುತ್ತಾರೆ. ಮೂರನೇ ಪ್ರೇಯಸಿಯ ಪಾತ್ರ ನಿರ್ವಹಿಸಿರುವ ದಿವ್ಯಾ ಗೌಡ ಕೂಡ ಪ್ರೇಕ್ಷಕರ ಮನಸಲ್ಲಿ ಸ್ಥಾನ ಪಡೆಯುತ್ತಾರೆ. ಉಳಿದಂತೆ ನಾಯಕನ ತಾಯಿಯಾಗಿ ಅರುಣಾ ಬಾಲರಾಜ್ ಎಂದಿನಂತೆ ಗಮನ ಸೆಳೆಯುತ್ತಾರೆ. ದತ್ತಣ್ಣ ಕೂಡ ಮಾತ್ರೆ ಪಕ್ಕಕ್ಕಿಟ್ಟು ಪ್ರೇಮದ ಬಗ್ಗೆ ಮಾತನಾಡುವ ವೇದಾಂತಿಯಾಗಿ ಕಾಣಿಸಿಕೊಂಡಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಅತ್ತೆ ಪಾತ್ರದಲ್ಲಿ ನಟಿಸಿರುವ ನಟಿ ಸುಚಿತ್ರಾ ಎರಡೇ ದೃಶ್ಯಗಳಲ್ಲಿ ಬಂದರೂ ತಮ್ಮ ಸಹಜ ಅಭಿನಯದಿಂದ ಅಚ್ಚಳಿಯದೆ ಉಳಿದು ಬಿಡುತ್ತಾರೆ.

 

ಸಿನಿಮಾ ಹೆಸರು ವಿಷ್ಣು ಸರ್ಕಲ್ ಎಂದು ಇರಿಸಿರುವುದಕ್ಕೆ ಸರಿಯಾಗಿ ಚಿತ್ರದ ತುಂಬ ವಿಷ್ಣು ಸರ್ಕಲ್ ದೃಶ್ಯಗಳಿವೆ. ಮಾತ್ರವಲ್ಲ ಆರಂಭದಲ್ಲೇ ವಿಷ್ಣುವರ್ಧನ್ ಅವರ ಚಿತ್ರಗಳ ದೃಶ್ಯಗಳ ಮೂಲಕವೇ ಶೀರ್ಷಿಕೆಗಳನ್ನು ಹಾಕಲಾಗಿದೆ. ಇಷ್ಟು ಸಾಲದಿದ್ದರೆ ಅಭಿಮಾನಿಗಳಿಗಾಗಿ ವಿಷ್ಣುವರ್ಧನ್ ಚಿತ್ರದ ಒಂದು ದೃಶ್ಯವೂ ಇದೆ. ಮಾತ್ರವಲ್ಲ ನಾಯಕನ ಹೆಸರೂ ವಿಷ್ಣುವೇ. ಜತೆಗೆ ವಿರಹದ ನೋವನ್ನು ವಿಷ್ಣು ಶೈಲಿಯಲ್ಲೇ ವ್ಯಕ್ತಪಡಿಸುವ ಪ್ರಯತ್ನವನ್ನು ಗುರುರಾಜ್ ಮಾಡಿದ್ದಾರೆ.      ಪೂರ್ತಿ ಎರಡು ಗಂಟೆ ಕಾಲಾವಧಿಯೂ ಇಲ್ಲದ ಈ ಚಿತ್ರ ನೋಡಿದ ಬಳಿಕ ತುಂಬ ಹೊತ್ತು ಕಾಡುವಂತಿರುವುದು ಮಾತ್ರ ಸತ್ಯ.

Copyright@2018 Chitralahari | All Rights Reserved. Photo Journalist K.S. Mokshendra,