Lungi.Film Review.

Friday, October 11, 2019

                                       

ಅರ್ಥಪೂರ್ಣ ಕತೆಗೆ ಆಸಕ್ತಿ ಹುಟ್ಟಿಸುವ ಸನ್ನಿವೇಶಗಳು

         ಒಂದು ಸರಳವಾದ ಕತೆಯನ್ನು ಹೀಗೂ ಹೇಳಬಹುದು ಎನ್ನುವುದಕ್ಕೆ ‘ಲುಂಗಿ’ ಚಿತ್ರವು ಸಾಕ್ಷಿಯಾಗಿದೆ. ಪ್ರಸಕ್ತ ಯುವಜನಾಂಗವು ಶಿಕ್ಷಣ ಮುಗಿಸಿ ಇಲ್ಲಿಯೇ ಸಾಧಿಸಲು ಹಲವು ಮಾರ್ಗಗಳು ಇದೆ ಎಂದು ಚಿತ್ರ ಹೇಳುವ ಪ್ರಯತ್ನ ಮಾಡಿದೆ.  ಕರಾವಳಿ ಸೊಗಡಿನ ಕತೆಯಲ್ಲಿ  ಆಗ ತಾನೆ  ಇಂಜಿನಿಯರಿಂಗ್ ಪದವಿ ಪಡೆದ ಹುಡುಗನೊಬ್ಬ ಕೆಲಸಕ್ಕೂ ಹೋಗದೆ ಅಕ್ಕ ಪಕ್ಕದ ಮನೆಯವರಿಗೆ ಬೇಕಾದವನಾಗಿರುತ್ತಾನೆ. ಇದು ಅಪ್ಪನಿಗೆ ಕಿರಿಕಿರಿ ಉಂಟು ಮಾಡಿದರೆ,  ಅಜ್ಜಿಯಿಂದ ಇವನಿಗೆ ಪ್ರೋತ್ಸಾಹ ಸಿಗುತ್ತಾ ಇರುತ್ತದೆ. ಪಕ್ಕದಲ್ಲೆ ಬಾಡಿಗೆಗೆ ಬರುವ ಹುಡುಗಿಯೊಬ್ಬಳ ಪರಿಚಯ. ಒಮ್ಮೆ ಈಕೆಯ ಅಪ್ಪನ ಲುಂಗಿಯನ್ನು ಕಂಡು ಇದರ ಬ್ಯುಸಿನೆಸ್ ಮಾಡಿದರೆ ಹೇಗೆ? ಎಂಬ ಯೋಚನೆ ಬರುತ್ತದೆ, ಮನೆಗೆ ತಿಳಿಸಿದಾಗ ಪೋಷಕರಿಂದ  ವಿರೋದ ಬರುತ್ತದೆ. ಧೈರ್ಯ ಮಾಡಿ ಇದೇ  ವ್ಯಾಪಾರ ಶುರು ಮಾಡಿದಾಗ ಆನಂತರ ಅವಾಂತರಗಳು ಒದಗಿಬಂದು  ಪ್ರೀತಿಗೆ ಕಷ್ಟಕಾರ್ಪಣ್ಯಗಳು ಎದುರಾಗುತ್ತದೆ. ಮುಂದೇನು ಎನ್ನುವುದನ್ನು ನೀವು ಟಾಕೀಸ್‌ಗೆ ಹೋದರೆ ಗೊತ್ತಾಗುತ್ತದೆ. 

       ಪ್ರಣವ್‌ಹೆಗ್‌ಡೆ ನಾಯಕನಾಗಿ ಶ್ರಮವಹಿಸಿದ್ದಾರೆ. ಅಹಲ್ಯಸುರೇಶ್, ರಾಧಿಕಾರಾವ್ ನಾಯಕಿಯರಾಗಿ ಚೆಂದ ಕಾಣಿಸುತ್ತಾರೆ.  ವಿನೀತ್, ಪ್ರಕಾಶ್‌ತುಮ್ಮಿನಾಡು, ಕಾರ್ತಿಕ್‌ವರದರಾಜು ಮುಂತಾದವರು ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಬಹುತೇಕ ಕಲಾವಿದರು ಮಂಗಳೂರು ರಂಗಭೂಮಿ ಹಿನ್ನಲೆಯಿಂದ ಬಂದವರಾಗಿದ್ದರಿಂದ ನಟನೆ ಅವರಿಗೆ ಸುಲಲಿತವಾಗಿದೆ. ಅರ್ಜುನ್‌ಲೂವೀಸ್-ಅಕ್ಷಿತ್‌ಶೆಟ್ಟಿ ನಿರ್ದೇಶಕರುಗಳಾಗಿ ಇಬ್ಬರಿಗೂ ಉಜ್ವಲ ಭವಿಷ್ಯವಿದೆ.  ಪ್ರಸಾದ್‌ಶೆಟ್ಟಿ ಸಂಗೀತ, ರಿಜೋ.ಪಿ.ಜೋನ್ ಛಾಯಾಗ್ರಹಣ ಇವೆಲ್ಲಕ್ಕೂ ಪೂರಕವಾಗಿದೆ. ಮಂಗಳೂರು ಭಾಷೆಯ ಕನ್ನಡ ಕೇಳುವವರಿಗೆ ಚಿತ್ರವು ಖುಷಿ ಕೊಡುತ್ತದೆ.  ತುಳು ನಿರ್ಮಾಪಕ  ಮುಖೇಶ್‌ಹೆಗ್ಗಡೆ ಕನ್ನಡದಲ್ಲಿ ಮೊದಲಬಾರಿ ನಿರ್ಮಾಣ ಮಾಡಿದ್ದಾರೆ.

 

 

Copyright@2018 Chitralahari | All Rights Reserved. Photo Journalist K.S. Mokshendra,