Ranganayaki.Film Review.

Tuesday, October 29, 2019

ಅನ್ಯಾಯದ ವಿರುದ್ದ ಹೋರಾಡುವ ರಂಗನಾಯಕಿ

          ೧೯೮೧ರಲ್ಲಿ ತೆರೆಕಂಡ ಕ್ಲಾಸಿಕ್ ಸಿನಿಮಾ ‘ರಂಗನಾಯಕಿ’ ಮೈಲಿಗಲ್ಲಾಗಿತ್ತು. ಈಗ ಇದೇ ಹೆಸರಿನ ಚಿತ್ರವೊಂದು ತೆರೆಕಂಡಿದೆ. ಕಥಾನಾಯಕಿ ಅನಾಥೆ ಸಂಗೀತ ಶಿಕ್ಷಕಿಗೆ ನಂಬಿದವರಿಂದ ಅತ್ಯಾಚಾರವಾಗುತ್ತದೆ. ಇದನ್ನು ಎದುರಿಸಿ ಕಾನೂನಿನಂತೆ  ಅಪರಾಧಿಗಳಿಗೆ  ಹೇಗೆ ಶಿಕ್ಷೆ ವಿಧಿಸುತ್ತಾಳೆಂಬುದು ಸಾರಾಂಶವಾಗಿದೆ. ಹಾಗಂತ ಇಂತಹ ದೃಶ್ಯಗಳನ್ನು ಅತಿಯಾಗಿ ಬಿಂಬಿಸದೆ ನೋಡುಗರಿಗೆ ಮುಜುಗರ ತರದ ದೃಶ್ಯಗಳನ್ನು ಸೃಷ್ಟಿಸಿರುವ  ನಿರ್ದೇಶಕ ದಯಾಳ್‌ಪದ್ಮನಾಬನ್ ಕೆಲಸಕ್ಕೆ  ಹ್ಯಾಟ್ಸಾಫ್. ನಿರ್ಭಯ ಪ್ರಕರಣದ ಅಂಶವನ್ನು ತೆಗೆದುಕೊಂಡು, ಅದಕ್ಕೆ ತನ್ನದೆ ಪರಿಕಲ್ಪನೆಯಲ್ಲಿ ದುರಳರನ್ನು ಕಾನೂನು ಅಡಿಯಲ್ಲಿ ಹೇಗೆ ದಂಡಿಸಬಹುದೆಂದು ಪರೋಕ್ಷವಾಗಿ ಹೇಳಲಾಗಿದೆ. ಇದರಲ್ಲಿ ಆಕೆಯು ಧೈರ್ಯಗೊಂಡು ಅತ್ಯಾಚಾರಿಗೆ ಶಿಕ್ಷೆಗೆ ಒಳಪಡಿಸಲು, ಕೇಂದ್ರ ಸರ್ಕಾರ ರೂಪಿಸಿರುವ ಮಾರ್ಗದರ್ಶನದಂತೆ  ಠಾಣೆ, ನ್ಯಾಯಾಲಯದಲ್ಲಿ ಜಯ ಸಾಧಿಸುತ್ತಾಳೆ.  ರಂಗನಾಯಕಿ ಧೈರ್ಯವಂತೆ, ಗೆಳತಿ ಹೆದರಿಕೆ  ಸ್ವಭಾವ.  ಹೀಗೆ ಎರಡು ಹುಡುಗಿಯರ ಮನಸ್ಥಿತಿಯನ್ನು ಚೆನ್ನಾಗಿ ತೋರಿಸಿದ್ದಾರೆ. 

         ಶೀರ್ಷಿಕೆ ಹೆಸರಿನಲ್ಲಿ ಕಾಣಿಸಿಕೊಂಡಿರುವ ಅದಿತಿಪ್ರಭುದೇವ  ಶೋಷಿತ ಮಹಿಳೆಯಾಗಿ ಕಣ್ಣುಗಳಲ್ಲೆ ನೋವುಗಳನ್ನು ತೋರ್ಪಡಿಸಿ, ಇಂದಿನ ಹುಡುಗಿಯರ ಪ್ರತಿನಿಧಿಯಂತೆ ಅದ್ಬುತವಾಗಿ ನಟಿಸಿದ್ದಾರೆ. ರಂಗನಾಯಕಿ ಯಾವಾಗಲೂ ರಂಗನಾಯಕಿ ಆಗಿಯೇ ಇರುತ್ತಾಳೆ. ನನಗೆ ಜ್ಯುಡಿಷಿಯಲ್ ಸಿಸ್ಟಮ್ ಮೇಲೆ ನಂಬಿಕೆ ಇದೆ ಇಂತಹ ಹಲವು ಸಂಭಾಷಣೆಗಳು ಮನಸ್ಸು ತಟ್ಟುತ್ತದೆ.   ಮುಖ್ಯ  ಪಾತ್ರದಲ್ಲಿ ಶ್ರೀನಿ, ತ್ರಿವಿಕ್ರಮ ಇಬ್ಬgರಿಗೂ ಸಮನಾದ ಪಾಲು ಇದೆ. ಗೆಳತಿಯಾಗಿ ಲಾಸ್ಯ, ಸುಂದರರಾಜ್, ಪದ್ಮಶಿವಮೊಗ್ಗ, ಯತಿರಾಜ್, ಚಕ್ರವರ್ತಿಚಂದ್ರಚೂಡ್,  ನ್ಯಾಯಮೂರ್ತಿಯಾಗಿ ಸುಚೇಂದ್ರಪ್ರಸಾದ್ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ನವೀನ್‌ಕೃಷ್ಣ ಸಂಭಾಷಣೆ, ರಾಕೇಶ್ ಛಾಯಾಗ್ರಹಣ, ಮಣಿಕಾಂತ್‌ಕದ್ರಿ  ಹಿನ್ನಲೆ ಸಂಗೀತ ಇದೆಲ್ಲಕ್ಕೂ ಚಿತ್ರಕ್ಕೆ ಕಳಸವಿಟ್ಟಂತೆ ಆಗಿದೆ. ನಿರ್ಮಾಪಕ ಎಸ್.ವಿ.ನಾರಾಯಣ್ ಎರಡನೆ ಪ್ರಯತ್ನದಲ್ಲಿ ಜನರು ಇಷ್ಟಪಡುವ ಚಿತ್ರ ನೀಡಿದ್ದಾರೆ. 

 

 

Copyright@2018 Chitralahari | All Rights Reserved. Photo Journalist K.S. Mokshendra,