Mane Maratakkide.Film Reviews.

Friday, November 15, 2019

 

ದೆವ್ವದ ಮನೆಯೊಳಗೆ ನಗುವಿನ ಅರಮನೆ!

 

 

ಚಿತ್ರ: ಮನೆ ಮಾರಾಟಕ್ಕಿದೆ

ತಾರಾಗಣ: ಚಿಕ್ಕಣ್ಣ, ನಟರಂಗ ರಾಜೇಶ್, ಕುರಿ ಪ್ರತಾಪ್, ರವಿಶಂಕರ್ ಗೌಡ, ಸಾಧು ಕೋಕಿಲ ಮತ್ತು ಶ್ರುತಿ ಹರಿಹರನ್ ಮೊದಲಾದವರು.

ನಿರ್ದೇಶನ: ಮಂಜು ಸ್ವರಾಜ್

ನಿರ್ಮಾಪಕ: ಎಸ್.ವಿ ಬಾಬು

 

ಶ್ರವಣ ದುಬೈನಲ್ಲಿ ನೆಲೆಸಿರುತ್ತಾನೆ. ಊರಲ್ಲಿನ ತನ್ನ ಮನೆಯನ್ನು ಮಾರಾಟಕ್ಕೆ  ಇಟ್ಟಿರುತ್ತಾನೆ. ಆದರೆ ಆ ಮನೆಯನ್ನು ಕೊಳ್ಳಲು ಬರುವವರೆಲ್ಲ ಅದೊಂದು ದೆವ್ವದ ಮನೆ ಎನ್ನುವ ಕಾರಣ ನೀಡಿ ವಾಪಾಸು ಹೋಗುತ್ತಾರೆ. ಇದನ್ನು ಖುದ್ದಾಗಿ ಪರಿಹರಿಸಲು ಶ್ರವಣ ಬೆಂಗಳೂರಿಗೆ ಬರುತ್ತಾನೆ. ಆ ಮನೆಯಲ್ಲಿ ದೆವ್ವಗಳಿಲ್ಲ ಎಂದು ಸಾಬೀತು ಮಾಡಲು ಅಲ್ಲಿ ವಾಸಿಸುವವರಿಗಾಗಿ ಹುಡುಕಾಡುತ್ತಾನೆ. ಆದರೆ ಹಾಗೆ ಅಲ್ಲಿ ವಾಸಿಸಿದರೆ ದುಡ್ಡು ಕೊಡುತ್ತಾರೆ ಎನ್ನುವ ಕಾರಣಕ್ಕಾಗಿ ನಾಲ್ವರು ಮುಂದೆ ಬರುತ್ತಾರೆ. ಅವರೇ ರಘುಪತಿ, ರಾಘವ, ರಾಜ ಮತ್ತು ರಾಮ. ಅವರು ಆ ಮನೆಯೊಳಗೆ ವಾಸಿಸಲು ಆರಂಭಿಸಿದ ಬಳಿಕ ನಡೆಯುವ ವಿಚಿತ್ರಗಳೇ `ಮನೆ ಮಾರಾಟಕ್ಕಿದೆ’ ಚಿತ್ರದ ತುಂಬ ಆವರಿಸಿಕೊಂಡಿದೆ. ಆದರೆ ಅವೆಲ್ಲವನ್ನು ದಾಟಿ ಆ ವಿಚಿತ್ರಗಳಿಗೆ ಕಾರಣವೇನು ಎನ್ನುವುದನ್ನು ಕ್ಲೈಮ್ಯಾಕ್ಸ್ ಟ್ವಿಸ್ಟ್ ಮೂಲಕ ತೆರೆದಿಡಲಾಗಿದೆ.

 

ದುಬೈನಲ್ಲಿ ವಾಸಿಸುವ ಶ್ರವಣನಾಗಿ ನಟರಂಗ ರಾಜೇಶ್ ನಟಿಸಿದ್ದಾರೆ. ಸಾಮಾನ್ಯವಾಗಿ ಪೊಲೀಸ್ ಅಧಿಕಾರಿ ಪಾತ್ರಗಳಿಂದಲೇ ಗುರುತಿಸಿಕೊಂಡಿರುವ ಅವರು ಚಿತ್ರದಲ್ಲಿನ ವಿಭಿನ್ನ ಪಾತ್ರವನ್ನು ಎಂದಿನಂತೆ ತಮ್ಮದೇ ಶೈಲಿಯಲ್ಲಿ ನಿಭಾಯಿಸಿದ್ದಾರೆ. ಅರ್ಚಕ ರಾಘವ ಶಾಸ್ತ್ರಿ ,ಹೇರ್ ಸ್ಟೈಲಿಸ್ಟ್ ರಾಜ, ವಾಚ್ ಮ್ಯಾನ್ ರಾಮ ಎನ್ನುವ ಮೂವರು ಹೋಟೆಲ್ ಸಪ್ಲೈರ್ ಆಗಿರುವ ರಘುಪತಿಯ ಜತೆಗೆ ಸೇರಿ ನಡೆಸುವ ಗಲಾಟೆಗಳು ಚಿತ್ರದಲ್ಲಿ ಭರಪೂರ ಮನರಂಜನೆ ನೀಡಿವೆ. ಅದಕ್ಕೆ ರಘುಪತಿಯ ಪಾತ್ರ ನಿರ್ವಹಿಸಿದ ಚಿಕ್ಕಣ್ಣ, ಕುಡುಕ ಅರ್ಚಕನಾಗಿ ಕಾಣಿಸಿಕೊಂಡಿರುವ ಸಾಧು ಕೋಕಿಲ, ಸಿನಿಮಾದ ಪಾತ್ರಗಳನ್ನು ಅನುಸರಿಸುವ ಹೇರ್ ಸ್ಟೈಲಿಸ್ಟ್ ರಾಜನ ಪಾತ್ರಧಾರಿ ಕುರಿ ಪ್ರತಾಪ್, ರಾಮನಾಗಿ ನಟಿಸಿರುವ ರವಿಶಂಕರ ಗೌಡ ಕಾರಣವಾಗುತ್ತಾರೆ. ಡಬ್ ಸ್ಮ್ಯಾಶ್ ತಾರೆ ಪ್ರಶ್ವಿತಾ ಕೂಡ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರ ನಿರ್ವಹಿಸಿ ಗಮನ ಸೆಳೆದಿದ್ದಾಳೆ. ವೀರಬಾಹುವಾಗಿ ಕರಿಸುಬ್ಬು, ಪೊಲೀಸ್ ಅಧಿಕಾರಿಯಾಗಿ ತಬಲಾ ನಾಣಿ, ಮೋಸಗಾರನಾಗಿ ಮನದೀಪ್ ರಾಯ್, ದೆವ್ವದ ಪಾತ್ರದಲ್ಲಿ ರಾಘವೇಂದ್ರ  ಮೊದಲಾದವರು ಸಣ್ಣ ಪಾತ್ರಗಳಲ್ಲಿ ಕಾಣಿಸಿಕೊಂಡರೂ ಪ್ರೇಕ್ಷಕರು ನೆನಪಲ್ಲಿ ಇರಿಸಿಕೊಳ್ಳುವಂಥ ಪಾತ್ರಗಳಾಗಿದ್ದಾರೆ.

 

 

ದೆವ್ವಗಳ ದೃಷ್ಟಿಕೋನದಲ್ಲಿ ಆರಂಭವಾಗುವ ಮನೆಯೊಳಗಿನ ಚಿತ್ರಣ ಕತೆಗೆ ಹೊಸ ನೋಟ ಒದಗಿಸುತ್ತದೆ. ಅಪರೂಪದಲ್ಲಿ ಪರದೆಯ ಮೇಲೆ ಕಾಣಿಸಿಕೊಂಡಿರುವ ಹಿರಿಯ ನಟಿ ಸುಮಿತ್ರಾ ಬಾಬು ಮುಗ್ದತಾಯಿಯಾಗಿ ಗಮನ ಸೆಳೆಯುತ್ತಾರೆ. ಅಭಿಮಾನ್ ರಾಯ್ ಸಂಗೀತದ ಹಾಡುಗಳು ಕೇಳಿಸಿಕೊಂಡು ಹೋಗುತ್ತವೆ. ಚಿತ್ರದಲ್ಲೊಂದು ದೆವ್ವವಾಗಿ ಬರುವ ಶ್ರುತಿ ಹರಿಹರನ್ ತಮಗೆ ದೊರಕಿರುವ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ದೆವ್ವವಾಗಿ ಹೆದರಿಸುವ, ಮನುಷ್ಯಳಾಗಿದ್ದಾಗಿ ಆರ್ದ್ರತೆಯ, ಹಾಡಿನಲ್ಲಿ ಉತ್ತಮ ನೃತ್ಯಗಾತಿಯ ಭಾವವೈವಿಧ್ಯವನ್ನು ತೋರಿಸಿ ತಾವು ಎಂಥ ನಟಿ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಒಟ್ಟಿನಲ್ಲಿ ಲಾಜಿಕ್ ಗಳನ್ನು ಪಕ್ಕಕ್ಕೆ ಇರಿಸಿ ಮನರಂಜನೆಗಾಗಿ ಚಿತ್ರ ನೋಡಬಯಸುವವರು ಖಂಡಿತವಾಗಿ ನೋಡಿ ಖುಷಿ ಪಡಬಹುದಾದ ಸಿನಿಮಾ ಇದು.

Copyright@2018 Chitralahari | All Rights Reserved. Photo Journalist K.S. Mokshendra,