*ಚಾಮುಂಡೇಶ್ವರಿ ಸ್ಟುಡಿಯೋಸ್ ಸಹಕಾರದೊಂದಿಗೆ ಸಿನಿಘಮಾ ಸಂಸ್ಥೆಯಿಂದ ಪ್ರತಿಭಾ ಸಂಪದ*
*-ಆಡಿಷನ್ ಬಗ್ಗೆ ಮಾಹಿತಿ, ಸಿನಿಮಾಕ್ಷೇತ್ರ ಪ್ರವೇಶ ಬಯಸುವವರಿಗೆ ಬೃಹತ್ ವೇದಿಕೆ*
ಸಿನಿಘಮಾ ಸಂಸ್ಥೆಯ ಚಾಮುಂಡೇಶ್ವರಿ ಸ್ಟುಡಿಯೋದ ಸಂಪೂರ್ಣ ಬೆಂಬಲ ಮತ್ತು ಸಹಕಾರದೊಂದಿಗೆ ರೂಪಿಸಿರುವ ಯೋಜನೆಯೇ ಪ್ರತಿಭಾ ಸಂಪದ. ಒಂದು ಚಿತ್ರ ನಿರ್ಮಾಣಕ್ಕೆ ಕಲಾವಿದರು, ತಂತ್ರಜ್ಷರು, ಸಂಸ್ಥೆಗಳು ಎಲ್ಲರೂ ಬೇಕು. ಈ ಎಲ್ಲ ವಲಯದಲ್ಲಿ ವಿನೂತನ ಪ್ರತಿಭೆಗಳನ್ನು ಗುರುತಿಸಿ ಶೋಧಿಸಿ, ಚಿತ್ರಜಗತ್ತಿಗೆ ಅವರನ್ನು ಪರಿಪಕ್ವವಾಗಿ ಪರಿಚಯಿಸುವ ಕಾರ್ಯಕ್ರಮವಿದು. ಸಿನಿಘಮಾ ಸಂಸ್ಥೆಯು 100 ಕಿರುಚಿತ್ರಗಳನ್ನು ನಿರ್ಮಿಸಲು ಯೋಜಿಸಿದೆ. ಅಲ್ಲಿನ ಪ್ರತಿಭೆಗಳನ್ನು ಬಳಸಿಕೊಂಡು ಆನಂತರದ ದಿನಗಳಲ್ಲಿ 10 ಸಿನಿಮಾ ಮಾಡಲು ಯೋಜಿಸಿದೆ. ಈ ಯೋಜನೆಗೆ ಯಶಸ್ವಿ 50ನೇ ವರ್ಷಾಚರಣೆಯಲ್ಲಿರುವ ಚಾಮುಂಡೇಶ್ವರಿ ಸ್ಟುಡಿಯೋ ಸಕಲ ರೀತಿಯಲ್ಲಿ ನೆರವು ನೀಡಲು ಕೈ ಜೋಡಿಸಿದೆ ಎಂದು ಸಿನಿಘಮದ ಮುಖ್ಯಸ್ಥ ಎಂ.ಎಲ್ ಪ್ರಸನ್ನ ತಿಳಿಸಿದರು.
ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ 100 ಕಿರುಚಿತ್ರಗಳಲ್ಲಿ 10 ಕಿರುಚಿತ್ರಗಳನ್ನು ಕನ್ನಡದ ಹೆಸರಾಂತ ನಿರ್ದೇಶಕರು ನಿರ್ದೇಶಿಸಲಿದ್ದಾರೆ. ಆ ಮೂಲಕ ಹೊಸಬರಿಗೆ ಗುಣಮಟ್ಟವನ್ನು ಉಳಿದ 90 ಕಿರುಚಿತ್ರಗಳನ್ನು ನಿರ್ಮಿಸಲು 45 ತಂಡಗಳನ್ನು ಆಯ್ಕೆ ಮಾಡಲಾಗುತ್ತದೆ. ಪ್ರತಿ ತಂಡಕ್ಕೆ 2 ಕಿರುಚಿತ್ರದ ಜವಾಬ್ದಾರಿ ನೀಡಲಾಗುತ್ತದೆ. ಅದರಲ್ಲೊಂದು ಮನರಂಜನಿಯವಾದರೆ, ಇನ್ನೊಂದು ಮನಮುಟ್ಟುವಂಥ ಪ್ರೀತಿ, ಸಹನೆ, ಸಾಮಾಜಿಕ ತಲ್ಲಣದಂಥ ಕತೆಯನ್ನು ಆಯ್ದುಕೊಳ್ಳಬೇಕು. 100 ಕಿರುಚಿತ್ರಗಳಲ್ಲಿ ಆಯ್ದ 60 ಕಿರುಚಿತ್ರೋತ್ಸವ ಜುಲೈ ಕೊನೇ ವಾರದಲ್ಲಿ 6 ದಿನಗಳ ಕಾಲ ಪ್ರದರ್ಶಿಸಲಾಗುವುದು. ಚಿತ್ರರಂಗದ ಗಣ್ಯರು ಇದರಲ್ಲಿ ಭಾಗವಹಿಸಿಲಿದ್ದಾರೆ. ಕೊನೇ ಏಳನೆ ದಿನದ ಸಮಾರೋಪ ಸಮಾರಂಭದಲ್ಲಿ ಆಯ್ದ 10 ತಂಡಗಳಿಗೆ ಚಲನಚಿತ್ರವನ್ನು ನಿರ್ಮಾಣದ ಘೋಷಣೆ ಮಾಡಲಾಗುತ್ತದೆ. ಹಾಗಾಗಿ ಸಿನಿಘಮಾದ ಜಾಲತಾಣದಲ್ಲಿ ಈಗಲೇ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಿ ಎಂದರು.
ಅದೇ ರೀತಿ ಚಾಮುಂಡೇಶ್ವರಿ ಸ್ಟುಡಿಯೋದ ಮುಖ್ಯಸ್ಥ ಶಡಗೋಪನ್ ಮಾತನಾಡಿ, ಕಳೆದ ಎರಡು ವರ್ಷದ ಹಿಂದಯೇ ಒ ಬಗ್ಗೆ ನನ್ನ ಮತ್ತು ಪ್ರಸನ್ನ ಅವರ ನಡುವೆ ಚರ್ಚೆಯಾಗಿತ್ತು. ಒಂದೊಳ್ಳೆ ಕಾನ್ಸೆಪ್ಟ್ ಸಿದ್ಧಪಡಿಸುವಂತೆ ಹೇಳಿದ್ದೆ. ಅದರಂತೆ ಒಂದು ಅದ್ಬುತವಾದ ಪರಿಕಲ್ಪನೆಯ ಜತೆಗೆ ಆಗಮಿಸಿದ್ದಾರೆ. ಸಿನಿಘಮದಲ್ಲಿ ಕೇವಲ ಸಿನಿಮಾ ಅಷ್ಟೇ ಅಲ್ಲದೆ, ಉದ್ಯೋಗಾವಕಾಶ ಮತ್ತು ಸಿನಿಮಾ ಆಡಿಷನ್ಗಳ ಬಗ್ಗೆಯೂ ಮಾಹಿತಿ ಇರಲಿದೆ. ಬೇಕಾದವರು ನೇರವಾಗಿ ಅವರನ್ನೇ ಸಂಪರ್ಕಿಸಬಹುದಾಗಿದೆ. ಒಟ್ಟಾರೆಯಾಗಿ ಒಂದೇ ವೇದಿಕೆಯಲ್ಲಿ ಸಿನಿಮಾ ಸೇರಿ ಹಲವು ವಿಚಾರಗಳ ಗುಚ್ಛ ಇಲ್ಲಿ ದೊರಕಲಿದೆ ಎಂದರು.
ಸಿನಿಘಮಾದ ಮತ್ತೋರ್ವ ವೆಂಕಟ್ ಗೌಡ ಮಾತನಾಡಿ, ಈ ಮೊದಲು ಒಂದು ಮ್ಯಾಗ್ಜೀನ್ ಮಾಡುವ ಬಗ್ಗೆ ಯೋಚಿಸಿದ್ದೇವು. ಆದರೆ, ಪ್ರಸನ್ನ ಅವರ ವಿಷನ್ ಮಾತ್ರ ನೇರವಾಗಿತ್ತು. ಅವರು ಏನೆಲ್ಲ ಅಂದುಕೊಂಡಿದ್ದರೋ ಅದನ್ನೇ ಸಿನಿಘಮ ಮೂಲಕ ಹೊರತಂದಿದ್ದಾರೆ. ಇಲ್ಲಿ ಕೇವಲ ಕಲಾವಿದರ ಮಾಹಿತಿಯಷ್ಟೇ ಅಲ್ಲ ತಾಂತ್ರಿಕ ವರ್ಗದವರ ಮಾಹಿತಿಯನ್ನೂ ಸೇರಿಸಲಿದ್ದೇವೆ ಎಂದರು.
ಇನ್ನು ನಿರ್ದೇಶಕ ಶಶಾಂಕ್ ಈ ಕಾನ್ಸೆಪ್ಟ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅತಿಥಿಯಾಗಿ ಆಗಮಿಸಿ ಮಾತನಾಡಿದ ಅವರು, ನಾನು 10 ವರ್ಷದಿಂದ ಅನುಭವಿಸುತ್ತಿರುವ ಯಾತನೆ ಇದು. ನನ್ನ ಬಹುತೇಕ ಸಿನಿಮಾಗಳಲ್ಲಿ ಹೊಸಬರೇ ಕಾಣಿಸುತ್ತಾರೆ. ಆದರೆ, ಹೊಸಬರನ್ನು ಹುರುಕುವುದೇ ದೊಡ್ಡ ಸವಾಲು. ಎಲ್ಲವೂ ಮೊದಲಿನಂತಿಲ್ಲ. ಹರಿದು ಹಂಚಿಹೋಗಿದೆ. ನಮ್ಮ ಕನ್ನಡದಲ್ಲಿ ಕಾಸ್ಟಿಂಗ್ ನಿರ್ದೇಶಕರಿಲ್ಲ. ನಮಗೆ ಬೇಕಾದವರನ್ನು ನಾವೇ ಆಯ್ದುಕೊಳ್ಳಬೇಕು. ಇಂಥ ಸಮಯದಲ್ಲಿ ಮೆಡಿಸಿನ್ ರೀತಿಯಲ್ಲಿ ಹೊಸ ಹೊಸ ಪ್ರತಿಭೆಗಳನ್ನು ಸಿನಿಘಮಾ ಮೂಲಕ ಪರಿಚಯಿಸಬಹುದು. ಇಡೀ ತಂಡದ ಕನಸು ನನಸಾಗಲಿ ಎಂದರು.
*50ನೇ ವರ್ಷಾಚರಣೆಯ ಸಂಭ್ರಮದಲ್ಲಿ ಚಾಮುಂಡೇಶ್ವರಿ ಸ್ಟುಡಿಯೋ*
ಚಾಮುಂಡೇಶ್ವರಿ ಸ್ಟುಡಿಯೋ ಕಳೆದ 50 ವರ್ಷಗಳಿಂದ ಕನ್ನಡ ಸಿನಿಮಾರಂಗಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದೆ. ಇದೀಗ ಇದೇ ಸ್ಟುಡಿಯೋ 5 ದಶಕ ಪೂರೈಸಿದ ಹಿನ್ನೆಲೆಯಲ್ಲಿ ಈ ವಿಶೇಷ ಕಾರ್ಯಕ್ಕೆ ಇಳಿದಿದ್ದು, ಪ್ರತಿಭಾ ಸಂಪದಕ್ಕೆ ಮುಂದಾಗಿದೆ.
*ಸಿನಿಘಮಾದಲ್ಲಿ ಏನೆಲ್ಲ ಇರಲಿದೆ...*
ಸಿನಿಮಾ ಜಗತ್ತಿನ ಹಲವು ಆಯಾಮಗಳನ್ನು ನಿಮ್ಮ ಮುಂದೆ ತೆರೆದಿಡಲು ಮನರಂಜನೆ, ಸಿನಿಮಾ ಟ್ರೇಲರ್, ಸಿನಿಮಾ ಮತ್ತು ಕಿರುತೆರೆ ಸುದ್ದಿಗಳು, ಚಿತ್ರ ಸಂಚಯ, ತಾರೆಯರ ಕುರಿತು ಮಾಹಿತಿ, ಗಾಸಿಪ್ ಸೇರಿ ಹಲವು ವಿಚಾರಗಳ ಸಿನಿಘಮಾದಲ್ಲಿರಲಿದೆ. ಸಿನಿಮಾರಂಗ ಪ್ರವೇಶ ಬಯಸುವವರಿಗೆ ಸೇತುವೆಯಾಗಿ, ದಾರಿದೀಪವಾಗಿ ಮಾಹಿತಿ ಒದಗಿಸಲಿದೆ.