"ಲಂಕೆ" ಹಾಡು ಬಿಡುಗಡೆ ಮಾಡಿ ಶುಭ ಕೋರಿದ ಡಾಲಿ ಧನಂಜಯ.
ಲೂಸ್ ಮಾದ ಯೋಗೇಶ್ ಅಭಿನಯದ "ಲಂಕೆ" ಚಿತ್ರದ ಹಾಡುಗಳನ್ನು ಡಾಲಿ ಧನಂಜಯ ಬಿಡುಗಡೆ ಮಾಡಿದರು.
ಯೋಗಿ ನನ್ನ ಸ್ನೇಹಿತ. ಸ್ನೇಹಕ್ಕಾಗಿ ಇಲ್ಲಿಗೆ ಬಂದಿದ್ದೀನಿ. ನಾನು ಹಾಗೂ ಯೋಗಿ ಹೆಡ್ & ಬುಷ್ ಚಿತ್ರದಲ್ಲಿ ಒಟ್ಟಾಗಿ ನಟಿಸುತ್ತಿದ್ದೇವೆ. ಹಾಡುಗಳು ನೋಡಿದೆ.ತುಂಬಾ ಚೆನ್ನಾಗಿದೆ. ಚಿತ್ರ ಕೂಡ ಅಷ್ಟೇ ಚೆನ್ನಾಗಿರುತ್ತದೆ ಎಂಬ ನಂಬಿಕೆಯಿದೆ ಎಂದ ಡಾಲಿ ಧನಂಜಯ, ಸರ್ಕಾರ ಆದಷ್ಟು ಬೇಗ ೧೦೦% ಅವಕಾಶ ನೀಡಲಿ. ಕೊರೋನ ಕಡಿಮೆಯಾಗಿ ಚಿತ್ರಮಂದಿರ ತುಂಬಿ ತುಳುಕುವ ದಿನಗಳು ಬೇಗ ಬರಲಿ ಎಂದು ಆಶಿಸಿದರು.
ನಾಯಕ ಯೋಗಿ ಕೂಡ, ಆಡಿಯೋ ರಿಲೀಸ್ ಮಾಡಿಕೊಟ್ಟ ಗೆಳೆಯ ಡಾಲಿ ಅವರಿಗೆ ಧನ್ಯವಾದ ತಿಳಿಸಿ, ನಾನು ಇಷ್ಠು ಚೆನ್ನಾಗಿ ನೃತ್ಯ ಮಾಡಲು ನೃತ್ಯ ನಿರ್ದೇಶಕ ಧನು ಅವರೇ ಕಾರಣ. ಕಾರ್ತಿಕ್ ಶರ್ಮರ ಸಂಗೀತ ಅದ್ಭುತವಾಗಿದೆ. ನನ್ನ ಜೊತೆ ಅಭಿನಯಿಸಿರುವ ನಾಯಕಿಯರ ಅಭಿನಯವು ತುಂಬಾ ಚೆನ್ನಾಗಿದೆ. ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ. ನೋಡಿ ಹರಸಿ ಎಂದರು.
ನಾಯಕಿ ಕೃಷಿ ತಾಪಂಡ ಮಾತನಾಡುತಾ, ಚಿತ್ರದ ಹಾಡುಗಳನ್ನು ಕೇಳಿದೆ. ಈಗ ನೋಡಿ ಖುಷಿಯಾಗಿದೆ. ನನಗೆ ಡ್ಯಾನ್ಸ್ ಬರಲ್ಲ. ನಾನು ಇಷ್ಟು ಚೆನ್ನಾಗಿ ಡ್ಯಾನ್ಸ್ ಮಾಡಲು ಸಹಕಾರ ನೀಡಿದ, ನೃತ್ಯ ನಿರ್ದೇಶಕ ಧನು ಹಾಗೂ ನಾಯಕ ಯೋಗಿ ಅವರಿಗೆ ಧನ್ಯವಾದ ಎಂದರು.
ನನ್ನದು ಈ ಚಿತ್ರದಲ್ಲಿ ನೆಗಟಿವ್ ಶೇಡ್ ಇರುವ ಪಾತ್ರ ಹಾಗೂ ಒಂದು ಗ್ಲಾಮರಸ್ ಹಾಡಿಗೂ ಯೋಗಿ ಅವರೊಂದಿಗೆ ಹೆಜ್ಜೆ ಹಾಕಿದ್ದೇನೆ. ಚಿತ್ರ ಆರಂಭವಾದಗಿನಿಂದಲೂ ನಿರ್ದೇಶಕರು ನೀಡಿರುವ ಪ್ರೋತ್ಸಾಹಕ್ಕೆ ಆಭಾರಿ ಎನ್ನುತ್ತಾರೆ ನಟಿ ಕಾವ್ಯ ಶೆಟ್ಟಿ.
ನಾಗಭರಣರ ನಿರ್ದೇಶನದ ನೀಲ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೊಂದಿಗೆ ಸ್ವಾಮಿ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ, ಗಾಯತ್ರಿ ಜಯರಾಂ ಈ ಚಿತ್ರದಲ್ಲಿ ನಟಿಸಿದ್ದಾರೆ.
ಹಲವು ವರ್ಷಗಳ ನಂತರ ನಾನು ಇಲ್ಲಿ ನಟಿಸಿದ್ದೇನೆ. ಈವರೆಗೂ ಮಾಡದ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಅವಕಾಶ ನೀಡಿದ ನಿರ್ದೇಶಕರಿಗೆ ವಂದನೆ ಎನ್ನುತ್ತಾರೆ ಗಾಯತ್ರಿ ಜಯರಾಂ.
ನನ್ನ ಪಾತ್ರದ ಬಗ್ಗೆ ನಿರ್ದೇಶಕರು ಇಲ್ಲಿಯತನಕ ಎಲ್ಲೂ ಬಿಟ್ಟು ಕೊಟ್ಟಿಲ್ಲ. ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಒಂದೇ ಒಂದು ನೋವಿನ ಸಂಗತಿ ಎಂದರೆ ನಮ್ಮೊಂದಿಗೆ ಈ ಚಿತ್ರದಲ್ಲಿ ನಟಿಸಿದ್ದ ಸಂಚಾರಿ ವಿಜಯ್ ಈಗ ಇಲ್ಲದಿರುವುದು ಎಂದು ಬೇಸರ ವ್ಯಕ್ತಪಡಿಸಿದರು ಎಸ್ಟರ್ ನರೋನ.
.
ಇವತ್ತು ಆಡಿಯೋ ರಿಲೀಸ್. ಚಿತ್ರದ ಹಾಡುಗಳು ಮಾತನಾಡುವ ಸಮಯ. ಚಿತ್ರದ ಬಗ್ಗೆ ಇಲ್ಲಿಯವರೆಗೆ ಸಾಕಷ್ಟು ಮಾಹಿತಿ ನೀಡಿದ್ದೀನಿ. ಇನ್ನೂ ಏನಿದ್ದರೂ ಕೆಲವೇ ದಿನಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ . ನೀವು ನೋಡಿ ಪ್ರೋತ್ಸಾಹಿಸಿ ಎಂದರು ನಿರ್ದೇಶಕ ರಾಮಪ್ರಸಾದ್.
ಸಾಹಿತಿ ಗೌಸ್ ಫಿರ್ ಹಾಗೂ ವಿತರಕ ಮಾರ್ಸ್ ಸುರೇಶ್ ಅವರು ತಮ್ಮ ಅನುಭವ ಹಂಚಿಕೊಂಡು, ಚಿತ್ರತಂಡಕ್ಕೆ ಶುಭಕೋರಿದರು.
ರಾಮಪ್ರಸಾದ್ ಎಂ.ಡಿ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ರಾಮ ಪ್ರಾಸಾದ್ ಹಾಗೂ ಗುರುರಾಜ ದೇಸಾಯಿ ಸಂಭಾಷಣೆ ಬರೆದಿದ್ದಾರೆ.
ದಿ ಗ್ರೇಟ್ ಎಂಟರ್ ಟೈನರ್ ಲಾಂಛನದಲ್ಲಿ ಪಟೇಲ್ ಶ್ರೀನಿವಾಸ್(ನಾಗವಾರ) ಹಾಗೂ ಸುರೇಖ ರಾಮಪ್ರಸಾದ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ.
ರಮೇಶ್ ಬಾಬು ಛಾಯಾಗ್ರಹಣ, ಶಿವರಾಜ್ ಮೇಹು ಸಂಕಲನ, ರವಿವರ್ಮ, ಪಳನಿರಾಜ್, ಅಶೋಕ್ ಸಾಹಸ ನಿರ್ದೇಶನ ಹಾಗೂ ಧನಂಜಯ್, ಮೋಹನ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.
ಲೂಸ್ ಮಾದ ಯೋಗೇಶ್ ಚಿತ್ರದ ನಾಯಕನಾಗಿ ಅಭಿನಯಿಸಿದ್ದು, ಇತ್ತೀಚೆಗೆ ನಿಧನರಾದ ಸಂಚಾರಿ ವಿಜಯ್ ಸಹ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಕೃಷಿ ತಾಪಂಡ, ಕಾವ್ಯ ಶೆಟ್ಟಿ, ಶರತ್ ಲೋಹಿತಾಶ್ವ, ಶೋಭ್ ರಾಜ್, ಡ್ಯಾನಿ ಕುಟ್ಟಪ್ಪ, ಸುಚೇಂದ್ರ ಪ್ರಸಾದ್, ವಾಣಿಶ್ರೀ, ಗಾಯಿತ್ರಿ ಜಯರಾಂ, ಎಸ್ಟರ್ ನರೋನ, ಪ್ರಶಾಂತ್ ಸಿದ್ದಿ, ಆದ್ಯ ನಾಯಕ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.