*ನಿಖಿಲ್ ಕುಮಾರ್ ಅಭಿನಯದ "ರೈಡರ್" ಚಿತ್ರದ ಹಾಡಿನ ಲೋಕಾರ್ಪಣೆ.*
"ಸೀತಾರಾಮ ಕಲ್ಯಾಣ" ಚಿತ್ರದ ನಂತರ ನಿಖಿಲ್ ಕುಮಾರ್ ಅವರು ನಟಿಸಿರುವ "ರೈಡರ್" ಚಿತ್ರದ ಹಾಡೊಂದರ ಬಿಡುಗಡೆ ಸಮಾರಂಭ ಇತ್ತೀಚೆಗೆ ಅದ್ದೂರಿಯಾಗಿ ನೆರವೇರಿತು.
ಬಹದ್ದೂರ್ ಚೇತನ್ ಕುಮಾರ್ ಬರೆದಿರುವ ಈ ಹಾಡನ್ನು ಅರ್ಮಾನ್ ಮಲ್ಲಿಕ್ ಸೊಗಸಾಗಿ ಹಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.
ಲಹರಿ ಮ್ಯೂಸಿಕ್ ಮೂಲಕ ಬಿಡುಗಡೆಯಾಗಿರುವ ಈ ಹಾಡು ಯೂಟ್ಯೂಬ್ ನಲ್ಲಿ ಭಾರೀ ಸದ್ದು ಮಾಡುತ್ತಿದೆ.
ನನಗೆ ವೇದಿಕೆ ಹತ್ತಿದ ಮೇಲೆ ಏಕೋ ಡವಡವ ಎನಲ್ಲೂ ಶುರುವಾಗಿದೆ. ನಾವು ಸಿನಿಮಾ ಸಿದ್ದ ಮಾಡಿರುತ್ತೇವೆ. ಪ್ರೇಕ್ಷಕರ ಮುಂದಿಡುವ ಸಮಯ ಬಂದಾಗ , ನಾವು ಅವರಿಗೆ ಬೇಕಾದ ಹಾಗೆ ಸಿನಿಮಾ ಮಾಡಿದ್ದೀವಾ? ಎಂಬ ಪ್ರಶ್ನೆ ಕಾಡುತ್ತದೆ. ಕಾಡಲೂ ಬೇಕು. ಆದರೂ ನಮ್ಮ ತಂಡಕ್ಕೆ ಒಳ್ಳೆಯ ಸಿನಿಮಾ ಮಾಡಿದ್ದೇವೆ ಎಂಬ ವಿಶ್ವಾಸವಿದೆ. ಇಂದಿನ ಆರೋಗ್ಯಕರ ಪೈಪೋಟಿಯಲ್ಲಿ ನಮ್ಮನ್ನು ಗುರುತಿಸಬೇಕಾದರೆ ನಾವು ಹೆಚ್ಚಿನ ಶ್ರಮ ಪಡಬೇಕು. ಆಗ ಖಂಡಿತಾ ಜನ ಒಪ್ಪಿಕೊಳ್ಳುತ್ತಾರೆ ಎಂದರು ನಾಯಕ ನಿಖಿಲ್ ಕುಮಾರ್.
ಸೀತಾರಾಮ ಕಲ್ಯಾಣ ಚಿತ್ರದ ಸಮಯದಲ್ಲಿ ಈ ರೀತಿಯ ಕಥೆ ಬೇಕು ಎಂದು ನಿರ್ದೇಶಕ ವಿಜಯಕುಮಾರ್ ಕೊಂಡ ಅವರಿಗೆ ಹೇಳಿದ್ದೆ. ಹಾಗೆ ನಿರ್ದೇಶಕರು ಉತ್ತಮವಾಗಿ ಚಿತ್ರ ಮೂಡಿಬರುವಂತೆ ಮಾಡಿದ್ದಾರೆ ಎಂದ ನಿಖಿಲ್ ಕುಮಾರ್ ಚಿತ್ರದ ಎಲ್ಲಾ ಕಲಾವಿದರ ಹಾಗೂ ತಂತ್ರಜ್ಞರ ಕಾರ್ಯವೈಖರಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
ಅಲ್ಲದೇ ಸದ್ಯದಲ್ಲೇ ನಮ್ಮ ಸಂಸ್ಥೆ ಮೂಲಕ ಉತ್ತಮ ಚಿತ್ರಗಳನ್ನು ನಿರ್ಮಾಣ ಮಾಡುತ್ತೇವೆ ಎಂಬ ವಿಷಯವನ್ನು ನಿಖಿಲ್ ಕುಮಾರ್ ತಿಳಿಸಿದರು.
ಕನ್ನಡದಲ್ಲಿ ಇದು ನನ್ನ ಮೊದಲ ಚಿತ್ರ. ಕಥೆ ಇಷ್ಟವಾಯಿತು. ನಾನು ಇದರಲ್ಲಿ ಸೌಮ್ಯ ಎಂಬ ಪಾತ್ರ ನಿರ್ವಹಿಸುತ್ತಿದ್ದೀನಿ. ಎಲ್ಲರ ಪ್ರೋತ್ರಾಹವಿರಲಿ ಎಂದರು ನಾಯಕಿ ಕಾಶ್ಮೀರ ಪರದೇಶಿ.
ನಿಖಿಲ್ ಕುಮಾರ್ ಅವರು ಕಥೆ ಹೀಗೆ ಇರಲಿ ಎಂದರು. ನಾನು ಸಿದ್ದ ಮಾಡಿಕೊಂಡು ಅವರಿಗೆ ಹೇಳಿದೆ. ಚಿತ್ರ ಶುರುವಾಯಿತು. ಈಗ ಬಿಡುಗಡೆ ಹಂತಕ್ಕೆ ಬಂದಿದೆ. ನಮ್ಮ ಚಿತ್ರದಲ್ಲಿ ಆಕ್ಷನ್, ಲವ್, ಎಮೋಷನಲ್ ಎಲ್ಲವೂ ಇದೆ. ನನಗೆ ಸಹಕಾರ ನೀಡಿದ ನಿರ್ಮಾಪಕರಿಗೆ, ನಿಖಿಲ್ ಅವರಿಗೆ ಹಾಗೂ ಇಡೀ ತಂಡಕ್ಕೆ ಧನ್ಯವಾದ ಎಂದರು ನಿರ್ದೇಶಕ ವಿಜಯ್ ಕುಮಾರ್ ಕೊಂಡ.
ನಿಖಿಲ್ ಕುಮಾರ್ ಅವರು ಸಾಕಷ್ಟು ಕಥೆಗಳನ್ನು ಕೇಳಿದ್ದರು. ವಿಜಯ್ ಕುಮಾರ್ ಅವರು ತೆಲುಗಿನಲ್ಲಿ ಸಾಕಷ್ಟು ಹಿಟ್ ಚಿತ್ರ ಕೊಟ್ಟಿದ್ದಾರೆ. ಈ ಹಿಂದಿನ ಚಿತ್ರದ ಚಿತ್ರೀಕರಣ ಸಮಯದಲ್ಲಿ ವಿಜಯ್ ಕುಮಾರ್ ಅವರಿಗೆ ಈ ರೀತಿಯ ಕಥೆ ಬೇಕು ಎಂದು ಹೇಳಿದಾಗ ಸಿದ್ದ ಮಾಡಿಕೊಂಡು ಬಂದರು. ನಾನು ಹಾಗೂ ಲಹರಿ ಚಂದ್ರು ನಿರ್ಮಾಣಕ್ಕೆ ಮುಂದಾಗಿ ನಿಖಿಲ್ ಅವರ ಬಳಿ ಹೋಗಿ ನೀವು ನಾಯಕರಾಗಬೇಕೆಂದು ಕೇಳಿದಾಗ ಒಪ್ಪಿಕೊಂಡರು. ನಿಖಿಲ್ ಕುಮಾರ್ ಸೇರಿದಂತೆ ಇಡೀ ತಂಡದ ಸಹಕಾರದಿಂದ ನಮ್ಮ ಚಿತ್ರ ಉತ್ತಮವಾಗಿ ಮೂಡಿಬಂದಿದೆ. ಸದ್ಯದಲ್ಲೇ ತೆರೆಗೆ ಬರಲಿದೆ ಎಂದರು ನಿರ್ಮಾಪಕ ಸುನೀಲ್.
ನಿಖಿಲ್ ಕುಮಾರ್ ಅವರ ಅಭಿನಯ ತುಂಬಾ ಚೆನ್ನಾಗಿದೆ. ದೊಡ್ಡ ಕುಟುಂಬದಿಂದ ಬಂದಿದ್ದರೂ ಅವರ ಸರಳತೆ ನಿಜಕ್ಕೂ ಎಲ್ಲರಿಗೂ ಮಾದರಿ.
ನಮ್ಮ ಅಣ್ಣ ಮನೋಹರ್ ನಾಯ್ಡು ಅವರ ಮಗ ಚಂದ್ರು ಹಾಗೂ ಸುನೀಲ್ ಸೇರಿ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಇನ್ನೂ ಎರಡೂ ಹಾಡುಗಳು ಸದ್ಯದಲ್ಲೇ ಬಿಡುಗಡೆ ಮಾಡುತ್ತೇವೆ ಎಂದರು ಲಹರಿ ವೇಲು.
ಮನೋಹರ್ ನಾಯ್ಡು ಅವರು ಚಿತ್ರತಂಡಕ್ಕೆ ಶುಭ ಕೋರಿದರು.
ನಿಖಿಲ್ ಅವರ ಅವರ ಅಭಿನಯ ಚೆನ್ನಾಗಿದೆ. ಪ್ರಧಾನಮಂತ್ರಿಗಳ ಮೊಮ್ಮಗ, ಮುಖ್ಯಮಂತ್ರಿಗಳ ಮಗನಾಗಿದರೂ ಎಲ್ಲರೊಡನೆ ಅವರು ಬೆರೆಯುವ ರೀತಿ ನಿಜಕ್ಕೂ ಶ್ಲಾಘನೀಯ ಎಂದರು ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಎಂ.ಎಲ್.ಸಿ ಹಾಗೂ ಸಾಯಿಗೋಲ್ಡ್ ಪ್ಯಾಲೆಸ್ ಮಾಲೀಕರಾದ ಶರವಣ.
ಚಿತ್ರದಲ್ಲಿ ಅಭಿನಯಿಸಿರುವ ಕೆ.ಜಿ.ಎಫ್ ಖ್ಯಾತಿಯ ಗರುಡ ರಾಮ್, ಶಿವರಾಜ ಕೆ.ಆರ್.ಪೇಟೆ, ಮಂಜು ಪಾವಗಡ, ಅನುಷಾ ರೈ, ಅರ್ಜುನ್ ಗೌಡ, ನರಸಿಂಹ ಜಾಲಹಳ್ಳಿ ಸೇರಿದಂತೆ ಚಿತ್ರದಲ್ಲಿ ಅಭಿನಯಿಸಿರುವ ಕಲಾವಿದರು, ಛಾಯಾಗ್ರಹಕ ಶ್ರೀಶ ಕುದುವಳ್ಳಿ, ನೃತ್ಯ ನಿರ್ದೇಶಕ ಭೂಷಣ್ ಹಾಗೂ ಸಾಹಸ ನಿರ್ದೇಶಕ ಅರ್ಜುನ್ ಹಾಗೂ ಸಮಾರಂಭಕ್ಕೆ ಅತಿಥಿಗಳಾಗಿ ಆಗಮಿಸಿದ್ದ ಅನೇಕ ಗಣ್ಯರು "ರೈಡರ್" ಬಗ್ಗೆ ಮಾತುಗಳಾಡಿದರು.