*"ಫಿಸಿಕ್ಸ್ ಟೀಚರ್"* ಆಗಿ ಬರುತ್ತಿದ್ದಾರೆ *ಸುಮುಖ* .
ಹಲವು ವರ್ಷಗಳಿಂದ ಕಿರುತೆರೆ ಹಾಗು ಹಿರಿತೆರೆಯ ಸಾಕಷ್ಟು ಧಾರಾವಾಹಿ ಹಾಗೂ ಚಲನಚಿತ್ರಗಳಲ್ಲಿ ಅಭಿನಯಿಸಿರುವ ಶಶಿಕುಮಾರ್ ಹಾಗೂ ನಂದಿತ ಯಾದವ್ ಪುತ್ರ ಸುಮುಖ.
ಈ ಹಿಂದೆ ಅವರ ತಾಯಿ ನಂದಿತ ಯಾದವ್ ನಿರ್ದೇಶನದ "ರಾಜಸ್ಥಾನ್ ಡೈರೀಸ್" ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ್ದ ಅನುಭವ ಸುಮುಖ ಅವರಿಗಿದೆ. ಈಗ ಸುಮುಖ "ಫಿಸಿಕ್ಸ್ ಟೀಚರ್" ಎಂಬ ವಿಭಿನ್ನ ಕಥೆಯ ಚಿತ್ರವನ್ನು ನಿರ್ದೇಶಿಸಲು ಹೊರಟಿದ್ದಾರೆ. ನಾಯಕನಾಗೂ ಅವರೆ ಅಭಿನಯಿಸುತ್ತಿದ್ದಾರೆ.
ಈ ಚಿತ್ರದ ಬಗ್ಗೆ ಮಾಹಿತಿ ನೀಡಲು ಚಿತ್ರತಂಡ ಪತ್ರಿಕಾಗೋಷ್ಠಿ ಆಯೋಜಿಸಿತ್ತು.
ಮೊದಲಿಗೆ ಚಿತ್ರದಲ್ಲಿ ನಟಿಸುತ್ತಿರುವ ಮಂಡ್ಯ ರಮೇಶ್ ಮಾತನಾಡಿದರು.
ಸುಮುಖ ನನ್ನ ಗೆಳೆಯ ಶಶಿಕುಮಾರ್ ಮಗ. ಅವನನ್ನು ಚಿಕ್ಕಂದಿನಿಂದಲೂ ಬಲ್ಲೆ. ಅದರೆ ಮೊನ್ನೆ ಒಂದು ದಿನ ಮೈಸೂರಿನ ನನ್ನ ಮನೆಗೆ ಬಂದು, ಈ ಚಿತ್ರದ ಟೀಸರ್ ತೋರಿಸಿ, ಕಥೆ ಹೇಳಿದ.
ಕಥೆ ಕೇಳಿ ನನಗೆ ಆಶ್ಚರ್ಯವಾಯಿತು. ತುಂಬಾ ಚೆನ್ನಾಗಿರುವ ಕಥೆ ಇದು. ಚಿತ್ರದ ಬಗ್ಗೆ ಅವನ ತಯಾರಿ ಕೇಳಿ ಸಂತೋಷವಾಯಿತು. ಈಗಿನ ಯುವಜನತೆ ತುಂಬಾ ಅಪ್ ಡೇಟ್ ಆಗಿರುತ್ತಾರೆ. ಅವರಿಂದ ನಮ್ಮ ಕಾಲಘಟ್ಟದವರು ತಿಳಿಯುವುದು ಸಾಕಷ್ಟಿದೆ ಎಂದು ಹೇಳಿ ಮಂಡ್ಯ ರಮೇಶ್ ಚಿತ್ರತಂಡಕ್ಕೆ ಶುಭ ಕೋರಿದರು.
ನಾನು ಈ ಹಿಂದೆ "ಯಾನ" ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮದವರನ್ನು ಭೇಟಿಯಾಗಿದ್ದೆ. ನಾನು ನಾಯಕನಾಗಿ ನಟಿಸಿರುವ "ರಾಜಸ್ಥಾನ್ ಡೈರೀಸ್" ಸಹ ಸದ್ಯದಲ್ಲೇ ಬಿಡುಗಡೆಯಾಗಲಿದೆ.
ಇನ್ನೂ ಈ ಚಿತ್ರದ ಕುರಿತು ಹೇಳಬೇಕೆಂದರೆ, ಶೀರ್ಷಿಕೆ ಹೇಳುವಂತೆ ಇದು ಟೀಚರ್ ಮತ್ತು ಶಾಲೆಗಷ್ಟೇ ಮೀಸಲಾದ ಕಥೆಯಲ್ಲ.
ಒಬ್ಬ ಬ್ಯಾಚ್ಯುಲರ್ ಫಿಸಿಕ್ಸ್ ಟೀಚರ್ ಜೀವನದಲ್ಲಿ ನಡೆಯುವ ಕಥಾಹಂದರವಿದು. ಫಿಸಿಕ್ಸ್ ನಮ್ಮ ಜೀವನದ ಮೇಲೆ ಎಷ್ಟು ಪರಿಣಾಮ ಬೀರುತ್ತದೆ ಎಂಬುದನ್ನು ಹೇಳ ಹೊರಟಿದ್ದೇನೆ. ಬ್ರಾಹ್ಮಣರ ಮನೆಯಲ್ಲಿ ಈ ಫಿಸಿಕ್ಸ್ ಟೀಚರ್ ಬೆಳೆದಿರುತ್ತಾನೆ. ಅಗಾಗ ಅವರ ಮನೆಯಲ್ಲಿ ಕೇಳಿ ಬರುತ್ತಿರುವ ಕರ್ನಾಟಕ ಶಾಸ್ತ್ರೀಯ ಸಂಗೀತ ಕೂಡ ಈ ಚಿತ್ರದ ಒಂದು ಭಾಗವಾಗಿರುತ್ತದೆ. ಒಟ್ಟನಲ್ಲಿ ಮಾಮೂಲಿ ಚಿತ್ರಗಳ ಹಾಗೆ ಅ ಸಮಯಕ್ಕೊಂದು ಹಾಡು, ಫೈಟು ಈ ರೀತಿ ಸಹಜವಾಗಿರದೆ, ಬೇರೆಯದೇ ತರಹ ನಮ್ಮ ಸಿನಿಮಾ ಇರುತ್ತದೆ. ಇದೇ ಏಳರಿಂದ ಚಿತ್ರೀಕರಣ ಆರಂಭವಾಗುತ್ತಿದೆ. ಮಾಸಾಂತ್ಯಕ್ಕೆ ಮುಗಿಯುತ್ತದೆ. ಈ ವರ್ಷದ ಕೊನಗೆ ಅಥವಾ ಹೊಸವರ್ಷದ ಆಗಮನದ ವೇಳೆ "ಫಿಸಿಕ್ಸ್ ಟೀಚರ್" ನಿಮ್ಮ ಮುಂದೆ ಹಾಜರಾಗುತ್ತಾನೆ ಎಂದರು ಚಿತ್ರದ ನಾಯಕ ಹಾಗೂ ನಿರ್ದೇಶಕ ಸುಮುಖ.
ನಾನು ಈ ಚಿತ್ರದಲ್ಲಿ ಜಲಜ ಎಂಬ ಪಾತ್ರ ಮಾಡುತ್ತಿದ್ದೇನೆ. ಸುಮುಖ "ಫಿಸಿಕ್ಸ್ ಟೀಚರ್" ಆದರೆ, ನಾನು ಸೈಕಾಲಜಿ ಟೀಚರ್. ಇದರಲ್ಲಿ ಬರೀ ಫಿಸಿಕ್ಸ್ ಅಷ್ಟೇ ಅಲ್ಲದೇ ಪ್ರೇಮಕಥೆಯೂ ಇದೆ. ಕಥೆ ಕೇಳಿ ತುಂಬಾ ಉತ್ಸುಕಳಾಗಿದ್ದೇನೆ. ಈ ಚಿತ್ರ ನೋಡಿ ಜನ ಬರಿ ಚೆನ್ನಾಗಿದೆ ಅಂತ ಹೇಳುವುದಿಲ್ಲ. ಕೆಲವರಿಗೆ, ಅರ್ಧ ಗಂಟೆ, ಕೆಲವರಿಗೆ ಒಂದು ಗಂಟೆ, ಮತ್ತೆ ಕೆಲವರಿಗೆ ದಿನಗಟ್ಟಲ್ಲೆ ನಮ್ಮ ಚಿತ್ರದ ಕಥೆ ಕಾಡಲಿದೆ ಎಂದರು ನಾಯಕಿ ಪ್ರೇರಣ ಕಂಬಂ.
ಚಿತ್ರದ ಮೂರು ಹಾಡುಗಳಿಗೆ ಸಂಗೀತ ನೀಡಿರುವ ಹಾಗೂ ಸುಮುಖ ಅವರೊಂದಿಗೆ ಸೇರಿ ಕಥೆ ಬರೆದಿರುವ ಸ್ಕಂಧ ಸುಬ್ರಹ್ಮಣ್ಯ ಸೂಕ್ಷ್ಮವಾಗಿ ಕಥೆಯ ಎಳೆ ತೆರೆದಿಟ್ಟರು..
ಛಾಯಾಗ್ರಹಕ ರಾಘು ಗ್ಯಾರಹಳ್ಳಿ, ಸಂಕಲನಕಾರ ಅಜಯ್ ಕುಮಾರ್, ವೇಷಭೂಷಣ ಮಾಡುತ್ತಿರುವ ಸಾಚಿ ರಾವಲ್, ಪ್ರಸಾಧನ ಮಾಡುತ್ತಿರುವ ಅಭಿಲಾಷ ಕುಲಕರ್ಣಿ ತಮ್ಮ ಕಾರ್ಯಗಳ ಬಗ್ಗೆ ಮಾತನಾಡಿದರು.
ಸುಮುಖ ಅವರ ತಂದೆ ಶಶಿಕುಮಾರ್ ಸಹ ಮಗನ ಪ್ರಯತ್ನಕ್ಕೆ ತಮ್ಮ ಪ್ರೋತ್ಸಾಹದ ಮಾತುಗಳ ಮೂಲಕ ಬೆನ್ನು ತಟ್ಟಿದ್ದರು.
ಸುಮುಖ ಚಿಕ್ಕವಯಸ್ಸಿನಲ್ಲೇ ತುಂಬಾ ಹಠಮಾರಿ. ಅವನ ಹಠ ಈ ರೀತಿ ತಿರುಗಿರುವುದು ಸಂತಸ ತಂದಿದೆ. ಈ ತಂಡ ಯಾವುದೇ ಹೆದರಿಕೆ ಇಲ್ಲದೆ ಪತ್ರಿಕಾಗೋಷ್ಠಿ ಎದುರಿಸುತ್ತಿರುವುದು ನೋಡಿದರೆ, ಚಿತ್ರತಂಡದಿಂದ ಉತ್ತಮವಾದದ್ದನ್ನು ಬಯಸಬಹುದು ಎಂಬ ನಂಬಿಕೆ ಬರುತ್ತಿದೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದರು ಮುಖ್ಯ ಅತಿಥಿಯಾಗಿ ಆಗಮಿಸಿದ ಹಿರಿಯ ನಟ ದತ್ತಣ್ಣ.
ಪಾಸಿಂಗ್ ಶಾಟ್ ಫಿಲ್ಮ್ ಈ ಚಿತ್ರ ನಿರ್ಮಾಣ ಮಾಡುತ್ತಿದೆ. ಸುಮುಖ, ಪ್ರೇರಣ ಕಂಬಂ, ಮಂಡ್ಯ ರಮೇಶ್ ಹಾಗೂ ರಾಜೇಶ್ ನಟರಂಗ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ಚಿತ್ರದ ಟೀಸರ್ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿ, ಅಧಿಕ ಸಂಖ್ಯೆಯಲ್ಲಿ ವೀಕ್ಷಿಣೆಯಾಗುತ್ತಿದೆ.