Chargesheet.Film Pooja.News

Saturday, February 05, 2022

588

 

ಸಸ್ಪೆನ್ಸ್ ಥ್ರಿಲ್ಲರ್ ಚಾರ್ಜ್ ಶೀಟ್ ಚಿತ್ರಕ್ಕೆ ಮುಹೂರ್ತ

 

      ಚಾರ್ಜ್ ಶೀಟ್ ಎಂದರೆ ಪೋಲೀಸ್ ಭಾಷೆಯಲ್ಲಿ ತನಿಖಾವರದಿ. ಒಂದು ಮರ್ಡರ್ ಮಿಸ್ಟ್ರಿ ಸುತ್ತ ನಡೆಯುವ ಸಸ್ಪೆನ್ಸ್, ಕ್ರೈಮ್ ಥ್ರಿಲ್ಲರ್ ಕಥಾಹಂದರ ಇಟ್ಟುಕೊಂಡು ಯುವ ಪ್ರತಿಭೆಗಳ ತಂಡವೊಂದು ಚಾರ್ಜ್ ಶೀಟ್ ಹೆಸರಿನಲ್ಲಿ  ಚಲನಚಿತ್ರವೊಂದನ್ನು ಆರಂಭಿಸಿದೆ. ಆ ಚಿತ್ರದ ಮುಹೂರ್ತ ಕಾರ್ಯಕ್ರಮ ರೇಣುಕಾಂಬ ಥಿಯೇಟರಿನಲ್ಲಿ ಕಳೆದ ಶನಿವಾರ ನೆರವೇರಿತು. ಚಿತ್ರದ ಪ್ರಥಮ ದೃಶ್ಯಕ್ಕೆ ಡಾ.ವಿ.ನಾಗೇಂದ್ರಪ್ರಸಾದ್    ಕ್ಲಾಪ್ ಮಾಡಿದರೆ, ಥ್ರಿಲ್ಲರ್ ಮಂಜು ಕ್ಯಾಮೆರಾ ಚಾಲನೆ ಮಾಡಿದರು. ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಮಿಂಚಿದ್ದ ಬಾಲಾಜಿಶರ್ಮ, ಸಾಗರ್ ಹಾಗೂ ಚೈತ್ರಾ ಕೋಟೂರ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರಕ್ಕೆ ಗುರುರಾಜ್ ಕುಲಕರ್ಣಿ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರವನ್ನು ಡಾ. ಸುನಿಲ್ ಕುಂಬಾರ್ ಅವರು ನಿರ್ಮಿಸುತ್ತಿದ್ದು, ಕಥೆಯನ್ನು ಕೂಡ ಅವರೇ ಬರೆದಿದ್ದಾರೆ. ಜೊತೆಗೆ ಪಾತ್ರವೊಂದರಲ್ಲೂ ಕಾಣಿಸಿಕೊಳ್ಳುತಿದ್ದಾರೆ.

  ಮುಹೂರ್ತದ ನಂತರ ನಡೆದ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದ ನಿರ್ಮಾಪಕ ಸುನಿಲ್ ಕುಂಬಾರ್   ಹತ್ತು ವರ್ಷಗಳ ಹಿಂದೆ ನಾನೂ ಸಹ ಮೀಡಿಯಾಗಳಲ್ಲಿ ಕೆಲಸ ಮಾಡುತ್ತಿದ್ದೆ. ಲಾಕ್‌ಡೌನ್ ಸಂದರ್ಭದಲ್ಲಿ ಹುಟ್ಟಿದ ಕಥೆಯಿದು, ಲಾಕ್‌ಡೌನ್ ಸೈಡ್‌ಎಫೆಕ್ಟ್ ಅಂತಲೂ ಹೇಳಬಹುದು, ವಿಶೇಷ ನಿರೂಪಣೆಯಿರುವ ಚಿತ್ರ. ಇದಾಗಿದ್ದು. ಸಿನಿಮಾ ನೋಡುತ್ತಿರುವವರಿಗೆ ಕಥೆ ಏನೆಂದು ಅರ್ಥವಾಗುತ್ತದೆ. ಆದರೆ ಅಲ್ಲಿರುವವರಿಗೆ ಏನು ನಡೆಯುತ್ತೆಂದು ಗೊತ್ತಿರುವುದಿಲ್ಲ. ವೆಸ್ಟ್ ಬೆಂಗಾಳದ ಉಮಾಚಕ್ರಬೋರ್ತಿ ಹಾಗೂ ಚನೈನ ಎಸ್.ಆರ್.ರಾಜನ್ ನಾವು ಮೂರು ಜನ ನಿರ್ಮಾಪಕರು ಸೇರಿ ಈ ಚಿತ್ರ ಮಾಡುತ್ತಿದ್ದೇವೆ. ಇವರಿಗೆ ಕನ್ನಡ ಭಾಷೆ ಬರದಿದ್ದರೂ ಅಭಿಮಾನದಿಂದ ನಿರ್ಮಾಣಕ್ಕೆ ಕೈ ಜೋಡಿಸಿದ್ದಾರೆ, ಆದರೆ ಸಂಪೂರ್ಣ ಕನ್ನಡದ ಕಲಾವಿದರೇ ಸೇರಿ ಮಾಡುತ್ತಿರುವ ಚಿತ್ರ ಎಂದು ವಿವರಿಸಿದರು.

    ನಿರ್ದೇಶಕ ಗುರುರಾಜ್ ಕುಲಕರ್ಣಿ ಮಾತನಾಡಿ ಈ ಚಿತ್ರದ ಕಥೆ, ಟೈಟಲ್ ನಿರ್ಮಾಪಕರದು.  ನಾನು ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದೇನೆ, ಶಾಲೆಯ ಹುಡುಗಿಯೊಬ್ಬಳ ಕೊಲೆಯಾಗಿರುತ್ತದೆ. ಆ ಕೊಲೆಯ ತನಿಖೆಯ ಸುತ್ತ ನಡೆಯುವ ಕಥೆಯೇ ಚಾರ್ಜ್ ಶೀಟ್. ಬಹಳ ದಿನಗಳಿಂದ ನನಗೆ ನಾಗೇಂದ್ರ ಅರಸ್ ಅವರ ಜೊತೆ ಕೆಲಸ ಮಾಡಬೇಕೆಂದು ಆಸೆಯಿತ್ತು. ಈ ಚಿತ್ರದಲ್ಲಿ ಅವರು   ಕ್ರೈಂ ಕಥೆಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲದೆ ನಟಿ ಸಂಜನಾ ನಾಯ್ಡು ಅವರು ಸ್ಪೆಷಲ್ ಸಿಬಿಐ ಆಫೀಸರ್ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಉತ್ತರ ಕರ್ನಾಟಕದಲ್ಲಿ ಒಳ್ಳೊಳ್ಳೇ ಕಲಾವಿದರಿದ್ದು, ಬಹುತೇಕರನ್ನು ಚಿತ್ರದಲ್ಲಿ ಬಳಸಿಕೊಳ್ಳುತ್ತಿದ್ದೇವೆ ಎಂದು ಹೇಳಿದರು. ನಾಯಕನಟ ಬಾಲಾಜಿಶರ್ಮ ಮಾತನಾಡುತ್ತ ಮೂಲತ: ನಾನೊಬ್ಬ ಫೋಟೋಗ್ರಾಫರ್, ಹಲವಾರು ಸೀರಿಯಲ್‌ಗಳಲ್ಲಿ ಅಭಿನಯಿಸಿದ್ದು, ಇದರಲ್ಲಿ ಪೋಲೀಸ್ ಪಾತ್ರ ಮಾಡುತ್ತಿದ್ದೇನೆ. ಈ ಹಿಂದೆ ಸಾಮರ್ಥ್ಯ ಚಿತ್ರದಲ್ಲಿ ಸುನಿಲ್ ಅವರ ಜೊತೆ ಅಭಿನಯಿಸಿದ್ದೆ ಎಂದರು. ನಾಯಕಿ ಚೈತ್ರಾ ಕೋಟೂರ್ ಮಾತನಾಡಿ ಮೊದಲಬಾರಿಗೆ ಪೋಲೀಸ್ ಇನ್‌ಸ್ಪೆಕ್ಟರ್ ಪಾತ್ರ ಮಾಡುತ್ತಿದ್ದೇನೆ, ಒಂದು ತನಿಖಾ ವರದಿಯನ್ನು ಹೇಗೆ ತಯಾರಿಸ್ತಾರೆ ಎಂಬುದನ್ನು ಎಳೆಎಳೆಯಾಗಿ ಈ ಚಿತ್ರದಲ್ಲಿ ಬಿಚ್ಚಿಡುತ್ತಿದ್ದೇವೆ. ಗುರುರಾಜ್  ಕುಲಕರ್ಣಿ ಒಬ್ಬ ಸೆನ್ಸಿಬಲ್ ಡೈರೆಕ್ಟರ್ ಎಂದು ಹೇಳಿದರು. ಮತ್ತೊಬ್ಬನಟ ಸಾಗರ್ ಮಾತನಾಡಿ ಚಿತ್ರದಲ್ಲಿ ನಾನೂ ಸಹ ಪೋಲೀಸ್ ಆಗಿದ್ದು, ಥ್ರಿಲ್ಲರ್ ಮಂಜು ಅವರ ಜೊತೆ ಕೆಲಸ ಮಾಡುತ್ತಿರುವುದಕ್ಕೆ  ಖುಷಿಯಾಗ್ತಿದೆ ಎಂದರು. ಈಗಾಗಲೇ ೨೫೦೦ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೆಲಸ ಮಾಡಿರುವ  ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಮಾತನಾಡಿ ಸಾಧಿಸಬೇಕು ಎನ್ನುವ ಫೈರ್ ಇರುವ ತಂಡ. ಈ ಚಿತ್ರದಲ್ಲಿ ೨ ಫೈಟ್ಸ್ ಮಾಡುತ್ತಿದ್ದೇನೆ ಎಂದರು. ರಂಗಸ್ವಾಮಿ ಅವರ ಛಾಯಾಗ್ರಹಣ, ಎಂ.ತಿರ್ಥೋ ಅವರ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ.ಬಾಲ್ ರಾಜವಾಡಿ,ಮಹೇಶ್, ಶೈಲೇಶ್,ಸುನಂದಾ,

ಗಿರೀಶ್ ಜತ್ತಿ,ಆಪ್ಜಲ್,ಗುರುರಾಜ್ ಹೊಸಕೋಟೆ ಮುಂತಾದವರ ತಾರಬಳಗವಿದೆ

Copyright@2018 Chitralahari | All Rights Reserved. Photo Journalist K.S. Mokshendra,