V-Vyasa School Of Advanced Studies.

Thursday, May 09, 2024

68

 

ಎಸ್ ವ್ಯಾಸದಿಂದ ಆಗಸ್ಟ್ ನಲ್ಲಿ

    ನೂತನ ತರಗತಿಗಳು

 

      ರಾಜರಾಜೇಶ್ವರಿ ನಗರದ ಗ್ಲೋಬಲ್ ವಿಲೇಜ್ ಟೆಕ್‌ಪಾರ್ಕನಲ್ಲಿ ಎಸ್ ವ್ಯಾಸ ವಿಶ್ವ ವಿದ್ಯಾನಿಲಯವು ನೂತನವಾಗಿ ನಲವತ್ತು ವಿವಿಧ ಕೋರ್ಸ್ಗಳನ್ನು ಬರುವ ಆಗಸ್ಟ್ ತಿಂಗಳಲ್ಲಿ ಆರಂಭಿಸಲಿದೆ ಎಂದು ಎಸ್ ವ್ಯಾಸದ ಸ್ಥಾಪಕ ಡಾ.ಎಚ್.ಆರ್. ನಾಗೇಂದ್ರ ಅವರು ಮಾಹಿತಿ ನೀಡಿದರು.

 ಗುರುವಾರ ಖಾಸಗಿ ಹೋಟೆಲ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಣ್ಣ ಸಣ್ಣ ದೇಶಗಳಲ್ಲಿ ಕ್ರೀಡಾಪಟುಗಳು ಅಧಿಕ ಸಂಖ್ಯೆಯಲ್ಲಿದ್ದಾರೆ, ಆದರೆ ನಮ್ಮ ಭಾರತದಲ್ಲಿ ಮಾತ್ರ ಕ್ರೀಡಾಪಟುಗಳ ಸಂಖ್ಯೆ ಬೆರಳಣಿಕೆಯಷ್ಟಿದೆ. ಆ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕ್ರೀಡೆಗೆ ಹೆಚ್ಚಿನ ಮಹತ್ವ ನೀಡುತ್ತಿದ್ದಾರೆ. ಹಾಗಾಗಿ ನಾವು ಕ್ರೀಡೆಯನ್ನು ಅಭಿವೃದ್ಧಿಪಡಿಸುವ ಸಲುವಾಗಿ  ಕ್ರೀಡಾ ಡಯಾಬಿಲೇಷನ್ ಸೆಂಟರ್‌ನ್ನು  ತೆರೆಯುತ್ತಿದ್ದೇವೆ ಎಂದೂ ಹೇಳಿದರು.

    ಎಸ್ ವ್ಯಾಸ ಶೈಕ್ಷಣಿಕ ಕೇಂದ್ರದಲ್ಲಿ ತತ್ವಶಾಸ್ತ್ರವು ಪ್ರಾಚೀನ ಸಂಪ್ರದಾಯ ಮತ್ತು ಆಧುನಿಕ ಶಿಕ್ಷಣ ಶಾಸ್ತ್ರದ ಮಿಶ್ರಣದಲ್ಲಿ ಬೇರೂರಿದೆ. ಗುರು-ಶಿಷ್ಯ ಸಂಸ್ಕೃತಿಯಿಂದ ಸೂರ್ತಿಪಡೆದ ಈ ಸಂಸ್ಥೆಯು ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಆಯಾಮಗಳನ್ನು ಸಂಯೋಜಿಸುವ ಕಲಿಕೆಯನ್ನು ಪೋಷಿಸುತ್ತದೆ. ಈ ವಿಶಿಷ್ಟ ವಿಧಾನವು ಚಿಂತನೆಯ ವೈವಿಧ್ಯತೆಯನ್ನು ಬೆಳೆಸುತ್ತದೆ, ವಿವಿಧ ದೃಷ್ಟಿಕೋನಗಳನ್ನು ಅನ್ವೇಷಿಸಲು ಮತ್ತು ಅವುಗಳನ್ನು ಪ್ರಾಯೋಗಿಕ ಪರಿಹಾರವಾಗಿ ಭಾಷಾಂತರಿಸಲು ವಿದ್ಯಾರ್ಥಿಗಳಿಗೆ ಅಧಿಕಾರ ನೀಡುತ್ತದೆ ಎಂದವರು ತಿಳಿಸಿದರು.

    ಬಾಬಿ ಸ್ಪೋಟ್ಸ್ ಫೌಂಡೇಶನ್ ಅಧ್ಯಕ್ಷೆ, ಪದ್ಮಶ್ರೀ ಪುರಸ್ಕೃತೆ ಅಂಜು ಬಾಬಿ ಜಾರ್ಜ್ ಮಾತನಾಡಿ, ನಾನೊಬ್ಬ ಭಾರತೀಯ ಪ್ರಜೆಯಾಗಿ ದೇಶಕ್ಕೆ ಜಾಗತಿಕ ಮಟ್ಟದ ಪದಕ ತಂದಿರುವುದು ನಿಜಕ್ಕೂ ಹೆಮ್ಮೆಯೆನಿಸಿದೆ. ಕ್ರೀಡೆಯಲ್ಲಿ ನಿವೃತ್ತಿ ಹೊಂದಿದ ಬಳಿಕ ನಾನು ಬಾಬಿ ಸ್ಪೋಟ್ಸ್ ಫೌಂಡೇಶನ್ ಆರಂಭಿಸಿ ಆ  ಮೂಲಕ ಕ್ರೀಡಾಪಟುಗಳಿಗೆ ಸಹಕಾರಿಯಾಗುವ ಅನೇಕ ಕೆಲಸಗಳನ್ನು ಮಾಡುತ್ತಾ ಬಂದಿದ್ದೇನೆ. ಅದಕ್ಕೆ ಪೂರಕವೆಂಬಂತೆ ಇದೀಗ ಕ್ರೀಡಾ ಅಧ್ಯಯನಕ್ಕಾಗಿ ಎಸ್ ವ್ಯಾಸ ವಿಶ್ವ ವಿದ್ಯಾಲಯದೊಂದಿಗೆ ಕೈ ಜೋಡಿಸಿದ್ದೇನೆ. ಈ ಸಹಯೋಗದಿಂದ ನಾವು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ಕ್ರೀಡೆಯತ್ತ ಆಕರ್ಷಿಸಿ, ಅವರಿಗೆ ಅಗತ್ಯವಾದ ಶಿಕ್ಷಣವನ್ನು ಒದಗಿಸಲು ಪ್ರಯತ್ನಿಸುತ್ತೇವೆ ಎಂದೂ ಹೇಳಿದರು. 

   ಎಸ್ ವ್ಯಾಸ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಮಂಜುನಾಥ್ ಶರ್ಮ ಮಾತನಾಡಿ, ದೇಶದ ಪ್ರತಿಯೊಬ್ಬರಿಗೂ ಶಿಕ್ಷಣ ದೊರಕುವುದು ಅಗತ್ಯವಾಗಿದೆ. ಆ ನಿಟ್ಟಿನಲ್ಲಿ ನಮ್ಮ ವಿಶ್ವವಿದ್ಯಾಲಯದಲ್ಲಿ ಮೆರಿಟ್ ವಿದ್ಯಾರ್ಥಿಗಳಿಗೆ, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ಹಾಗೂ ವಿಶಿಷ್ಟ ಚೇತನರಿಗೆ ಕೈಗೆಟಕುವ ದರದಲ್ಲಿ ಶುಲ್ಕ ನಿಗದಿಪಡಿಸಿದ್ದೇವೆ, ಇದರೊಂದಿಗೆ ಕ್ರೀಡಾಪಟುಗಳ ಮೀಸಲಾತಿಯೂ ಸೇರಿದಂತೆ, ಅಗತ್ಯವುಳ್ಳವರಿಗೆ  ವಿದ್ಯಾರ್ಥಿವೇತನ ನೀಡುವ ಮೂಲಕ  ಅಗತ್ಯವಿರುವ ಪ್ರತಿಯೊಬ್ಬರಿಗೂ  ನಮ್ಮ ಸಂಸ್ಥೆಯಲ್ಲಿ ಶಿಕ್ಷಣ ಪಡೆಯಲು ಅವಕಾಶ ಕಲ್ಪಿಸಲಾಗುತ್ತದೆ  ಎಂದು ಮಾಹಿತಿ ನೀಡಿದರು. ಇಂಜಿನಿಯರಿಂಗ್, ಅಲೈಡ್ ಹೆಲ್ತ್ ಕೇರ್, ಸೈಕಾಲಜಿ ಸೇರಿದಂತೆ ಒಟ್ಟು ೪೦ ಕೋರ್ಸ್ ಗಳನ್ನು ಬರುವ ಆಗಸ್ಟ್ ತಿಂಗಳಲ್ಲಿ ಪರಿಚಯಿಸಲಿದ್ದೇವೆ. ಇದಕ್ಕಾಗಿ ಈಗಾಗಲೇ ೨೦೦ ಸಂಸ್ಥೆಗಳ  ಸಹಯೋಗವನ್ನು ಸಹ ಪಡೆದಿದ್ದೇವೆ ಎಂದೂ ಹೇಳಿದರು.  ಈ ಸಂದರ್ಭದಲ್ಲಿ ಕಡಬಂ ಸಮೂಹದ  ಅಧ್ಯಕ್ಷ ಕಡಬಂ ಎಂ. ರಮೇಶ್ ಹಾಗೂ ಇತರರು ಉಪಸ್ಥಿತರಿದ್ದರು.

Copyright@2018 Chitralahari | All Rights Reserved. Photo Journalist K.S. Mokshendra,