25 ದಿನ ಪೂರೈಸಿದ
ಸಾಮ್ರಾಟ್ ಮಾಂಧಾತ
ಹೇಮಂತ್ ಪ್ರೊಡಕ್ಷನ್ಸ್ ಅಡಿ ಹೇಮಂತ್ ಕುಮಾರ್ ನಿರ್ದೇಶನ ಮಾಡಿರುವ, ಪೌರಾಣಿಕ ಕಥಾಹಂದರ ಹೊಂದಿರುವ "ಸಾಮ್ರಾಟ್ ಮಂಧಾತ" ಚಿತ್ರ ದಿನದಿಂದ ದಿನಕ್ಕೆ ಜನಮನ್ನಣೆ ಗಳಿಸುತ್ತ ಸಾಗಿ, ಇದೀಗ ಬೆಂಗಳೂರಿನ ಉಲ್ಲಾಸ್ ಥೇಟರಿನಲ್ಲಿ ಯಶಸ್ವಿಯಾಗಿ 25 ದಿನಗಳನ್ನು ಪೂರೈಸಿದೆ. ಈಗ ಚಿತ್ರವನ್ನು ರಾಜ್ಯಾದ್ಯಂತ ರಿಲೀಸ್ ಮಾಡುವ ಉದ್ದೇಶ ಹೊಂದಿರುವ ಚಿತ್ರತಂಡ ಮಾಧ್ಯಮಗಳ ಮುಂದೆ ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿತು.
ನಿರ್ದೇಶಕ ಹೇಮಂತ್ ಮಾತನಾಡುತ್ತ ಆರಂಭದಲ್ಲಿ ನಮ್ಮ ಚಿತ್ರವನ್ನು 20 ಥೇಟರುಗಳಲ್ಲಾದರೂ ರಿಲೀಸ್ ಮಾಡಬೇಕೆಂಬ ಆಸೆಯಿತ್ತು. ಆದರೆ ಬಾಡಿಗೆ ಕಟ್ಟುವ ಶಕ್ತಿ ನಮ್ಮಲ್ಲಿರಲಿಲ್ಲ. ಆಗ ವಿತರಕ ರಾಧಾಕೃಷ್ಣ ಅವರು ಮಾತಾಡಿ ನಮಗೆ ಉಲ್ಲಾಸ್ ಥೇಟರ್ ಕೊಡಿಸಿದರು. ಇಲ್ಲೀವರೆಗೆ ಒಂದು ಷೋ ಕೂಡ ಬ್ರೇಕಪ್ ಆಗದೆ ಚಿತ್ರ ಪ್ರದರ್ಶನವಾಗಿದೆ. ಇನ್ನೂ ಹೆಚ್ಚು ಜನರಿಗೆ ಸಿನಿಮಾನ ತಲುಪಿಸಬೇಕೆಂಬ ಉದ್ದೇಶದಿಂದ ಈಗ ರಾಜ್ಯದ ಇತರೆ ಕೇಂದ್ರಗಳಲ್ಲಿ ಬಿಡುಗಡೆ ಮಾಡುವ ಪ್ರಯತ್ನ ನಡೀತಿದೆ. ಈಚೆಗೆ ಕೊಪ್ಪಳದಲ್ಲಿ ಚಿತ್ರವನ್ನು ರಿಲೀಸ್ ಮಾಡಿದ್ದೆವು. ಅಲ್ಲೂ ಉತ್ತಮ ಕಲೆಕ್ಷನ್ ಬರುತ್ತಿದೆ. ಇದಲ್ಲದೆ ಯು.ಎಸ್.ನ ನ್ಯೂ ಜರ್ಸಿಯಲ್ಲಿ ಮುಂದಿನ ತಿಂಗಳು ರಿಲೀಸ್ ಮಾಡೋ ಪ್ಲಾನ್ ಇದೆ. ವಿಶೇಷವಾಗಿ 50 ವರ್ಷ ದಾಟಿದ ಹಿರಿಯರಿಗೆ 60 ರೂ. ಟಿಕೆಟ್ ದರ ನಿಗದಿಪಡಿಸಿದ್ದೇವೆ ಎಂದು ವಿವರಿಸಿದರು.
ನಂತರ ವಿತರಕ ರಾಧಾಕೃಷ್ಣ ಮಾತನಾಡಿ ಒಂದೊಳ್ಳೇ ಸಿನಿಮಾನ ಇನ್ನೂ ಹೆಚ್ಚು ಜನರಿಗೆ ತಲುಪಿಸಲು ಮಾಧ್ಯಮದವರ ಸಹಕಾರವೂ ಬೇಕು ಎಂದು ಹೇಳಿದರು.
ನಿರ್ಮಾಪಕರಲ್ಲೊಬ್ಬರಾದ ನಂಜುಂಡಪ್ಪ ಮಾತನಾಡಿ ಸಿನಿಮಾ ತುಂಬಾ ಚೆನ್ನಾಗಿದೆ. ಜನ ಫ್ಯಾಮಿಲಿ ಜೊತೆಗೆ ಬಂದು ಸಿನಿಮಾ ನೋಡ್ತಿದಾರೆ ಎಂದು ಹೇಳಿದರು. ಶನೀಶ್ವರ ಸ್ವಾಮಿ ಪಾತ್ರ ಮಾಡಿರುವ ಸುಂದರಬಾಬು ಮಾತನಾಡಿ ಕಲಿಯ ಶಾಪವಿಮೋಚನೆ ಹೇಗಾಗುತ್ತದೆ ಎಂಬ ವಿಷಯ ಇಟ್ಟುಕೊಂಡು ಮಾಡಿದ ಚಿತ್ರವಿದು. ಪೌರಾಣಿಕ ಚಿತ್ರಗಳನ್ನು ಜನ ಯಾವತ್ತೂ ಇಷ್ಟಪಡುತ್ತಾರೆ ಅಂತ ನಮ್ಮ ಚಿತ್ರ ತೋರಿಸಿಕೊಟ್ಟಿದೆ. ಖಂಡಿತ 50 ದಾಟಿ 100 ದಿನ ಪೂರೈಸುತ್ತದೆ ಎಂದರು.
ಚಿತ್ರದಲ್ಲಿ ಮಾಂಧಾತನಾಗಿ ರಂಗಭೂಮಿ ಕಲಾವಿದ ಬಸವರಾಜು, ಬಿಂದುಮತಿಯಾಗಿ ಭಾರತಿ, ನಾರದನಾಗಿರುವ ನಂಜುಂಡಪ್ಪ, ಶೌಭರಿ ಮಹರ್ಷಿಯಾಗಿ ನರಸಿಂಹಮೂರ್ತಿ, ಯವನಾಶ್ವನಾಗಿರುವ ಮಂಜುನಾಥ ಕಾಣಿಸಿಕೊಂಡಿದ್ದಾರೆ. ಸಾಮ್ರಾಟ ಮಾಂಧಾತ ಚಿತ್ರಕ್ಕೆ ಆರ್.ವೀರೇಂದ್ರಕುಮಾರ್ ಸಂಭಾಷಣೆ ಸಾಹಿತ್ಯ ರಚಿಸಿದ್ದಾರೆ. ಶಿವರಾಮ್ ಅವರ ಸಂಕಲನವಿದೆ.