ಗುಂಮ್ಟಿ ಇದು ಚಿತ್ರದ ಹೆಸರು
ಕಳೆದ ವರ್ಷ ‘ಡೊಳ್ಳು’ ಕಲೆಯ ಕುರಿತಾದ ಚಿತ್ರವೊಂದು ತೆರೆಕಂಡು ಪ್ರಶಂಸೆ ಗಳಿಸಿತ್ತು. ಈಗ ಮಂಗಳೂರು, ಕಾರವಾರ, ಉಡುಪಿ ಕಡೆಗಳಲ್ಲಿ ‘ಗುಂಮ್ಟಿ’ ಸಮುದಾಯ ಮತ್ತು ವಾದ್ಯವೊಂದು ಹೆಚ್ಚಾಗಿ ಗುರುತಿಸಿಕೊಂಡಿಲ್ಲ. ಆ ಸಲುವಾಗಿಯೇ ಅಲ್ಲಿನ ಭಾಗದವರೇ ಸೇರಿಕೊಂಡು ಇದೇ ಹೆಸರಿನಲ್ಲಿ ಚಿತ್ರವೊಂದನ್ನು ಸಿದ್ದಪಡಿಸಿದ್ದಾರೆ. ‘ಇದು ಸಂಸ್ಕ್ರತಿಯ ಸದ್ದು’ ಎಂಬ ಅಡಿಬರಹವಿದೆ. ‘ಕತ್ತಲ ಕೋಣೆ’ ‘ಇನಾಂದಾರ್’ ಚಿತ್ರಗಳನ್ನು ನಿರ್ದೇಶನ ಮಾಡಿದ್ದ ಸಂದೀಪ್‌ಶೆಟ್ಟಿ ಅಜ್ರಿ ಆಕ್ಷನ್ ಕಟ್ ಹೇಳುವ ಜತೆಗೆ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಇವರ ಶ್ರಮಕ್ಕೆ ಬಿಲ್ಡರ್ ವಿಕಾಸ್.ಎಸ್.ಶೆಟ್ಟಿ ಬಂಡವಾಳ ಹೂಡಿದ್ದಾರೆ.
ನಶಿಸಿ ಹೋಗುತ್ತಿರುವ ಜಾನಪದ ಕರ್ನಾಟಕ ಕಲೆ,ಆಚರಣೆ ಬಗ್ಗೆ ಕಾಶಿ-ಮಲ್ಯ ಹೋರಾಡುವ ಕಥೆಯನ್ನು ಹೊಂದಿದೆ. ಸೋಲಾಪುರದಲ್ಲಿ ಕೆಲಸ ಮಾಡುವ ಕಾಶಿ ಅಪ್ಪನ ಸಂದರ್ಶನ ಟಿವಿಯಲ್ಲಿ ಪ್ರಸಾರವಾಗಿದ್ದನ್ನು ನೋಡಿ ಭಾವನೆಗೆ ಒಳಗಾಗುತ್ತಾನೆ. ಆತ ಗುಂಮ್ಟಿ ಆಚರಣೆ ಪರವಾಗಿ ಹೋರಾಟ ಮಾಡುತ್ತಾ ಬೆಳಗಾವಿ, ಧಾರವಾಡ, ಸೋಲಾಪುರ, ನಿಪ್ಪಾಣಿ ಸ್ಥಳಗಳಿಗೆ ಭೇಟಿ ನೀಡಿ ತಮ್ಮ ಜನಾಂಗವನ್ನು ಹುಡುಕುತ್ತಿರುತ್ತಾನೆ. ಮತ್ತೋಂದು ಕಡೆ ಸಂಪ್ರದಾಯವನ್ನು ಉಳಿಸಲು ಹಿರಿತಲೆಗಳು ಜಾಗೃತಿ ಮೂಡಿಸುತ್ತಿರುತ್ತಾರೆ. ಕೊನೆ ಹಂತದಲ್ಲಿ ರಾಜಮನೆತನದ ಎದುರುಗಡೆ ಕಲೆಯನ್ನು ಪ್ರದರ್ಶನ ನೀಡುತ್ತಾರಾ ಎಂಬುದು ಕುತೂಹಲ ಮೂಡಿಸುತ್ತದೆ.
ರಂಗಭೂಮಿ ಪ್ರತಿಭೆ ವೈಷ್ಣವಿ ನಾಡಿಗ್ ನಾಯಕಿ. ಉಳಿದಂತೆ ರಂಜನ್ ಚತ್ರಪತಿ, ಕರಣ್‌ಕುಂದರ್, ರಘುಪಾಂಡೇಶ್ವರ್, ಪ್ರಭಾಕರ್‌ಕುಂದರ್, ಚಿತ್ರಕಲಾ, ನೇಹಾಗೌಡ, ಸ್ವರಾಜ್‌ಲಕ್ಷೀ, ಚೇತನ್ ನೈಲಾಡಿ, ಉದಯಶೆಟ್ಟಿ, ಶರತ್ ಶೆಟ್ಟಿ, ಕೋಟ ಶಿವಾನಂದ, ಮಹಾಬಲೇಶ್ವರ ಕ್ಯಾಡಗಿ ಮುಂತಾದವರು ನಟಿಸಿದ್ದಾರೆ. ಸಂಗೀತ ದುಂಡಿ ಮೋಹನ್, ಛಾಯಾಗ್ರಹಣ ಆನಿಶ್ ಡಿಸೋಜ, ಸಂಕಲನ ಶಿವರಜ್ ಮೇಹು ಅವರದಾಗಿದೆ. ಕಥೆಗೆ ತಕ್ಕಂತೆ ಆಯಾ ಭಾಗಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.