*"ಕುಂಭ ಸಂಭವ" ದಲ್ಲಿ ಮತ್ತೆ ಪೊಲೀಸ್ ಅಧಿಕಾರಿಯಾದ "ಭೀಮ" ಖ್ಯಾತಿಯ ಪ್ರಿಯ* .
*ಸಾಮಾಜಿಕ ಸಮಸ್ಯೆಯ ಸುತ್ತಲ್ಲಿನ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಟಿ.ಎನ್.ನಾಗೇಶ್ ನಿರ್ದೇಶನ* .
"ಭೀಮ" ಚಿತ್ರದ ಗಿರಿಜಾ ಪಾತ್ರದ ಮೂಲಕ ಕನ್ನಡಿಗರ ಮನಗೆದ್ದ ಪ್ರಿಯ ಅವರು ಟಿ.ಎನ್.ನಾಗೇಶ್ ನಿರ್ದೇಶನದ "ಕುಂಭ ಸಂಭವ" ಚಿತ್ರದ ಪ್ರಮುಖಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲೂ ಪೊಲೀಸ್ ಅಧಿಕಾರಿಯಾಗಿ ಪ್ರಿಯ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚಿಗೆ ಈ ಚಿತ್ರದ ಮುಹೂರ್ತ ಸಮಾರಂಭ ವಿಜಯನಗರದ ಶ್ರೀಗಣಪತಿ ದೇವಸ್ಥಾನದಲ್ಲಿ ಆರಂಭವಾಯಿತು. ನರೇಶ್ ಅವರು ಆರಂಭ ಫಲಕ ತೋರುವುದರ ಮೂಲಕ ಚಿತ್ರಕ್ಕೆ ಚಾಲನೆ ನೀಡಿದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.
"2023" ರಲ್ಲಿ ಮಂಡ್ಯ ಸುತ್ತಮುತ್ತ ನಡೆದ ಭ್ರೂಣ ಹತ್ಯೆಯ ವಿಷಯವನ್ನಿಟ್ಟುಕೊಂಡು ಈ ಚಿತ್ರದ ಕಥೆ ಬರೆದಿದ್ದೇನೆ ಎಂದು ಮಾತನಾಡಿದ ನಿರ್ದೇಶಕ ಟಿ.ಎನ್.ನಾಗೇಶ್, ಕ್ರಿಶ್ ಜೋಷಿ ಅವರು ನನಗೆ ಕಥೆ ಬರೆಯುವಲ್ಲಿ ಸಹಕಾರ ನೀಡಿದ್ದಾರೆ. ಇದೊಂದು ಸಾಮಾಜಿಕ ಸಮಸ್ಯೆಯ ಸುತ್ತಲ್ಲಿನ ನೈಜಘಟನೆ ಆಧಾರಿತ ಚಿತ್ರ. "ಭೀಮ" ಖ್ಯಾತಿಯ ಪ್ರಿಯ, ಅರ್ಜುನ್ ದೇವ್, ಮಧು ಶ್ರೀ, ಶೋಭಿತ, ಕಮಲ್ ಮುಂತಾದವರು ಚಿತ್ರದ ಮುಖ್ಯಪಾತ್ರದಲ್ಲಿದ್ದಾರೆ. ಮಿಲ್ಕಿ ಮೂನ್ ಮೂವೀಸ್ ಲಾಂಛನದಲ್ಲಿ ನಾಗಾನಾಯ್ಕ, ತಾರಾ ನಾಗೇಶ, ಸುನಂದಾ ಹೊಸಪೇಟೆ, ಕಮಲ್, ಡೇವಿಡ್ ರಾಯಪ್ಪ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ವಲ್ಲಿ ಹಾಗೂ ನಿಂಗರಾಜು ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ಮೂರು ಹಾಡುಗಳಿರುವ "ಕುಂಭ ಸಂಭವ" ಚಿತ್ರದಲ್ಲಿ ಮೂರು ಸಾಹಸ ಸನ್ನುವೇಶಗಳೂ ಇದೆ. ಎಂ.ಎನ್ ಕೃಪಾಕರ್ ಸಂಗೀತ ನಿರ್ದೇಶನ, ಕೌರವ ವೆಂಕಟೇಶ್ ಸಾಹಸ ನಿರ್ದೇಶನ, ಸಿದ್ದಾರಾಜು ಛಾಯಾಗ್ರಹಣ ಹಾಗೂ ಆಕಾಶ್ ಅವರ ಸಂಕಲನ ಈ ಚಿತ್ರಕ್ಕಿದ್ದು, ಕ್ರಿಶ್ ಜೋಶಿ ಸಂಭಾಷಣೆ ಬರೆದಿದ್ದಾರೆ. ಇಂದಿನಿಂದ ಮೊದಲ ಹಂತದ ಚಿತ್ರೀಕರಣ ಬೆಂಗಳೂರಿನಲ್ಲಿ ಆರಂಭವಾಗಲಿದೆ ಎಂದರು.
"ಕುಂಭ ಸಂಭವ" ಚಿತ್ರದ ಕಥೆ ನನ್ನ ಮನಸ್ಸಿಗೆ ಬಹಳ ಹತ್ತಿರವಾಯಿತು. ನಮ್ಮ ಸುತ್ತಮುತ್ತ ನಾವು ದಿನನಿತ್ಯ ನೋಡುವ ವಿಷಯವನ್ನಿಟ್ಟಿಕೊಂಡು ನಿರ್ದೇಶಕರು ಒಳ್ಳೆಯ ಕಥೆ ಮಾಡಿದ್ದಾರೆ. ಹೆಣ್ಣುಮಕ್ಕಳಿಗೆ ಬಹಳ ಹಿಡಿಸುವ ಕಥೆಯಿದು. ಭ್ರೂಣ ಹತ್ಯೆಯ ಸುತ್ತ ಬೇಕಾದಷ್ಟು ಕಥೆ ಬಂದಿದೆಯಾದರೂ ಇದು ವಿಭಿನ್ನ. ಸಮಸ್ಯೆಗೆ ಪರಿಹಾರವನ್ನು ನಮ್ಮ ಚಿತ್ರದಲ್ಲಿ ಹೇಳಲಾಗಿದೆ. ಈ ಚಿತ್ರದಲ್ಲೂ ನಾನು ಪೊಲೀಸ್ ಅಧಿಕಾರಿ. ಜಾನಕಿ ನನ್ನ ಪಾತ್ರದ ಹೆಸರು ಎಂದರು ನಟಿ ಪ್ರಿಯ.
ಚಿತ್ರದ ನಾಯಕ ಅರ್ಜುನ್ ದೇವ್, ನಟಿಯರಾದ ಮಧುಶ್ರೀ, ಶೋಭಿತ, ಸುನಂದ, ಕಲಾವಿದರಾದ ಕಮಲ್, ಶಿವಾಜಿರಾವ್ ಜಾದವ್ ಮುಂತಾದವರು ಚಿತ್ರದ ಕುರಿತು ಹಾಗೂ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು.