Manada Kadalu.News

Sunday, December 29, 2024

20

 

*ಮುಂಗಾರು ಮಳೆ"ಗೆ ಹದಿನೆಂಟರ ಹರೆಯ* .

 

*ಈ ಸವಿನೆನಪಿನಲ್ಲಿ "ಮನದ ಕಡಲಿ" ನಿಂದ ಬಂತು ಮನಮೋಹಕ ಗೀತೆ* . 

 

ಹದಿನೆಂಟು ವರ್ಷಗಳ ಹಿಂದೆ ಇ.ಕೆ. ಎಂಟರ್ ಟೈನರ್ಸ್ ಲಾಂಛನದಲ್ಲಿ ಇ. ಕೃಷ್ಣಪ್ಪ ಅವರು ನಿರ್ಮಿಸಿ, ಯೋಗರಾಜ್ ಭಟ್ ನಿರ್ದೇಶಿಸಿದ್ದ ಸೂಪರ್ ಹಿಟ್ ಚಲನಚಿತ್ರ "ಮುಂಗಾರು ಮಳೆ". ಈ ಯಶಸ್ವಿ ಚಿತ್ರ ಬಿಡುಗಡೆಯಾಗಿ ಇದೇ ಡಿಸೆಂಬರ್ ಗೆ ಹದಿನೆಂಟು ವರ್ಷ ತುಂಬಿದೆ. ಹದಿನೆಂಟು ವರ್ಷಗಳ ಬಳಿಕ ಈ ಜೋಡಿ ಮತ್ತೆ ಒಂದಾಗಿದೆ. ಇ.ಕೃಷ್ಣಪ್ಪ ನಿರ್ಮಾಣದಲ್ಲಿ,‌ ಯೋಗರಾಜ್ ಭಟ್ ನಿರ್ದೇಶನದಲ್ಲಿ "ಮನದ ಕಡಲು" ಮೂಡಿ ಬರುತ್ತಿದೆ. "ಮುಂಗಾರು ಮಳೆ" ಬಿಡುಗಡೆಯಾದ ದಿನವೇ "ಮನದ ಕಡಲು" ಚಿತ್ರಕ್ಕಾಗಿ ನಿರ್ದೇಶಕ ಯೋಗರಾಜ್ ಭಟ್ ಬರೆದಿರುವ, ವಿ.ಹರಿಕೃಷ್ಣ ಸಂಗೀತ ನೀಡಿರುವ "ಹೂ ದುಂಬಿಯ ಕಥೆಯ" ಎಂಬ ಮನಮೋಹಕ ಹಾಡು ಡಿ ಬಿಟ್ಸ್ ಮೂಲಕ ಬಿಡುಗಡೆಯಾಗಿದೆ. ಕನ್ನಡದ ಪ್ರತಿಭೆ ಸಂಜಿತ್ ಹೆಗ್ಡೆ ಈ ಸುಮಧುರ ಹಾಡಿಗೆ ಧ್ವನಿಯಾಗಿದ್ದಾರೆ. "ಮನದ ಕಡಲು" ಚಿತ್ರದ ಮೊದಲ ಹಾಡು ಇದ್ದಾಗಿದ್ದು,‌ ವಿ.ಹರಿಕೃಷ್ಣ ಅವರೆ ಹಾಡನ್ನು ಬಿಡುಗಡೆ ಮಾಡಿದರು. ಹಾಡು ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

 

 ‘ಮುಂಗಾರು ಮಳೆ’ ಬಂದು ಹದಿನೆಂಟು ವರ್ಷ ಆಯಿತು ಅಂದರೆ ನಂಬಲಿಕ್ಕೆ ಆಗುತ್ತಿಲ್ಲ. ನಿನ್ನೆ ಮೊನ್ನೆ ಆದ ಹಾಗೆ ಇದೆ. ಇಂದಿಗೆ "ಮುಂಗಾರು ಮಳೆ" ಬಿಡುಗಡೆಯಾಗಿ ಹದಿನೆಂಟು ವರ್ಷಗಳಾಗಿದೆ. ಇದೇ ಸಂದರ್ಭದಲ್ಲಿ  ಇ. ಕೃಷ್ಣಪ್ಪ ರವರ ನಿರ್ಮಾಣದಲ್ಲಿ ಹಾಗೂ ನನ್ನ ನಿರ್ದೇಶನದಲ್ಲಿ ಮೂಡಿಬರುತ್ತಿರುವ "ಮನದ ಕಡಲು" ಚಿತ್ರದ ಮೊದಲ ಗೀತೆಯನ್ನು ಬಿಡುಗಡೆ ಮಾಡುತ್ತಿದ್ದೇವೆ. ಈ ಹಾಡು ಹುಟ್ಟಿದ್ದು ನಿರ್ಮಾಪಕರ ತೋಟದ ಮನೆಯಲ್ಲಿ. ಕಂಪೋಸ್ ಆಗಿದ್ದು‌ ನನ್ನ‌ ಆಫೀಸ್ ನ ಮೇಲಿರುವ ಸ್ಟುಡಿಯೋದಲ್ಲಿ. ಹರಿಕೃಷ್ಣ ಅವರ ಸಂಗೀತ ಸಂಯೋಜನೆಯಲ್ಲಿ ಸಂಚಿತ್ ಹೆಗ್ಡೆ ಗಾಯನದಲ್ಲಿ ಮುರಳಿ ನೃತ್ಯ ಸಂಯೋಜನೆಯಲ್ಲಿ "ಹೂ ದುಂಬಿಯ ಕಥೆಯ" ಹಾಡು ಮೂಡಿಬಂದಿದೆ.‌ ಸುಮುಖ ಹಾಗು ರಾಶಿಕಾ ಶೆಟ್ಟಿ ಈ ಹಾಡಿನಲ್ಲಿ ಅಭಿನಯಿಸಿದ್ದಾರೆ ಎಂದು ಹಾಡಿನ ಬಗ್ಗೆ ನಿರ್ದೇಶಕ ಯೋಗರಾಜ್ ಭಟ್ ಮಾಹಿತಿ ನೀಡಿದರು.

 ಹದಿನೆಂಟು ವರ್ಷಗಳ ನಂತರ ಯೋಗರಾಜ್ ಭಟ್ ಅವರ ಜೊತೆ ಮತ್ತೆ ಚಿತ್ರ ಮಾಡುತ್ತಿದ್ದೇನೆ. ಆದರೆ ನಿಮ್ಮ ಜೊತೆ ಸಿನಿಮಾ ಮಾಡುವುದಾದರೆ ಹೊಸ ನಾಯಕನೇ ಇರಬೇಕು ಅಂದಿದೆ. ಹೊಸ ಪ್ರತಿಭೆ ಸುಮುಖ ನಾಯಕನಾಗಿ, ರಾಶಿಕಾ ಹಾಗೂ ಅಂಜಲಿ ನಾಯಕಿಯರಾಗಿ ನಟಿಸಿದ್ದಾರೆ. ಯಾವುದೇ ಕೊರತೆ ಬಾರದ ಹಾಗೆ ಒಂದೊಳ್ಳೆ ಸಿನಿಮಾ‌ ಮಾಡಿದ್ದೀನಿ. ಮುಂದಿನದ್ದು ಪ್ರೇಕ್ಷಕರಿಗೆ ಬಿಟ್ಟಿದ್ದು. ಇಂದು ಬಿಡುಗಡೆ ಆಗಿರುವ ಹಾಡು ಚೆನ್ನಾಗಿದೆ ಎಂದು ನಿರ್ಮಾಪಕ ಇ.ಕೃಷ್ಣಪ್ಪ ತಿಳಿಸಿದರು. 

 

ಸಿನಿಮಾವನ್ನು ತುಂಬಾ ಪ್ರೀತಿಸುವ ತಂಡದ ಜೊತೆಗೆ ಕೆಲಸ ಮಾಡಿದ್ದು ತುಂಬಾ ಖುಷಿಯಾಗಿದೆ ಎಂದು ಮಾತನಾಡಿದ ಸಂಗೀತ ನಿರ್ದೇಶಕ ವಿ.ಹರಿಕೃಷ್ಣ, ಯೋಗರಾಜ್ ಭಟ್ ಅವರು ಬರೆದಿರುವ ಹಾಡನ್ನು ಸಂಜಿತ್ ಸುಶ್ರಾವ್ಯವಾಗಿ ಹಾಡಿದ್ದಾರೆ. ತೆರೆಯ ಮೇಲೂ ಹಾಡು ಬಹಳ ಚೆನ್ನಾಗಿ ಬಂದಿದೆ ಎಂದರು.

 

ಯೋಗರಾಜ್ ಭಟ್ ಬರೆದಿರುವ, ವಿ.ಹರಿಕೃಷ್ಣ ಸಂಗೀತ ಸಂಯೋಜಿಸಿರುವ ಈ ಹಾಡನ್ನು ಹಾಡಲು ಬಹಳ ಖುಷಿಯಾಗಿದೆ ಎಂದು ತಿಳಿಸಿದ ಗಾಯಕ ಸಂಜಿತ್ ಹೆಗ್ಡೆ, ತಾವೇ ಹಾಡಿರುವ ಹಾಡಿನ‌ ನಾಲ್ಕು ಸಾಲುಗಳನ್ನು ವೇದಿಕೆಯ ಮೇಲೂ ಹಾಡಿದರು.

 

ನನ್ನ ಹಾಗೂ ಸಂಜಿತ್ ಅವರನ್ನು ನೋಡಿದವರು ಟ್ವಿನ್ಸಾ? ಅಂತ ಕೇಳಿದರು. ನಾನು‌ ಯೋಗರಾಜ್ ಭಟ್ ಅವರ ಸಾಹಿತ್ಯಕ್ಕೆ, ಹರಿಕೃಷ್ಣ ಅವರ ಸಂಗೀತಕ್ಕೆ ಹಾಗೂ ಸಂಜಿತ್ ಅವರ ಗಾಯನಕ್ಕೆ ಅಭಿಮಾನಿ. ಅವಕಾಶ ನೀಡಿದ ನಿರ್ಮಾಪಕರಿಗೆ ಧನ್ಯವಾದ ಎಂದರು ನಾಯಕ ಸುಮುಖ.

 

ಸಹ ನಿರ್ಮಾಪಕ ಗಂಗಾಧರ್, ಕಾರ್ಯಕಾರಿ ನಿರ್ಮಾಪಕ ಪ್ರತಾಪ್,  ನಾಯಕಿಯರಾದ ಅಂಜಲಿ ಅನೀಶ್, ರಾಶಿಕಾ ಶೆಟ್ಟಿ, ಹಿರಿಯ ನಟ ದತ್ತಣ್ಣ, ಶಿವಧ್ವಜ್, ಸೂರಜ್, ನೃತ್ಯ ನಿರ್ದೇಶಕ ಮುರಳಿ, ಗಡ್ಡ ವಿಜಿ, ಡಿ ಬಿಟ್ಸ್ ಸಂಸ್ಥೆಯ ಶೈಲಜಾ ನಾಗ್ ಮುಂತಾದವರು "ಮನದ ಕಡಲು" ಚಿತ್ರದ ಮೊದಲ ಹಾಡಿನ ಬಗ್ಗೆ ಮಾತನಾಡಿದರು.

Copyright@2018 Chitralahari | All Rights Reserved. Photo Journalist K.S. Mokshendra,