Soori Love"s Sandhya.News

Friday, February 21, 2025

13

 

ಸೂರಿ ಮತ್ತು ಸಂಧ್ಯಾರನ್ನು ಕೊಂಡಾಡಿದ ಉಪೇಂದ್ರ

 

‘ಸೂರಿ ಲವ್ಸ್ ಸಂಧ್ಯಾ’ ಚಿತ್ರದ ಟ್ರೇಲರ‍್ ಬಿಡುಗಡೆ ಮಾಡಿದ

‘ರಿಯಲ್‍ ಸ್ಟಾರ್’

 

ಅಭಿಮನ್ಯು ಕಾಶೀನಾಥ್‍ ಮತ್ತು ಅಪೂರ್ವ ನಾಯಕ-ನಾಯಕಿಯಾಗಿ ನಟಿಸಿರುವ ‘ಸೂರಿ ಲವ್ಸ್ ಸಂಧ್ಯಾ’ ಚಿತ್ರವು ಬಿಡುಗಡೆಗೆ ಸಜ್ಜಾಗಿದೆ. ಚಿತ್ರವು ಮಾರ್ಚ್ 06ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದ್ದು, ಅದಕ್ಕೂ ಮೊದಲು ಟ್ರೇಲರ‍್ ಬಿಡುಗಡೆಯಾಗಿದೆ.

 

ಇತ್ತೀಚೆಗೆ MMB Legacyಯಲ್ಲಿ ಚಿತ್ರತಂಡ ಟ್ರೇಲರ‍್ ಬಿಡುಗುಡೆ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಸಂದರ್ಭದಲ್ಲಿ ನಟ-ನಿರ್ದೇಶಕ ಉಪೇಂದ್ರ ಆಗಮಿಸಿ, ಟ್ರೇಲರ‍್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.

 

ಟ್ರೇಲರ‍್ ಬಿಡುಗಡೆ ಮಾಡಿ ಮಾತನಾಡಿದ ಉಪೇಂದ್ರ, ‘ಇಂದು ನಾನು ಹೃದಯ ತುಂಬಿ ಮಾತನಾಡುತ್ತಿದ್ದೇನೆ. ಇಂಥ ತಂಡದೊಂದಿಗೆ ನಿಲ್ಲುವುದಕ್ಕೆ ಹೆಮ್ಮೆಪಡುತ್ತೇನೆ. ಏಕೆಂದರೆ, ಈ ಚಿತ್ರವನ್ನು ನಾನು ನೋಡಿ ಮಾತನಾಡುತ್ತಿದ್ದೇನೆ. ನಾಯಕ-ನಾಯಕಿ ಇಬ್ಬರೂ ಚೆನ್ನಾಗಿ ನಟಿಸಿದ್ದಾರೆ. ಈ ಸಂದರ್ಭದಲ್ಲಿ ಅಭಿ ತಂದೆ ಕಾಶೀನಾಥ್‍ ಇರಬೇಕಿತ್ತು. ಈ ಚಿತ್ರ ನೋಡಬೇಕಿತ್ತು. ತುಂಬಾ ಖುಷಿಪಟ್ಟಿರುತ್ತಿದ್ದರು. ಅವರೀಗ ನಮ್ಮ ಜೊತೆಗೆ ಇಲ್ಲದಿದ್ದರೂ ಅವರ ಆಶೀರ್ವಾದ ಸದಾ ಜೊತೆಗಿರುತ್ತದೆ. ಈ ಚಿತ್ರದ ಕ್ಲೈಮ್ಯಾಕ್ಸ್ ನೋಡಬೇಕು. ಹೃದಯ ಕಿತ್ತುಕೊಂಡು ಬರುವಷ್ಟು ಫೀಲ್‍ ಆಗುತ್ತದೆ. ಕೊನೆಯ 20 ನಿಮಿಷಗಳು ನಾಯಕ-ನಾಯಕಿ ಇಬ್ಬರೂ ಬಹಳ ಚೆನ್ನಾಗಿ ನಟಿಸಿದ್ದಾರೆ. ಛಾಯಾಗ್ರಹಣ, ಮೇಕಿಂಗ್‍ ಎಲ್ಲವೂ ಚೆನ್ನಾಗಿದೆ. ಈ ಚಿತ್ರವನ್ನು ಎಲ್ಲಾ ಭಾಷೆಗಳಲ್ಲೂ ಬಿಡುಗಡೆ ಮಾಡಿ. ಏಕೆಂದರೆ, ಇಂಥ ಸಿನಿಮಾಗಳನ್ನು ಪ್ರೋತ್ಸಾಹಿಸಬೇಕು’ ಎಂದರು.

ಅಭಿ ಇಷ್ಟೊಂದು ಚೆನ್ನಾಗಿ ನಟಿಸಬಹುದು ಎಂದು ಕಲ್ಪನೆ ಸಹ ಮಾಡಿಕೊಂಡಿರಲಿಲ್ಲ ಎಂದ ಉಪೇಂದ್ರ, ‘ಅಭಿ ನಿಜಕ್ಕೂ ಬಹಳ ಚೆನ್ನಾಗಿ ನಟಿಸಿದ್ದಾನೆ. ನಾಯಕಿ ಸಹ ಚೆನ್ನಾಗಿ ನಟಿಸುವುದರ ಜೊತೆಗೆ ತೆರೆಯ ಮೇಲೆ ಚೆನ್ನಾಗಿ ಕಾಣುತ್ತಾರೆ. ಇಂಥ ಸಿನಿಮಾಗಳನ್ನು ನೋಡಿ ಎಂದು ಕನ್ನಡಿಗರಲ್ಲಿ ಪ್ರಾರ್ಥನೆ ಮಾಡುತ್ತೇನೆ. ಅಭಿ ಮೇಲೆ ಅಪ್ಪನ ಆಶೀರ್ವಾದವಿದೆ, ಅವರ ಅಭಿಮಾನಿಗಳ ಆಶೀರ್ವಾದವಿದೆ. ಈ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತದೆ ಎಂಬ ನಂಬಿಕೆ ಇದೆ. ಏಕೆಂದರೆ, ಚಿತ್ರ ಬಹಳ ನೈಜವಾಗಿದೆ. ಕ್ಲೈಮ್ಯಾಕ್ಸ್ ಅದ್ಭುತವಾಗಿದೆ. ಚಿತ್ರ ನೋಡಿ ಎರಡು ತಿಂಗಳಾಗಿದೆ. ನಿನ್ನೆ-ಮೊನ್ನೆ ನೋಡಿದಂತಿದೆ. ನಿರ್ಮಾಪಕ ಮಂಜುನಾಥ್‍ ಜೊತೆಗೆ ಬಹಳ ವರ್ಷಗಳ ಸ್ನೇಹ. ಅವರು ಬ್ಯಾನರ‍್ಗೆ ಏಳು ಕೋಟಿ ಎಂದು ಹೆಸರಿಟ್ಟಿದ್ದಾರೆ. ಅದು 70 ಕೋಟಿಯಾಗಲೀ, 700 ಕೋಟಿಯಾಗಲಿ’ ಎಂದು ಹಾರೈಸಿದರು.

 

ಚಿಕ್ಕಂದಿನಿಂದ ನನಗೆ ಉಪೇಂದ್ರ ಪ್ರೋತ್ಸಾಹ ಮಾಡುತ್ತಲೇ ಬಂದಿದ್ದಾರೆ ಎಂದ ಅಭಿ, ‘ಇಂದು ಅದೇ ಪ್ರೀತಿಯಿಂದ ಇಂದು ಬಂದು ಟ್ರೇಲರ‍್ ಬಿಡುಗಡೆ ಮಾಡಿಕೊಟ್ಟಿದ್ದಾರೆ. ಅವರ ಆಶೀರ್ವಾದ ಸದಾ ಇರಲಿ’ ಎಂದರು.

 

ಇನ್ನು, ನಾಯಕಿ ಅಪೂರ್ವ ಮಾತನಾಡಿ, ‘ಉಪೇಂದ್ರ ಅವರು ಅಪೂರ್ವ ಚಿತ್ರದ ಸಮಾರಂಭಕ್ಕೆ ಬಂದಿದ್ದರು. ಈಗ ಈ ಚಿತ್ರದ ಟ್ರೇಲರ‍್ ಬಿಡುಗಡೆ ಮಾಡಿರುವುದು ಖುಷಿ ಇದೆ. ಅವರ ಚಿತ್ರಗಳನ್ನು ನೋಡಿ ಬೆಳೆದವಳು ನಾನು. ಇಂದು ನಮ್ಮ ಚಿತ್ರಕ್ಕೆ ಅವರು ಬೆಂಬಲ ನೀಡುತ್ತಿರುವುದು ಆನೆಬಲ ಬಂದಂತಾಗಿದೆ’ ಎಂದರು.

 

ಉಪೇಂದ್ರ ಅವರ ಪ್ರೇರಣೆಯಿಂದ ಈ ಚಿತ್ರ ಮಾಡಿದೆ ಎಂದ ನಿರ್ಮಾಪಕ ಕೆ.ಟಿ. ಮಂಜುನಾಥ್‍, ‘ಅವರ ಸಹಕಾರ ಸಂಪೂರ್ಣವಾಗಿದೆ. ನನ್ನ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ ಮೊದಲ ಚಿತ್ರ ಇದು. ಚಿತ್ರರಂಗದಲ್ಲಿ ಉಳಿಯಬೇಕು ಮತ್ತು ಬೆಳೆಯಬೇಕು ಎಂದರೆ ಎಲ್ಲರ ಸಹಕಾರ, ಪ್ರೋತ್ಸಾಹ ಬೇಕು’ ಎಂದರು.

 

‘ಸೂರಿ ಲವ್ಸ್ ಸಂಧ್ಯಾ’ ಚಿತ್ರಕ್ಕೆ ಯಾದವ್ ರಾಜ್‍ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದು, ಚಿತ್ರದಲ್ಲಿ ಅಭಿಮನ್ಯು ಕಾಶೀನನಾಥ್‍, ಅಪೂರ್ವ, ಪ್ರತಾಪ್‍ ನಾರಾಯಣ್‍, ಪ್ರದೀಪ್‍ ಕಾಬ್ರಾ, ‘ಭಜರಂಗಿ’ ಪ್ರಸನ್ನ, ಖುಷಿ ಆಚಾರ‍್ ಮುಂತಾದವರು ನಟಿಸಿದ್ದಾರೆ. ಎಸ್‍.ಎನ್‍. ಅರುಣಗಿರಿ ಸಂಗೀತ ಸಂಯೋಜಿಸಿದ್ದು, ಶ್ರೀನಿವಾಸ್‍ ಛಾಯಾಗ್ರಹಣವಿದೆ.

Copyright@2018 Chitralahari | All Rights Reserved. Photo Journalist K.S. Mokshendra,