SBPL Cricket.News

Friday, February 21, 2025

17

 

SBPL ಲೋಗೋ ಅನಾವರಣ

 

ದಕ್ಷಿಣ ಭಾರತದ ಅತೀ ದೊಡ್ಡ ಟೆನ್ನಿಸ್‍ ಬಾಲ್‍ ಕ್ರಿಕೆಟ್‍ ಪಂದ್ಯಾವಳಿ

 

ಟೂರ್ನಿಯ ಲೋಗೋ ಬಿಡುಗಡೆ ಮಾಡಿದ ಶ್ರೀಮುರಳಿ, ಶರಣ್‍

 

ಕನ್ನಡ ಚಿತ್ರರಂಗದಲ್ಲಿ ಇತ್ತೀಚಿನ ದಿನಗಳಲ್ಲಿ ಹಲವು ರೀತಿಯ ಕ್ರಿಕೆಟ್‍ ಪಂದ್ಯಾವಳಿಗಳು ನಡೆಯುತ್ತಿವೆ. ಈ ಸಾಲಿಗೆ ಹೊಸ ಸೇರ್ಪಡೆ ಸೌಥ್‍ ಭಾರತ್‍ ಪ್ರೀಮಿಯರ‍್ ಲೋಗ್‍ ಟೆನ್ನಿಸ್‍ ಬಾಲ್‍ ಪಂದ್ಯಾವಳಿ. ಹೆಸರೇ ಹೇಳುವಂತೆ ದಕ್ಷಿಣ ಭಾರತದ ಆರೂ ರಾಜ್ಯಗಳ ಕ್ರಿಕೆಟ್‍ ಆಟಗಾರರ ಟೂರ್ನಿ ಇದಾಗಿದ್ದು, ಸದ್ಯದಲ್ಲೇ ಪ್ರಾರಂಭವಾಗಲಿದೆ.

 

ಅದಕ್ಕೂ ಮುನ್ನ ಇತ್ತೀಚೆಗೆ SBPLನ ಲೋಗೋ ಅನಾವರಣ ಕಾರ್ಯಕ್ರಮವು ಶೆರಟನ್‍ ಹೋಟೆಲ್‍ನಲ್ಲಿ ಅದ್ಧೂರಿಯಾಗಿ ನಡೆಯಿತು. ನಟರಾದ ಶ್ರೀಮುರಳಿ, ಶರಣ್‍, ಮೇಘನಾ ಗಾಂವ್ಕರ‍್, ನಿರ್ದೇಶಕ ತರುಣ್‍ ಸುಧೀರ‍್, ಮಾಜಿ ಶಾಸಕ ರಾಜು ಗೌಡ ಮುಂತಾದವರು ಈ ಸಮಾರಂಭದಲ್ಲಿ ಹಾಜರಿದ್ದು, ಪಂದ್ಯಾವಳಿಯ ಲೋಗೋ ಅನಾವರಣ ಮಾಡಿದರು.

 

ನಾನು ಮಾಡುವ ಬ್ಯಾಟಿಂಗ್‍ಗೆ ಬೌಲರ‍್ ಇಲ್ಲ, ನಾನು ಮಾಡುವ ಬೌಲಿಂಗ್‍ಗೆ ಬ್ಯಾಟ್ಸ್ಮ್ಯಾನ್‍ ಇಲ್ಲ ಎಂದ ಶ್ರೀಮುರಳಿ, ‘ಇದನ್ನು ನಾನು ಕಾಮಿಡಿಯಾಗಿ ಹೇಳುತ್ತಿದ್ದೇನೆ. ಯಾರೂ ಗಂಭೀರವಾಗಿ ತೆಗೆದುಕೊಳ್ಳಬೇಡಿ. ನನಗೆ ಕ್ರಿಕೆಟ್‍ ಬಂದಿದ್ದರೆ, ಸಿಸಿಎಲ್‍ನಲ್ಲಿ ಆಡುತ್ತಿದ್ದೆ. ನನ್ನನ್ನು ಪ್ರಾಕ್ಟೀಸ್‍ಗೆ ಕರೆಸಿಕೊಂಡು ಆಟ ನೋಡಿ, ತಂಡಕ್ಕೆ ಆಯ್ಕೆ ಮಾಡಲಿಲ್ಲ. ಹಾಗಿತ್ತು ನನ್ನ ಆಟ. ಟೆನ್ನಿಸ್‍ ಬಾಲ್‍ನಲ್ಲಿ ಕ್ರಿಕೆಟ್‍ ಆಡಲು ಇಷ್ಟ. ಒಂದು ಅವಕಾಶ ಕೊಡಿ. ಒಮ್ಮೆ ಬ್ಯಾಟಿಂಗ್, ಬೌಲಿಂಗ್‍ ಮಾಡುತ್ತೇನೆ’ ಎಂದು ವೇದಿಕೆಯ ಮೇಲೆ ಕ್ರಿಕೆಟ್‍ ಆಡಿ, ನೆರೆದಿದ್ದವರನ್ನು ರಂಜಿಸಿದರು.

ನಟ ಶರಣ್‍ ಮಾತನಾಡಿ, ‘ಭಾರತದಲ್ಲಿ ಕ್ರಿಕೆಟ್‍ ಗೊತ್ತಿಲ್ಲದಿರುವವರು ಸಿಗುವುದೇ ಇಲ್ಲ. ಅದರಲ್ಲೂ ದಕ್ಷಿಣ ಭಾರತದಲ್ಲಿ ದೊಡ್ಡ ಸಂಖ್ಯೆಯ ಆಟಗಾರರಿದ್ದಾರೆ. ನಿಮ್ಮನ್ನೆಲ್ಲಾ ನೋಡುತ್ತಿದ್ದರೆ ಹೆಮ್ಮೆಯಾಗುವುದರ ಜೊತೆಗೆ ಬೇಸರವೂ ಆಗುತ್ತದೆ. ನನಗೆ ಕ್ರಿಕೆಟ್‍ ಗೊತ್ತಿಲ್ಲ. ನಾನು ಬೆಳೆದ ವಾತಾವರಣ ಬೇರೆ. ಬ್ಯಾಟ್‍ ಹಿಡಿಯುವ ಪ್ರಸಂಗ ಬರಲಿಲ್ಲ. ಕ್ರಿಕೆಟ್‍ ಗೊತ್ತಿದ್ದರೆ, ನಾನು ಅನೇಕ ತಂಡಗಳಲ್ಲಿ ಭಾಗಿಯಾಗಬಹುದಿತ್ತು. ನನಗೆ ಕ್ರಿಕೆಟ್‍ ಗೊತ್ತಿಲ್ಲದಿದ್ದರೂ, ನಾನು ಕ್ರಿಕೆಟ್‍ ಪ್ರೇಮಿ. ಹಾಗಾಗಿ, ನನಗೆ ಈ ತರಹದ ವೇದಿಕೆಗಳು ಸಿಗುತ್ತಲೇ ಇರುತ್ತವೆ. ಇಲ್ಲಿ ಆರೂ ರಾಜ್ಯಗಳ ಆಟಗಾರರಿದ್ದಾರೆ. ಅವರನ್ನು SBPL ಒಗ್ಗೂಡಿಸುತ್ತಿದೆ. ಇಂಥದ್ದೊಂದು ವೇದಿಕೆಯನ್ನು ಆಯೋಜಿಸಿರುವ

ಯಾಸೀನ್ ಹಾಗೂ ತಂಡಕ್ಕೆ  ಹಾಗೇ ಪ್ರಾಯೋಜಕರಿಗೆ ಅಭಿನಂದನೆಗಳು’ ಎಂದರು.

 

ಈ ಸಂದರ್ಭದಲ್ಲಿ ಮಾತನಾಡಿದ ತರುಣ್‍ ಸುಧೀರ‍್, ನಮ್ಮಲ್ಲಿ ಹಲವು ಪ್ರತಿಭಾವಂತ ಆಟಗಾರರು ಇದ್ದಾರೆ. ಅವರನ್ನು ಗುರುತಿಸುವಂತಹ ಕೆಲಸವನ್ನು ಈ SBPL ಮಾಡುತ್ತಿದೆ. ಎಲ್ಲಾ ಪ್ರತಿಭಾವಂತ ಆಟಗಾರರಿಗೆ ಇದು ಒಂದು ಅದ್ಭುತವಾದ ವೇದಿಕೆಯಾಗಿದೆ. ಭಾರತದಲ್ಲಿ ಟೆನ್ನಿಸ್‍ ಬಾಲ್‍ನಲ್ಲಿ ಟೆನ್ನಿಸ್‍ ಎಷ್ಟು ಜನ ಆಡುತ್ತಾರೋ ಗೊತ್ತಿಲ್ಲ, ಕ್ರಿಕೆಟ್‍ ಆಡುವವರೇ ಹೆಚ್ಚು. ಲೆದರ‍್ ಬಾಲ್‍ ಆಡುವವರಾದರೂ ಕಡಿಮೆಯೇ. ಆದರೆ, ಟೆನ್ನಿಸ್‍ ಬಾಲ್‍ ಆಡದಿರುವವರೇ ಇಲ್ಲ. ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಆಡಿರುತ್ತಾರೆ. ರಸ್ತೆಯಿಂದ ಶುರುವಾಗಿ, ಇದೀಗ ಕ್ರೀಡಾಂಗಣದವರೆಗೂ ಬಂದಿದೆ. ಇವತ್ತು ಲೆದರ‍್ ಬಾಲ್‍ ಟೂರ್ನಿಗೆ ಎಷ್ಟು ಗೌರವವಿದೆಯೋ, ಟೆನ್ನಿಸ್‍ ಬಾಲ್‍ ಪಂದ್ಯಾವಳಿಗೂ ಅಷ್ಟೇ ಗೌರವವಿದೆ. ಅಂಥ ಪ್ರಾಮುಖ್ಯತೆ ಇರುವ ಟೆನ್ನಿಸ್‍ ಬಾಲ್‍ ಪಂದ್ಯಾವಳಿಯನ್ನು ಇದೀಗ ದಕ್ಷಿಣ ಭಾರತದಲ್ಲಿ ಶುರು ಮಾಡಲಾಗುತ್ತಿದೆ. ಎಲ್ಲರಿಗೂ ಒಳ್ಳೆಯದಾಗಲೀ’ ಎಂದರು.

Copyright@2018 Chitralahari | All Rights Reserved. Photo Journalist K.S. Mokshendra,