Kirick.Film News

Thursday, February 20, 2025

13

 

" ಕಿರಿಕ್ "  ಟ್ರೈಲರ್ ಬಿಡುಗಡೆ

ಮಾಡಿದ ಸಚಿವ ಚೆಲುವರಾಯಸ್ವಾಮಿ

 

     ನಾಗತಿಹಳ್ಳಿ ಗಂಗಾಧರಗೌಡ ಅವರ ನಿರ್ದೇಶನದ, ರವಿ ಶೆಟ್ಟಿ,  ಪೂಜಾ ರಾಮಚಂದ್ರ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ’ಕಿರಿಕ್’ ಚಲನಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ‌ ಗುರುವಾರ ಸಂಜೆ ಕಲಾವಿದರ ಸಂಘದಲ್ಲಿ ನೆರವೇರಿತು. ಸಚಿವ ಎನ್. ಚೆಲುವರಾಯಸ್ವಾಮಿ ಅವರು ಕಿರಿಕ್ ಚಿತ್ರದ ಟ್ರೈಲರ್ ರಿಲೀಸ್ ಮಾಡಿದರೆ, ಸಾಹಿತಿ ನಾಗೇಂದ್ರ ಪ್ರಸಾದ್, ನಟ ಚೇತನ್ ಹಾಗೂ ಚೆಲುವರಾಯಸ್ವಾಮಿ ಅವರ ಪುತ್ರ ಸಚಿನ್ ೩ ಲಿರಿಕಲ್ ಹಾಡುಗಳನ್ನು ಬಿಡುಗಡೆಗೊಳಿಸಿದರು.

      ಗ್ಯಾರೇಜ್ ನಲ್ಲಿ  ಮೆಕ್ಯಾನಿಕ್ ಕೆಲಸ ಮಾಡುವ ನಾಯಕ, ಸದಾ ಕಿರಿಕ್ ಮಾಡೋ ನಾಯಕಿ ಇಬ್ಬರ ಮಧ್ಯೆ ಕಿರಿಕ್, ತರ್ಲೆಯಿಂದಲೇ ಸೂರ್ಯ ಮತ್ತು ಅಮ್ಮು ನಡುವೆ ಹುಟ್ಟಿದ ಪ್ರೀತಿ ಆನಂತರ ಯಾವ ಹಂತ ತಲುಪುತ್ತದೆ, ಕೊನೆಗೇನಾಯಿತು ಎನ್ನುವುದೇ ಕಿರಿಕ್ ಚಿತ್ರದ ಕಥಾಹಂದರ.

     ಟ್ರೈಲರ್ ಬಿಡುಗಡೆಗೊಳಿಸಿ ಮಾತನಾಡಿದ ಸಚಿವರು ಈ ಚಿತ್ರತಂಡದಲ್ಲಿರುವ ಬಹುತೇಕರು  ನಮ್ಮ ನಾಗಮಂಗಲದವರು. ಟ್ರೈಲರ್ ತುಂಬಾ ಪ್ರಾಮಿಸಿಂಗ್ ಆಗಿದೆ. ಇದರಲ್ಲಿ ಚಿತ್ರತಂಡದ ಶ್ರಮ‌ ಎದ್ದು ಕಾಣುತ್ತದೆ.ಚಿತ್ರವನ್ನೂ ಚೆನ್ನಾಗಿ ಮಾಡಿದ್ದಾರೆ.ಒಳ್ಳೇದಾಗಲಿ ಎಂದು ಶುಭ ಹಾರೈಸಿದರು.

   ಈ ಚಿತ್ರಕ್ಕಾಗಿ ಕಾರ್ತೀಕ್ ವೆಂಕಟೇಶ್ ಅವರು ರಚಿಸಿದ  ತಾಯಿ ಸೆಂಟೆಮೆಂಟ್ ಸಾಂಗ್ ನ್ನು  ಡಾ.ವಿ. ನಾಗೇಂದ್ರಪ್ರಸಾದ್ ಅವರು  ಬಿಡುಗಡೆ ಮಾಡಿ,  ನಂತರ ಮಾತನಾಡುತ್ತ ನಾನು ಕೂಡ ನಾಗಮಂಗಲದವನೇ ಆಗಿದ್ದು ಆರಂಭದಿಂದಲೂ ಈ ಚಿತ್ರತಂಡದ ಕೆಲಸವನ್ನು ನೋಡುತ್ತ ಬಂದಿದ್ದೇನೆ.  ಒಂದಲ್ಲ ಒಂದು ಕಿರಿಕ್ ಗಳನ್ನು ಎದುರಿಸುತ್ತಲೇ ಬಂದ  ಈ ಚಿತ್ರ ಫೈನಲ್ಲಾಗಿ ಟ್ರೈಲರ್ ರಿಲೀಸ್ ಮಾಡುವ ಹಂತ ತಲುಪಿದೆ, ಈ ಸಿನಿಮಾ ಖಂಡಿತ ಗೆದ್ದೇ ಗೆಲ್ಲುತ್ತೆ  ಎಂದು ಹೇಳಿದರು._

     ನಾಯಕ ರವಿ ಶೆಟ್ಟಿ ಮಾತನಾಡುತ್ತ ತನ್ನ ಪಾತ್ರದ ಬಗ್ಗೆ ಹೇಳಿದರು. ನಿರ್ದೇಶಕ ಗಂಗಾಧರ ಗೌಡ ಮಾತನಾಡುತ್ತ ಒಂದು ವಿಭಿನ್ನವಾದ ಪ್ರೇಮಕಥೆಯನ್ನು ನಮ್ಮ‌ ಕಿರಿಕ್ ಚಿತ್ರದಲ್ಲಿ ಕಾಣಬಹುದು. ಚಿತ್ರವೀಗ ಬಿಡುಗಡೆಯ ಹಂತ ತಲುಪಿದೆ. ಪ್ರೇಕ್ಷಕರು ಇಷ್ಟಪಡುತ್ತಾರೆಂಬ ನಂಬಿಕೆಯಿದೆ ಎಂದು ಹೇಳಿದರು.

 ಮುಕ್ತಿನಾಗ ಫಿಲಂಸ್ ಅರ್ಪಿಸುವ ಈ ಚಿತ್ರವನ್ನು ನಾಗರಾಜ್ ಎಸ್. ನಿರ್ಮಿಸಿದ್ದಾರೆ. ಹರೀಶ್ ಶೆಟ್ಡಿ ಸಹ ನಿರ್ಮಾಪಕರಾಗಿ ಕೈಜೋಡೊಸಿದ್ದಾರೆ. ಆರ್.ಬಿ. ಭರತ್ ಅವರ ಸಂಗೀತ ಸಂಯೋಜನೆ, ಎಸ್.ಕೀರ್ತಿವರ್ಧನ್ ಅವರ ಛಾಯಾಗ್ರಹಣ, ಭಾರ್ಗವ್ ಕೆ.ಎಂ. ಅವರ ಸಂಕಲನ ಹಾಗೂ ವಿಎಫ್ ಎಕ್ಸ್ ಈ ಚಿತ್ರಕ್ಕಿದೆ. ರಾಕೆಟ್ ವಿಕ್ರಂ ಹಾಗೂ ಚಂದ್ರು ಬಂಡೆ ಅವರ ಸಾಹಸ ನಿರ್ದೇಶನ ಚಿತ್ರಕ್ಕಿದ್ದು ಬಲ ರಾಜವಾಡಿ, ಹೊನ್ನವಳ್ಳಿ ಕೃಷ್ಣ, ಕುರಿ ರಂಗ,  ಸದಾನಂದ ಕಾಳೆ, ರಾಧಿಕಾ ಶೆಟ್ಟಿ, ಜ್ಯೋತಿ ಮರೂರು ಚಿತ್ರದ ಉಳಿದ ತಾರಾಬಳಗದಲ್ಲಿದ್ದಾರೆ.

 

Copyright@2018 Chitralahari | All Rights Reserved. Photo Journalist K.S. Mokshendra,