Hrudaya Geethe.News

Sunday, March 02, 2025

18

 

ಹೃದಯಗೀತೆ ಸುಮಧುರ ದೃಶ್ಯ ಗೀತೆಗಳ ಗುಚ್ಚ

 

       ಪ್ರತಿಭೆ ಅನ್ನುವುದು ಯೊರೊಬ್ಬರ ಸ್ವತ್ತು ಅಲ್ಲ. ಯಾರಿಗೆ ಬೇಕಾದರೂ ಸರಸ್ವತಿ ಒಲಿಯಬಲ್ಲಳು. ಆ ಸಾಲಿಗೆ ಪ್ರೀತಿ ಅಶೋಕ ಸೇರ್ಪಡೆಯಾಗುತ್ತಾರೆ. ವೃತ್ತಿಯಲ್ಲಿ ಹಿರಿಯ ದಂತ ವೈದ್ಯೆ. ಪ್ರವೃತ್ತಿಯಲ್ಲಿ ಸಾಹಿತಿ ಮತ್ತು ಗಾಯಕಿ. ಮೊನ್ನೆಯಷ್ಟೇ ಇವರ ಬತ್ತಳಿಕೆಯಿಂದ ಮೂಡಿಬಂದಿರುವ ನಾಲ್ಕು ಹಾಡುಗಳ ’ಹೃದಯ ಗೀತೆ’ ವಿಡಿಯೋ ಆಲ್ಬಂ ಬಿಡುಗಡೆ ಕಾರ್ಯಕ್ರಮ ಶ್ರೀ ರೇಣುಕಾಂಬ ಸ್ಟುಡಿಯೋದಲ್ಲಿ ಅದ್ದೂರಿಯಾಗಿ ನಡೆಯಿತು. ಆರ್.ಎಸ್.ಗಣೇಶ್ ನಾರಾಯಣನ್ ಸಂಗೀತ ಸಂಯೋಜಿಸಿ ಒಂದರೆಡು ಗೀತೆಯಲ್ಲಿ ಕಾಣಿಸಿಕೊಂಡು ಧ್ವನಿಯಾಗಿದ್ದಾರೆ. ಶತ ಚಿತ್ರಗಳ ನಿರ್ದೇಶಕ ಸಾಯಿಪ್ರಕಾಶ್, ಸಾಹಿತಿ,ನಿರ್ದೇಶಕ, ಸಂಗೀತ ಸಂಯೋಜಕ ವಿ.ಮನೋಹರ್, ಸಂಕಲನಕಾರ ಕ್ರೇಜಿ ಮೈಂಡ್ಸ್ ಮತ್ತು ’ಕ’ ’ಶಭಾಷ್’ ಚಿತ್ರದ ನಾಯಕ ಶರತ್ ಉಪಸ್ತಿತರಿದ್ದರು.

 

       ಪ್ರೀತಿ ಅಶೋಕ ಮಾತನಾಡಿ ಚಿಕ್ಕಂದಿನಿಂದಲೂ ಸಾಹಿತ್ಯ, ಕವನ ಬಗ್ಗೆ ಆಸಕ್ತಿ ಇತ್ತು. ಈಗಾಗಲೇ 300 ಗೀತೆಗಳನ್ನು ಬರೆಯಲಾಗಿ, ಈಗಾಗಲೇ ಹೊರ ಬಂದಿರುವ 70 ಹಾಡುಗಳ ಪೈಕಿ ಸ್ಟಾರ್ ಸಿಂಗರ‍್ಸ್‌ಗಳಾದ ರಾಜೇಶ್ ಕೃಷ್ಣನ್, ವಿಜಯಪ್ರಕಾಶ್ ಜೊತೆ ಧ್ವನಿಗೂಡಿಸಿರುವ ಒಂದಷ್ಟು ಗೀತೆಗಳನ್ನು ’ಪ್ರೀತಿ ಅಶೋಕ ಮ್ಯೂಸಿಕ್ ಯೂಟ್ಯೂಬ್ ಚಾನಲ್’ (Preethi Ashok-Music you tube channel)ದಲ್ಲಿ ವೀಕ್ಷಿಸಬಹುದು. ’ಪರಿಸ್ಥಿತಿ’ ಚಿತಕ್ಕೆ ಬರೆದು ಹಾಡಿದ್ದೇನೆ. ಸಂಗೀತದಲ್ಲಿ ಕೋರ್ಸ್ ಮುಗಿಸಿ, ಡಾಕ್ಟರ್ ವೃತ್ತಿಗೆ ಮರಳಿದೆ. ಇಪ್ಪತ್ತು ವರ್ಷದ ನಂತರ ಸಾಹಿತ್ಯ, ಗಾಯನ ಲೋಕಕ್ಕೆ ಪಾದಾರ್ಪಣೆ ಮಾಡಿದ್ದೇನೆ. ಮುಂಚೆ ಹಾಗೆ ಸುಮ್ಮನೆ ಅಂತ ನನಗೆ ಇಷ್ಟಬಂದಂತೆ ಬರೆದು ಹಾಡುತ್ತಿದ್ದೆ. ಹೊಸ ಅನುಭವ ಎನ್ನುವಂತೆ ಟ್ಯೂನ್‌ಗೆ ಅಂತಲೇ ಬರೆಯಲಾಗಿದೆ.  ಪತಿ ಅಶೋಕಭಟ್ ಸಹಕಾರ ನೀಡುತ್ತಿದ್ದು ಅಲ್ಲದೆ ಆಲ್ಬಂನ್ನು ನಿರ್ಮಾಣ ಮಾಡಿದ್ದಾರೆ. ಬಿಡುವಿನ ವೇಳೆಯಲ್ಲಿ ಇದನ್ನೆ ಮುಂದುವರೆಸಬೇಕೆಂಬ ಬಯಕೆ ಇದೆ ಎಂದರು.

      ಪ್ರೀತಿ ಅಶೋಕ, ನಾನು ಒಂದೇ ಶಾಲೆಯಲ್ಲಿ ಓದಿದವರು. ಯಾವುದೇ ಸ್ಪರ್ಧೆ ಇದ್ದರೂ ಪ್ರಶಸ್ತಿ ಗಿಟ್ಟಿಸಿಕೊಳ್ಳುತ್ತಿದ್ದರು. ಅಂದು ಸಾಹಿತಿ ಅಂತ ಗೊತ್ತಿರಲಿಲ್ಲ. ಗಾಯಕಿ ಎಂಬುದು ಮಾತ್ರ ತಿಳಿದಿತ್ತು. ಮೂವತ್ತು ವರ್ಷದ ನಂತರ ಭೇಟಿಯಾಗಿ ಆಲ್ಬಂ ಸಿದ್ದಪಡಿಸಲಾಗಿದೆ. ಹಾಡುಗಳಲ್ಲಿ ಅರ್ಥಪೂರ್ಣ ಪದಗಳನ್ನು ಜೋಡಿಸಿದ್ದಾರೆ. ಪ್ರಾರಂಭದಲ್ಲಿ ಆಡಿಯೋ ಸಾಕು ಅನಿಸಿತ್ತು. ಮುಂದೆ ವಿಡಿಯೋ ಹುಟ್ಟಿಕೊಂಡಿತು. ಮೂರು ಪ್ರೀತಿ ಮತ್ತು ಒಂದು ಶಿವನ ’ಮಾದೇವ’ ಗೀತೆ ಇರಲಿದೆ. ಶಿವರಾತ್ರಿ ಹಬ್ಬದಂದು ಬಿಡಲಾಗಿ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿದೆ. ಹಾಡುಗಳಲ್ಲಿ ಸಮರ್ಥ್, ತನ್ವಿ, ಶರತ್, ಅಜಿತ್ ಅಭಿನಯಿಸಿದ್ದು, ಮಾದೇವ ಗೀತೆಯಲ್ಲಿ ಮೇಡಂ ಕಾಣಿಸಿಕೊಂಡಿದ್ದಾರೆ. ಶ್ರೀ ಕ್ರೇಜಿಮೈಂಡ್ಸ್ ದೃಶ್ಯಗಳನ್ನು ಸೆರೆ ಹಿಡಿದ್ದಾರೆಂದು ಆರ್.ಎಸ್.ಗಣೇಶ್ ನಾರಾಯಣನ್ ಮಾಹಿತಿ ನೀಡಿದರು.

 

      ನಮ್ಮ ಕಾಲದಲ್ಲಿ ಪ್ರತಿಯೊಬ್ಬ ಕಲಾವಿದರಿಗೂ ಸ್ಟಾರ್ ಇಮೇಜ್ ಇತ್ತು. ಕಾಲ ಬದಲಾದಂತೆ ಡಿಜಿಟಲ್ ಯುಗ ಬಂದು ಎಲ್ಲರೂ ಅವಕಾಶ ವಂಚಿತರಾಗಿದ್ದಾರೆ. ಸಂಗೀತ ಎನ್ನುವುದು ಸಮುದ್ರ ಇದ್ದಂತೆ. ಜೀವಂತವಾಗಿರುವುದು ಮ್ಯೂಸಿಕ್. ಮಲಗುವ ಮುಂಚೆ ಒಳ್ಳೆ ಹಾಡು ಕೇಳಿ ಎಂದು ಡಾಕ್ಟರ್ ಸಲಹೆ ಕೊಡುತ್ತಾರೆ. ಅದರಲ್ಲಿ ಅಂತಹ ಶಕ್ತಿ ಇದೆ. ಗಣೇಶ್ ನಾರಾಯಣನ್, ಪ್ರೀತಿ ಅಶೋಕ ಸೇರಿಕೊಂಡು ಒಳ್ಳೆ ಆಲ್ಬಂ ಸಿದ್ದಪಡಿಸಿದ್ದಾರೆ. ಇವರಿಬ್ಬರ ಮುಂದಿನ ಯೋಜನೆಗಳು ಯಶಸ್ಸು ಆಗಲೆಂದು ಸಾಯಿಪ್ರಕಾಶ್ ಶುಭ ಹಾರೈಸಿದರು.

 

     ಆಲ್ಬಂ ಚೆನ್ನಾಗಿ ಬಂದಿದೆ. ಎಲ್ಲರ ಶ್ರಮ ಪರದೆ ಮೇಲೆ ಕಾಣಿಸುತ್ತದೆ. ಎಲ್ಲರೂ ವೀಕ್ಷಿಸುವಂತಾಗಲಿ. ಪ್ರೀತಿ ಅಶೋಕ, ಗಣೇಶ್ ನಾರಾಯಣನ್ ಸಂಗಮದಿಂದ ಮತ್ತಷ್ಟು ಹಾಡುಗಳು ಹೊರಬರಲೆಂದು ವಿ.ಮನೋಹರ್ ಆಶಿಸಿದರು.

 

Copyright@2018 Chitralahari | All Rights Reserved. Photo Journalist K.S. Mokshendra,