Raaven.Film News

Wednesday, March 12, 2025

78

 

ಟ್ರೇಲರ್ ನಲ್ಲೇ ಮೋಡಿಮಾಡಿದ ಕಾಗೆಯೇ ನಾಯಕನಾಗಿರುವ “ರಾವೆನ್” ಚಿತ್ರ

 

 

ಕನ್ನಡದಲ್ಲಿ ವಿವಿಧ ಪ್ರಾಣಿ ಹಾಗೂ ಪಕ್ಷಿಗಳನ್ನು ಕೇಂದ್ರವಾಗಿಟ್ಟಿಕೊಂಡು ನಿರ್ಮಾಣವಾಗಿರುವ ಸಾಕಷ್ಟು ಚಿತ್ರಗಳು ಬಂದಿದೆ. ಆದರೆ ಆತ್ಮ ಸಿನಿಮಾಸ್ ಹಾಗೂ ವಿಶ್ವ ಪ್ರೊಡಕ್ಷನ್ಸ್ ಲಾಂಛನದಲ್ಲಿ  ಪ್ರಬಿಕ್ ಮೊಗವೀರ್ ಮತ್ತು ವಿಶ್ವನಾಥ್ ಜಿಪಿ ಅವರು ನಿರ್ಮಿಸಿರುವ ಹಾಗೂ ವೇದ್ ನಿರ್ದೇಶನದ “ರಾವೆನ್” ಚಿತ್ರದಲ್ಲಿ ಕಾಗೆಯೇ ಪ್ರಮುಖ ಪಾತ್ರಧಾರಿ. ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಟ್ರೇಲರ್ ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಟ್ರೇಲರ್ ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

 

“ರಾವೆನ್” ಎಂದರೆ ಕಾಗೆಯ ಹೆಸರು. ಸಾಮಾನ್ಯವಾಗಿ ಕಾಗೆ ತಾಕಿದ್ದರೆ ಸ್ನಾನ ಮಾಡಬೇಕು. ಅದು ವಾಹನದ ಮೇಲೆ ಕೂತರೆ ವಾಹನವನ್ನೇ ಬದಲಿಸಬೇಕು. ಕಾಗೆ ಮನೆಯೊಳಗೆ ಬರಬಾರದು. ಇದು ಶ್ರಾದ್ಧಕ್ಕೆ ಮಾತ್ರ ಮೀಸಲಾದ ಪಕ್ಷಿ ಹೀಗೆ ಅನೇಕ ನಂಬಿಕೆಗಳು ರೂಡಿಯಲ್ಲಿದೆ.‌ ಆದರೆ ಕಾಗೆಗಿರುವ ಒಳ್ಳೆಯ ಗುಣ ಬೇರೆ ಪಕ್ಷಿಗಳಲ್ಲಿ ನೋಡುವುದು ಕಡಿಮೆ. ಒಂದು ಹಿಡಿ ಅನ್ನ ಸಿಕ್ಕರೆ ತನ್ನ ಎಲ್ಲಾ ಬಳಗವನ್ನು ಕರೆದು ತಿನ್ನುವ ಪ್ರಾಣಿ ಕಾಗೆ ಮಾತ್ರ. ಇಂತಹ ಕಾಗೆಯನ್ನೇ ಪ್ರಧಾನವಾಗಿಟ್ಟಿಕೊಂಡು ಈ ಚಿತ್ರ ನಿರ್ಮಾಣವಾಗಿದೆ. ತಾಂತ್ರಿಕವಾಗಿ ನಮ್ಮ ಚಿತ್ರ ಹೆಚ್ಚು ಶ್ರೀಮಂತವಾಗಿದೆ. ಸಿಜಿ ವರ್ಕ್ ಎಲ್ಲರ ಗಮನ ಸೆಳೆಯುತ್ತದೆ. ಸದ್ಯ ಚಿತ್ರದ ಎಲ್ಲಾ ಚಟುವಟಿಕೆಗಳು ಪೂರ್ಣಗೊಂಡಿದ್ದು, ತೆರೆಗೆ ಬರುವ ಹಂತ ತಲುಪಿದೆ. ದಿಲೀಪ್ ಪೈ ನಾಯಕನಾಗಿ ನಟಿಸಿದ್ದಾರೆ. ದೇವದೇವಯ್ಯ, ಸ್ವಪ್ನ ಶೆಟ್ಟಿಗಾರ್, ಶ್ರೇಯಾ ಆರಾಧ್ಯ, ಸುಚೇಂದ್ರ ಪ್ರಸಾದ್, ಲೀಲಾ ಮೋಹನ್, ದಿನೇಶ್ ಮಂಗಳೂರು ಮುಂತಾದ ಕಲಾವಿದರು ಅಭಿನಯಿಸಿದ್ದಾರೆ. ಕಲಾವಿದರ ಹಾಗೂ ತಂತ್ರಜ್ಞರ ಸಹಕಾರದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ. ಇದು ನನ್ನ ನಿರ್ದೇಶನದ ಎರಡನೇ ಚಿತ್ರ. ಅವಕಾಶ ನೀಡಿದ ನಿರ್ಮಾಪಕರಿಗೆ ಧನ್ಯವಾದ ಎಂದರು ನಿರ್ದೇಶಕ ವೇದ್.

ನಿರ್ಮಪಕರಾದ ಪ್ರಬಿಕ್ ಮೊಗವೀರ್ ಮಾತನಾಡುತ್ತಾ, ಮೂಲತಃ ಸಂಕಲನಕಾರರಾಗಿರುವ ನಿರ್ದೇಶಕ ವೇದ್ ಅವರು ಈ ಚಿತ್ರದ ಕಥೆ ಹೇಳಿದಾಗ ನಿರ್ಮಾಣ ಮಾಡಲು ಮುಂದಾದೆ. ನಂತರ ನಿರ್ಮಾಣಕ್ಕೆ ವಿಶ್ವಾನಾಥ್ ಅವರು ಜೊತೆಯಾದರು. ಚಿತ್ರ ಉತ್ತಮವಾಗಿ ಮೂಡಿಬಂದಿದ್ದು, ಮುಂದಿನ ತಿಂಗಳಲ್ಲಿ ಬಿಡುಗಡೆಯಾಗಲಿದೆ ಎಂದರು.

 

ನಾನು, ಉದ್ಯಮಿ ಹಾಗು ಕನ್ನಡಪರ ಹೋರಾಟಗಾರ ಎಂದು ಮಾತು ಆರಂಭಿಸಿದ ನಿರ್ಮಾಪಕ ವಿಶ್ವನಾಥ್, ನಮ್ಮ ತಂದೆ ಕನ್ನಡದ ಕೆಲವು ಜನಪ್ರಯ ಚಿತ್ರಗಳಲ್ಲಿ ನಟಿಸಿದ್ದರು. ಆ ದಿನಗಳಿಂದ ಸಿನಿಮಾ ಬಗ್ಗೆ ಆಸಕ್ತಿ. ಈಗ ಈ ಚಿತ್ರದ ಮೂಲಕ ನಿರ್ಮಾಪಕನಾಗಿದ್ದೇನೆ. ನಾನು ಹಾಗೂ ಪ್ರಬಿಕ್ ಮೊಗವೀರ್ ಇಬ್ಬರು ನಿರ್ಮಾಣ ಮಾಡಿದ್ದೇವೆ. ಜೊತೆಗೆ ಒಂದು ಪಾತ್ರದಲ್ಲೂ ಕಾಣಿಸಿಕೊಂಡಿದ್ದೇನೆ. ಮುಂದಿನ ತಿಂಗಳು ಚಿತ್ರವನ್ನು ತೆರೆಗೆ ತರುವ ಸಿದ್ದತೆ ನಡೆಯುತ್ತಿದೆ ಎಂದರು.

 

ಬಹಳ ದಿನಗಳ ನಂತರ ಈ ಚಿತ್ರದಲ್ಲಿ ನಟಿಸಿದ್ದೇನೆ.‌ಕಾಗೆ ಶನಿಮಹಾತ್ಮನ ವಾಹನ. ಅಂಥಹ ಕಾಗೆ ಕುರಿತಾದ ಚಿತ್ರವಿದು. ನನ್ನನ್ನು ಎಲ್ಲರು ಈ ಚಿತ್ರದ ನಾಯಕ ಎನ್ನುತ್ತಿದ್ದಾರೆ. ಆದರೆ ಈ ಚಿತ್ರದ ನಿಜವಾದ ನಾಯಕ ಕಾಗೆ‌. ನಾನು ಅದರ ಸಹ ಪಾತ್ರಧಾರಿ ಎಂದರು ನಾಯಕ ದಿಲೀಪ್ ಪೈ. ದಿಲೀಪ್ ಅವರು ಹೇಳಿದ ಹಾಗೆ ಕಾಗೆಯೇ ಈ ಚಿತ್ರದ ನಿಜವಾದ ಹೀರೋ. ನನ್ನ ಪಾತ್ರ ಕೂಡ ಚೆನ್ನಾಗಿದೆ ಎಂದರು ನಟ ದೇವ್ ದೇವಯ್ಯ. ನಾಯಕಿ ಸ್ವಪ್ನ ಶೆಟ್ಟಿಗಾರ್, ನಟ ಲೀಲಾ ಮೋಹನ್, ಸಂಗೀತ ನಿರ್ದೇಶಕ MAD D ಹಾಗೂ ಛಾಯಾಗ್ರಾಹಕ ರಾಕೇಶ್ ಮುಂತಾದವರು ಚಿತ್ರದ ಕುರಿತು ಮಾಹಿತಿ ನೀಡಿದರು.

 

Copyright@2018 Chitralahari | All Rights Reserved. Photo Journalist K.S. Mokshendra,