Choo Mantar.News

Monday, January 13, 2025

25

 

*ಸುಗ್ಗಿ ಹಬ್ಬಕ್ಕೆ ಸಂತಸದ ಸುದ್ದಿ ಕೊಟ್ಟ "ಛೂಮಂತರ್" ಚಿತ್ರತಂಡ*

 

 *ಶರಣ್ ಅಭಿನಯದ ಈ ಚಿತ್ರಕ್ಕೆ ಅಭಿಮಾನಿಗಳು ಫಿದಾ*

 

ತರುಣ್ ಸ್ಟುಡಿಯೋಸ್ ಲಾಂಛನದಲ್ಲಿ ತರುಣ್ ಶಿವಪ್ಪ ಹಾಗೂ ಮಾನಸ ತರುಣ್ ನಿರ್ಮಿಸಿರುವ, "ಕರ್ವ"‌ ಖ್ಯಾತಿಯ ನವನೀತ್ ನಿರ್ದೇಶನದಲ್ಲಿ ಶರಣ್ ನಾಯಕರಾಗಿ ನಟಿಸಿರುವ "ಛೂ ಮಂತರ್" ಚಿತ್ರ ಕಳೆದ ಜನವರಿ 10ರಂದು ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾಗಿರುವ ಈ ಚಿತ್ರಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ಸಂತಸವನ್ನು ಚಿತ್ರತಂಡದ ಸದಸ್ಯರು ಸಕ್ಸಸ್ ಮೀಟ್ ನಲ್ಲಿ ತಮ್ಮ ಮಾತುಗಳ ಮೂಲಕ ಹಂಚಿಕೊಂಡರು.ಪತ್ರಿಕಾಗೋಷ್ಠಿಗೂ ಮುನ್ನ ವಿಷ್ಣುವರ್ಧನ್ ಹಾಗೂ ದ್ವಾರಕೀಶ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲಿಸಲಾಯಿತು. ನಿರ್ಮಾಪಕ ಯೋಗಿ ದ್ವಾರಕೀಶ್ ಮುಖ್ಯ ಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

 

 ಸಾಕಷ್ಟು ಅಡತಡೆಗಳ ನಡುವೆ ಬಿಡುಗಡೆಯಾದ ನಮ್ಮ ಚಿತ್ರಕ್ಕೆ ಜನರು ನೀಡುತ್ತಿರುವ ಬೆಂಬಲಕ್ಕೆ ಮನತುಂಬಿ ಬಂದಿದೆ. ಈ ಯಶಸ್ಸಿಗೆ ಕಾರಣರಾದ ಚಿತ್ರತಂಡದ ಸದಸ್ಯರಿಗೆ, ಸ್ನೇಹಿತರ ಬಳಗಕ್ಕೆ ಹಾಗೂ ವಿಶೇಷವಾಗಿ ನಿರಂಜನ್  ಮತ್ತು ವೆಂಕಟೇಶ್ ಅವರಿಗೆ ಧನ್ಯವಾದ ಎಂದರು ನಿರ್ಮಾಪಕ ತರುಣ್ ಶಿವಪ್ಪ.

 

ಸಾಮಾನ್ಯವಾಗಿ ಸಂಕ್ರಾಂತಿ ಸಮಯಕ್ಕೆ ಕನ್ನಡ ಚಿತ್ರಗಳು ಬಿಡುಗಡೆಯಾಗುವುದಿಲ್ಲ. ಆದರೆ ಧೈರ್ಯ ಮಾಡಿ ನಮ್ಮ ಚಿತ್ರವನ್ನು ನಿರ್ಮಾಪಕರು ಬಿಡುಗಡೆ ಮಾಡಿದರು‌. ಚಿತ್ರ ಬಿಡುಗಡೆ ಅಷ್ಟು ಸುಲಭವಾಗಿರಲಿಲ್ಲ‌. ಅಂತು ಇಂತು ಸಾಕಷ್ಟು ಶ್ರಮಪಟ್ಟು ಬಿಡುಗಡೆ ಮಾಡಲಾಯಿತು. ಬಿಡುಗಡೆ ನಂತರ ಏನಾಗಬಹುದು? ಎಂಬ ಆತಂಕವಿತ್ತು. ಉತ್ತಮ ಕಂಟೆಂಟ್ ವುಳ್ಳ ಚಿತ್ರಕ್ಕೆ ಕನ್ನಡಿಗರು ಪ್ರೋತ್ಸಾಹ ನೀಡುತ್ತಾರೆ ಎಂಬ ವಿಶ್ವಾಸ ಮತ್ತೊಮ್ಮೆ ಸಾಬೀತಾಯಿತು. ಚಿತ್ರತಂಡದ ಸದಸ್ಯರು ನನ್ನ ಬಗ್ಗೆ ಆಡಿದ ಮಾತುಗಳಿಗೆ ಮನ ತುಂಬಿ ಬಂತು ಎಂದು ನಾಯಕ ಶರಣ್ ತಿಳಿಸಿದರು.

ತರುಣ್ ಸುಧೀರ್ ಈ ಚಿತ್ರಕ್ಕೆ ಓಂಕಾರ ಹಾಕಿದರು. ತರುಣ್ ಶಿವಪ್ಪ ನನ್ನ ಮೇಲೆ ನಂಬಿಕೆಯಿಟ್ಟು ಚಿತ್ರ ಶುರು ಮಾಡಿದರು. ಶರಣ್ ಸೇರಿದಂತೆ ಎಲ್ಲಾ ಕಲಾವಿದರು ಕಥೆ ಮೆಚ್ಚಿಕೊಂಡು ನಟಿಸಲು ಒಪ್ಪಿಕೊಂಡರು. ಚಿತ್ರತಂಡದ ಸದಸ್ಯರು ಸಾಥ್ ನೀಡಿದರು. ಕೊನೆಗೆ ನಮ್ಮ ಚಿತ್ರವನ್ನು ನಾಡಿನ ಜನರು ಒಪ್ಪಿಕೊಂಡರು. ಶುಕ್ರವಾರ ಮಧ್ಯಾಹ್ನದ  ನಂತರ ನಮ್ಮ ಚಿತ್ರದ ಬುಕ್ಕಿಂಗ್ ಗಣನೀಯಾಗಿ ಏರಿಕೆಯಾಯಿತು. ಅದನ್ನು ನೋಡಿ ಬಹಳ ಖುಷಿಯಾಯಿತು. ಇದಕ್ಕೆ ಹಿರಿಯ ನಟರಾದ ವಿಷ್ಣುವರ್ಧನ್, ದ್ವಾರಕೀಶ್ ಹಾಗೂ ದೇವರ ಆಶೀರ್ವಾದವೇ ಕಾರಣ. ಕನ್ನಡ ಕಲಾರಸಿಕರು ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಚಿತ್ರವನ್ನು ನೋಡಿ. ಪ್ರೋತ್ಸಾಹ ನೀಡಿ ಎಂದರು ನಿರ್ದೇಶಕ ನವನೀತ್.

 

ಇಂದು ನನ್ನ ಹುಟ್ಟುಹಬ್ಬ. ಇದು ನನ್ನ ಪಾಲಿಗೆ ಮರೆಯಲಾಗದ ಹುಟ್ಟುಹಬ್ಬ. ಏಕೆಂದರೆ ನನಗೆ ಗೆಲುವಿನ ಉಡುಗೊರೆ ಸಿಕ್ಕಿದೆ ಎಂದರು ನಟಿ ಅದಿತಿ ಪ್ರಭುದೇವ.

 

ಈ ಚಿತ್ರದ ಹಿಂದಿನ ಇವೆಂಟ್ ಗಳಲ್ಲೂ ನಾನು ಚಿತ್ರ ಗೆದ್ದೆ ಗೆಲ್ಲುತ್ತದೆ ಎಂದು ಹೇಳುತ್ತಿದ್ದೆ. ಅದು ನಿಜವಾಗಿದೆ. ನನ್ನ ಪಾತ್ರಕ್ಕೆ ಜನರು ನೀಡುತ್ತಿರುವ ಪ್ರಶಂಸೆಗೆ ಸಂತಸವಾಗಿದೆ ಎಂದು ಮೇಘನಾ ಗಾಂವ್ಕರ್ ಹೇಳಿದರು.

 

ಕುಟುಂಬ ಸಮೇತ ನೋಡಬಹುದಾದ ಚಿತ್ರವಿದು. ಎಲ್ಲರೂ ಕುಟುಂಬ ಸಮೇತರಾಗಿ ಬಂದು ನೋಡಿ ಎಂದು ನಟ ಪ್ರಭು ಮುಂಡ್ಕರ್ ತಿಳಿಸಿದರು.

 

ಹನ್ನೆರಡು ವರ್ಷಗಳ ನಂತರ ನಾನು ಅಭಿನಯಿಸಿರುವ ಚಿತ್ರಕ್ಕೆ ಜನರು ನೀಡುತ್ತಿರುವ ಪ್ರೋತ್ಸಾಹಕ್ಕೆ ಖುಷಿಯಾಗಿದೆ ಎಂದರು ಗುರುಕಿರಣ್. ಸಂಗೀತ ನಿರ್ದೇಶಕ ಅವಿನಾಶ್ ಬಸತ್ಕೂರ್ ಸಹ ಯಶಸ್ಸಿನ ಬಗ್ಗೆ ಮಾತನಾಡಿದರು.  .

Copyright@2018 Chitralahari | All Rights Reserved. Photo Journalist K.S. Mokshendra,