Tayavva.News

Tuesday, January 21, 2025

15

 

ʼತಾಯವ್ವʼನಿಗೆ ಸುದೀಪ್‌ ಸಾಥ್‌

ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿ ಶುಭ ಕೋರಿದ ಕಿಚ್ಚ ಸುದೀಪ್‌

ಗ್ರಾಮೀಣ ಸೊಗಡಿನ ಜನಪದ ಗೀತೆಗಳಿಗೆ ನಟಿ ಗೀತಪ್ರಿಯ ಧ್ವನಿ

 

 

ʼತಾಯವ್ವʼ ಹೀಗೊಂದು ಹೆಸರಿನ ಚಿತ್ರ ಸುಮಾರು ಎರಡೂವರೆ ದಶಕಗಳ ಹಿಂದೆ ಕನ್ನಡದಲ್ಲಿ ತೆರೆಗೆ ಬಂದಿದ್ದು, ಹಲವರಿಗೆ ಗೊತ್ತಿರಬಹುದು. ಕನ್ನಡ ಚಿತ್ರರಂಗದ ನಟ ʼಕಿಚ್ಚʼ ಸುದೀಪ್‌ ಮೊದಲ ಬಾರಿಗೆ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದ ಚಿತ್ರವದು. ಆಗ ತೆರೆಗೆ ಬಂದಿದ್ದ ʼತಾಯವ್ವʼ ಚಿತ್ರದಲ್ಲಿ ಸುದೀಪ್‌ ಅವರೊಂದಿಗೆ ಹಿರಿಯ ನಟಿ ಉಮಾಶ್ರೀ ʼತಾಯವ್ವʼನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ಅದೇ ʼತಾಯವ್ವʼ ಎಂಬ ಹೆಸರಿನಲ್ಲಿ, ಮತ್ತೊಂದು ಚಿತ್ರ ತೆರೆಗೆ ಬರಲು ತಯಾರಾಗುತ್ತಿದೆ. ಇನ್ನು ಈ ಬಾರಿ ʼತಾಯವ್ವʼನಾಗಿ ಈ ಚಿತ್ರದಲ್ಲಿ ನವ ಪ್ರತಿಭೆ ಗೀತಪ್ರಿಯ ಕಾಣಿಸಿಕೊಳ್ಳುತ್ತಿದ್ದಾರೆ.

 

ಈಗಾಗಲೇ ಸದ್ದಿಲ್ಲದೆ ʼತಾಯವ್ವʼ ಚಿತ್ರದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಇತ್ತೀಚೆಗೆ ʼತಾಯವ್ವʼ ಚಿತ್ರದ ಹಾಡುಗಳು ಬಿಡುಗಡೆಯಾಯಿತು. ಅನಂತ ಆರ್ಯನ್‌ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ʼತಾಯವ್ವʼ ಚಿತ್ರದ ಗೀತೆಗಳಿಗೆ ಸ್ವತಃ ಚಿತ್ರದ ಪ್ರಮುಖ ಭೂಮಿಕೆಯಲ್ಲಿ ʼತಾಯವ್ವʼನಾಗಿ ಅಭಿನಯಿಸಿರುವ, ಗೀತಪ್ರಿಯ ಅವರೇ ಧ್ವನಿಯಾಗಿದ್ದಾರೆ. ಅಪ್ಪಟ ಕನ್ನಡದ ಗ್ರಾಮೀಣ ಸೊಗಡಿನ ಜನಪದ ಗೀತೆಗಳ ಗುಚ್ಚವನ್ನು ʼತಾಯವ್ವʼ ಚಿತ್ರದಲ್ಲಿ ಹೊಸರೂಪದಲ್ಲಿ ತೆರೆಮೇಲೆ ತರಲಾಗುತ್ತಿರುವುದು ಮತ್ತೊಂದು ವಿಶೇಷ. ಬೆಂಗಳೂರಿನ ʼಜಿ. ಟಿ ವರ್ಲ್ಡ್‌ ಮಾಲ್‌ʼ ನಲ್ಲಿ ನಡೆದ ಸಮಾರಂಭದಲ್ಲಿ ಕನ್ನಡ ಚಿತ್ರರಂಗದ ʼಅಭಿನಯ ಚಕ್ರವರ್ತಿʼ ಕಿಚ್ಚ ಸುದೀಪ್‌ ಮುಖ್ಯ ಅತಿಥಿಯಾಗಿ ಆಗಮಿಸಿ, ʼತಾಯವ್ವʼ ಚಿತ್ರದ ಆಡಿಯೋವನ್ನು ಬಿಡುಗಡೆಗೊಳಿಸಿ, ಚಿತ್ರತಂಡಕ್ಕೆ ಶುಭ ಹಾರೈಸಿದರು.

ಇದೇ ವೇಳೆ ಮಾತನಾಡಿದ ನಟ ಕಿಚ್ಚ ಸುದೀಪ್‌, ʼನಾನು ಆಗಷ್ಟೇ ಕಾಲೇಜು ಮುಗಿಸುತ್ತಿರುವ ಸಂದರ್ಭದಲ್ಲಿ ʼತಾಯವ್ವʼ ಸಿನೆಮಾದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿತ್ತು. ಮೊದಲ ಬಾರಿಗೆ ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದ ಈ ಸಿನೆಮಾ ನನಗೆ ಸಾಕಷ್ಟು ವಿಷಯಗಳನ್ನು ಹೇಳಿಕೊಟ್ಟಿತ್ತು. ನನ್ನ ವೃತ್ತಿ ಜೀವನದಲ್ಲಿ ಈ ಸಿನೆಮಾ ಇಂದಿಗೂ ಒಂದು ಸುಮಧುರ ನೆನಪಾಗಿ ಉಳಿದಿದೆ. ಈಗ ಅದೇ ʼತಾಯವ್ವʼ ಹೆಸರಿನಲ್ಲಿ ಅಂಥದ್ದೇ ಮತ್ತೊಂದು ಸಿನೆಮಾ ತೆರೆಗೆ ಬರುತ್ತಿರುವುದು ಒಳ್ಳೆಯ ವಿಷಯ. ʼತಾಯವ್ವʼ ಎಂಬ ಹೆಸರಿನಲ್ಲೇ ಒಂದು ಭಾವನಾತ್ಮಕ ಸೆಳೆತವಿದೆ. ಈ ಸಿನೆಮಾದಲ್ಲೂ ಅದೇ ಅಂಶಗಳಿರಬಹುದು ಎಂಬ ನಿರೀಕ್ಷೆಯಿದೆ. ಚಿತ್ರಕ್ಕೆ ಒಳ್ಳೆಯದಾಗಲಿʼ ಎಂದು ಶುಭ ಹಾರೈಸಿದರು.

 

 ʼತಾಯವ್ವʼ ಚಿತ್ರದ ಮೂಲಕ ಮೊದಲ ಬಾರಿಗೆ ನವ ಪ್ರತಿಭೆ ಗೀತಪ್ರಿಯ ಚಿತ್ರರಂಗಕ್ಕೆ ಪ್ರವೇಶಿಸುತ್ತಿದ್ದಾರೆ. ʼಇದೊಂದು ಅಪ್ಪಟ ಗ್ರಾಮೀಣ ಸೊಗಡಿನ ಸಿನೆಮಾ. ಹೆಣ್ಣುಮಕ್ಕಳನ್ನು ಉಳಿಸಿ, ಬೆಳೆಸಿ ಎಂಬ ಸಂದೇಶವನ್ನು ಇಟ್ಟುಕೊಂಡು ಈ ಸಿನೆಮಾ ಮಾಡಲಾಗಿದೆ. ಇದರಲ್ಲಿ ನಾನು ʼತಾಯವ್ವʼ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಸಿನೆಮಾದಲ್ಲಿ ಒಂದು ಸಂದೇಶವಿದೆ. ಎಲ್ಲರಿಗೂ ತಲುಪುವಂಥ ವಿಷಯ ಈ ಸಿನೆಮಾದಲ್ಲಿದೆ. ಕಿಚ್ಚ ಸುದೀಪ್‌ ಅವರ ಮೊದಲ ಸಿನೆಮಾದ ಹೆಸರನ್ನೇ ನಮ್ಮ ಸಿನೆಮಾಕ್ಕೆ ಇಟ್ಟುಕೊಂಡು ತೆರೆಗೆ ತರುತ್ತಿದ್ದೇವೆ. ನಮ್ಮ ಸಿನೆಮಾಕ್ಕೆ ಬೆಂಬಲವಾಗಿ ಸುದೀಪ್‌ ನಿಂತಿರುವುದು ನಮಗೆ ದೊಡ್ಡ ಬಲ ತಂದಂತಾಗಿದೆ. ಈಗಾಗಲೇ ಸಿನೆಮಾದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಆದಷ್ಟು ಬೇಗ ಸಿನೆಮಾವನ್ನು ಪ್ರೇಕ್ಷಕರ ಮುಂದೆ ತರಲಿದ್ದೇವೆʼ ಎಂದರು.

 

ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ ಮತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ. ಮ. ಹರೀಶ್‌, ಮೊದಲ ಬಾರಿಗೆ ʼಭಾ. ಮ. ಹರೀಶ್‌ ಆಡಿಯೋʼ ಹೆಸರಿನಲ್ಲಿ ಹೊಸ ಆಡಿಯೋ ಕಂಪೆನಿಯನ್ನು ಪ್ರಾರಂಭಿಸಿದ್ದು, ಈ ಕಂಪೆನಿಯ ಅಡಿಯಲ್ಲಿ ʼತಾಯವ್ವʼ ಸಿನೆಮಾದ ಆಡಿಯೋ ಬಿಡುಗಡೆಯಾಗಿದೆ.

ಕಾರ್ಯಕ್ರಮದಲ್ಲಿ ನಿರ್ಮಾಪಕಿ ಪದ್ಮಾವತಿ ಚಂದ್ರಶೇಖರ್‌, ನಿರ್ಮಾಪಕರಾದ ಭಾ. ಮ. ಹರೀಶ್‌, ಕರ್ನಾಟಕ ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘದ ಅಧ್ಯಕ್ಷ ಕೃಷ್ಣಪ್ಪ, ಐಪ್ಲೆಕ್ಸ್‌ ಮುಖ್ಯಸ್ಥ ಗಿರೀಶ್‌, ಶಿಕ್ಷಣ ತಜ್ಞ ನಾಗಪಾಲ್‌ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು.

Copyright@2018 Chitralahari | All Rights Reserved. Photo Journalist K.S. Mokshendra,